ನಾಡೋಜ ಹಂಪನಾರಿಗೆ ಅಪಮಾನ : ದುಷ್ಕೃತ್ಯ ಎಸಗಿದವರ ಅಮಾನತ್ತುಗೊಳಿಸಿ- ಟಿ.ಎ.ನಾರಾಯಣಗೌಡ್ರು

ಬೆಂಗಳೂರು : ಆಳುವ ಸರ್ಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಕನ್ನಡದ ಹೆಸರಾಂತ ಸಾಹಿತಿ, ಸಂಶೋಧಕ ನಾಡೋಜ ಹಂಪನಾ‌ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಅಪಮಾನಿಸಲಾಗಿದೆ.‌‌ ಇದನ್ನು ಮಾಡಿದವರದು ವಿಕೃತ ಮನಸ್ಥಿತಿ. ಕನ್ನಡಿಗರ ಪರಂಪರೆಯ ಮೇಲೆ ಮಾಡಿದ ಹಲ್ಲೆಯಿದು. ಈ‌ ದುಷ್ಕೃತ್ಯಕ್ಕೆ ಯಾರು ಕಾರಣರೋ ಅವರ‌ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಆಗ್ರಹಿಸಿದ್ದಾರೆ

ಹಂಪನಾ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ,‌ ಸಂಶೋಧನಾ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅಪಾರ.
ಕನ್ನಡ ಕುಲಕೋಟಿ ಹಂಪನಾ ಅವರಿಗೆ ಸದಾ ಆಭಾರಿಯಾಗಿರಬೇಕು. ಹೀಗಿರುವಾಗ ಅವರ‌ ಮೇಲೆ ಸುಳ್ಳು‌ದೂರು ದಾಖಲಿಸಿಕೊಂಡಿದ್ದಲ್ಲದೆ, ಪೊಲೀಸ್ ಠಾಣೆಗೆ ಕರೆಯಿಸಿಕೊಂಡಿದ್ದು ಹೀನಕೃತ್ಯ.‌ ಕನ್ನಡ ಸಂಸ್ಕೃತಿಗೆ‌, ಪರಂಪರೆಗೆ ಎಸಗಿದ ಅಪಚಾರ.

ಭಾರತ ಒಕ್ಕೂಟ ಈಗಲೂ‌ ಪ್ರಜಾಪ್ರಭುತ್ವವನ್ನು ಹೊಂದಿದೆ. ಭಾರತೀಯರೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸರ್ಕಾರಗಳನ್ನು ಟೀಕಿಸುವುದು, ಸರ್ಕಾರಗಳ ನಡೆಗಳ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬ ನಾಗರಿಕನಿಗೆ ಇರುವ ಹಕ್ಕು. ರಾಜ್ಯ ಸರ್ಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಏಕೀಕರಣಕ್ಕೆ ಮನಸು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರವನ್ನು‌ ಟೀಕಿಸಿದರೆಂಬ‌‌ ಕಾರಣಕ್ಕೆ ರಾಷ್ಟ್ರಕವಿ ಕುವೆಂಪು ಅವರಿಗೆ ಹಿಂದೆ ನೋಟೀಸ್ ನೀಡಲಾಗಿತ್ತು. ಆಗ ಕುವೆಂಪು ಅವರು ‘ಅಖಂಡ ಕರ್ನಾಟಕ’ ಪದ್ಯವನ್ನು ಬರೆದು “ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ, ರಚಿಸುವೊಂದು ಕೃತಕವಲ್ತೊ, ಸಿರಿಗನ್ನಡ ಸರಸ್ವತಿಯ ವಜ್ರ ಕರ್ಣಕುಂಡಲ!” ಕಟುವಾಗಿ ಟೀಕಿಸಿದ್ದರು.

ಅಖಂಡ ಕರ್ನಾಟಕ‌ ಕವಿತೆ ಅತ್ಯಂತ ಜನಪ್ರಿಯಗೊಳ್ಳುತ್ತಿದ್ದಂತೆ, ಅಂದಿನ‌ ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರಿಗೆ ಮತ್ತೊಂದು ನೋಟೀಸ್ ಕೊಡಿ ಎಂದು ಹಲವರು ಸಲಹೆ ನೀಡಿದರಂತೆ.‌ ಆಗ ಕೆ.ಸಿ.ರೆಡ್ಡಿಯವರು, “ಒಂದು ನೋಟೀಸಿಗೆ ಕುವೆಂಪು ಅವರು ಒಂದು ಪದ್ಯ ಬರೆದಿದ್ದಾರೆ, ಇನ್ನೊಂದು ನೋಟೀಸು ಕೊಟ್ಟರೆ ಮತ್ತೆ ಮೂರು ಪದ್ಯ ಬರೆಯುತ್ತಾರೆ. ಬೆಂಕಿಯ ಜತೆ ಸರಸ ಒಳ್ಳೆಯಲ್ಲ” ಎಂದಿದ್ದರು.

ಹಂಪನಾ ಅವರ ಮೇಲೆ ಪೊಲೀಸರನ್ನು ಛೂ‌ ಬಿಟ್ಟು ರಾಜ್ಯ ಸರ್ಕಾರ ಈಗ‌ ನಿಜಕ್ಕೂ‌ ಬೆಂಕಿಯ ಜತೆ ಸರಸವಾಡುತ್ತಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಗಂಧಗಾಳಿ ಇಲ್ಲದವರಷ್ಟೇ ಇಷ್ಟು ವಿಕೃತವಾಗಿ ನಡೆದುಕೊಳ್ಳಲು ಸಾಧ್ಯ. ಪೊಲೀಸರನ್ನು ಮುಂದೆ‌ ಬಿಟ್ಟು ಸಾಹಿತಿಗಳ ಕೊರಳನ್ನು ಮುಟ್ಟುಗೋಲು ಹಾಕಿಕೊಳ್ಳಲು, ಧ್ವನಿ ಅಡಗಿಸಲು ಸಾಧ್ಯವಿಲ್ಲ.

ಯಾವುದೇ ಜನಪರವಾದ ಸರ್ಕಾರ ಜನರ ಆಗ್ರಹಗಳನ್ನು ಮುಕ್ತಮನಸಿನಿಂದ ಆಲಿಸಬೇಕು. ಸಾಹಿತಿಗಳು ಮೊದಲಿನಿಂದಲೂ ಸರ್ಕಾರ, ಸಮಾಜವನ್ನು ಎಚ್ಚರಿಸುವ ಮಾತುಗಳನ್ನು ಆಡುತ್ತ‌ ಬಂದಿದ್ದಾರೆ. ಇಂಥ ಧ್ವನಿಗಳನ್ನು ಹತ್ತಿಕ್ಕುವುದೆಂದರೆ ಪ್ರಜಾಪ್ರಭುತ್ವ, ಸಂವಿಧಾನವನ್ನು ನಾಶಪಡಿಸುವುದು ಎಂದರ್ಥ. ಸರ್ಕಾರ ನಡೆಸುವವರಿಗೆ ಈ‌ ವಿವೇಕ ಇರಬೇಕು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪೊಲೀಸರು ಮಾಡಿರುವ ದುಷ್ಕೃತ್ಯಕ್ಕಾಗಿ ಕೂಡಲೇ ಹಂಪನಾ ಅವರಲ್ಲಿ ಕ್ಷಮೆ ಯಾಚಿಸಬೇಕು. ಈ ರೀತಿಯ ಸುಳ್ಳು ಕೇಸುಗಳನ್ನು ದಾಖಲಿಸಿಕೊಳ್ಳುವ ದಾರ್ಷ್ಟ್ಯ ಪ್ರದರ್ಶಿಸುತ್ತಿರುವ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಬೇಕು.‌ ಈ ಘಟನೆಗೆ ಕಾರಣಕರ್ತರನ್ನು‌ ಕೂಡಲೇ ಅಮಾನತು‌ ಮಾಡಬೇಕು ಎಂದು ಒತ್ತಾಯಿಸಿದ್ದಾರೆ

Please follow and like us:
error