ನನ್ನ ಸರಕಾರದ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ಶಿಕ್ಷಕರ ನೇಮಕ- ಮಾಜಿ ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ : ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರು, ಉಪನ್ಯಾಸಕರು, ಅತಿಥಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿತ್ತು. ಈಗಿನ ಬಿಜೆಪಿ ಸರ್ಕಾರ ಏನು ಮಾಡಿದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಇಂದು ಆಯೋಜಿಸಿದ್ದ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ಅವರು

ನಮ್ಮ ಸರ್ಕಾರ 7905 ಪ್ರಾಥಮಿಕ ಶಾಲಾ ಶಿಕ್ಷಕರು, 1689 ಪ್ರೌಢಶಾಲಾ ಶಿಕ್ಷಕರು ಮತ್ತು ಹತ್ತು ಸಾವಿರ ಪದವೀಧರ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥಪಾಲಕರ ನೇಮಕ ಮಾಡಿತ್ತು. 2008 ರಿಂದ 2013ರ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇವಲ 5032 ಶಿಕ್ಷಕರನ್ನು ಮಾತ್ರ ನೇಮಕಾತಿ ಮಾಡಿತ್ತು.

2016ರ ಜುಲೈ ತಿಂಗಳಿಂದ ಜಾರಿಯಾಗುವಂತೆ ಆರನೇ ವೇತನ ಆಯೋಗ ಜಾರಿ ಮಾಡಿದ್ದು ನಮ್ಮ ಸರ್ಕಾರ. ಇದರಿಂದಾಗಿ ಶಿಕ್ಷಕರು-ಉಪನ್ಯಾಸಕರು ಸೇರಿದಂತೆ ಎಲ್ಲ ಸರ್ಕಾರಿ ನೌಕರರ ಪಿಂಚಣಿ, ಭತ್ಯೆ ಸೇರಿದಂತೆ ಒಟ್ಟು ವೇತನದ ಶೇಕಡಾ 30ರಷ್ಟು ಏರಿಕೆಯಾಗಿದೆ. ಇದರಿಂದ ರಾಜ್ಯದ ಬೊಕ್ಕಸದ ಮೇಲೆ ವಾರ್ಷಿಕ ರೂ.10,200 ಕೋಟಿ ಹೊರೆ ಬಿದ್ದಿತ್ತು.

ಶಿಕ್ಷಕರ ಸಂಬಳ-ಸೌಲಭ್ಯಗಳ ವಿಚಾರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲಾ ಉದಾರವಾಗಿ ನಡೆದುಕೊಂಡಿದೆ. ಶಿಕ್ಷಕರ ಬಡ್ತಿ, ಅತಿಥಿ ಶಿಕ್ಷಕರ ಸಂಬಳ ಏರಿಕೆ ಮಾಡಿದ್ದೆವು. ಹೆರಿಗೆ ರಜೆಯನ್ನು ಮೂರರಿಂದ ಆರು ತಿಂಗಳಿಗೆ ಏರಿಕೆ ಮಾಡಿದ್ದೆವು, ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಸ್ಥಾಪನೆಯ ನಿರ್ಧಾರ ಮಾಡಿದ್ದೆವು.

ನೋಟ್ ಬ್ಯಾನ್, ಜಿಎಸ್‌ಟಿ ಜಾರಿ ನಂತರ ಸಾಕಷ್ಟು ಕೈಗಾರಿಕೆಗಳು ಮುಚ್ಚಿ ನಿರುದ್ಯೋಗ ಸಮಸ್ಯೆ ಹೆಚ್ಚಾಯಿತು. ಲಾಕ್ ಡೌನ್ ನಂತರದ ಅವಧಿಯಲ್ಲಿ ಕೈಗಾರಿಕೆ, ಕೃಷಿ, ವ್ಯಾಪಾರ ವಾಹಿವಾಟು ಕುಂಠಿತವಾಗಿ ನಿರುದ್ಯೋಗ ಮಿತಿಮೀರಿ ಹೋಗಿದೆ. ಇದರಿಂದ ಆರೋಗ್ಯ ಮತ್ತು ಆರ್ಥಿಕ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಕೊರೊನಾ ಬಂದ ನಂತರ ಭಾರತದ ಜಿಡಿಪಿ 24% ಕುಸಿತ ಕಂಡಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರ ಬಂದಿಲ್ಲ. ಇದರಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಜನರ ತೆರಿಗೆ ಹಣವನ್ನು ಜನಕಲ್ಯಾಣ ಕಾರ್ಯಗಳಿಗೆ ಬಳಸದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ದ್ರೋಹ ಬಗೆದಿವೆ.

ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರು ಕೊರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ಸೂಕ್ತ ಸುರಕ್ಷತಾ ಸೌಲಭ್ಯಗಳನ್ನು ನೀಡಬೇಕು, ಸೋಂಕು ತಗುಲಿದರೆ ಗುಣಮಟ್ಟದ ಚಿಕಿತ್ಸೆ ಕೊಡಿಸಬೇಕು, ಸಾವಿಗೀಡಾದರೆ ಸರಿಯಾದ ಪರಿಹಾರ ಕೊಡಬೇಕು. ಕೇವಲ ಚಪ್ಪಾಳೆ ಹೊಡೆಸಿ, ಹೂ ಸುರಿಸಿ ಪ್ರಚಾರ ಪಡೆಯುವುದಲ್ಲ.

ಕಾಶಿ – ಮಥುರಾಗಳು ದೇಶದ ಸಮಸ್ಯೆ ಅಲ್ಲ, ಜನರಿಗೆ ಇದು ಬೇಕಾಗಿಲ್ಲ. ಕೊರೊನಾದ ಭೀಕರತೆಗೆ ಜನ ಬದುಕು ಸಾಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ಇರುವಾಗ ಅವರ ಬದುಕಿಗೆ ಬೆಂಬಲವಾಗಿ ನಿಲ್ಲಬೇಕಾಗಿದ್ದ ಸರ್ಕಾರ ತನ್ನ ವೈಫಲ್ಯ ಮುಚ್ಚಿಹಾಕಲು ಭಾವನಾತ್ಮಕ ವಿಚಾರಗಳನ್ನು ಕೆದಕಿ ರಾಜಕಾರಣ ಮಾಡುವುದು ಜನದ್ರೋಹದ ಕೆಲಸ.

ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದು ವ್ಯರ್ಥ. ಯಾವ ಅಧಿಕಾರಿಗಳು ಹೋಗಿ ಪ್ರವಾಹದಿಂದ ಉಂಟಾದ ನಷ್ಟದ ಸರ್ವೇ ಮಾಡಿದ್ದಾರೆ? ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ದಾಖಲಿಸಿಕೊಂಡಿದ್ದಾರೆ? ಜನರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆಯುವ ಬದಲು ಎಲ್ಲೋ ದೂರದಲ್ಲಿ ಸಭೆ ಮಾಡಿದರೆ ಏನು ಉಪಯೋಗ?

ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಬಿಕ್ಕಟ್ಟಿನಿಂದ ಪತನಗೊಂಡರೆ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ನಾವಾಗಿ ಈ ಸರ್ಕಾರವನ್ನು ಉರುಳಿಸಲು ಹೋಗುವುದಿಲ್ಲ. ಅಡ್ಡಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಈ ಬಿಜೆಪಿ ಸರ್ಕಾರ ಬಹಳ ದಿನ ಉಳಿಯಲು ಸಾಧ್ಯ ಇಲ್ಲ.

ಎಚ್.ಡಿ. ದೇವೇಗೌಡರಿಗೆ ನನ್ನಿಂದ ತೊಂದರೆಯಾಗಿದ್ದರೆ ಅವರು ಮಾತನಾಡುತ್ತಾರೆ. ಅವರ ಪರವಾಗಿ ಮಾತನಾಡುವ ಅಧಿಕಪ್ರಸಂಗತನ ಈ ನಳಿನ್ ಕುಮಾರ್ ಕಟೀಲ್ ಗೆ ಯಾಕೆ? ಅವರ ಪಕ್ಷದ ಶಾಸಕನೇ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಹೇಳ್ಕೊಂಡಿದ್ದಾರೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯ ಈ ಕಟೀಲ್‌ಗಿಲ್ಲ.

ಚುನಾವಣೆ ಹತ್ತಿರ ಬಂದಾಗ ಎಚ್.ಡಿ.ಕುಮಾರಸ್ವಾಮಿ ಅವರು ಕಣ್ಣೀರು ಸುರಿಸುವುದು, ಕಿರುಕುಳ ಕೊಟ್ಟಿದ್ದರು ಅನ್ನೋದು ಎಲ್ಲವೂ ರಾಜ್ಯದ ಜನರಿಗೆ ಸಾಮಾನ್ಯವಾಗಿದೆ. ಅವರು ಸರಿಯಾಗಿ ಆಡಳಿತ ನಡೆಸಿದ್ದರೆ ಯಾರೂ ಪಕ್ಷ ಬಿಟ್ಟು ಹೋಗ್ತಾ ಇರಲಿಲ್ಲ. ಕುಣಿಯೋಕೆ ಬಾರದವಳು ನೆಲ ಡೊಂಕು ಅಂದಳಂತೆ ಹಾಗಾಯ್ತು ಇವರ ಕತೆ ಎಂದು ವ್ಯಂಗ್ಯ ವಾಡಿದರು.

Please follow and like us:
error