ದೋಣಿ ಮತ್ತು ವೀಡಿಯೋ ಕಾಲ್!

ಅಸ್ಸಾಮಿನ ಮೋರಿಗಾಂವ್ ಜಿಲ್ಲೆಯ ಜಿಂಗ್ ಪೋರಿ ಹಳ್ಳಿಯ ಲಾಲ್ ಚಂದ್ ಬಿಸ್ವಾಸ್ ಗೆ ಯಕೃತ್ತಿನ ಸಮಸ್ಯೆಯಿದೆ. ನಿರಂತರ ವೈದ್ಯಕೀಯ ಆರೈಕೆಯಿಂದಾಗಿ ಗುಣವಾಗುತ್ತಿದ್ದನು. ಫೆಭ್ರವರಿ ತಿಂಗಳ ತನಕ ಎಲ್ಲವೂ ಸರಿಯಾಗಿತ್ತು. ಆದರೆ, ಮಾರ್ಚ್ ತಿಂಗಳಲ್ಲಿ ಹೇರಿಕೆಯಾದ ಲಾಕ್ ಡೌನ್ ನಿಂದಾಗಿ ನಂತರದ ದಿನಗಳಲ್ಲಿ ವೈದ್ಯಕೀಯ ಸೌಲಭ್ಯ ಸಿಗದೆ ಜೂನ್ ತಿಂಗಳಲ್ಲಿ ಕಿಬ್ಬೊಟ್ಟೆಯಲ್ಲಿ ನೋವು, ಮಂಪರು, ಉಸಿರಾಡಲು ಕಷ್ಟವಾಗಿ ಗಂಭಿರ ಸ್ಥಿತಿಗೆ ತಲುಪಿದನು. ಜುಲೈ ತಿಂಗಳ ಪ್ರಾರಂಭದಲ್ಲಿ ಈತನ ಪರಿಚಯದ ಫಾರ್ಮಸಿಸ್ಟ್ ಮೊಫಿಸುರ್ ರೆಹ್ಮಾನ್ ಈತನ ಮನೆಗೆ ಬೇಟಿ ಕೊಟ್ಟಾಗ ಲಾಲ್ ಚಂದ್ ಬಿಸ್ವಾಸ್ ಕೋಮಾಕ್ಕೆ ಜಾರುವುದರಲ್ಲಿದ್ದನು. ಆತನನ್ನು ಯಾವುದಾದರೂ ಡಾಕ್ಟರ್ ಬಳಿ ಒಯ್ಯಲು ಪ್ರಯತ್ನಿಸಿದರೂ ಪ್ರವಾಹದಿಂದಾಗಿ ಸಾಧ್ಯವಿರಲಿಲ್ಲ. ಆಗ ಬಿಸ್ವಾಸ್ ಬಳಿಯಿದ್ದ ಡಾಕ್ಟರೊಬ್ಬರ ಚೀಟಿ ರೆಹ್ಮಾನ್ ಗೆ ಕಾಣಿಸಿತು.

ಅವರು ಅದರಲ್ಲಿದ್ದ ನಂಬರಿಗೆ ಫೋನ್ ಮಾಡಿದಾಗ 2000 ಕಿಮಿ ದೂರದ ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಲಿವರ್ ಟ್ರಾನ್ಸ್ ಪ್ಲಾಂಟೇಷನ್ ಸರ್ಜನ್ ಮತ್ತು ಗೈನಾಕೊಲಾಜಿಸ್ಟ್ ಡಾ ಉಷಾ ಧೀರ್ ಫೋನ್ ಎತ್ತಿದರು. ವಾಸ್ತವದಲ್ಲಿ, ಕಳೆದೊಂದು ವರ್ಷದಿಂದ ಪ್ರತೀ ತಿಂಗಳು ಅಸ್ಸಾಮಿಗೆ ಬಂದು ಯಕೃತ್ತಿನ ರೋಗಿಗಳನ್ನು ಉಪಚರಿಸಿ ಹೋಗುತ್ತಿದ್ದ ಅವರೇ ಫೆಭ್ರವರಿ ತಿಂಗಳಲ್ಲಿ ಕೊನೇ ಬಾರಿಗೆ ಬಿಸ್ವಾಸ್ ಗೆ ಚಿಕಿತ್ಸೆ ನೀಡಿ ಹೋಗಿದ್ದರು. ಅವರು ಬಿಸ್ವಾಸ್ ನ ವೀಡಿಯೋ ಕಾಲಿಗೆ ವ್ಯವಸ್ಥೆ ಮಾಡಲು ಹೇಳಿದರು. ಆದರೆ, ವೀಡಿಯೋ ಕಾಲಿಗೆ ಬೇಕಾದಷ್ಟು ಸಿಗ್ನಲ್ ಆ ಹಳ್ಳಿಯಲ್ಲಿ ಸಿಗುತ್ತಿರಲಿಲ್ಲ. ಆಗ ರೆಹ್ಮಾನ್ ಮತ್ತು ಬಿಸ್ವಾಸನ ಕುಟುಂಬಿಕರು ಸಣ್ಣ ದೋಣಿಯೊಂದರಲ್ಲಿ ಅವನನ್ನು ಮಲಗಿಸಿ ಹೊಳೆಯ ನಡುವೆ ಹೋದಾಗ ಅಲ್ಲಿ ಸಿಗ್ನಲ್ ಸಿಕ್ಕಿತು. ಅರು ಗಂಟೆಗಳ ಕಾಲ ನಡೆದ ವೀಡಿಯೋ ಕಾಲಿನಲ್ಲಿ ರೆಹ್ಮಾನ್ ಡಾ ಧೀರ್ ಹೇಳಿದಂತೆ ಮಾಡಿ ಬಿಸ್ವಾಸ್ ನನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು. ಕೆಲವು ದಿನಗಳ ನಂತರ ಡಾ ಧೀರ್ ಅವನಿಗೆ ಬೇಕಾದ ಔಷಧಿಗಳನ್ನೂ ಕಳುಹಿಸಿ ಕೊಟ್ಟು ಮುಂದೆ ಪ್ರವಾಹ ಇಳಿದು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ದೆಹಲಿಗೆ ಬರಲು ಹೇಳಿದರು.

Panju gangolli

Please follow and like us:
error