ದೇಶದ ಮೊದಲ ಆಟಿಕೆ ಕ್ಲಸ್ಟರ್ ಗೆ ಸಿಎಂ ಬಿಎಸ್ವೈ ಭೂಮಿ ಪೂಜೆ

ಕೊಪ್ಪಳಕ್ಕೆ ಗ್ರಾಮೀಣಾಭಿವೃದ್ಧಿ ವಿವಿ;ಆಟಿಕೆ ಕ್ಲಸ್ಟರ್ ನಿರ್ಮಾಣ ಹೆಮ್ಮೆಯ ವಿಷಯ ಬಿಎಸ್‌ವೈ

ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿಯಿಂದ ಕ್ಲಸ್ಟರ್ ಉದ್ಘಾಟನೆ: ಯಡಿಯೂರಪ್ಪ

ಕೊಪ್ಪಳ: ಪಾರಂಪರಿಕ ಕಿನ್ನಾಳ ಆಟಿಕೆಗಳಿಗೆ ಪ್ರಸಿದ್ಧಿ ಪಡೆದ ಕೊಪ್ಪಳದಲ್ಲಿ ಇಂದು ಆಟಿಕೆ ಕ್ಲಸ್ಟರ್ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ. ಇದು ಗಮನಾರ್ಹ ವಿಷಯ ಆಗಲಿದೆ. ವರ್ಷದಲ್ಲೆ ಘಟಕ ಆರಂಭವಾದರೆ‌ ಪ್ರಧಾನಿ ಮೋದಿಯವರನ್ನು ಕರೆಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಅವರು ಕೊಪ್ಪಳ ಜಿಲ್ಲೆಯ ಭಾನಾಪುರ ಬಳಿ ನಿರ್ಮಾಣವಾಗುತ್ತಿರುವ ದೇಶದ ಮೊದಲ ಆಟಿಕೆ ಕ್ಲಸ್ಟರ್ ಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಈ ಕ್ಲಸ್ಟರ್ ನಿರ್ಮಾಣದಿಂದ ಕೇವಲ‌ ಪುರುಷರಲ್ಲದೆ ಮಹಿಳೆಯರಿಗೂ ಉದ್ಯೋಗ ಸಿಗಲಿವೆ. ಹೊಸ ಕೈಗಾರಿಕೆಗಳಿಗೆ ಕೃಷಿ ಭೂಮಿ ಖರೀದಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿ ಆಗಿದೆ. ರಾಜ್ಯದಲ್ಲಿ ಟೌನ್ ಶಿಪ್ ನಿರ್ಮಿಸಲಾಗುವುದು. ಬೆಂಗಳೂರು ಕೇಂದ್ರಿತ ಕೈಗಾರಿಕೆ ಬಿಟ್ಟು ಇದೀಗ ಇಡೀ ರಾಜ್ಯದ ಬೇರೆ ಬೇರೆ ಕಡೆಗೂ ನಿರ್ಮಾಣವಾಗುವಂತೆ ಮಾಡಲಾಗುತ್ತಿದೆ ಎಂದರು.

ಯುವಕರು ಉದ್ಯೋಗ ಅರಸಿ ಬೇರಡೆ ಹೋಗುವುದನ್ನು ತಡೆಯಲು ಚೆನ್ನೈ ಬೆಂಗಳೂರು ಮುಂಬೈ ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಕೈಗಾರಿಕಾ ಸ್ಥಾಪನೆಗೆ ಸರಳೀಕೃತ ನಿಯಮ ಜಾರಿ ಮಾಡಲಾಗಿದೆ. ದೇಶದ ಹೂಡಿಕೆ ಪ್ರಮಾಣದಲ್ಲಿ ರಾಜ್ಯದ್ದು ಶೇ. 40ರಷ್ಟು ಇದೆ. ಇದು ದೇಶದ ಆರ್ಥಿಕ ಸ್ಥಿತಿಗೆ ಪೂರಕವಾಗಿದೆ ಎಂದರು.

ಕೊಪ್ಪಳಕ್ಕೆ ಗ್ರಾಮೀಣ ವಿವಿ, ಕುಕನೂರು ತಾಲೂಕಿಗೆ ಮಿನಿ ವಿಧಾನಸೌಧವನ್ನು ಬರುವ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು. ಕೊಪ್ಪಳ ಏತ ನೀರಾವರಿಗೆ ಕೋಟಿ ಕೋಟಿ ಹಣ ನೀಡಲಾಗಿದೆ. ಸಾಧನೆಗಳು ಮಾತನಾಡಬೇಕೆ ಹೊರತು ಮಾತೇ ಸಾಧನೆ ಆಗಬಾರದು. ಈ ನಿಟ್ಟಿನಲ್ಲಿ ಕೋವಿಡ್ ನಿಂದಾದ ಆರ್ಥಿಕ ಹೊಡೆತದ ಮಧ್ಯೆಯೂ ಅನುದಾನ ನೀಡಲಾಗಿದೆ. ನೀವು ನೀಡಿದ ಸಲಹೆಗಳನ್ನು, ಮನವಿಗಳನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದು ಹೇಳಿದರು.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಹಿಂದುಳಿದ ಭಾಗ ಎಂದೇ ಹೆಸರಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಟಿಕೆ ಕ್ಲಸ್ಟರ್ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂಸತದ ಸಂಗತಿ. ಆಟಿಕೆ ವಸ್ತುಗಳು ಎಂದು ಮೂಗು ಮುರಿಯುವುದು ಬೇಡ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ವ್ಯಾಪಾರ ಆಗುವಂಥ ವಸ್ತುಗಳು. ಇದರಿಂದ ಆರ್ಥಿಕತೆ ಹೆಚ್ಚುತ್ತದೆ. ಚೀನಾ ಸೇರಿದಂತೆ ಬಹುತೇಕ ವಿದೇಶಗಳಿಗೆ ಇಲ್ಲಿ ತಯಾರಾಗುವ ಆಟಿಕೆ ವಸ್ತುಗಳನ್ನು ರಫ್ತು ಮಾಡಬಹುದು. ಈ ಕ್ಲಸ್ಟರ್ ನಲ್ಲಿ ಹತ್ತಾರು ಕಂಪನಿಗಳು ಸ್ಥಾಪನೆಯಾಗಲಿವೆ. ಇದರಿಂದ 25 ಸಾವಿರ ನೇರ ಉದ್ಯೋಗ, ಸೇರಿ ಲಕ್ಷಕ್ಕೂ ಹೆಚ್ಚು ಪರೋಕ್ಷ ಉದ್ಯೋಗ ದೊರಕಲಿವೆ. ಹೊಸ ಕೈಗಾರಿಕಾ ನೀತಿಯಲ್ಲಿ ಇರುವಂತೆ ಸ್ಥಳೀಯರಿಗೆ ಉದ್ಯೋಗ ನೀಡಲೇಬೇಕು ಎಂದಿದೆ. ಈಗಾಗಲೆ ರಾಜ್ಯದ ಎಲ್ಲಾ ಕಂಪನಿಗಳಿಗೆ ಭೇಟಿ ನೀಡಿ ಸ್ಥಳೀಯರಿಗಡ ಉದ್ಯೋಗ ನೀಡಲಾಗಿದೆಯೋ ಎಂದು ಪರೀಕ್ಷಿಸಲಾಗಿದೆ. ಎಲ್ಲಾ ಕಡೆಗಳಲ್ಲೂ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂದರು.

ಹೊಸ ಕೈಗಾರಿಕಾ ನೀತಿ ಜಾರಿ ನಂತರ ಬೆಂಗಳೂರು ಕೇಂದ್ರಿತ ಕೈಗಾರಿಕಾ ನಿರ್ಮಾಣವಾಗುತ್ತಿಲ್ಲ. ಎರಡನೇ, ಮೂರನೇ ಹಂತದ ನಗರ, ಭಾಗದಲ್ಲೂ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಕೈಗಾರಿಕೆಗಳು ಬರುತ್ತಿವೆ. ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುವಂತ ಫಾರ್ಮಾ ಪಾರ್ಕ್ ಮಾಡಲು ನಮ್ಮ ಇಲಾಖೆ ಮುಂದಾಗಿದೆ. ಈ‌ ನಿಟ್ಟಿನಲ್ಲಿ ಯಾದಗಿರಿ ಜಿಲ್ಲೆಗೆ ಈ ಪಾರ್ಕ್ ಅನುಮೋದನೆ ನೀಡಿ ಕೇಂದ್ರ ಸರ್ಕಾರದಿಂದ ಅವಕಾಶ ಕೊಡಿಸಬೇಕು ಎಂದು ಸಿಎಂಗೆ ಮನವಿ ಮಾಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಟಾಯ್ ಕ್ಲಸ್ಟರ್ ನಮ್ಮ‌ ಭಾಗದಲ್ಲಿ ನಿರ್ಮಾಣವಾಗುತ್ತಿರುವುದು ಅತ್ಯಂತ ಅಭಿಮಾನದ ವಿಷಯ. ಬಿಜೆಪಿ ಯಾವಾಗಲೂ ಅಭಿವೃದ್ಧಿ ಪರ ಇದೆ. ಕಾಂಗ್ರೆಸ್ ನವರು ಆಕ್ಷೇಪ ಎತ್ತುವುದು ಬೇಡ.  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀರಾವರಿ ಕ್ಷೇತ್ರಕ್ಕೆ ಒಂದೇ ಒಂದು ಪೈಸೆ ಹಣ ನೀಡಿಲ್ಲ. ನಮ್ಮ ಸರ್ಕಾರ ಬಂದ ನಂತರ ಕೊಪ್ಪಳ ಏತನೀರಾವರಿಗೆ ಅನುದಾನ‌ ನೀಡಿ ಕೆಲಸ ನಡೆಯುತ್ತಿದೆ. ಈ ಕ್ಲಸ್ಟರ್ ನಿರ್ಮಾಣದ ಬಳಿಕ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕು. ಕೊಪ್ಪಳವನ್ನು ಕೈಗಾರಿಕಾ ಕಾರಿಡಾರ್ ಮಾಡಬೇಕು, ಕೊಪ್ಪಳಕ್ಕೆ ಉಡಾನ್ ಅಡಿ ವಿಮಾನ ನಿಲ್ದಾಣ ಮಂಜೂರಿ ಮಾಡಬೇಕು, ಜಿಲ್ಲಾ ನ್ಯಾಯಲಯ ಕಟ್ಟಡಕ್ಕೆ ಅನುದಾನ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡರು.

ಮಾಜಿ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ನಾನು ಈ ಹಿಂದೆ ಸಚಿವನಿದ್ದಾಗ ಕೊಪ್ಪಳದಲ್ಲಿ ಕ್ಲಸ್ಟರ್ ನಿರ್ಮಾಣಕ್ಕೆ ಅನುಮತಿ ನೀಡಿದ್ದೆನು.‌ ಇಂದು ಭೂಮಿಪೂಜೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಈ ಕ್ಲಸ್ಟರ್ ನಿರ್ಮಾಣದ ಮೂಲಕ ಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿ ಆಗಲಿವೆ. ಆಟಿಕೆ ಕ್ಲಸ್ಟರ್ ನಿರ್ಮಾಣ ಹಲವು ಕಂಪನಿಗಳನ್ನು ಇಲ್ಲಿಗೆ ಆಹ್ವಾನಿಸುತ್ತದೆ. ಸಿಎಂ ಯಡಿಯೂರಪ್ಪ ಅವರು, ಜಗದೀಶ್ ಶಟ್ಟರ್ ಅವರು ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಿ. ಹಲವು ಕಂಪನಿಗಳನ್ನು ಕರೆತರುತ್ತಿದ್ದಾರೆ. ಇದು ರಾಜ್ಯ, ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಅನುಕೂಲವಾಗುತ್ತದೆ. ಈ ಕ್ಲಸ್ಟರ್ ವಿದೇಶಗಳಲ್ಲೂ ತನ್ನ ಹೆಸರನ್ನು ಉತ್ತುಂಗಕ್ಕೆ ಒಯ್ಯಲಿ ಎಂದು ಹಾರೈಸುವೆ ಎಂದು ಹೇಳಿದರು.

ಸಮಾರಂಭದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್, ಗಣಿ ಮತ್ತು ಭೂ ವಿಜ್ಞಾನ ಸಚವ ಸಿ.ಸಿ.‌ ಪಾಟೀಲ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಶಾಸಕ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಅಮರೇಗೌಡ ಬಯ್ಯಾಪುರ, ರಾಮಣ್ಣ ಲಮಾಣಿ, ಶಂಕರ ಪಾಟೀಲ್ ಮುನೇನಕೊಪ್ಪ, ರಾಘವೇಂದ್ರ ಹಿಟ್ನಾಳ, ಬಸವರಾಜ ದಡೆಸೂಗೂರ, ವಿಪ ಸದಸ್ಯರು, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, 
ಸೇರಿದಂತೆ ಹಲವು ಗಣ್ಯರು, ಕ್ಲಸ್ಟರ್ ನ ಅಧಿಕಾರಿಗಳು ಉಪಸ್ಥಿತರಿದ್ದರು.


ಭಾಷಣ ವೇಳೆ ಗೊಂದಲ..
ಮಾಜಿ ಸಚಿವ ಆರ್.ವಿ. ದೇಶಪಾಂಡೆ ಭಾಷಣ ಮಾಡುವಾಗ ವಿನಾ ಕಾರಣ ಮಾಜಿ ಸಚಿವ ರಾಯರಡ್ಡಿ ಗೊಂದಲ ಸೃಷ್ಟಿಸಿದರು. ನನಗೆ ಧ್ವನಿ ಸರಿ‌ ಇಲ್ಲದ ಕಾರಣ ನನ್ನ ಭಾಷಣವನ್ನು ಅಮರೇಗೌಡ ಓದುತ್ತಾರೆ ಎಂದು ದೇಶಪಾಂಡೆ ಹೇಳಿದರು. ಆಗ ನಾನೇನು ಭಾಷಣ ಮಾಡುತ್ತೇನೆ ಎಂದು ಹೇಳಿಲ್ಲ ಎಂದು ಅಧಿಕಾರಿಗಳೊಂದಿಗೆ ತಕರಾರು ತೆಗೆದು ಗೊಂದಲ ಉಂಟು ಮಾಡಿದರು. ಅತ್ತ ಭಾಷಣ ಮಾಡುತ್ತಿದ್ದ ದೇಶಪಾಂಡೆ ಅವರು ಎಷ್ಟೆ ಮನವಿ ಮಾಡಿದರು ರಾಯರಡ್ಡಿ ಮಾತ್ರ ವಾಗ್ವಾದ ನಡೆಸಿದ್ದರು.‌ ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ರಾಯರಡ್ಡಿ ವಿರುದ್ಧ ಹಾಗೂ ಶಾಸಕ ಹಾಲಪ್ಪ ಪರ ಘೋಷಣೆ ಕೂಗಿದರು. ಅತ್ತ ಕಾಂಗ್ರೆಸ್ ಕಾರ್ಯಕರ್ತರು ರಾಯರಡ್ಡಿ ಪರ ಘೋಷಣೆ ಹಾಕಿದರು.‌ ಇದನ್ನೆಲ್ಲ‌  ಗಮನಿಸುತ್ತಿದ್ದ ಸಿಎಂ ಯಡಿಯೂರಪ್ಪ ಸಿಟ್ಟಾಗಿ ರಾಯರಡ್ಡಿಗೆ ಸುಮ್ಮನಿರಲು ತಿಳಿಸಿದ ಬಳಿಕ ಗೊಂದಲ ತಣ್ಣಗಾಯಿತು.

Please follow and like us:
error