fbpx

ದೇವಸ್ಥಾನ-ಸಾರ್ವಜನಿಕ ಸ್ಥಳಗಳಲ್ಲಿ ಮುಂದಿನ ಆದೇಶದವರೆಗೆ ಮದುವೆ ನಿಷೇಧ

ಕಲಬುರಗಿ,: ಸಾರ್ವಜನಿಕವಾಗಿ ನಡೆಯುವ ಮದುವೆಗಳಿಂದ ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಕಲಬುರಗಿ ಜಿಲ್ಲೆಯಾದ್ಯಂತ ಕಲ್ಯಾಣ ಮಂಟಪ,ಮನೆ, ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದುವೆಗೆ ಅವಕಾಶ ನೀಡಿರುವುದನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಪರ್ಯಾಯವಾಗಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆಗೆ ಅವಕಾಶ ನೀಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶರತ್ ಬಿ. ಅವರು ತಿಳಿಸಿದ್ದಾರೆ.

ಮದುವೆ ಆಯೋಜಿಸಲು ತಹಶೀಲ್ದಾರರು ಪರವಾನಿಗೆ ನೀಡುವುದನ್ನು ಸಹ ನಿಷೇಧಿಸಲಾಗಿದೆ. ಕಡ್ಡಾಯವಾಗಿ ಮದುವೆಗಳನ್ನು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 5 ಜನ ಸಾಕ್ಷಿದಾರರೊಂದಿಗೆ ನೋಂದಣಿ ಮಾಡಿಕೊಳ್ಳಬೇಕು.

ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನರು ಭಾಗವಹಿಸುತ್ತಿರುವುದರಿಂದ ಕೊರೋನಾ ಸೋಂಕು ಹರಡುತ್ತಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಲಬುರಗಿ ಜಿಲ್ಲೆಯಾದ್ಯಂತ ಮದುವೆ, ಸೀಮಂತ ಹಾಗೂ ಇನ್ನಿತರ ಸಾರ್ವಜನಿಕರು ಭಾಗವಹಿಸುವ ಕಾರ್ಯಕ್ರಮಗಳನ್ನು ಸಹ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.

ಮಾಸ್ಕ್ ಧರಿಸದೇ ಇರುವ ಪ್ರಯುಕ್ತ ದಂಡ ವಸೂಲಿ: ಕಲಬುರಗಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಇರುವ ಒಟ್ಟು 2053 ಜನರಿಂದ ಒಟ್ಟು 1,91,500 ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.

Please follow and like us:
error
error: Content is protected !!