ದೆಹಲಿ ರೈತರ ಹೋರಾಟ ಬೆಂಬಲಿಸಿ ಅಖಿಲ ಭಾರತ ಐಕ್ಯತಾ ದಿನ

Kannadanet
ಕೊಪ್ಪಳದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಎ. ಐ. ಡಿ. ವೈ. ಓ. ಮತ್ತು ಎ. ಐ. ಡಿ. ಎಸ್. ಓ. ವಿದ್ಯಾರ್ಥಿ ಯುವಜನ ಸಂಘಟನೆ ನೇತೃತ್ವದಲ್ಲಿ ರೈತರ ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಶರಣಬಸವ ಪಾಟೀಲ ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಾ
“ಕಳೆದ ಎರಡು ತಿಂಗಳುಗಳಿಂದ ದೇಶದ ಮೂಲೆಮೂಲೆಯಲ್ಲಿ ನಡೆಯುತ್ತಿರುವ ದಿಟ್ಟ ಅವಿರತ ಹೋರಾಟಗಳು ಮತ್ತು ಲಕ್ಷಲಕ್ಷ ರೈತರ ಬೃಹತ್ ಆಂದೋಲನಗಳು ಜನರ ತಲ್ಲಣಗಳನ್ನು ಅಭಿವ್ಯಕ್ತಿಸಿವೆ. ಸೆಪ್ಟೆಂಬರ್ ೨೦೨೦ರಲ್ಲಿ ಮೂರು ಹೊಸ ಕೃಷಿ ಕಾಯಿದೆಗಳನ್ನು ಕೇಂದ್ರ ಸರ್ಕಾರವು ಜಾರಿ ಮಾಡಿದ ನಂತರ ಕಳೆದ ಕೆಲವು ವರ್ಷಗಳಲ್ಲಿ ದೇಶದ ರೈತ ಸಮುದಾಯದೊಳಗೆ ಮಡುಗಟ್ಟಿದ್ದ ಸಹನೆಯ ಕಟ್ಟೆ ಒಡೆದುಹೋಗಿದೆ. ತಮ್ಮ ಆತಂಕವನ್ನು ಹೊತ್ತು ದೇಶದ ಮೂಲೆಮೂಲೆಗಳಿಂದ ದೆಹಲಿಗೆ ಬಂದಿರುವ ಕೃಷಿಕರನು ನವೆಂಬರ್ ೨೬ರರಿಂದ ಕೇಂದ್ರ ಸರ್ಕಾರವು ಕೃಷಿ ಕಾನೂನುಗಳಿಗೆ ತಂದಿರುವ ಕೃಷಿ-ವಿರೋಧಿ ಮತ್ತು ಜನ ವಿರೋಧಿ ತಿದ್ದುಪಡಿಗಳನ್ನು ಹಿಮ್ಮೆಟ್ಟಿಸಲು ದೆಹಲಿಯ ಅಸಾಧ್ಯವಾದ ಚಳಿ, ಭದ್ರತಾ ಪಡೆಗಳ ಲಾಠಿ ಏಟು, ಅಶ್ರುವಾಯು ಗುಂಡಿನ ದಾಳಿಗಳು ಮತ್ತು ಜಲ ಫಿರಂಗಿಗಳನ್ನು ಎದುರಿಸುತ್ತಿದ್ದಾರೆ. ಸಾವಿರಾರು ರೈತ ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಸಹ ಹೋರಾಟದ ಪತಾಕೆಯ ಅಡಿಯಲ್ಲಿ ಒಂದಾಗಿದ್ದಾರೆ. ರಾಷ್ಟದ ರಾಜಧಾನಿಯು ದೈತ್ಯಾಕಾರದ ರೈತ ಚಳವಳಿಯ ಕೇಂದ್ರಸ್ಥಾನವಾಗಿದೆ. ಹೋರಾಟದಿಂದ ಕಂಗೆಟ್ಟ ಕೇಂದ್ರ ಸರ್ಕಾರವು ಈಗ ರಾಷ್ಟದ ರಾಜಧಾನಿಯ ಎಲ್ಲಾ ಪ್ರವೇಶ ದ್ವಾರಗಳನ್ನು ಪ್ರತಿಭಟನಾಕಾರರಿಗೆ ಮುಚ್ಚಿ ಹೆದ್ದಾರಿಗಳನ್ನು ಬಗೆದು ಕಂದಕಗಳನ್ನು ತೋಡಿ ಮುಳ್ಳುತಂತಿ ಬೇಲಿಗಳನ್ನು ನಿರ್ಮಿಸಿ, ಶಾಂತಿಯುತ ಪ್ರತಿಭಟನಾಕಾರರನ್ನು ಎಗ್ಗುಸಿಗ್ಗಿಲ್ಲದ ಹಲ್ಲೆಗೆ ಗುರಿಮಾಡಿದೆ.

ಆಳ್ವಿಕ ಬಂಡವಾಳಶಾಹಿಗಳು ಮತ್ತು ಬೃಹತ್ ಬಹುರಾಷ್ಟಿಯ ಕಾರ್ಪೋರೇಟ್ ಕಂಪನಿಗಳಿಗೆ ಗರಿಷ್ಠ ಲಾಭವನ್ನು ದೊರಕಿಸಿಕೊಡುವ ಮತ್ತು ಅಂತಿಮವಾಗಿ ಮಧ್ಯಮ ಹಾಗೂ ಸಣ್ಣ ರೈತರನ್ನು ಸಂಪೂರ್ಣವಾಗಿ ಸರ್ವನಾಶ ಮಾಡುವ ಗುರಿ ಇರಿಸಿಕೊಂಡು ಈ ಮೂರು ಹೊಸ ಕೃಷಿ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಇವುಗಳಿಂದ ರೈತರು ಬೆಂಬಲ ಬೆಲೆಯಿಂದ ವಂಚಿತರಾಗುತ್ತಾರೆ, ತಮ್ಮ ಭೂಮಿ, ಕೃಷಿ ಮತ್ತು ತಮ್ಮ ಉತ್ಪಾದನೆಯ ಮೇಲಿನ ಸ್ವಾಧೀನವನ್ನು ಕಳೆದುಕೊಂಡು ಅವರ ಜೀವನವು ನಾಶವಾಗುತ್ತದೆ.ಮತ್ತು ಅವರು ದೊಡ್ಡ ಹಣದ ಥೈಲಿಗಳ ಕೃಪೆಗೆ ಅಂಗಲಾಚುವ ಹೀನಸ್ಥಿತಿಗೆ ತಳ್ಳಲ್ಪಡುತ್ತಾರೆ.

ಪ್ರಸ್ತುತ ರಾಜಧಾನಿ ದೆಹಲಿಯ ಒಳಗೆ ಬರದಂತೆ ಭದ್ರತಾ ಪಡೆಗಳಿಂದ ಸುತ್ತುವರಿಯಲ್ಪಟ್ಟಿರುವ ನೆರೆಯ ರಾಜ್ಯಗಳಾದ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನದ ರೈತರು ದೆಹಲಿಯ ಗಡಿಯಿಂದ ರಾಜಧಾನಿ ತಲುಪಿದ್ದಾರೆ. ಇತರ ರಾಜ್ಯಗಳ ರೈತರ ಮತ್ತು ಸಮಾಜದ ಎಲ್ಲಾ ವಿಭಾಗಕ್ಕೆ ಸೇರಿದ ಜನಸಾಮಾನ್ಯರ ಅಪಾರ ಬೆಂಬಲವನ್ನು ಗಳಿಸಿದ್ದಾರೆ. ಪೋಲಿಸರಿಂದ ಲಾಠಿ ಏಟು ತಿಂದರೂ ಸಹ, ಅವರಿಗೇ ಅನ್ನ ನೀಡಿ, ಮಾನವೀಯತೆ ಮೆರೆದಿದ್ದಾರೆ.
ಇಡೀ ದೇಶದ ಗ್ರಾಮೀಣ ಭೂಭಾಗದ ನಮ್ಮ ರೈತ ಸಹೋದರರಿಗೆ ಎಐಡಿವೈಓ ಅಖಿಲ ಭಾರತ ಸಮಿತಿಯು ಆತ್ಮೀಯವಾಗಿ ಹೋರಾಟದ ಶುಭಾಶಯಗಳನ್ನು ಕೋರುತ್ತದೆ, ಅವರ ಹೋರಾಟದ ಮನೋಭಾವ ಮತ್ತು ಉತ್ಸಾಹವನ್ನು ಅಭಿನಂದಿಸುತ್ತದೆ. ಅವರ ಅಭೂತಪೂರ್ವ ಚಳುವಳಿಯೊಂದಿಗೆ ತನ್ನನ್ನೇ ಗುರುತಿಸಿಕೊಂಡು ಹೋರಾಟಕ್ಕೆ ಅಖಂಡ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ಪ್ರಸಕ್ತ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್-೧೯ ಸಾಂಕ್ರಾಮಿಕದಿಂದಾಗಿ ದೇಶದ ಬಂಡವಾಳಶಾಹಿ ಅರ್ಥವ್ಯವಸ್ಥೆಯು ತಂದೊಡ್ಡಿರುವ ಸಮಸ್ಯೆಗಳಿಂದ ಜನತೆ ತತ್ತರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಈ ಚಳುವಳಿ ನಿಜಕ್ಕೂ ಅನಿವಾರ್ಯವಾಗಿದೆ ಮತ್ತು ಚೇತೋಹಾರಿಯಾಗಿದೆ ಎಂದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ ಹೋರಾಟವನ್ನು ಉದ್ದೇಶಿಸಿ
ರೈತ ಚಳುವಳಿಗೆ ಬೆಂಬಲ ಸೂಚಕವಾಗಿ ಎಐಡಿವೈಓ ಕೊಪ್ಪಳ ಜಿಲ್ಲಾ ಸಮಿತಿಯು ಮಹಾನ್ ಹುತಾತ್ಮ ಖುದಿರಾಮ್ ಬೋಸ್ ಅವರ 131 ಜನ್ಮದಿನವಾದ ಡಿಸೆಂಬರ್ 3 ರಂದು ರಾಷ್ಟವ್ಯಾಪಿ ಪ್ರತಿಭಟನಾ ಪ್ರದರ್ಶನಗಳನ್ನು ಕೈಗೊಳ್ಳಬೇಕೆಂದು ಯುವಜನತೆಗೆ ಕರೆ ನೀಡಿದರು. ಮುಂದುವರೆದು ತಕ್ಷಣ ಈ ಮೂರು ರೈತ ವಿರೋಧಿ ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ. ಅಲ್ಲದೆ,ರಾಷ್ಟ್ರವ್ಯಾಪಿ ರೈತರ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುವುದು ಮಾತ್ರವಲ್ಲದೆ, ಸಾಧ್ಯವಿರುವ ಎಲ್ಲ ವಿಧಾನಗಳಲ್ಲಿ ಈ ಚಳವಳಿಯಲ್ಲಿ ಭಾಗವಹಿಸಬೇಕೆಂದು ಎಐಡಿವೈಓ ಕೊಪ್ಪಳ ಜಿಲ್ಲಾ ಸಮಿತಿಯು ಕೊಪ್ಪಳ ಯುವಜನರಲ್ಲಿ ಮತ್ತು ರೈತಾಪಿ ಜನ ಸಾಮಾನ್ಯರಲ್ಲಿ ಮನವಿ ಮಾಡುತ್ತವೆ ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು ಮುಖ್ಯವಾಗಿ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ,
ಖಾಸಗಿ ಮಾರುಕಟ್ಟೆ ಕಾಯ್ದೆ, ವಿದ್ಯುತ್ ಬಿಲ್ ತಿದ್ದುಪಡಿ ಕಾಯ್ದೆ,ಗುತ್ತಿಗೆ ಕೃಷಿ ಕಾಯ್ದೆ, ಎ.ಪಿ.ಎಂ.ಸಿ. ತಿದ್ದುಪಡಿ ಸುಗ್ರೀವಾಜ್ಞೆ, ಮತ್ತು ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಎಐಡಿಎಸ್ಒ ಸಂಘಟನೆಯ ಜಿಲ್ಲಾ ಸಂಘಟನಾಕಾರರು ದೇವರಾಜ್ ಹೊಸಮನಿ ಮಹಿಳಾ ಸಂಘಟನಾಕಾರರು ಮಂಜುಳಾ ಎಂ. ಹಾಗೂ ಸದಸ್ಯರಾದ ಫಯಾಜ್ ಇನ್ ಕ್ವಿಲಾಬಿ, ಪ್ರವೀಣ್ ಪೂಜಾರ, ಚಂದ್ರಶೇಖರ, ಮುದ್ದನಗೌಡ,ರೈತ ಮುಖಂಡರಾದ ಮುದುಕಪ್ಪ, ದುರ್ಗೇಶ್ ಬೇವೂರ, ದ್ಯಾಮಣ್ಣ, ಶರಣಪ್ಪ ಗುಂದಿ, ಮಿಥುನ್, ರಘು, ಮುಂತಾದವರು ಹೋರಾಟದಲ್ಲಿ ಭಾಗವಸಿದ್ದರು.

Please follow and like us:
error