ದಿ. ಡಾ. ಮರಿಗೌಡ ರವರ ಜನ್ಮ ದಿನಾಚರಣೆ ನಿಮಿತ್ತ ತೋಟಗಾರಿಕೆ ಸಪ್ತಾಹ


ಕೊಪ್ಪಳ, : ದಿ.ಡಾ.ಮರಿಗೌಡ ಅವರ ಜನ್ಮದಿನಾಚರಣೆ ನಿಮಿತ್ತ ತೋಟಗಾರಿಕೆ ಇಲಾಖೆಯಿಂದ ಆಗಸ್ಟ್ 08 ರಿಂದ 30 ರವರೆಗೆ ತೊಟಗಾರಿಕೆ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಆಗಸ್ಟ್ 12 ರಂದು(ಬುಧವಾರ) ಕುಷ್ಟಗಿ ತಾಲ್ಲೂಕಿನ ನಿಡಶೇಷಿ ತೋಟಗಾರಿಕೆ ಕ್ಷೇತ್ರದಲ್ಲಿ ಜೇನು ಸಾಕಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದರವರು, ಡಾ. ಎಮ್.ಎಚ್. ಮರಿಗೌಡ ರವರು ತೊಟಗಾರಿಕೆ ಇಲಾಖೆಯ ನಿರ್ದೇಶಕರಾಗಿದ್ದರು. ತೋಟಗಾರಿಕೆ ಎಂದರೆ ಕೇವಲ ಶ್ರೀಮಂತರಿಗೆ ಸೀಮಿತವಾಗಿತ್ತು. ಆದರೆ ಡಾ.ಮರಿಗೌಡರವರ ಪರಿಶ್ರಮ, ಇಲಾಖೆ ಮೇಲೆ ಅವರಿಗಿದ್ದ ಅಭಿಮಾನ ಇಂದು ಸಾಮಾನ್ಯ ಜನರೂ ತೋಟಗಾರಿಕೆ ಮಾಡುವಂತಾಗಿದೆ. ತೋಟಗಾರಿಕೆ ಅತ್ಯಂತ ಲಾಭದಾಯಕ ಕೃಷಿಯಾಗಿದ್ದು, ಬಡವರು ತೋಟಗಾರಿಕೆ ಮಾಡುತ್ತಾ ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದಾರೆ. ನಿಡಶೇಷಿ ತೋಟಗಾರಿಕೆ ಕ್ಷೇತ್ರದಲ್ಲಿ ಇಸ್ರೇಲ್ ಮಾದರಿ ತಂತ್ರಜ್ಞಾನ ಅಂದರೆ ಕಡಿಮೆ ನೀರು, ಸಾಧಾರಣ ಮಣ್ಣಿನಲ್ಲೂ ತೋಟಗಾರಿಕೆ ಮಾಡಬಹುದೆಂದು ತೋರಿಸಲಾಗುತ್ತಿದೆ. ಇದೊಂದು ಮಾದರಿ ತೋಟಗಾರಿಕೆ ಕ್ಷೇತ್ರ ಆಗಿದ್ದು ರೈತರು ಇಲ್ಲಿನ ಪ್ರಾತ್ಯಕ್ಷಿಕೆಗಳಾದ ಪಾಲಿಮನೆ, ಶೇಡನೆಟ್, ಪಾಲಿ ಟನಲ್ ಅಲ್ಲದೇ ದ್ರಾಕಿ,್ಷ ಅಂಜೂರ, ಪೇರಲದಂತಹ ಹಣ್ಣಿನ ಬೆಳೆಗಳ ತಾಕುಗಳನ್ನು ವೀಕ್ಷಿಸಿ ತಾವು ಬೆಳೆಗಳನ್ನು ಬೆಳೆಯಬಹುದು. ರೈತರಿಗಾಗಿ ಜೇನುಕೃಷಿ, ಅಣಬೆ ಕೃಷಿಯಂತಹ ತರಬೇತಿಗಳನ್ನು ಏರ್ಪಡಿಸಲಾಗುತ್ತಿದ್ದು, ರೈತರು ಆತ್ಮನಿರ್ಭರತೆ ಹೊಂದಿ ಸ್ವಾವಲಂಬನೆ ಜೀವನ ನಡೆಸುವಂತಾಗಬೇಕು. ರೈತರಿಗೆ ಆಸಕ್ತಿ ಇರುವ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ರೈತರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೆ.ಎಮ್. ರಮೇಶ ರವರು ಮಾತನಾಡಿ, ಡಾ. ಎಮ್.ಎಚ್. ಮರಿಗೌಡ ರವರು ಸ್ಥಾಪಿಸಿದ 400 ಕ್ಕೂ ಹೆಚ್ಚು ತೋಟಗಾರಿಕೆ ಕ್ಷೇತ್ರಗಳು ರೈತರಿಗೆ ಮಾದರಿಯಾಗಿ ತೋಟಗಾರಿಕೆ ಮಾಡಲು ಪ್ರೇರೇಪಿಸುತ್ತವೆ. ಅವರಿಂದಾಗಿಯೇ ತೋಟಗಾರಿಕೆ ಇಂದು ಬೃಹತ್ ಇಲಾಖೆಯಾಗಿ ಕೆಲಸ ಮಾಡುತ್ತಿದೆ. ರೈತರು ಇಲ್ಲಿಗೆ ಆಗಮಿಸಿ ತೋಟಗಾರಿಕೆ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಇಂತಹ ತರಬೇತಿಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
 ತೋಟಗಾರಿಕೆ ವಿಷಯ ತಜ್ಞರಾದ ವಾಮನಮೂರ್ತಿರವರು ಜೇನುಕೃಷಿಯಲ್ಲಿ ತಾಂತ್ರಿಕ ವಿಷಯಗಳ ಬಗ್ಗೆ ವಿವರಿಸುತ್ತಾ, ಜೇನು ಸಾಕಣೆ ಒಂದು ಲಾಭದಾಯಕ ಉದ್ಯಮವಾಗಿದ್ದು, ಜೇನು ಸಾಕಣೆಯಿಂದ ನಾವು ಸಹಭಾಗಿತ್ವ, ಸಹಬಾಳ್ವೆ, ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸುತ್ತಾ ಜೇನು ಸಾಕಣೆಯಲ್ಲಿ ಇರುವ ಅಪಾಯಕಾರಿ ಶತ್ರುಗಳ ಬಗ್ಗೆ ವಿವರಣೆ ನೀಡಿದರು.
 ನಿಂಗಪ್ಪ ಕುಂಬಾರ, ಜೇನು ಕೃಷಿ ಬಗ್ಗೆ ಪ್ರಾಯೋಗಿಕವಾಗಿ ತಿಳಿಸುತ್ತಾ ಜೇನು ಸಾಕಣೆ ಮಾಡುವ ವಿಧಾನದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
 ಕಾರ್ಯಕ್ರಮದಲ್ಲಿ ಮುಜಂಟಿ ಜೇನು, ತುಡವೆ ಜೇನಿನ ಮಾದರಿ ಘಟಕಕ್ಕೆ ರೈತರನ್ನು ಕರೆದು ಜೇನು ಸಾಕಣೆ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಲಾಯಿತು.
 ಸ್ವ-ಸಹಾಯ ಗುಂಪಿನ ಸದಸ್ಯರು, ಪ್ರಗತಿ ಪರ ರೈತರು ಮತ್ತು ರೈತಮಹಿಳೆಯರು, ಕೇಂದ್ರ ಸ್ಥಾನಿಕ ಸಹಾಯಕರಲ್ಲದೇ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:
error