ಜ.೪ ರಂದು ಸಿಂಧನೂರಿನಲ್ಲಿ ಬೃಹತ್ ಕುರುಬ ಸಮಾವೇಶ – ಕೆ.ವಿರುಪಾಕ್ಷಪ್ಪ

ಕುರುಬರ ಎಸ್ಟಿ ಹೋರಾಟ ಸಮಾಜದ ಭವಿಷ್ಯ, ಯುವ ಪೀಳಿಗೆಗಾಗಿ ನಡೆಯುವ ಹೋರಾಟ

ಕೊಪ್ಪಳ : ಕುರುಬರ ಎಸ್ಟಿ ಹೋರಾಟ ಯಾವುದೇ ವ್ಯಕ್ತಿಗಾಗಿ ಅಲ್ಲ, ಸಮಾಜದ ಭವಿಷ್ಯಕ್ಕಾಗಿ ಯುವ ಪೀಳಿಗೆಗಾಗಿ ನಡೆಯುವ ಹೋರಾಟವಾಗಿದ್ದು, ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ ಸೇರ್ಪಡೆಗೆ ಆಗ್ರಹಿಸಿ ನೂತನ ವರ್ಷದ ಜನವರಿ ೪ ರಂದು ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಬೃಹತ್ ಸಮಾವೇಶ ಸಿಂಧನೂರಿನಲ್ಲಿ ನಡೆಸಲಾಗುತ್ತದೆ ಎಂದು ರಾಜ್ಯ ಕುರುಬರ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಅವರು ಹೇಳಿದರು.
    ಭಾನುವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದ ಅವರು, ರಾಜ್ಯದಲ್ಲಿ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಪ್ಟಂಬರ ನಿಂದ ಹೋರಾಟ ಆರಂಭಿಸಲಾಗಿದೆ. ಈಗಾಗಲೇ ಸಮಾವೇಶಗಳು ನಡೆಸಲಾಗಿದೆ. ಜ.೪ ರಂದು ರಾಯಚೂರು, ಕೊಪ್ಪಳ, ಬಳ್ಳಾರಿ ಬೃಹತ್ ಸಮಾವೇಶ ಸಿಂಧನೂರಿನಲ್ಲಿ ಆಯೋಜಿಸಲಾಗಿದ್ದು, ಜ.೫ ರಂದು ಯಾದಗಿರಿ, ಗುಲ್ಬರ್ಗಾ, ಬೀದರ್ ಜಿಲ್ಲೆಗಳ ಸಮಾವೇಶ ಗುಲ್ಬರ್ಗಾದಲ್ಲಿ ನಡೆಯಲಿದೆ.
       ಅದರಂತೆ ಜ.15 ರಿಂದ ಕಾಗಿನೆಲೆ ಗುರುಪೀಠದ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರು ಪಾದಯಾತ್ರೆ ನಡೆಯಲಿದೆ. ಫೆ.7ರ ವರೆಗೆ ಈ ಪಾದಯಾತ್ರೆ ನಡೆಯಲಿದ್ದು, 340 ಕಿ.ಮಿ. ಪಾದಯಾತ್ರೆ ನಂತರ ಫೆ.7 ರಂದು ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಅಧಿಕ ಕುರುಬ ಸಮಾಜದ ಜನರೊಂದಿಗೆ  ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
       ಈ ಸಮಾವೇಶದ ಬೇಡಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸ್ಪಂದನೆಯನ್ನಾಧರಿಸಿ ಮುಂದಿನ ಹೋರಾಟವನ್ನು ರೂಪಿಸಲಾಗುತ್ತದೆ. ಕುರುಬರು ಬುಡಕಟ್ಟು ಜನಾಂಗಕ್ಕೆ ಸೇರಿದವರು ಎಂಬುವುದಕ್ಕೆ ಅನೇಕ ಆಧಾರಗಳಿವೆ. 1868 ರಲ್ಲಿ ಬ್ರಿಟೀಷ್ ಸರಕಾರ ಪ್ರಕಟಿತ ಪೀಪುಲ್ ಆಫ್ ಇಂಡಿಯಾದಲ್ಲಿ ದಕ್ಷಿಣ ಭಾರತದ ಕುರುಬರು ಬುಡಕಟ್ಟು ಜನಾಂಗಕ್ಕೆ ಸೇರಿದವರೆಂದು ಸ್ಪಷ್ಟವಾಗಿ ಉಲ್ಲೆಖಿಸಲಾಗಿದೆ.
    1901ರಲ್ಲಿ ಬ್ರಿಟೀಷ್ ಸರಕಾರದ ಜನಗಣತಿಯಲ್ಲಿಯೂ ದಕ್ಷಿಣ ಭಾರತದಲ್ಲಿ ಕುರುಬರನ್ನು ಬುಡಕಟ್ಟು ಜನಾಂಗವೆಂದು ಗುರುತಿಸಲಾಗಿದೆ. ಶಂಭಾ ಜೋಷಿ ಮತ್ತು ಎಂ.ಎಂ, ಕಲ್ಬುರ್ಗಿ ಅವರ ಸಂಶೋಧನೆಗಳಲ್ಲಿಯೂ ಇದಕ್ಕೆ ಆಧಾರಗಳಿವೆ. ಈ ಎಲ್ಲಾ ಆಧಾರಗಳೊಂದಿಗೆ ಕರ್ನಾಟಕದಲ್ಲಿ ಕುರುಬರನ್ನು ಎಸ್ಟಿಗೆ ಸೇರಿಸಲು ಹೋರಾಟ ರೂಪಿಸಲಾಗಿದೆ ಎಂದರು.
      ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಎಸ್ಟಿಗೆ ಸೇರಿಸುವ ದಾಖಲೆಗಳಿವೆ. ಮದ್ರಾಸ್ ಭಾಗದ ಜನರು ಕುರುಬ, ಕುರುಂಬ, ಕುರವನï, ಎಸ್ಟಿ ಸೌಲಭ್ಯವನ್ನು ಪಡೆದಿದ್ದಾರೆ. ಮುಂಬೈ ಕರ್ನಾಟಕದಲ್ಲಿ ಜೇನು ಕುರುಬ, ಕಾಡು ಕುರುಬ, ಪರಿಶಿಷ್ಟ ಪಂಗಡದಲ್ಲಿದೆ. 1975 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಕುರುಬ ಸಮಾಜವೂ ಸೇರಿತ್ತು. 1976 ರಲ್ಲಿ ಲೋಕಸಭೆಯಲ್ಲಿ ಈ ಬಿಲ್ ಮಂಡನೆ ಸಂದರ್ಭದಲ್ಲಿ ಯಾರೂ ಅದಕ್ಕೆ ಹೆಚ್ಚಿನ ಒತ್ತು ನೀಡಲಿಲ್ಲ. ಆದರೆ, ಕೊಡಗಿನ ಕುರುಬರಿಗೆ ಮಾತ್ರ ಎಸ್ಟಿ ಸೌಲಭ್ಯ ಇಂದಿಗೂ ಅವಕಾಶವಿದೆ. ಕೊಡಗಿನ ಸೌಲಭ್ಯವನ್ನು ರಾಜ್ಯದಾದ್ಯಂತ ವಿಸ್ತರಿಸಬೇಕೆನ್ನುವುದೇ ನಮ್ಮ ಹೋರಾಟದ ಉದ್ದೇಶವಾಗಿದೆ ಎಂದರು.
     ಇತ್ತೀಚಿಗೆ ಹೋರಾಟ ಸಮಿತಿ ನಿಯೋಗ ಸ್ವಾಮಿಗಳ ನೇತೃತ್ವದಲ್ಲಿ ಕೇಂದ್ರ ಬುಡಕಟ್ಟು ರೇಣುಕಾ ಸಿಂಗ್ ಸಚಿವರನ್ನು ಮತ್ತು ಸಂಸದೀಯ ಸಚಿವರಾದ ಪ್ರಹ್ಲಾದ್ ಜೋಷಿ ಅವರನ್ನು ಭೇಟಿಮಾಡಿ ಮನವಿ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರ ಬಿಎಸ್ ಯಡಿಯೂರಪ್ಪ ಅವರಿಗೂ ಮನವಿ ಮಾಡಿದ್ದೇವೆ. ಎಲ್ಲರಿಂದಲೂ ಪೂರಕವಾಗಿ ಸ್ಪಂದನೆ ವ್ಯಕ್ತಗೊಂಡಿದೆ.
      ಮೀಸಲಾತಿ ಶೇಕಡವಾರಿಗೆ ಸಂಬಂಧಿಸಿ ಪ್ರಸ್ತಾಪಿಸಿದ್ದಾರೆ. ಎಸ್ಟಿ ಸೇರ್ಪಡೆಯಿಂದ ಕೇಂದ್ರ ಮೀಸಲಾತಿಯಲ್ಲಿ ಗಣನೀಯ ಅವಕಾಶಗಳು ದೊರೆಯಲಿವೆ. ರಾಜ್ಯ ಮೀಸಲಾತಿಯಲ್ಲಿ ಉದ್ಯೋಗದ ಸೌಲಭ್ಯಗಳ ಬಗ್ಗೆ ಅಡಚಣೆಯಿದ್ದರೂ, ಶೈಕ್ಷಣಿಕ, ಆರ್ಥಿಕ ಸೌಲಭ್ಯ ಪಡೆಯಲು ಸಾಧ್ಯ. ಈಗಾಗಲೇ ನಾಯಕ ಸಮುದಾಯ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದೆ. ನಾವು ಸಹ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಟಿ ಹೋರಾಟ ಪ್ರಮುಖರಾದ ವೀರನಗೌಡ ಬಳೂಟಗಿ, ಮಲ್ಲಣ್ಣ ಪಲ್ಲೇದ, ಯಮನಪ್ಪ ವಿಠ್ಠಲಾಪೂರ, ನಗರಸಭೆ ಸದಸ್ಯ ವಿರೂಪಾಕ್ಷಪ್ಪ ಮೋರನಾಳ, ಫಕೀರಪ್ಪ ಚಳಿಗೇರಿ, ಗಂಗಾವತಿ ಎಪಿಎಂಸಿ ಸದಸ್ಯರು ನೀಲಪ್ಪ ಸಣ್ಣಕ್ಕಿ, ಶಿವು ರಾಜೂರು, ಸೇರಿದಂತೆ ಇತರರಿದ್ದರು.

Please follow and like us:
error