ಜನ್ನತ್ ಮೊಹಲ್ಲಾದ ಅಬ್ಬಾಸ್ ಮೇಲಿನಮನಿ ಇನ್ನಿಲ್ಲ..

ನೀವಿಲ್ಲದೇ ಜನ್ನತ್ ಮೊಹಲ್ಲಾ ಖಾಲಿ ಖಾಲಿಯಾಗಿದೆ

ಛೇ ನಂಬಲಾಗುತ್ತಿಲ್ಲ.. ಈ ಕ್ರೂರಿ ಕರೋನಾ ಕಾಲದಲ್ಲಿ ನಮ್ಮ ಬಹಳಷ್ಟು ಹಿರಿಯ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ಮಾನವೀಯ ಮೌಲ್ಯಗಳ, ಸೂಕ್ಷ್ಮ ಸಂವೇದನೆಯ ಹಿರಿಯ ಕಥೆಗಾರರಾದ ಬಾಗಲಕೋಟ ಜಿಲ್ಲೆಯ ಅಬ್ಬಾಸ ಮೇಲಿನಮನಿಯವರು ಇಂದು ಹೃದಯಾಘಾತದಿಂದ ನಮ್ಮನ್ನು ಅಗಲಿದ್ದಾರೆ.. ಇಡೀ ಸಾಹಿತ್ಯ ಬಳಗ ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತದೆ..


ನಾಡಿನ ಜನಪ್ರಿಯ ಕಥೆಗಾರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಬಾಗಲಕೋಟೆಯ ಕಥೆಗಾರ ಅಬ್ಬಾಸ್ ಮೇಲಿನಮನಿ ಅವರು, ಸಮಕಾಲೀನ ಪೀಳಿಗೆಯ ಕಥೆಗಾರರಲ್ಲಿ ಬಹುಮುಖ್ಯವಾದುದು. ಶರಣರು ಮೆಟ್ಟಿದ ನೆಲದಲ್ಲಿರುವ ಅಬ್ಬಾಸ್ ಅವರು, ಮೌಲ್ಯಗಳ ಬಿತ್ತು ಕಾಯಕವನ್ನು ತಮ್ಮ ಸಂವೇದನಶೀಲ ಕಥೆಗಳ ಮೂಲಕ ಮಾಡುತ್ತ್ತಾ ಬಂದಿದ್ದಾರೆ. ಇಂತಹ ವಿಶಿಷ್ಟವಾದ ಸಂವೇದನಶೀಲ ಕತೆಗಾರ ಅಬ್ಬಾಸ್ ಮೇಲಿನಮನಿ ಅವರು ಇನ್ನಿಲ್ಲವಾಗಿರುವುದು ಕನ್ನಡ ನಾಡಿನ ಸಾಹಿತ್ಯ ಲೋಕದ ನಕ್ಷತ್ರ ಕಳಚಿದಂತಾಗಿದೆ.
ಮೂಲತ: ಬಾಗಲಕೋಟೆಯವರಾದ ಅಬ್ಬಾಸ್ ಮೇಲಿನಮನಿ ಅವರು, 1954 ಮಾರ್ಚ 5ರಂದು ಜನಿಸಿದ್ದಾರೆ. ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಾಹಿತ್ಯ ಕೃಷಿ: ನೇರ, ನಿಷ್ಠುರತೆಯ ಸ್ವಭಾವ ಹೊಂದಿದ ಅಬ್ಬಾಸ್ ಮೇಲಿನಮನಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಹೆಸರು ಗಳಿಸಿದವರು. ಯಾವುದೇ ಅಗ್ಗದ ಪ್ರಚಾರದ ಹಿಂದೆ ಬೀಳದ ಅವರು, ಇದ್ದದನ್ನು ಇದ್ದ ಹಾಗೇ ನೇರವಾಗಿ ಹೇಳುವ ಎದೆಗಾರಿಕೆ ಹೊಂದಿದೆ ನಿಷ್ಠುರತೆಯ ಕತೆಗಾರಾಗಿ ಗುರುತಿಸಿಕೊಂಡು ಸಾಹಿತ್ಯದ ಕೃಷಿಯನ್ನು ಮಾಡಿದ್ದಾರೆ.
ಕಥಾ ಸಂಕಲನಗಳು: ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಾದಂಬರಿಗಳು: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ, ಸಂಪಾದಿತ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು.

ಪ್ರಶಸ್ತಿ-ಪುರಷ್ಕಾರಗಳು: ಸಾಹಿತಿ ಎ ಎಸ್. ಮಕಾನದಾರ ಕೊಡಮಾಡುವ ಗದಗ ನಿರಂತರ ಪ್ರಕಾಶನದ ಕಥಾ ಲೋಕದ ಜಂಗಮ ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಶಿವಮೊಗ್ಗ ಕ.ಸ.ಪ. ಲಂಕೇಶ್ ಕಥಾ ಪ್ರಶಸ್ತಿ, ತುಷಾರ ಎಚ್.ಎಂ.ಟಿ. ಅತ್ಯುತ್ತಮ ಕಥಾ ಪ್ರಶಸ್ತಿಗಳು ಲಭಿಸಿವೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯರಾಗಿದ್ದರು.
ಪ್ರತಿಮೆ, ಆಕೃತಿಗಳನ್ನು ಕಟ್ಟಿಕೊಡುವುದನ್ನು ಇವರು ಕತೆಗಳ ಮೂಲಕ ಮಾಡಿದ್ದಾರೆ. ಹಿಂದೂ, ಮುಸ್ಲಿಂ ಸಮುದಾಯಗಳ ಸಾಮಾಜಿಕ ಸಂಬಂಧಗಳನ್ನು, ಅದರ ಸಂವೇದನೆಗಳನ್ನು ಅಬ್ಬಾಸ್ ಕಥೆಗಳು ಕಟ್ಟಿಕೊಡುತ್ತವೆ. ಒಂದು ಸಮಾಂತರದ ನೆಲೆಯಲ್ಲಿ ನಿಂತು ಧ್ಯಾನಸ್ಥನಾಗಿ ಕಾಣುವ ಪರಿ ಅನನ್ಯ.
ಪತ್ರಿಕಾ ಕ್ಷೇತ್ರದೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿದ್ದ ಅವರು, ಬಾಗಲಕೋಟೆ ನಗರದ ಜಿಲ್ಲಾ ಪತ್ರಿಕೆಯೊಂದರಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಅಬ್ಬಾಸ್ ನಿಧನ ಸಾಹಿತ್ಯ ಲೋಕ ಹಾಗೂ ಅವರ ಅಭಿಮಾನಿ ಬಳಗಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ.

ಜನ್ನತ್ ಮೊಹಲ್ಲಾದ ಹಿರಿಯ ಕತೆಗಾರ. ನಿರಂತರ ಪ್ರಕಾಶನ ಸಂಸ್ಥೆ ಯಿಂದ ಕಥಾ ಲೋಕದ ಜಂಗಮ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ನಿಷ್ಠುರ ವಾದಿ ಬರಹಗಾರ ಪ್ರೊ. ಅಬ್ಬಾಸ್ ಮೇಲಿನಮನಿ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಿ ಬಾರದ ಹಾನಿ ಯಾಗಿದೆ. ಅವರುನನ್ನಂಥ ಅನೇಕ ಹೊಸಪೀಳಿಗೆಯ ಬರಹಗಾರರಿಗೆ ಮಾರ್ಗದರ್ಶನ ನೀಡಿದ್ದು ಸ್ಮರಣೀಯ
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎ.ಎಸ್.ಮಕಾನದಾರ

ಮಾನವೀಯ ಮೌಲ್ಯಗಳ ಕಥೆಗಾರರಾದ ಬಾಗಲಕೋಟ ಜಿಲ್ಲೆಯ ಅಬ್ಬಾಸ ಮೇಲಿನಮನಿ ಅವರು ಇಂದು ಹೃದಯಾಘಾತದಿಂದ ನಮ್ಮನ್ನು ಅಗಲಿದ್ದಾರೆ.. ಮೇ ಸಾಹಿತ್ಯ ಮೇಳದ ಬಳಗ ಹೃದಯಪೂರ್ವಕ ಕೊನೆಯ ನಮನ ಸಲ್ಲಿಸುತ್ತದೆ..ಬಸೂ.

 

ನಂಬಲಾಗುತ್ತಿಲ್ಲ..
ನನ್ನ ಜಿಲ್ಲೆಯ ನನ್ನ ಪ್ರೀತಿಯ ಕಥೆಗಾರ ಅಬ್ಬಾಸ್ ಮೇಲಿನಮನಿ ಮೇಷ್ಟ್ರು ಹೃದಯಾಘಾತದಿಂದ ಇನ್ನಿಲ್ಲ ಅನ್ನೋ ಸುದ್ದಿ ಈಗಷ್ಟೇ ಬಂತು. ಅವರ ಕಥೆಯ ಪಾತ್ರಗಳಂತೆಯೇ ಅವರು ಕೂಡ ಯಾರಿಗೂ ಹಿಡಿಶಾಪ ಹಾಕದೇ ಒಳಗೊಳಗೆ ನೋಯುತ್ತಲೇ ಇನ್ನಿಲ್ಲವಾದರು. 😥 ಹನುಮಂತ ಹಾಲಗೇರಿ

ನನ್ನ ಮತ್ತು ರಾಜಾಬಕ್ಷಿ Rajabakshi Hv ಬಗ್ಗೆ ಅತ್ಯಂತ ಹೆಚ್ಚಿನ ಪ್ರೀತಿ, ಕಾಳಜಿ ಹೊಂದಿದ್ದ ಹಿರಿಯ ಜೀವ. ಯಾವಾಗ ಸಿಕ್ಕರೂ ಅಷ್ಟೇ ಪ್ರೀತಿಯಿಂದ ಮಾತನಾಡುತ್ತಿದ್ದರು. ಹತ್ತಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿದ್ದರು. ಅವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿದ್ದು ಕಥಾಕಮ್ಮಟದಲ್ಲಿ . ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅವರು ಪ್ರೀತಿಯಿಂದ ಮಾತನಾಡಿಸಿದ್ದರು. ಅಲ್ಲಿಂದ ಮುಂದೆ ನಿರಂತರವಾಗಿ ವಿವಿದೆಡೆ ಭೇಟಿಯಾಗುತ್ತಲೇ ಇದ್ವಿ. ನೀವು ಇನ್ನಷ್ಟು ದಿನ ಇರಬೇಕಿತ್ತು .. ನೀವಿಲ್ಲದೇ ಜನ್ನತ್ ಮೊಹಲ್ಲಾ ಖಾಲಿ ಖಾಲಿಯಾಗಿದೆ ಅಲ್ವಿದಾ… ಹೋಗಿ ಬನ್ನಿ ಸರ್ – ಸಿರಾಜ್ ಬಿಸರಳ್ಳಿ

ಅಬ್ಬಾಸ್ ಮೇಲಿನಮನಿಯವರು ಇಲ್ಲವಾದರು ಎಂಬ ವಾರ್ತೆ ಅಚ್ಚರಿ ಮತ್ತು ದಿಗ್ರಭೆ ಮೂಡಿಸಿದೆ.

“ಅಬ್ಬಾಸ್ ಮೇಲಿನಮನಿಯವರದು ಅತ್ಯಂತ ಸಾತ್ವಿಕ ವ್ಯಕ್ತಿತ್ವ. ಮಾತಿನ ಸದ್ದು ಹೆಚ್ಚಿದರೆ ಎದುರಿಗಿರುವವರಿಗೆ ನೋವಾಗುವುದೇನೋ ಎಂಬಂತೆ ಮೆಲುಮಾತು ಮೆದುಮಾತು ಮತ್ತು ಮಿತಮಾತಿನವರಾಗಿದ್ದರು. ಇವರ ಬರೆಹವೂ ಮಾನವೀಯ ಮೌಲ್ಯವನ್ನೇ ಪ್ರಧಾನ ತಾತ್ವಿಕತೆಯನ್ನಾಗಿಸಿಕೊಂಡಿತ್ತು. ಕಥೆಗಾರ, ಕಾದಂಬರಿಕಾರರಾಗಿ ಗಮನಾರ್ಹ ಸಾಹಿತ್ಯ ಕ್ರಿಯೆಯನ್ನು ಪೂರೈಸಿದ ಇವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದರು.
ಯಾವತ್ತೂ ಆಡುವ ಮಾತನ್ನು ಆತ್ಮೀಯವಾಗಿಸುತ್ತಿದ್ದ ಅಬ್ಬಾಸ್ ಮೇಲಿನಮನಿ ಅವರೊಂದಿಗೆ ಕಳೆದ ಕೆಲವೇ ಸಂದರ್ಭಗಳ ಒಡನಾಟವನ್ನು ಎಂದೂ ಮರೆಯಲಾಗದು. ಇನ್ನೂ ಸಾಕಷ್ಟು ದಿನ ನಮ್ಮೊಂದಿಗಿರುತ್ತಾರೆ ಎಂದುಕೊಂಡಿದ್ದಂತೆಯೇ “ಸಭೆಯ ನಡುವೆ ನಿರ್ಗಮಿಸಿದಂತೆ” ಇವರು ಹೊರಟೇ ಹೋದದ್ದು ನಿಜಕ್ಕೂ ನೋವಿನ ವಿಷಯ.
ಇನ್ನೂ ಬಾಳಬಹುದಾಗಿದ್ದ ಅಬ್ಬಾಸರು ಬಾಳಿದ್ದರೆ ಖಂಡಿತ ಇನ್ನಷ್ಟು ಬರೆಯಬಲ್ಲವರಾಗಿದ್ದರು. ಇವರ ಸಾವು ಕುಟುಂಬಕ್ಕೆ ಮಾತ್ರವಲ್ಲ ಅಕ್ಷರಶಃ ಸಾಹಿತ್ಯಕ್ಷೇತ್ರದಲ್ಲೂ ಕೊರತೆಯನ್ನು ಉಂಟುಮಾಡಿದೆ.
ಅಬ್ಬಾಸ್ ಮೇಲಿನಮನಿಯವರನ್ನು ಗೌರವಿಸುವುದಾದರೆ ಇವರ ಬರೆಹಗಳನ್ನು ಕುರಿತಂತೆ ವಿಚಾರ ಸಂಕಿರಣಗಳನ್ನು ಆಯೋಜಿಸಬೇಕಿದೆ. ಹೊಸ ಓದಿನ ಮೂಲಕ ವಿಮರ್ಶೆಗಳಾಗಬೇಕಿದೆ. ಅಂತೆಯೇ ಇವರ ನೆನಪನ್ನು ಶಾಶ್ವತವಾಗಿಡುವಂತೆ ವಿಜಯಪುರ- ಬಾಗಲಕೋಟೆ ಸಾಹಿತ್ಯಕ ಸಂಘಟನೆಗಳು ಏನನ್ನಾದರೂ ಮಾಡಬೇಕಿದೆ ಎಂದು ಆಶಿಸುತ್ತೇನೆ. ಬಿ.ಪೀರ್ ಬಾಷಾ”

ಬರಸಿಡಿಲಿನಂತೆ ಬಂದೆರಗಿರುವ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗುತ್ತಿಲ್ಲ.
ಬಾಗಲಕೋಟೆ ಜಿಲ್ಲೆಯ ಮನುಷ್ಯ ಪ್ರೀತಿಯ ಅಪ್ರತಿಮ ಕಥೆಗಾರ ಅಬ್ಬಾಸ್ ಮೇಲಿನಮನಿ ಅವರು ನಮ್ಮನ್ನಗಲಿದ್ದಾರೆ. ನನ್ನ ಗಜಲ್ ಸಂಕಲನದ ಕುರಿತು ಕರೆ ಮಾಡಿ ತುಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದ ಅವರು ಇಷ್ಟು ಬೇಗ ನಮ್ಮಿಂದ ದೂರ ಹೋಗುತ್ತಾರೆಂದು ಅಂದುಕೊಂಡಿರಲಿಲ್ಲ. ಇದೇ ಶುಕ್ರವಾರ ಅವರ ಅಧ್ಯಕ್ಷತೆಯಲ್ಲಿ ಆನ್ ಲೈನ್ ಕವಿಗೋಷ್ಠಿ ಹಮ್ಮಿಕೊಂಡಿದ್ದೆವು. ಅವರು ಇಲ್ಲವಾದ ಸುದ್ದಿಯನ್ನು ಅಲ್ಲಾಗಿರಿರಾಜ್ ಹೇಳಿದ ಕೂಡಲೇ ನಂಬಲಾಗಲಿಲ್ಲ.
ಅಗಲಿದ ಹಿರಿಯ ಜೀವಕ್ಕೆ ಅಂತರಾಳದ ಅಶ್ರುತರ್ಪಣ.
ನಿಮ್ಮ ಕಥೆಗಳು ನಮ್ಮೊಂದಿಗೆ ಇವೆ ಸರ್….. Nagesh Nayak

ಅಬ್ಭಾಸ್ ಮೇಲಿನಮನಿ ಕನ್ನಡದ ಶ್ರೇಷ್ಠ ಕಥೆಗಾರರಾಗಿದ್ದರು..! ಅವರ ಕಥೆಗಳನ್ನು ನಾನು ಇಷ್ಟಪಟ್ಟು ಓದುತ್ತಿದ್ದೆ…!

ಬಾದಾಮಿ ಚಾಲುಕ್ಯ ಉತ್ಸವದಲ್ಲಿ ನಾವು ಒಂದೇ ವೇದಿಕೆಯಲ್ಲಿದ್ದೆವು..ಕವಿಗೋಷ್ಠಿ ಕಾರ್ಯಕ್ರಮ..!
ಅಕ್ಬರ ಸಿ ಕಾಲಿಮಿರ್ಚಿ ಮತ್ತು ನಾನು ಕೊಪ್ಪಳದಿಂದ ಭಾಗವಹಿಸಿದವರು
* ತುಂಬ ಆತ್ಮೀಯವಾಗಿ ಮಾತಾಡಿದ್ದರು….!*ಈ ದಿನಗಳಲ್ಲಿ‌ನಾವು ಹೆಚ್ಚು ಬಹು ಮುಖ್ಯ ಜನರನ್ನು ಕಳೆದುಕೊಳ್ಳುತ್ತಿದ್ದೇವೆ..😧 ಭಾವ ಪೂರ್ಣ ಶ್ರದ್ಧಾಂಜಲಿ..!ನುಡಿನಮನಗಳು..!ಅನಸೂಯ ಜಹಗೀರದಾರ.

ಕಥೆಗಾರ ಅಬ್ಬಾಸ ಮೇಲಿನಮನಿ ನಿಧನ

ಬಾಗಲಕೋಟೆ: ಕಥೆಗಾರ ಅಬ್ಬಾಸ ಮೇಲಿನಮನಿ (66) ತೀವ್ರ ಹೃದಯಾಘಾತದಿಂದ ಸೋಮವಾರ ಚಿತ್ರದುರ್ಗದ ಪುತ್ರಿಯ ನಿವಾಸದಲ್ಲಿ ನಿಧನರಾದರು.

ಗುಳೇದಗುಡ್ಡದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾಗಿ ನಿವೃತ್ತರಾಗಿದ್ದ ಅಬ್ಬಾಸ, ಕಥೆಗಾರನಾಗಿ ನಾಡಿನ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದರು.

ಕೃಷ್ಣಾ ತೀರದ ಜನರ ಬದುಕು, ಸಾಮಾಜಿಕ, ಸಾಂಸ್ಕೃತಿಕ ವೈಶಿಷ್ಟ್ಯ, ವೈರುಧ್ಯ ಹಾಗೂ ತಲ್ಲಣಗಳನ್ನು ತಮ್ಮ ಕಥೆಗಳಲ್ಲಿ ಬಹು ಸೂಕ್ಷ್ಮವಾಗಿ ಕಟ್ಟಿಕೊಡುತ್ತಿದ್ದ ಅಬ್ಬಾಸ ಮೇಲಿನಮನಿ, ವೃತ್ತಿಯಲ್ಲಿ ಶಿಕ್ಷಕರಾಗಿ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ.

ಇಲ್ಲಿಯವರೆಗೆ ಒಂಬತ್ತು ಕಥಾ ಸಂಕಲನ, ಮೂರು ಕವನ ಸಂಕಲನ, ಮೂರು ಕಥಾ ಸಂಪುಟ, ಒಂದು ಕಾದಂಬರಿ, ಮೂರು ಲೇಖನಗಳ ಸಂಗ್ರಹ ಹಾಗೂ ಒಂಬತ್ತು ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ.

ಮಾಸ್ತಿ ಕಥಾ ಪ್ರಶಸ್ತಿ, ಡಾ ಗೊರೂರು ಸಾಹಿತ್ಯ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಅಬ್ಬಾಸ ಅವರಿಗೆ ಸಂದಿವೆ.ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ, ಸುಧಾ, ಮಯೂರ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಬ್ಬಾಸ ಮೇಲಿನಮನಿ ಅವರ ಕಥೆಗಳು ಪ್ರಕಟವಾಗಿವೆ.ಚಿತ್ರದುರ್ಗದಿಂದ ಪಾರ್ಥೀವ ಶರೀರವನ್ನು ಇಲ್ಲಿನ ನವನಗರದ ಮೂರನೇ ಸೆಕ್ಟರ್ ನಲ್ಲಿರುವ ಮನೆಗೆ ರಾತ್ರಿ ತರಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಅಬ್ಬಾಸ ಮೇಲಿನಮನಿ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

Please follow and like us:
error