ಚಿರತೆ ಸೆರೆಗೆ ಆನೆಗಳನ್ನು ಕರೆಯಿಸಿ‌ ಕೂಂಬಿಂಗ್

ಕೊಪ್ಪಳ : ಜನ ವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಚಿರತೆಗಳ ಹಾವಳಿ ತಡೆಗೆ ನಾನಾ ಪ್ರಯೋಗಗಳನ್ನು ನಡೆಸಿ ವಿಫಲವಾಗಿದ್ದರಿಂದ ಬೇಸತ್ತು ಹೋಗಿರುವ ಅರಣ್ಯ ಇಲಾಖೆ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.ಜಿಲ್ಲೆಯ ಗಂಗಾವತಿ
ತಾಲೂಕಿನ ಆನೆಗೊಂದಿ ಸುತ್ತಲೂ ಹೆಚ್ಚಾದ ಚಿರತೆ ಹಾವಳಿಯಿಂದಾಗಿ ಈಗಾಗಲೆ ಇಬ್ಬರು ಯುವಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಅಲ್ಲದೇ ಜಾನುವಾರುಗಳು ಗಾಯಗೊಂಡಿವೆ. ಈ ಹಿನ್ನೆಲೆ ಚಿರತೆ ಜಾಡು ಪತ್ತೆ ಹಚ್ಚಲು ಇದೀಗ ಅರಣ್ಯ ಇಲಾಖೆ, ಆನೆಗಳ ಮೊರೆ ಹೋಗಿದ್ದು, ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಎರಡು ಆನೆಗಳನ್ನು ಕರೆಯಿಸಿ‌ ಕೂಂಬಿಂಗ್ ಕಾರ್ಯಾಚರಣೆ ನಡೆಸುವ ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿದೆ.

ರವಿವಾರ ಒಂದು ಗಂಡು, ಒಂದು ಹೆಣ್ಣು ಆನೆಗಳು ವಿರುಪಾಪುರ ಗಡ್ಡೆಯಲ್ಲಿ ಮಾವುತರ ನೆರವಿನಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.

ಹೇಗೆ ಕೂಂಬಿಂಗ್​ ಕಾರ್ಯಾಚರಣೆ…?

ಚಿರತೆ ಇದ್ದರೆ ಅದರ ವಾಸನೆಯನ್ನು ಆನೆ, ಎರಡೂ ಕಿ.ಮೀ. ದೂರದಿಂದಲೂ ಗ್ರಹಿಸುತ್ತದೆಯಂತೆ. ಹೀಗೆ ಚಿರತೆ ಜಾಡು ಕಂಡು ಬಂದಲ್ಲಿ ಆನೆ ಮೇಲಿರುವ ಶಾರ್ಪ್​ ಶೂಟರ್​ಗಳು ಶೂಟ್ ಮಾಡಲಿದ್ದಾರೆ. ಶೂಟ್ ಎಂದರೆ ಹೊಡೆದು ಸಾಯುವುದಲ್ಲ. ಅರವಳಿಕೆ ಚುಚ್ಚುಮದ್ದನ್ನು ತಜ್ಞರ ನಿರ್ದೇಶನದಂತೆ ಗನ್ನಿಗೆ ಲೋಡ್ ಮಾಡಿ ಚಿರತೆಗೆ ಗುರಿಯಿಟ್ಟು ಹೊಡೆಯಲಾಗುತ್ತದೆ. ಕ್ಷಣಾರ್ಧದಲ್ಲಿ ಚಿರತೆ ಪ್ರಜ್ಞೆ ತಪ್ಪಿ ಬಿದ್ದರೆ ಅದನ್ನು ತಕ್ಷಣ ಸೆರೆ ಹಿಡಿದು ಮೃಗಾಲಯಕ್ಕೆ ಸಾಗಿಸುವ ಉದ್ದೇಶಕ್ಕೆ ಇದೀಗ ವಿರುಪಾಪುರ ಗಡ್ಡೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ.

ಚಿರತೆ ಸೆರೆಗೆ ಈಗಾಗಲೇ ಅರಣ್ಯ ಇಲಾಖೆ ,ಪೊಲೀಸ್ ಇಲಾಖೆ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಅವಿರತವಾಗಿ ಪ್ರಯತ್ನ ನಡೆಸುತ್ತಿದ್ದಾರೆ..ಈಗಾಗಲೇ 50 ಕ್ಕೂ ಹೆಚ್ಚು ಸಿಬ್ಬಂದಿಗಳು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ

Please follow and like us:
error