ಚಾಮರಾಜನಗರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಶಶಿಕಲಾ ಅವರು ಆಯ್ಕೆ

ಚಾಮರಾಜನಗರ, :- ತಾಲ್ಲೂಕಿನ ಅಮಚವಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾದ ಶಶಿಕಲಾ ಅವರು ಚಾಮರಾಜನಗರ ಜಿಲ್ಲಾ ಪಂಚಾಯತ್ ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಾದ ಡಾ. ಜಿ.ಸಿ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ಚುನಾವಣೆÉ ಸಂಬಂಧ ಸಭೆ ನಡೆಯಿತು. ಅಮಚವಾಡಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಲಾ ಅವರೊಬ್ಬರೆ ನಾಮಪತ್ರ ಸಲ್ಲಿಕೆ ಮಾಡಿದ್ದು, ನಾಮಪತ್ರ ಕ್ರಮಬದ್ಧವಾಗಿರುವ ಹಿನ್ನೆಲೆಯಲ್ಲಿ ಶಶಿಕಲಾ ಅವರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಾದೇಶಿಕ ಆಯುಕ್ತರು ಘೋಷಿಸಿದರು.

ಬಳಿಕ ಜಿಲ್ಲಾ ಪಂಚಾಯತ್ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ ಅವರು ಮಾತನಾಡಿ ಜಿಲ್ಲೆಗೆ ಬರುವಷ್ಟು ಅನುದಾನವನ್ನು ಬಳಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಾದ ಜಲ ಜೀವನ್ ಯೋಜನೆಯಡಿ ಪ್ರತಿಯೊಂದು ಗ್ರಾಮಗಳಿಗೂ ಕುಡಿಯುವ ನೀರನ್ನು ತಲುಪಿಸಲು ನನ್ನ ಅವಧಿಯಲ್ಲಿ ಪ್ರಯತ್ನಿಸುತ್ತೇನೆ. ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ಸಹಕಾರದಿಂದ ಜಿಲ್ಲೆಯ ಜನತೆಯ ಆರೋಗ್ಯಕ್ಕಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ಅಶ್ವಿನಿ, ಇತರರು ಹಾಜರಿದ್ದರು.

Please follow and like us:
error