ಗೌರಿ ಮಕ್ಕಳ ಹಾಡು ಪಾಡು


– ಕಳಕೇಶ ಡಿ ಗುಡ್ಲಾನೂರ

ಹಬ್ಬಗಳು ಸಾಂಸ್ಕೃತಿಕ ನವೀಕರಣದ ಭಾಗವಾಗಿ ಜನಬದುಕಿನಲ್ಲಿ ಚಾಲ್ತಿಯಲ್ಲಿವೆ. ಇವು ಪರಸ್ಪರರನ್ನು ನೆಲದನಂಟಿನೊಂದಿಗೆ ಒಂದಾಗಿಸುವ ಜೀವತಂತು !
ಪ್ರತಿ ವರುಷ ಸಿಗೆಹುಣ್ಣಿಮೆಯಿಂದ ಗೌರಿಹುಣ್ಣಿಮೆವರೆಗೆ “ನಾವು ಗೌರಿಮಕ್ಳು ನಿಮ್ಮ ಮನಿ ಬಾಗ್ಲಿಗೆ ಬಂದೀವಿ… ” ಎಂದು ಮನೆಮಂದಿಯ ಮೇಲೆ ತತಕ್ಷಣವೇ ಹಾಡುಕಟ್ಟಿ ಹಾಡುವ ಕೊಪ್ಪಳ ಜಿಲ್ಲೆಯ ಬೇವಿನಹಾಳದ ಎಂಬತ್ತು ದಾಟಿದ ಯಮನಮ್ಮ ಹಾಗೂ ಸಂಗಡಿಗರು ನಮ್ಮ ಜನಪದ ಪರಂಪರೆಯ ಜೀವಂತ ಸಾಕ್ಷಿಗಳು.

ಎಷ್ಟು ವರ್ಷದಿಂದ ಹಾಡ್ತಿರಿ ? ಯಾಕ ಹಾಡ್ತಿರಿ ?
ಹೆಂಗ ಕಲ್ತಿರಿ ಈ ಹಾಡಿಕೆ? ಅಂತ ಅವರೊಂದಿಗೆ ಮೆಲ್ಲಗೆ ಮಾತಿಗಿಳಿದೆ
‘ ನಾವು ಈಟ್ ಸಣ್ಣಾರ ಇದ್ದಾಗಲಿಂದ ಹಾಡ್ತಿವಿ, ಹಂಗ ಖುಷಿಗೆ ಹಾಡ್ತಿವಿ ನಾವು ಯಾರೂ ಶ್ಯಾಲಿ ಮುಖ ನೋಡಿಲ್, ಕೂಲಿ ಕೆಲ್ಸಕ್ಕ ಗೌಡ್ರ ಗದ್ಯಾಗ ಕಳೆ ತಗ್ಯಾಕ ಹೊಕ್ಕೀವಿ, ನಮ್ಮ ಹಿರೇರಲಿಂದ ಹಾಡ ಕಲ್ತಿವಿ ನಾವು ಎನ್ನುತ್ತಾ,
“ಯಪ್ಪಾ ಈಪಟ ಬಾ.. ನಮ್ಮ ಕೇರಿ ಕೆಂಚಮ್ಮನ ಗುಡ್ಯಾಗ ಗೌರಮ್ಮನ ನೋಡಾಕ…” ಅಂತ ಹಬ್ಬಕ್ಕೆ ಆಹ್ವಾನಿಸುತ್ತಾರೆ; ಅವರ ಜೀವನ ಪ್ರೀತಿ ದೊಡ್ಡದು!
ಅಜ್ಞಾತ ಕವಿಗಳ ಅಮರ ಸಾಲುಗಳು ಇವರ ತುದಿನಾಲಿಗೆಯ ಮೇಲೆ ನಲಿದಾಡುವುದನ್ನು ಕೇಳುವುದೆ ಸೊಗಸು!

ಆಗಿ ಹುಣ್ಣಿಮಿ ಮಾಡಿ,
ಸೀಗಿ ಹುಣ್ಣಿಮಿ ಮಾಡಿ
ಗೌರಿ ಹುಣ್ಣಿಮಿಗೆ ಬರುವೇನೋ
ನನ್ನ ದೊರೆಯೇ
ಎಂದು ಹಾಡುವ ಇವರು ಕೋಲಾಟ,ಸೋಬಾನ ಪದಗಳನ್ನು ಹೇಳುತ್ತಾರೆ ಅಷ್ಟೇ ಅಲ್ಲ ಹಳ್ಳಿಯೊಳಗೆ ಹೆಣ್ಣು ಮಕ್ಕಳು ತಮ್ಮ ಗೆಳತಿಯರೊಡಗೂಡಿ ಲಗೋರಿ, ಕುಂಟಾಟ,ಕೋಲಾಟಗಳಂತಹ ಆಟಗಳನ್ನು ಆಡುವ ಮೂಲಕ ಸಂತಸ ಹಂಚಿಕೊಳ್ಳುತ್ತಾರೆ ಈ ಗೌರಿ ಹುಣ್ಣಿಮೆಯಲ್ಲಿ.

ಕಾರ್ತಿಕದ ತಿಂಗಳಪೂರ್ತಿ ಸುತ್ತಲೂರಿಗೆ ಅಲೆಯುವ ಇವರು ಯಾವ ಓಣಿಯ ಯಾರ ಮನೆಯೊಳಗೆ
ಹಿಡಿ ಅನ್ನ ಸಿಕ್ಕಿತೆಂದು ಉಹಿಸಬಲ್ಲರು. ಹಳ್ಯಾಗ ಚ್ವಲೋ ರೀ ರೊಟ್ಯಾಗ ರೊಟ್ಟಿಕೊಡ್ತಾರ ಚೂರ್ ಕಾಳುಬ್ಯಾಳಿ ನಿಡ್ತಾರ, ದಾನಧರ್ಮ ಕೊಡ್ತಾರ ಈ ಪ್ಯಾಟಿ ಪಂಡಿತರು ಹೊರಗ ಬಂದೂ ನೋಡಲ್ ನಮ್ಗ! ಮುಂದಕ್ ನಡ್ರಿ ಮುಂದಕ್ ನಡ್ರಿ ಅಂತಾರೆ, ಎಷ್ಟೋ ಸಾರಿ ನಾಯಿ ಹಿಂಬಾಲ ಹತ್ತಿ ಓಡ್ಸ್ಯಾವ ಎಂದು ನೆನಪಿಸಿಕೊಳ್ಳುತ್ತಾರೆ.

ಜನರು ಕೊಟ್ಟ ದುಡ್ಡುಕಾಳು ಬ್ಯಾಳಿ ಎಲ್ಲವನ್ನೂ
ಕೊಡಿಟ್ಟುಕೊಂಡು ಸ್ವಂತಕ್ಕೆ ಬಳಸಿಕೊಳ್ಳದೆ , ದಾನರೂಪದಲ್ಲಿ ಬಂದ ಧನಧಾನ್ಯದಲ್ಲೇ ಹುಣ್ಣಿಮೆ ದಿನ ಕೇರಿಯ ಕೆಂಚಮ್ಮನ ಗುಡಿಯಲ್ಲಿ ‘ಗೌರಿ’ಕೂಡಿಸಿ ಹಬ್ಬದೂಟಮಾಡಿ ಜೀವಬಂಧುಗಳಿಗ ಹಂಚಿ ಸಂಭ್ರಮಿಸುತ್ತಾರೆ.
ಕಾಲಾನುಕಾಲದಿಂದ ಕೂಡುಬದುಕಿನ ಕುರುಹು ಆಗಿ ನೆಡೆದುಕೊಂಡು ಬಂದಿರುವ ಈ ಹಾಡಿಕೆ ಅದರ ಅನ್ಯನತೆಯ ಅಂತರಾಳವನ್ನು ಶೋಧಿಸಿಕೊಂಡು ಮುನ್ನಡೆಯಬೇಕಿದೆ, ಜೊತೆಗೆ ಗ್ರಾಮೀಣ ಭಾಗದ ಇಂತಹ ಅನೇಕ ಜನಪದ ಹಾಡುಗಾರರ ಬದುಕು ಬೆಳಕಾಗಬೇಕಿದೆ.

Please follow and like us:
error