ಗೌರಿ ಕಂಡ ಕನಸುಗಳೇನು?

-ಅರುಣ್ ಜೋಳದಕೂಡ್ಲಿಗಿ.

ಗೌರಿ ಲಂಕೇಶ್ ನಮ್ಮನ್ನು ಅಗಲಿ ಇಂದಿಗೆ ಮೂರು ವರ್ಷಗಳು ಕಳೆದವು. ಈ ಮಧ್ಯೆ ”ನಾನು ಗೌರಿ ನಾವೆಲ್ಲಾ ಗೌರಿ” ಎನ್ನುವ ಲಕ್ಷಾಂತರ ಗೌರಿಯರು ಧ್ವನಿ ಎತ್ತುವ ಹೋರಾಟದ ಸಂಕೇತವಾಗಿ ಗೌರಿ ನಮ್ಮ ನಡುವೆ ಜೀವಂತವಾಗಿದ್ದಾರೆ. ಗೌರಿ ಲಂಕೇಶ್ ಅವರ ಕನಸು ಕಾಣ್ಕೆಗಳು ಇದೀಗ ‘ನಾನು ಗೌರಿ’ ವೆಬ್ ಮ್ಯಾಗಜಿನ್ ಮತ್ತು ‘ನ್ಯಾಯಪಥ’ ಮುದ್ರಿತ ಪತ್ರಿಕೆ ಮೂಲಕ ಸಾಕಾರಗೊಳ್ತಿದೆ. ಈ ದಿನ ಗೌರಿ ಏನನ್ನು ಯೋಚಿಸಿದ್ರು, ಏನನ್ನು ಕನಸಿದ್ರು, ಅವರ ಆತಂಕ ಏನಾಗಿತ್ತು? ಎನ್ನುವುದರ ಬಗ್ಗೆ ಮತ್ತೊಮ್ಮೆ ನೆನಪಿಸಿಕೊಳ್ಳೋಣ.

ಬಂಡವಾಳಶಾಹಿ/ಕಾರ್ಪೋರೇಟ್ ದಬ್ಬಾಳಿಕೆಯನ್ನು ಕೊನೆಗಾಣಿಸುವ ಕನಸು

ಜಾಗತಿಕ ಹಿಂಸೆಯನ್ನು ವಿರೋಧಿಸಿ ಪರ್ಯಾಯಗಳ ಹುಡುಕಾಟ ಮಾಡುವುದು ಗೌರಿಯ ಮುಖ್ಯ ಕಾಳಜಿಯಾಗಿತ್ತು. ಹಾಗಾಗಿ ಜಾಗತಿಕ ಬಂಡವಾಳಶಾಹಿ ಹುಟ್ಟಿಸುವ ತಲ್ಲಣಗಳನ್ನು ದಾಖಲಿಸುತ್ತಿದ್ದರು. ಅದರಲ್ಲಿ ಅಮೆರಿಕಾದ ಯುದ್ಧದಾಹಿ ನೀತಿಗಳನ್ನು ಕಟುವಾಗಿ ವಿಮರ್ಶಿಸಿದ್ದರು. ಜಗತ್ತಿನ ಹಿಡಿತ ಸಾಧಿಸಲು ಮುಸ್ಲಿಂ ರಾಷ್ಟ್ರಗಳನ್ನು ಓಲೈಸಿ `ಬಯೋತ್ಪಾದಕ’ರನ್ನು ಉತ್ಪಾದಿಸಿ ಇಡೀ ಜಗತ್ತಿಗೆ ಅಮೆರಿಕಾ ಹೇಗೆ ಕಂಟಕವಾಗುತ್ತಿದೆ ಎನ್ನುವುದನ್ನು ಹೇಳುತ್ತಿದ್ದರು. ಹಾಗಾಗಿಯೆ ಬಹುಪಾಲು ಮುಸ್ಲಿಂ ಬಯೋತ್ಪಾದಕ ಸಂಘಟನೆಗಳು ಅಮೇರಿಕಾ ಪ್ರಾಯೋಜಿತ ಬಲಿಪಶುಗಳು ಎಂದು ವಿವರಿಸಿದ್ದರು. ಬುಷ್ ಆಡಳಿತದಲ್ಲಿ ಇರಾಕ್ ಮೇಲಿನ ನಿರಂತರ ದಾಳಿಯನ್ನೂ, ಆತನ ಜೀವವಿರೋಧಿ ನಡೆಗಳನ್ನೂ, ಅಮೆರಿಕಾದ ಸುಳ್ಳುಗಳನ್ನು ಬಯಲುಗೊಳಿಸುವ ಹಲವು ಟಿಪ್ಪಣಿಗಳನ್ನು ಬರೆದಿದ್ದಾರೆ. 

ಹೀಗಾಗಿ ಜಾಗತಿಕ ಹಿಂಸೆಯನ್ನು ವಿರೋಧಿಸುವ ವ್ಯಕ್ತಿಗಳನ್ನೂ, ಅಭಿವ್ಯಕ್ತಿಯ ಭಿನ್ನ ನೆಲೆಗಳನ್ನೂ ಆಯ್ದು ಅವುಗಳ ಬಗ್ಗೆ ಗಮನಸೆಳೆಯುತ್ತಿದ್ದರು. ಭಾರತದಲ್ಲಿಯೂ ಬಂಡವಾಳಶಾಹಿಗಳು/ಕಾರ್ಪೋರೇಟ್ ವ್ಯಾಪಾರಿಗಳು ಪ್ರಭುತ್ವವನ್ನು ಹೇಗೆ ನಿಯಂತ್ರಿಸುತ್ತಿದ್ದಾರೆ ಎನ್ನುವುದನ್ನು ಪ್ರಧಾನಿಗಳಾದ ವಾಜಪೇಯಿ, ದೇವೇಗೌಡ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯವರ ಆಡಳಿತ ನೀತಿಗಳ ಒಳಹೊಕ್ಕು ವಿಮರ್ಶಿಸುತ್ತಿದ್ದರು. ಸದ್ಯಕ್ಕಂತೂ ಮೋದಿ ಸರಕಾರ ಹೇಗೆ ಅಂಬಾನಿ, ಅದಾನಿಗಳ ಕೈಗೊಂಬೆಯಾಗಿದೆ ಎನ್ನುವುದನ್ನು ಪದೇಪದೇ ಬರೆದಿದ್ದಾರೆ. `ಈಗಾಗಲೇ ಜಾಗತೀಕರಣ ಉದಾರಿಕರಣ ಖಾಸಗೀಕರಣದ ಭರಾಟೆಗೆ ನಮ್ಮ ದೇಶದ ನೈಸರ್ಗಿಕ ಸಂಪತ್ತನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ವಿದ್ಯುಚ್ಛಕ್ತಿಯಿಂದ ಹಿಡಿದು ನೀರು ರಸ್ತೆ ಮತ್ತು  ಎಸ್‍ಇಜೆಡ್ ಗಳಿಗೆ ಸಾವಿರಾರು ಎಕರೆ ಕೃಷಿಭೂಮಿಯನ್ನು ಕೊಡುವ, ಖಾಸಗಿ ನಗರಗಳನ್ನೆ ನಿರ್ಮಿಸಿಕೊಳ್ಳುವ ತನಕ ಇಡೀ ದೇಶವನ್ನು, ಅದರ ಸಕಲ ಸಂಪತ್ತನ್ನು, ಬಿಡಿಬಿಡಿಯಾಗಿ ಬಿಕರಿಗಿಡಲಾಗಿದೆ’ ಎನ್ನುವ ಆತಂಕವನ್ನು ವ್ಯಕ್ತಪಡಿಸುತ್ತಿದ್ದರು. ಗೌರಿಯವರ ಈ ಆತಂಕ ಈಗ ಮತ್ತಷ್ಟು ಸ್ಪಷ್ಟವಾಗಿದೆ. ಇಡೀ ದೇಶವನ್ನೆ ಬಿಕರಿಗಿಡಲಾಗಿದೆ.

ಭಾರತವನ್ನು ಹಿಂದುತ್ವದ ಮೂಲಭೂತವಾದಿ ಹಿಂಸೆಯಿಂದ ಮುಕ್ತಗೊಳಿಸುವ ಕನಸು

ಗೌರಿ ಬರಹದಲ್ಲಿ ಹೆಣೆದಿರುವ ಪ್ರಭಾವಿ ಎಳೆಗಳಲ್ಲಿ `ಹಿಂದುತ್ವ’ ಧೋರಣೆಯ ವಿರೋಧ ಮುಖ್ಯವಾಗಿದೆ. ದೇಶದ ಬಹುತ್ವವನ್ನು ನಾಶಮಾಡುವ ಯಾವುದೇ ಧಾರ್ಮಿಕ ಮೂಲಭೂತವಾದವನ್ನು ಸ್ಪಷ್ಟವಾಗಿಯೂ, ಖಚಿತವಾಗಿಯೂ ಖಂಡಿಸಿದ್ದಾರೆ. ಅಂತೆಯೇ ಈ ಬಗ್ಗೆ ಜನಾಭಿಪ್ರಾಯ ಮೂಡಿಸಲು ನಿರಂತರವಾಗಿ ಬರಹವನ್ನೇ ಮಾಧ್ಯಮವನ್ನಾಗಿಸಿಕೊಂಡಿದ್ದಾರೆ. ಕೆಲವರು ಗೌರಿಯ ಸಾವನ್ನು ಸಂಭ್ರಮಿಸಿದ್ದು ಕೂಡ ಇದೇ ಕಾರಣಕ್ಕೆ ಎನ್ನುವುದನ್ನು ವಿವರಿಸಬೇಕಿಲ್ಲ. ಇಲ್ಲಿ ಮುಖ್ಯವಾಗಿ ಸಂವಿಧಾನಿಕ ಅಂಶಗಳನ್ನು ಎತ್ತಿಹಿಡಿಯುತ್ತಾ, ಈ ದೇಶ ಹೇಗೆ ಬಹುಸಂಸ್ಕೃತಿಗಳ ಕೂಡುಬಾಳುವೆ ನಡೆಸಿದೆ ಮತ್ತು ಈ ಬಗೆಯ ಸೌಹಾರ್ಧತೆಯನ್ನು ಉಳಿಸುವ ಅಗತ್ಯವೇನಿದೆ ಎನ್ನುವುದರ ಬಗ್ಗೆ ಹಲವು ಬಾರಿ ಬರೆದಿದ್ದಾರೆ. 

ಬ್ರಾಹ್ಮಣರ ಗೋಭಕ್ಷಣೆಯ ಬಗ್ಗೆ ಪ್ರೊ.ಡಿ.ಎನ್ ಝಾ ಮತ್ತು ರೋಮಿಲಾ ಥಾಪರ್ ಸಂಶೋಧನೆಗಳನ್ನು ಉಲ್ಲೇಖಿಸಿ ಗೋಹತ್ಯೆ ವಿರೋಧದ ಹಿಂಸೆಯನ್ನು ಖಂಡಿಸುತ್ತಾರೆ. ಇತಿಹಾಸಜ್ಞ ಡಾ.ಕೆ.ಜಮಾನದಾಸ್ ಅವರ ಸಂಶೋಧನೆಯ ಮೂಲಕ ಹಿಂದೂ ಧರ್ಮ ವೇಶ್ಯಾವೃತ್ತಿಗೆ ಮಾನ್ಯತೆ ನೀಡಿದ್ದರಿಂದಾಗಿ ಜೈನ ಬೌದ್ಧ ಧರ್ಮಕ್ಕೆ ಮಹಿಳೆಯರು ವಲಸೆ ಹೋಗಿದ್ದರ ಬಗ್ಗೆ ಬರೆಯುತ್ತಾರೆ. ಇತಿಹಾಸಜ್ಞ ಡಾ. ಜಿ.ಎನ್ ಪಾಂಡೆ ಟಿಪ್ಪು ಸುಲ್ತಾನನ ಬಗೆಗೆ ಹಬ್ಬಿಸಿದ ಹಿಂದುತ್ವವಾದಿ ಸುಳ್ಳುಗಳನ್ನು ಬಯಲುಗೊಳಿಸಿದ ಬಗ್ಗೆ ಚರ್ಚಿಸುತ್ತಾರೆ. ಸಾವರ್ಕರ್‍ನ ನಿಜಚರಿತ್ರೆಯನ್ನು ತೆರೆದಿಡುತ್ತಾರೆ. `ಯಾವನು ಈ ಗೋಲ್ವಾಲ್ಕರ್’ ಎನ್ನುವ ಬರಹದಲ್ಲಿ ಆತನ ಜೀವವಿರೋಧಿ ಚಿಂತನೆಯನ್ನು ವಿಶ್ಲೇಷಿಸುತ್ತಾರೆ. 

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಎಲ್ಲಿಯೂ ಹಿಂದೂ ಧರ್ಮವನ್ನು ಕುರುಡಾಗಿಯೂ, ಏಕಮುಖವಾಗಿಯೂ ವಿರೋಧಿಸುವುದಿಲ್ಲ. ಬದಲಾಗಿ ಇತಿಹಾಸದ ಸಂಶೋಧನೆಗಳ, ಹಿಂದೂ ಧರ್ಮದ ಅಧ್ಯಯನಗಳ ನೆರವು ಪಡೆದು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. `ಜಾತಿಯತೆಯನ್ನು ಬೆಂಬಲಿಸುವ, ಇತರೆ ಧರ್ಮಗಳ ವಿರುದ್ಧ ಕಿಡಿಕಾರುವ, ಮಹಿಳೆಯರನ್ನು ಬೆಂಕಿಗೆ ದೂಡಿ ಸತಿಸ್ಥಾನ ನೀಡುವ, ಹಿಂದುಳಿದವರನ್ನು ಕಡೆಗಣಿಸುವ, ದಲಿತರನ್ನು ಅಸ್ಪೃಶ್ಯರೆಂದು ಕರೆಯುವ ಮನುವಾದಿ ಹಿಂದುತ್ವವಾದಿಗಳು ಇವತ್ತು ತಮ್ಮ ಇಂಥ ನಿಲುವುಗಳಿಂದ ಇಡೀ ದೇಶವನ್ನೇ ಅಸಹ್ಯವಾಗಿಸಿದ್ದಾರೆ’ ಎನ್ನುತ್ತಾರೆ. ಹೀಗೆ ಗೌರಿಯವರ ಕಂಡಹಾಗೆ ಬರಹಗಳ ಕಟ್ಟಲ್ಲಿ ಹಿಂದುತ್ವವಾದಿ ಸುಳ್ಳುಗಳನ್ನು ಒಡೆಯುವ ಬರಹಗಳ ಪಾಲು ದೊಡ್ಡದಿದೆ.

ಸೌಹಾರ್ಧ ಭಾರತದ ಕನಸು

ಗೌರಿ `ಕರ್ನಾಟಕ ಕೋಮು ಸೌಹಾರ್ಧ ವೇದಿಕೆ’ಯ ಮುಖ್ಯ ಜೀವಾಳವಾಗಿದ್ದರು. ಅವರ ಬರಹಗಳಲ್ಲಿಯೂ ಮತ್ತೆ ಮತ್ತೆ ಕಾಣುವುದು ಸೌಹಾರ್ಧದ ಕನಸುಗಾರಿಕೆ. ಬಾಬಾಬುಡನ್ ಗಿರಿಯಲ್ಲಿ ಸೌಹಾರ್ಧ ನೆಲೆಸಲು ಗೌರಿಯ ಸಂಘಟಿತ ಶ್ರಮವನ್ನು ಎಲ್ಲರು ಬಲ್ಲರು. ಧಾರ್ಮಿಕ ಸಾಮರಸ್ಯದ ಹಲವು ಸಂಗತಿಗಳನ್ನು ಮಾನವೀಯವಾಗಿ ಚಿತ್ರಿಸುವ ಟಿಪ್ಪಣಿಗಳಿವೆ. ಅಸ್ಗರ್ ಅಲಿ ಎಂಜಿನಿಯರ್ ಬರೆದ ಧರ್ಮಗಳ ಗಡಿಯನ್ನು ಅಳಿಸಿಕೊಂಡು ಬದುಕುವ ಜೀವನ ಚಿತ್ರಣಗಳನ್ನು ವಿಸ್ತಾರವಾಗಿ ಉಲ್ಲೇಖಿಸಿ ಬರೆದಿದ್ದಾರೆ. ಅಂತೆಯೇ ಧರ್ಮಗಳ ಕೂಡುಬಾಳುವೆಯನ್ನು ಕಲಿಸುವ ಸೂಫಿ ಶರಣ ಸಂತರ ಉಲ್ಲೇಖಗಳನ್ನು ಹೆಚ್ಚು ತರುವ ಪ್ರಯತ್ನವನ್ನೂ ಮಾಡುತ್ತಾರೆ. ಶೋಷಣರಹಿತ ಸೌಹಾರ್ಧ ಸಹಬಾಳ್ವೆಗಾಗಿ ಶ್ರಮಿಸಿದ ಅಂಬೇಡ್ಕರ್, ಕನಕ, ಬಸವಣ್ಣ ಮೊದಲಾದವರನ್ನು ಹಿಂದುತ್ವವಾದಿ ರಾಜಕಾರಣ ಹೇಗೆ ಬಳಸುತ್ತಿದೆ ಎಂದು ಆಯಾ ಸಮುದಾಯಗಳಿಗೆ ಎಚ್ಚರಿಸುತ್ತಾರೆ.

ಅಹಿಂಸೆಯ ನೆಲೆಗೊಳಿಸುವ ಕನಸು

ಗೌರಿಯನ್ನು ಕಾಡಿದ ಹಲವರಲ್ಲಿ ಗಾಂಧಿಯ ಪ್ರಭಾವ ದಟ್ಟವಾಗಿರುವುದು ಕಾಣುತ್ತದೆ. ಹಿಂಸೆ ದ್ವೇಶದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವ ಖಚಿತ ನಿಲುವು ಇವರ ಬರಹಗಳಲ್ಲಿದೆ. ಹಾಗಾಗಿಯೇ ಎಲ್ಲವನ್ನು ಮೀರುವ ಅದಮ್ಯ ಪ್ರೀತಿಯ ಕಥನಗಳನ್ನು ಓದುಗರೊಂದಿಗೆ ಹಲವುಬಾರಿ ಹಂಚಿಕೊಂಡಿದ್ದಾರೆ. ಗಾಂಧಿಯನ್ನು ಕೊಂದವರ ಬಗ್ಗೆ ಸದಾ ಕಿಡಿಕಾರುವ ಮನೋಧರ್ಮವನ್ನು ಬೆಳೆಸಿಕೊಂಡಿದ್ದು ಕೂಡ ಇದೇ ಕಾರಣಕ್ಕೆ. ಬಹುಶಃ ನಕ್ಸಲರಿಗೆ ಹಿಂಸೆಯನ್ನು ತೊರೆಯಿರಿ ಎನ್ನುವ ಮಾತುಕತೆ ಮಾಡಿದ್ದು ಕೂಡ ಇದರ ಫಲವೆ. ನಕ್ಸಲರ ಬೇಟಿ, ಸಾಕೇತ್ ರಾಜನ್ ಅವರೊಂದಿಗೆ ಮಾತುಕತೆ, ಆಂದ್ರದ ಕ್ರಾಂತಿಕಾರಿ ಕವಿ ವರವರರಾವ್ ಅವರ ಸಂದರ್ಶನ, ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ ಅವರನ್ನು ನಕ್ಸಲ್ ಚಳವಳಿಯಿಂದ ಹೊರಬರುವಂತೆ ಮಾಡಲು ಮಧ್ಯಸ್ಥಿಕೆ ವಹಿಸಿದ್ದು ಎಲ್ಲವನ್ನೂ ಈ ನೆಲೆಯಲ್ಲಿ ನೋಡಬಹುದು. ಗೌರಿಯ ಬರಹದಲ್ಲಿ ಹಿಂದೂ ಮತ್ತು ಮುಸ್ಲೀಂ ಬಯೋತ್ಪಾದನೆ ಎರಡರ ವಿರೋಧವೂ ಇದೆ. ಅಂತೆಯೇ ಬಂಡವಾಳಶಾಹಿಗಳು ರೂಪಿಸುವ ಅಗೋಚರ ಹಿಂಸೆಯ ಬಗ್ಗೆಯೂ ಗಮನಸೆಳೆಯುತ್ತಾರೆ.
 
ಮಹಿಳೆಯರ ಸಾಹಸಗಾಥೆಗಳಿಗೆ ಧ್ವನಿಯಾಗುವ ಕನಸು

ಕಂಡಹಾಗೆಯ ಬರಹಗಳಲ್ಲಿ ಮಹಿಳೆಯರ ಸಾಹಸ ಗಾಥೆಗಳು ಸೇರಿವೆ. ಗೌರಿ ತಾನೂಬ್ಬಳೆ ಒಂಟಿಯಾಗಿ ಜೀವಿಸಿದ್ದಕ್ಕೂ ತನ್ನಂತಹ ಒಂಟಿಮಹಿಳೆಯರ ಬಗ್ಗೆ ಹೆಚ್ಚು ಬರೆದದ್ದಕ್ಕೂ ಸಾಮ್ಯವಿರುವಂತೆ ಕಾಣುತ್ತದೆ. ಸೊಮಾಲಿಯಾದಲ್ಲಿ ಪರಿಸರ ಸಂರಕ್ಷಣೆಗೆ ಪಣತೊಟ್ಟ ಪಾತೀಮಾ ಜಿಬ್ರೆಲ್, ನಕ್ಷತ್ರಗಳನ್ನು ಅರಸುತ್ತಲೇ ಆಕಾಶದ ಚುಕ್ಕಿಯಾದ ಗಗನಯಾತ್ರಿ ಕಲ್ಪನಾ ಚಾವ್ಲಾ, ಜನಪರ ಅಹಿಂಸಾ ಚಳವಳಿಗಳಲ್ಲಿ ತೊಡಗಿಸಿಕೊಂಡ ಮೇದಾಪಾಟ್ಕರ್, ವಿಯೆಟ್ನಾಂ ಮೇಲೆ ಅಮೆರಿಕಾ ಯುದ್ಧ ನಡೆಸಿದಾಗ ವಿಯೆಟ್‍ಕಾಂಗ್ ಪರವಾಗಿ ಹೋರಾಡಿದ ಡಾಂಗ್ ಥುಯ್ ಟ್ರಾಮ್, ಜೀವಚೈತನ್ಯದಿಂದ ಬದುಕಿದ ಯಹೂದಿ ಹುಡುಗಿ ಅನ್ನಾಪ್ರಾಂಕ್, ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್, ರಷ್ಯಾದ ದೈರ್ಯವಂತ ಪತ್ರಕರ್ತೆ ಅನ್ನಾಪೊಲಿಟ್ಕೋವ್‍ಸ್ಕಾಯ ಹೀಗೆ ಹಲವು ಛಲಗಾತಿ ಮಹಿಳೆಯರ ಬಗ್ಗೆ ಹೆಚ್ಚು ಬರೆದಿದ್ದಾರೆ. ಈ ಮೂಲಕ ಈಗಿನ ಹುಡುಗಿಯರಲ್ಲಿ ಇಂತಹ ಸಾಹಸದ ಸ್ಪೂರ್ತಿ ತುಂಬಲು ಪ್ರಯತ್ನಿಸಿದ್ದಾರೆ.

ನ್ಯಾಯಂಗ ಬ್ರಷ್ಟತೆಯನ್ನು ಮುಕ್ತಗೊಳಿಸುವ ಕನಸು

ಭೂಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಬಂದ ನ್ಯಾಯಾಲಯದ ತೀರ್ಪಿನ ಬಗೆಗೆ ಆತಂಕ ವ್ಯಕ್ತಪಡಿಸುತ್ತಾ, ಈ ತೀರ್ಪಿನ ಹಿಂದೆ `ಅಮೆರಿಕಾ’ದ ಪ್ರಭಾವವನ್ನು ವಿಶ್ಲೇಷಿಸಿ ನ್ಯಾಯಾಂಗ ಹೇಗೆ ಬ್ರಷ್ಟವಾಗಿದೆ ಎನ್ನುವುದನ್ನು ವಿವರಿಸುತ್ತಾರೆ. ಅಂತೆಯೇ ನರ್ಮದಾ ಡ್ಯಾಮಿನ ಎತ್ತರದ ಬಗೆಗಿನ ಸುಪ್ರಿಂ ಕೋರ್ಟನ ತೀರ್ಪಿನಲ್ಲಿ ನಿರಾಶ್ರಿತರ ಬಗ್ಗೆ ನ್ಯಾಯಂಗ ವ್ಯಕ್ತಪಡಿಸುವ ಅಮಾನವೀಯ ವರ್ತನೆಯನ್ನು ಖಂಡಿಸುತ್ತಾರೆ. ಹೀಗೆ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಹೇಗೆ ಬ್ರಷ್ಟಗೊಂಡಿದೆ ಎನ್ನುವ ಆತಂಕ ಹಲವು ಬರಹಗಳಲ್ಲಿ ಮತ್ತೆ ಮತ್ತೆ ಕಾಣುತ್ತದೆ. 

ಒಬ್ಬ ಜನಪರ ನ್ಯಾಯಾದೀಶ ಹೇಗೆ ಜನರಲ್ಲಿ ನ್ಯಾಯಾಂಗದ ಮೇಲೆ ವಿಶ್ವಾಸವನ್ನು ಮೂಡಿಸುತ್ತಾರೆ ಎನ್ನುವುದನ್ನು ವಿವರಿಸಲು ದೆಹಲಿ ಹೈಕೋರ್ಟಿನ ಜಸ್ಟಿಸ್ ಅಜಿತ್ ಪ್ರಕಾಶ್ ಶಾ ಅವರ ಬಗ್ಗೆ ಬರೆಯುತ್ತಾರೆ. ಷಾ ಅವರು ದೆಹಲಿಯಲ್ಲಿ ಬಿಕ್ಷುಕರನ್ನು ಹೊರಹಾಕದ ತೀರ್ಪು, ಬಡವರ ಗುಡಿಸಲುಗಳನ್ನು ಕಿತ್ತಾಗ ಅವರಿಗೆ ಮನೆಗಳನ್ನು ಒದಗಿಸುವ ಆದೇಶ, ಸೆಕ್ಷನ್ 377 ಪ್ರಕಾರ ಸಲಿಂಗಕಾಮ ಅಪರಾಧವಲ್ಲ ಎಂಬ ಐತಿಹಾಸಿಕ ತೀರ್ಪು..ಹೀಗೆ ಜನಪರ ತೀರ್ಪುಗಳ ಬಗ್ಗೆ ವಿವರಿಸುತ್ತಾ ಇಂತಹ ಜನಪರ ಶಾ ಅವರಿಗೆ ಸುಂಪ್ರೀಂಕೋರ್ಟಿನ ನ್ಯಾಯಾಧೀಶರಾಗುವ ಅವಕಾಶವನ್ನು ವ್ಯವಸ್ಥೆ ಹೇಗೆ ತಪ್ಪಿಸಿತು ಎಂದು ದುಃಖದಿಂದ ಬರೆಯುತ್ತಾರೆ. 

ಅಲ್ಪಸಂಖ್ಯಾತ, ಆದಿವಾಸಿ, ದಲಿತರ ಏಳಿಗೆಯ ಕನಸು

ಅಲ್ಪಸಂಖ್ಯಾತ, ಆದಿವಾಸಿ, ದಲಿತರ ಬಗೆಗಿನ ಜೀವಕಾರುಣ್ಯ ಗೌರಿಯವರ ಬರಹಗಳಲ್ಲಿ ಮತ್ತೆ ಮತ್ತೆ ಎದುರುಗೊಳ್ಳುತ್ತದೆ. ಬಿರ್ಸಾ ಮುಂಡಾನ ಹೋರಾಟದ ಬಗೆಗೂ, ಲಾಲ್‍ಗಡ್ ಆದಿವಾಸಿಗಳ ದಂಗೆಯ ಬಗೆಗೂ, ಗಿರಿಜನರ ರಕ್ತ ಕೇಳುತ್ತಿರುವ ಪೋಲೀಸರ ಬಗೆಗೂ ಬರೆಯುವಾಗೆಲ್ಲಾ ಆದಿವಾಸಿಗಳ ಬದುಕಿನ ಬಿಕ್ಕಟ್ಟುಗಳ ಬಗ್ಗೆ ವಿಶ್ಲೇಷಿಸುತ್ತಾ ಪರ್ಯಾಯದ ಬಗ್ಗೆ ಚಿಂತಿಸುತ್ತಾರೆ. ಚತ್ತೀಸಘಡದ ದಾಂತೇವಾಡದಲ್ಲಿನ ಗಾಂದಿವಾದಿ ಹಿಮಾಂಶುಕುಮಾರ್ ಅವರ ಆಶ್ರಮವನ್ನು ಅಲ್ಲಿನ ಸರಕಾರ ದ್ವಂಸಮಾಡಿದಾಗ ಬರೆದ ಟಿಪ್ಪಣಿಯಲ್ಲಿ ಆದಿವಾಸಿಗಳ ಪರ ಇರುವ ಇಮಾಂಶು ಪರೋಕ್ಷವಾಗಿ ಆದಿವಾಸಿಗಳ ಬೆಂಬಲವಿರುವ ನಕ್ಸಲರ ಜತೆಯೂ ನಂಟಿದೆ ಎನ್ನುವ ಕಾರಣಕ್ಕೆ ಹಿಮಾಂಶು ಅವರನ್ನು ಹಿಂಸಿಸಲಾಗಿರುತ್ತದೆ. ಸರಕಾರ ಟಾಟಾ ಮತ್ತು ಎಸ್ಸಾರ್ ಕಂಪನಿಗೆ ಭೂಮಿ ಕೊಡಲು ಕಾಡಿನ ಮಧ್ಯದ ವ್ರೆಚ್ಚಾಪಾಲ್ ಎಂಬಲ್ಲಿ ನೆಲೆಸಿದ 140 ಮನೆಗಳ ಆದಿವಾಸಿಗಳನ್ನು ದ್ವಂಸ ಮಾಡಿದಾಗ ಇದೇ ಹಿಮಾಂಶು ಆದಿವಾಸಿಗಳ ಪರವಾಗಿ ನಿಂತು ಹೋರಾಡಿದ ಕಥನವನ್ನು ದಾಖಲಿಸುತ್ತಾ, ಈ ದೇಶದ ಆದಿವಾಸಿಗಳು ಹೇಗೆ ಪ್ರಭುತ್ವದ ದಮನಕ್ಕೆ ಒಳಗಾಗುತ್ತಿದ್ದಾರೆ ಎನ್ನುವುದನ್ನು ಅಂತಃಕರಣದಿಂದ ಬರೆಯುತ್ತಾರೆ. 

ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ಉತ್ತರ ಪ್ರದೇಶದ ಗೋರಖ್ ಪುರದ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 73 ಕಂದಮ್ಮಗಳು ಅಸುನೀಗಿದಾಗ, ಸಾಧ್ಯವಾದಷ್ಟು ಮಕ್ಕಳ ಪ್ರಾಣ ಕಾಪಾಡಲು ಯತ್ನಿಸಿದ ಕಫೀಲ್ ಖಾನ್ ಎಂಬ ನಿಷ್ಠಾವಂತ ವೈದ್ಯನ ವಿರುದ್ಧದ ಕುತಂತ್ರದ ಬಗ್ಗೆ ಬರೆದು ಮುಸ್ಲಿಂರ ಬಗೆಗಿನ ಲೋಕದ ದೃಷ್ಟಿಕೋನವನ್ನು ಚರ್ಚಿಸುತ್ತಾರೆ. ಸಫಾಯಿ ಕರ್ಮಚಾರಿಗಳ ದಯಾನೀಯ ಬದುಕಿನ ಬಗ್ಗೆ ಬರೆಯುತ್ತಾ ತಂತ್ರಜ್ಞಾನದ ಬೆಳವಣಿಗೆ ಇಂತಹ ಕೆಲಸದಿಂದ ದಲಿತರನ್ನು ಮುಕ್ತಿಗೊಳಿಸುವುದು ಯಾವಾಗ ಎಂದು ನೋಯುತ್ತಾರೆ, ಮೀಸಲಾತಿಯನ್ನು ವಿರೋಧಿಸುವ ಮನಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತಾ, `ಪರಿಸರಕ್ಕೂ, ಪ್ರತಿಭೆಗೆ ನೇರ ಸಂಬಂಧವಿದೆ ಎಂಬ ಸಾಮಾನ್ಯ ಅರಿವೂ ಇಲ್ಲದ ವಿದ್ಯಾವಂತರು, ಮೇಲುಜಾತಿಯವರು, ಮೇಲುವರ್ಗದವರು ಇವತ್ತಿಗೂ ಹಿಂದುಳಿದವರಲ್ಲಿ, ದಲಿತರಲ್ಲಿ ಪ್ರತಿಭೆ ಇಲ್ಲ ಎಂದು ವಾದಿಸುತ್ತಿರುವುದು ಸರಿಯೂ ಅಲ್ಲ, ಸತ್ಯವೂ ಅಲ್ಲ. ಅಷ್ಟೇ ಅಲ್ಲ ಅವರ ನಿಲುವು ಅಮಾನವೀಯ ಜಾತಿಪದ್ಧತಿಯನ್ನು ಪೊರೆಯುವುದರಿಂದ ನಮ್ಮ ಸಂವಿಧಾನದ ವಿರುದ್ಧವೂ ಆಗಿದೆ. ಅಂದರೆ ಸಂವಿಧಾನ ಭಾಹಿರವೂ, ದೇಶದ್ರೋಹದ ಕೃತ್ಯವೂ ಆಗಿದೆ’ ಎನ್ನುತ್ತಾರೆ.

ತಾಯ್ತನದ ಅಂತಃಕರಣ ಹಂಚುವ ಕನಸು..

 ಗೌರಿಯವರ ಕೊನೆ ಕೊನೆಯ ಬರಹಗಳಲ್ಲಿ ತಾಯ್ತನದ ಅಂತಃಕರಣ ಎದ್ದು ಕಾಣುತ್ತಿತ್ತು. ಜೆಎನ್‍ಯು ಘಟನೆಯ ನಂತರ ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದ ಕನ್ನಯ್ಯ ಕುಮಾರನನ್ನು, ಗುಜರಾತಿನ ದಲಿತ ಅಸ್ಮಿತೆಯ ಹೋರಾಟದ ಭಾಗವಾಗಿದ್ದ ನಾಯಕ ಜಿಗ್ನೇಶ್ ಮೇವಾನಿಯನ್ನು ತನ್ನ ಮಕ್ಕಳೆಂದು ಸಂಭ್ರಮಿಸಿದರು. ಅವರು ಎಲ್ಲಿಯೇ ಮಾತನಾಡಲಿ ಆ ಮಾತುಗಳನ್ನು ಹಂಚಿಕೊಂಡು ಮಕ್ಕಳ ನಡೆ, ನುಡಿಗಳ ಬಗ್ಗೆ ಹೆಮ್ಮೆಯಿಂದ ಬರೆದುಕೊಳ್ಳುತ್ತಿದ್ದರು. 2017 ರ ಆಗಷ್ಟ್ 23 ಸಂಚಿಕೆಯಲ್ಲಿ ಕನ್ನಯ್ಯ ಕುಮಾರನನ್ನು ಬೇಟಿಯಾದ ಆಪ್ತವಾದ ಬರಹ ಬರೆದಿದ್ದಾರೆ. ಕನ್ನಯ್ಯ ಮನೆಗೆ ಬರುವ ಮುಂಚಿನ ಸಂಬ್ರಮ, ಮನಗೆ ಬಂದಾದ ನಂತರದ ಹಾರೈಕೆ ಎಲ್ಲವೂ ಮನಸ್ಸನ್ನು ಮುದಗೊಳಿಸುವಷ್ಟು ಆಪ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವದ ವಿಷ ತುಂಬಿಕೊಂಡ ಹುಡುಗರು ಎಷ್ಟೇ ನಿಂದನಾತ್ಮಕವಾಗಿ ಕಾಮೆಂಟಿಸಿದರೂ ಅವರೆಲ್ಲ ನನ್ನ ದಾರಿತಪ್ಪಿದ ಮಕ್ಕಳು ಎನ್ನುವಷ್ಟು ಮಾಗಿದ್ದರು.

ಅನ್ಯಾಯ ಅಕ್ರಮಗಳನ್ನು ದಿಟ್ಟವಾಗಿ ಪ್ರಶ್ನಿಸುವ ಕನಸು

 ಯಾವುದೇ ರೂಢಿಗತ ನಿಯಮವನ್ನು ಪ್ರಶ್ನಿಸಿದರೆ ಹಿಂದೂ ಧರ್ಮ ವಿರೋಧಿಗಳೆಂಬ, ಜಾತ್ಯಾತೀತತೆಯ ಬಗ್ಗೆ ಹೇಳಿದರೆ Pseudo secular ಗಳೆಂಬ, ಜನರ ಸಮಸ್ಯೆಗಳ ಬಗ್ಗೆ ಚಕಾರವೆತ್ತಿದರೆ ನಕ್ಸಲ್ ವಾದಿಗಳೆಂಬ ಆರೋಪಗಳಿಗೆ ಗುರಿಯಾಗಬೇಕಿದೆ. ಇವತ್ತು ಸ್ವತಂತ್ರ ಚಿಂತನೆ, ಭಿನ್ನ ನಿಲುವು, ಜನಪರ ಕಾಳಜಿ ಹೊಂದುವುದೇ ಹಲವರಿಗೆ ಪ್ರಶ್ನಾರ್ಹವಾಗಿ ಕಾಣುತ್ತಿದೆ’ ಎಂದು ಗೌರಿ ಸದ್ಯದ ಬಿಕ್ಕಟ್ಟನ್ನು ಗುರುತಿಸುತ್ತಿದ್ದರು.ಸದಾ ವ್ಯವಸ್ಥೆಯ ವಿರುದ್ಧ ಹೋರಾಡುವ ಪತ್ರಕರ್ತರು ದಿಟ್ಟತನ ಹೊಂದಿರಲೇಬೇಕು. ಏಕೆಂದರೆ ಅಂತಹ ಪತ್ರಕರ್ತರನ್ನು ಸೆದೆಬಡಿಯಲು ವ್ಯವಸ್ಥೆ ಹೊಂಚುಹಾಕಿ ಕಾದಿರುತ್ತದೆ’ ಎನ್ನುವ ಗೌರಿಯವರ ಮಾತಿಗೆ ಅವರೇ ಸಾಕ್ಷಿಯಾದರು.

ಸದಾ ಅನ್ಯಾಯ, ಅಕ್ರಮ, ದಬ್ಬಾಳಿಕೆಗಳನ್ನು, ಎಲ್ಲ ಬಗೆಯ ಸಂವಿಧಾನ ವಿರೋಧಿ ನಡೆಗಳನ್ನು ಭಯಮುಕ್ತವಾಗಿ ದಿಟ್ಟವಾಗಿ ಪ್ರಶ್ನಿಸಬೇಕು ಎನ್ನುವುದು ಗೌರಿಯವರ ಜೀವಮಾನದ ಕನಸಾಗಿತ್ತು. ಇದೀಗ ‘ನಾನು ಗೌರಿ’ ಎನ್ನುವುದು ಈ ಮೇಲೆ ವಿಶ್ಲೇಷಿಸಿದ ಗೌರಿಯ ಎಲ್ಲಾ ಕನಸುಗಳಿವೆ ಜೊತೆಯಾಗುವ ಹೊಣೆಗಾರಿಕೆಯ ಘೋಷಣೆಯಾಗಿದೆ.
**

Please follow and like us:
error