ಗಾಂಜಾ ಪ್ರಕರಣ : ಎಲ್ಲರೂ ಪವಿತ್ರ ಅಂತಾ ಹೇಳೋಕಾಗಲ್ಲ- ಬಿ.ಸಿ.ಪಾಟೀಲ

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ:

ಕೊಪ್ಪಳ: ಸಿನಿಮಾದಲ್ಲಿರೋರು ರೋಲ್ ಮಾಡೆಲ್ ಆಗಿರಬೇಕು. ನಾನು ಅಧಿಕಾರಿಯಾಗಿ, ಸಿನಿಮಾದವನಾಗಿ ಕೆಲಸ ಮಾಡಿ ಈಗ ರಾಜಕೀಯದಲ್ಲಿದ್ದೇನೆ. ಮುತ್ತಾತನ ಕಾಲದಿಂದಲೂ ನಮ್ಮದು ಕೃಷಿ ಕುಟುಂಬ. ರೈತರಿಗಾಗಿ ಜೈಲುವಾಸವನ್ನೂ ಅನುಭವಿಸಿದ್ದೇನೆ. ಈ ಎಲ್ಲ ಅನುಭವಗಳ ಮೇಲೆ ಕೃಷಿ ಖಾತೆ ನಿಭಾಯಿಸುತ್ತಿದ್ದೇನೆ. ಚಂದ್ರಶೇಖರ ಕೋಡಿಹಳ್ಳಿ ಅವರ ಬಗ್ಗೆ ಅಪಾರ ಗೌರವ ಇತ್ತು. ಅವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರನ್ನು ಕರೆದುಕೊಂಡು ಬಂದು ಕೃಷಿ ಮಂತ್ರಿ ಮಾಡಿದರೆ ಮಾಧ್ಯಮಗಳಿಗೆ ಫೋಸ್ ಕೊಡ್ತಾರೆ ಎಂಬ ಹೇಳಿಕೆ ಹಾಗೂ ಕೃಷಿ ಪದವಿ ಸೀಟ್ ಮಾರಾಟದ ಹೇಳಿಕೆಯನ್ನು ಕೋಡಿಹಳ್ಳಿ ಚಂದ್ರಶೇಖರ ಪರಾಮರ್ಶೆ ಮಾಡಿಕೊಳ್ಳಲಿ. ಇಷ್ಟೊಂದು ಕೀಳುಮಟ್ಟದಲ್ಲಿ ಅವರು ಮಾತನಾಡಿರುವುದು ಸರಿಯಲ್ಲ ಎಂದರು.

ಡ್ರಗ್ಸ್ ಚಟುವಟಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಶತಸಿದ್ಧ. ಗಾಂಜಾ ಬೆಳೆಯುವುದು, ಅಷ್ಟೇ ಏಕೆ ತಂಬಾಕು ಬೆಳೆಯುವುದೂ ಸಹ ನನ್ನ ಪ್ರಕಾರ ತಪ್ಪು. ಚಿತ್ರರಂಗದಲ್ಲಿ ಇರುವವರು ಗಾಜಿನ ಮನೆಯಲ್ಲಿ ಇರುತ್ತೇವೆ. ನಟರು ರೋಲ್ ಮಾಡಲ್ ಆಗಿರಬೇಕು.
ಎಲ್ಲರೂ ಪವಿತ್ರರು ಎಂದು ಹೇಳಲು ಆಗೋದಿಲ್ಲ. ರಾಜಕಾರಣಿಗಳು ಇರಬಹುದು, ಚಿತ್ರನಟರು ಇರಬಹುದು ತಪ್ಪು ಮಾಡಿದ್ದರೆ ಕ್ರಮ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.

ಭೂ ಸುಧಾರಣೆ ಕಾಯ್ದೆಯಿಂದ ಸಾಕಷ್ಟು ಒಳ್ಳೆಯ ಉಪಯೋಗವೂ ಆಗಿದೆ. ಊ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯಬೇಕು. ವರ್ಷದಲ್ಲಿ ಸುಮಾರು ನೂರು ದಿನ ಅಧಿವೇಶನ ನಡೆದು ಚರ್ಚೆಯಾಗಬೇಕು ಎಂಬ ಆಸೆ ನಮಗೂ ಇದೆ. ಆದರೆ ಕೋವಿಡ್-19 ಕಾರಣದಿಂದ ಕರೆಯಲಾಗಿಲ್ಲ. ಎಲ್ಲವನ್ನು ವಿರೋಧಿಸುವುದೇ ವಿರೋಧ ಪಕ್ಷದ ಕೆಲಸ. ಅವರ ಕೆಲಸವನ್ನು ಅವರು ಮಾಡ್ತಿದಾರೆ ಎಂದು ಅಭಿಪ್ರಾಯಪಟ್ಟರು.

Please follow and like us:
error