ಗಂಟಲುದ್ರವ ಮಾದರಿ ಪರೀಕ್ಷೆ ಸಂಖ್ಯೆ ಹೆಚ್ಚಳಗೊಳಿಸಿ : ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ

ಚಾಮರಾಜನಗರ, :- ಕೋವಿಡ್-19 ವೈರಾಣು ಹರಡದಂತೆ ಪರಿಣಾಮಕಾರಿಯಾಗಿ ತಡೆಯಲು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಯನ್ನು ಹೆಚ್ಚು ಸಂಖ್ಯೆಯಲ್ಲಿ ಕೈಗೊಳ್ಳುವ ಉದ್ದೇಶದಿಂದ ಗಂಟಲು ದ್ರವ ಮಾದರಿ ಸಂಗ್ರಹಣೆ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್-19 ತಡೆಯುವ ಸಂಬಂಧ ಜಿಲ್ಲಾ ಪಂಚಾಯತ್, ಪೊಲೀಸ್ ಅಧಿಕಾರಿಗಳು, ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳು, ಸೆಕ್ಟರ್ ಮ್ಯಾಜಿಸ್ಟ್ರೇಟರ್‍ಗಳು, ಚೆಕ್‍ಪೋಸ್ಟ್ ನೋಡೆಲ್ ಅಧಿಕಾರಿಗಳು, ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಜೂಮ್ ಆ್ಯಪ್ ಮೂಲಕ ಸಭೆ ನಡೆಸಿ ಅವರು ಮಾತನಾಡಿದರು.

ಸರ್ಕಾರದ ನಿರ್ದೇಶನ ಅನುಸಾರ ಕೋವಿಡ್ ಪರೀಕ್ಷೆಗಳನ್ನು ವ್ಯಾಪಕವಾಗಿ ನಡೆಸಬೇಕಿದೆ. ಈಗಾಗಲೇ ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಆರೋಗ್ಯ ಕೇಂದ್ರಗಳು, ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲುದ್ರವ ಮಾದರಿ ಸಂಗ್ರಹಣಾ ಕಾರ್ಯ ನಡೆಯುತ್ತಿದೆ. ಆರೋಗ್ಯ ಕಾಳಜಿಗಾಗಿ ವಿಶೇಷ ವರ್ಗದವರೆಂದು ಗುರುತಿಸಲಾಗಿರುವ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು, ವಯೋವೃದ್ಧರು, ಗರ್ಭೀಣಿಯರು, ಬಾಣಂತಿಯರಿಗೆ ಆಯಾ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲೆ ಗಂಟಲುದ್ರವ ಮಾದರಿ ಸಂಗ್ರಹಿಸುವ ಕೆಲಸವನ್ನು ನಿಗದಿತ ಗುರಿಗೆ ಅನುಸಾರವಾಗಿ ಮಾಡಬೇಕು ಎಂದರು.

ಯಾವುದೇ ಕೋವಿಡ್ ಸೋಂಕಿನ ಪ್ರಕರಣಗಳು ಕಂಡುಬಂದ ಕೂಡಲೇ ಸೋಂಕಿತರ ಸಂಪರ್ಕಿತರನ್ನು ಗುರುತಿಸುವ ಕೆಲಸ ಶೀಘ್ರ ಅವಧಿಯಲ್ಲಿ ಆಗಬೇಕು. ಇದರಿಂದ ಪರೀಕ್ಷೆ ನಡೆಸಿ ಇನ್ನಷ್ಟು ಜನರಿಗೆ ಸೋಂಕು ವ್ಯಾಪಿಸುವುದನ್ನು ತಡೆಯಬಹುದು. ಟ್ರ್ಯಾಕಿಂಗ್, ಟೆಸ್ಟಿಂಗ್ ತಂಡಗಳು ಪ್ರತಿ ಗ್ರಾಮ ಪಂಚಾಯಿತಿ, ನಗರ, ಪಟ್ಟಣ ಪ್ರದೇಶಗಳಲ್ಲಿ ಸಕ್ರಿಯವಾಗಿ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಂಟೈನ್‍ಮೆಂಟ್ ವಲಯಗಳಲ್ಲಿ ಇನ್ಸಿಡೆಂಟ್ ಕಮಾಂಡರ್‍ಗಳು ಆ ಪ್ರದೇಶಗಳ ಜನರಿಗೆ ಅಗತ್ಯವಾಗಿರುವ ಔಷಧ, ಅಗತ್ಯ ದೈನಂದಿನ ವಸ್ತುಗಳು ಒದಗಿಸಲಾಗಿದೆಯೇ? ಎಂಬ ಬಗ್ಗೆ ಪರಿಶೀಲಿಸಿ ವಹಿ ಇಟ್ಟು ದಾಖಲಿಸಬೇಕು. ಕಂಟೈನ್‍ಮೆಂಟ್ ವಲಯಗಳಲ್ಲಿ ನಿರ್ವಹಿಸಬೇಕಾದ ಕೆಲzಸಗಳ ಬಗ್ಗೆ ಅಧಿಕಾರಿಗಳು ಸಿಬ್ಬಂದಿ ತಂಡಕ್ಕೆ ಸ್ಪಷ್ಟವಾಗಿ ಆದೇಶಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲಾಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರುವವರ ಆರೋಗ್ಯದ ಬಗ್ಗೆ ಅತ್ಯಂತ ನಿಗಾ ವಹಿಸಿ ಉತ್ತಮ ಚಿಕಿತ್ಸೆ ನೀಡಬೇಕು. ಸರ್ಕಾರ ನಿಗದಿಪಡಿಸಿರುವ ಮೆನು ಪ್ರಕಾರವೇ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ವಿತರಿಸಬೇಕು. ಔಷಧಗಳ ದಾಸ್ತಾನು, ಗುಣಮಟ್ಟದ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಇಟ್ಟುಕೊಳ್ಳಬೇಕು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದ್ದಲ್ಲಿ ಮೊದಲೇ ದಾಸ್ತಾನು ಮಾಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿಯ ಟಾಸ್ಕ್‍ಪೋರ್ಸ್‍ಗಳು ಸ್ಥಳೀಯರನ್ನು ತೊಡಗಿಸಿಕೊಂಡು ಹೆಚ್ಚು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ನಗರ, ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ವಾರ್ಡ್‍ವಾರು ಟಾಸ್ಕ್‍ಪೋರ್ಸ್‍ಗಳನ್ನು ರಚಿಸಿ ಕ್ರಿಯಾಶೀಲವಾಗಿ ಜಾಗೃತಿ ಮೂಡಿಸಬೇಕು. ಮಾಸ್ಕ್ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವುದು, ಸೋಪು, ಸ್ಯಾನಿಟೈಸರ್ ಬಳಕೆ ಮಾಡಿಕೊಳ್ಳುವ ಮಹತ್ವದ ಬಗ್ಗೆ ಸಮಿತಿಗಳು ತಿಳಿಸಬೇಕು. ಜನರಲ್ಲಿ ಉಂಟಾಗಬಹುದಾದ ಅನಗತ್ಯ ಆತಂಕ, ಭೀತಿ ದೂರ ಮಾಡಿ ತಿಳಿವಳಿಕೆ ನೀಡಬೇಕು ಎಂದು ಜಿಲ್ಲಧಿಕಾರಿಯವರು ನಿರ್ದೇಶನ ನೀಡಿದರು.

ಅಂತರರಾಜ್ಯ, ಜಿಲ್ಲೆ ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಯಾಗಬೇಕು. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಲೇಬೇಕು. ಅನಗತ್ಯವಾಗಿ ಮೋಜು, ಪ್ರವಾಸ ಕಾರಣಗಳಿಗೆ ಬರುವವರನ್ನು ತಡೆಯಬೇಕು. ಅಂತರರಾಜ್ಯದಿಂದ ಪರ್ಯಾಯ ಕಾಲುದಾರಿ, ಇತರೆ ಮಾರ್ಗಗಳಲ್ಲಿ ಪ್ರವೇಶಿಸಲು ಅವಕಾಶವಾಗದಂತೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಯವರು ಸೂಚಿಸಿದರು.

ಹೆಚ್ಚುವರಿ ಕೋವಿಡ್ ಆಸ್ಪತ್ರೆ, ನಿಗಾ ಕೇಂದ್ರಗಳ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರವಾಗಿ ಸಭೆಯಲ್ಲಿ ಪರಾಮರ್ಶಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಕೃಷ್ಣಪ್ರಸಾದ್, ತಾಲೂಕು ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಇತರೆ ನೋಡೆಲ್ ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error