ಖ್ಯಾತ ಕಾದಂಬರಿಕಾರ್ತಿ, ನಾಡೋಜ ಗೀತಾ ನಾಗಭೂಷಣ ಇನ್ನು ನೆನಪು ಮಾತ್ರ

ಖ್ಯಾತ ಕಾದಂಬರಿಕಾರ್ತಿ, ನಾಡೋಜ ಗೀತಾ ನಾಗಭೂಷಣ ಅವರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕನ್ನಡದ ಪ್ರಮುಖ ಕಾದಂಬರಿಕಾರ್ತಿಯರಲ್ಲಿ ಒಬ್ಬರೆನಿಸಿದ್ದ ಅವರು ತಮ್ಮ ಕಾದಂಬರಿಯ ಮೂಲಕವೇ ಸಮಾದಲ್ಲಿ ನಡೆಯುವ ಹೆಣ್ಣು ಶೋಷಣೆಯ, ದೌರ್ಜನ್ಯದ ಬಗ್ಗೆ ಧನಿ ಎತ್ತಿದವರು. ಕಲಬುರಗಿಯ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದ ಅವರ ಬದುಕು ಹೂವಿನ ಮೇಲಿನ ನಡಿಗೆ ಆಗಿರಲಿಲ್ಲ. ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡ ಅವರು ನಂತರ ಪಕ್ವತೆಯಿಂದ ಮನದಲ್ಲಿ ಪ್ರಜ್ವಲಿಸುತ್ತಿದ್ದ ನೋವುಗಳಿಗೆ ಅಕ್ಷರ ರೂಪ ಕೊಟ್ಟು ಸಾಹಿತ್ಯವನ್ನಾಗಿಸಿದ್ದರು. ನಾಡೊಜ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆ ಗೀತಾ ನಾಗಭೂಷಣ ಅವರಿಗೆ ಸಲ್ಲುತ್ತದೆ.
ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು.
ಅವರ ‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (2002) ಕರ್ನಾಟಕ ರಾಜ್ಯ ಪ್ರಶಸ್ತಿ (1998), ನಾಡೋಜ ಪ್ರಶಸ್ತಿ (2004), ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಪರಿಷತ್ತಿನಿಂದ ಮಲ್ಲಿಕಾ ಪ್ರಶಸ್ತಿ ಪಡೆದಿದ್ದಾರೆ. ಹಸಿಮಾಂಸ ಮತ್ತು ಹದ್ದುಗಳು (ಕಾದಂಬರಿ), ಬದುಕು (ಕಾದಂಬರಿ), ಅವ್ವ ಮತ್ತು ಇತರ ಕಥೆಗಳು (ಕಥಾಸಂಗ್ರಹ), ಸಪ್ತವರ್ಣದ ಹಾಡು, ದುರಗಮುರಗಿಯವರ ಸಂಸ್ಕೃತಿ (ಸಂಶೋಧನೆ) ಜ್ವಲಂತ (ಕಥಾಸಂಗ್ರಹ) ಜೋಗಿಣಿ (ನಾಟಕ) ಅವರ ಪ್ರಮುಖ ಕೃತಿಗಳು.

ಟಿಪ್ಪಣಿ: ಬುಕ್ ಬ್ರಹ್ಮ್

Please follow and like us:
error