ಖರ್ಗೆ, ದೇವೇಗೌಡರು ಸೇರಿ ನಾಲ್ವರ ಅವಿರೋಧ ಆಯ್ಕೆ

ರಾಜ್ಯಸಭಾ ಚುನಾವಣೆ:

ಜೂನ್‌ 19ರಂದು ನಡೆಯಬೇಕಿದ್ದ ಕರ್ನಾಟಕದ ನಾಲ್ಕು ಸ್ಥಾನಗಳ ರಾಜ್ಯಸಭಾ ಚುನಾಚಣೆಯು ನಾಲ್ಕಕ್ಕಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ನಿರೀಕ್ಷೆಯಿಂತೆ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅಧಿಕೃತವಾಗಿ ಘೋಷಿಸಿದ್ದಾರೆ.

ಈ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನಿಂದ ಹೆಚ್.ಡಿ. ದೇವೇಗೌಡ ಮತ್ತು ಬಿಜೆಪಿಯ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿಯವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಸದ್ಯಕ್ಕೆ 222 ಸ್ಥಾನಗಳಿದ್ದು, ಎರಡು ಸ್ಥಾನಗಳು ಖಾಲಿ ಉಳಿದಿವೆ. ಒಬ್ಬ ಅಭ್ಯರ್ಥಿ ಗೆಲ್ಲಲು ಪ್ರಥಮ ಪ್ರಾಸಶ್ತ್ಯದ 48 ಮತಗಳ ಅಗತ್ಯವಿತ್ತು. ಜೆಡಿಎಸ್‌ 34, ಕಾಂಗ್ರೆಸ್‌ 68, ಬಿಜೆಪಿ 117, ಬಿಎಸ್‌ಪಿ 01 ಮತ್ತು 03 ಸ್ವತಂತ್ರ ಶಾಸಕರಿದ್ದಾರೆ. ಕಾಂಗ್ರೆಸ್‌ ಮಲ್ಲಿಕಾರ್ಜುನ ಖರ್ಗೆಯವರ ಜೊತೆಗೆ ಉಳಿದ ಮತಗಳನ್ನು ಜೆಡಿಎಸ್‌ನ ದೇವೇಗೌಡರಿಗೆ ನೀಡುವುದಾಗಿ ಮೊದಲೇ ಘೋಷಿಸಿತ್ತು. ನಾಲ್ಕು ಸ್ಥಾನಗಳಿಗೆ ನಾಲ್ಕು ನಾಮಪತ್ರಗಳು ಮಾತ್ರ ಸಲ್ಲಿಕೆಯಾದ್ದರಿಂದ ಚುನಾವಣೆ ನಡೆಸದೇ ಅವಿರೋಧ ಆಯ್ಕೆ ಮಾಡಲಾಗಿದೆ.

ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಈ ಕುರಿತ ಹೇಳಿಕೆ ನೀಡಿದ್ದು, “ರಾಜ್ಯಸಭಾ ಚುನಾವಣೆ-2020ರಲ್ಲಿ ಕರ್ನಾಟಕದಲ್ಲಿ ನಾಲ್ಕೂ ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭೆ ಫಲಿತಾಂಶ ಘೋಷಣೆಯಾದ ನಂತರ ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಈರಣ್ಣ ಕಡಾಡಿ, ಅಶೋಕ ಗಸ್ತಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಖರ್ಗೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಂದ ಅಧಿಕೃತ ಘೋಷಣೆ ಪತ್ರವನ್ನ ಪಡೆದುಕೊಂಡಿದ್ದಾರೆ.

Please follow and like us:
error