ಡಿಸೆಂಬರ್. 01 ರಿಂದ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ
ಕೊಪ್ಪಳ,: ಕ್ಷಯರೋಗಿಗಳಿಗೆ ಮುಖ್ಯವಾಗಿ ಅಗತ್ಯವಿರುವ ಪೂರ್ಣ ಪ್ರಮಾಣದ ಚಿಕಿತ್ಸೆಯ ಕುರಿತು ಮಾಹಿತಿ ನೀಡಬೇಕು. ಕ್ಷಯರೋಗ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಸಂಬAಧಿಸಿದ ಎಲ್ಲಾ ಇಲಾಖೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು(ನ.23) ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಕಾರ್ಯಪಡೆ (ಡಿ.ಟಿ.ಎಫ್) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಇದರಿಂದ ಇತರರಿಗಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಿ ಚಿಕಿತ್ಸೆ ಪಡೆದುಕೊಳ್ಳುವಂತೆ ಈ ರೋಗದ ಬಾಧಿತರಿಗೆ ಮನವೊಲಿಸಬೇಕು. ಜಿಲ್ಲೆಯಲ್ಲಿ ಕ್ಷಯರೋಗಿಗಳಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ಪಡೆದು ಗುಣ ಹೊಂದಿದವರಿದ್ದು, ಅಂತಹವರಿAದ ಕ್ಷಯ ರೋಗದ ಚಿಕಿತ್ಸೆಯ ಬಗ್ಗೆ ಮಾಹಿತಿಯ ಜೊತೆಗೆ ಅವರ ಅನುಭವಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಕಲ್ಪಿಸಿ, ಇದರಿಂದ ಬಾಧಿತರು ಸಂಕೋಚ ಪಡದೇ ಚಿಕಿತ್ಸೆ ಪಡೆದುಕೊಳ್ಳುವಂತಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಗ್ರಾಮವಾರು ಅಪೌಷ್ಠಿಕ ಮಕ್ಕಳನ್ನು, ಅನಾಥ ಮಕ್ಕಳನ್ನು ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಕ್ಷಯ ಪರೀಕ್ಷೆ ಮಾಡಿಸಲು ಕ್ರಮ ವಹಿಸಬೇಕು. ಪಂಚಾಯತ್ ರಾಜ್ ಇಲಾಖೆಯವರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಹೆಚ್ಚು ಕ್ಷಯದ ಸೋಂಕಿರುವ ಗ್ರಾಮಗಳಲ್ಲಿ ಕ್ಷಯದ ಪರೀಕ್ಷೆಯನ್ನು ಮಾಡಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮಿತಿ ರಚಿಸಿ ಅಗತ್ಯ ಸಹಕಾರ ನೀಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ವಿದ್ಯಾರ್ಥಿಗಳಿಂದ ಜಾಥಾ, ಪ್ರಬಂಧ, ಭಾಷಣ, ಚರ್ಚಾ ಸ್ಪರ್ಧೆ ಹಾಗೂ ಕ್ವಿಜ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಸಂಬAಧಿಸಿದ ಇಲಾಖೆಗಳ ಅಧೀನದಲ್ಲಿ ಬರುವ ವಸತಿ ನಿಲಯಗಳಲ್ಲಿಯೂ ಸಹ ಈ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಕ್ಷಯ ಪರೀಕ್ಷೆಯನ್ನು ಮಾಡಿಸಬೇಕು. ಇದರಿಂದ ಈ ರೋಗ ಪತ್ತೆಹಚ್ಚಲು ಸಹಕಾರವಾಗುತ್ತದೆ. ಪೊಲೀಸ್ ಇಲಾಖೆಯು ಸದಾ ದೂಳಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಅದರಲ್ಲೂ ಸಂಚಾರಿ ಪೊಲೀಸ್ರಿಗೆ ಕ್ಷಯ ರೋಗದ ಅರಿವು ಮತ್ತು ಜಾಗೃತಿಯೊಂದಿಗೆ ಸಂಶಯಾಸ್ಪದ ಸಿಬ್ಬಂದಿಗೆ ಪರೀಕ್ಷೆಯನ್ನು ಮಾಡಿಸಬೇಕು. ಕಾರ್ಮಿಕ ಇಲಾಖೆಯು ವಿವಿಧ ಕಾರ್ಮಿಕ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಕಾರ್ಮಿಕರಿಗೆ ಕ್ಷಯ ಪರೀಕ್ಷೆಯನ್ನು ಮಾಡಿಸಲು ಸಹಕಾರ ನೀಡಬೇಕು. ಸಾರಿಗೆ ಇಲಾಖೆಯು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು, ನಿರ್ವಾಹಕರು ಹಾಗೂ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕ್ಷಯ ರೋಗದ ಅರಿವು ಮತ್ತು ಪರೀಕ್ಷೆಯನ್ನು ಮಾಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ ಟಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಜಂಬಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ.ಜಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪೋಸ್ಟರ್ ಬಿಡುಗಡೆ;
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ ಇವರ ಸಹಯೋಗದಲ್ಲಿ ಡಿಸೆಂಬರ್. 01 ರಿಂದ 31 ರವರೆಗೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
