ಕ್ರಾಂತಿಕಾರಿ ಶಹೀದ್ ಶೇರ್ ಅಲಿ ಆಫ್ರೀದಿ

ಇತಿಹಾಸ ಮರೆತ ಕ್ರಾಂತಿಕಾರಿ ವೀರಯೋಧನೊಬ್ಬನ ಕಥೆ ಇದು ಅವನೇ ಶಹೀದ್ ಶೇರ್ ಅಲಿ ಅಫ್ರಿದಿ ಹನ್ನೊಂದನೇ ಮಾರ್ಚ್ 1872 ರಲ್ಲಿ ನೇಣುಗಂಬಕ್ಕೇರಿದ ದಿನ.

ಬ್ರಿಟಿಷ್ ವೈಸ್ ರಾಯ್ ಅಂದರೆ ಆ ಕಾಲದಲ್ಲಿ ರಾಷ್ಟ್ರಪತಿಯ ಸರಿಸಮನಾದ ಜವಾಬ್ದಾರಿಯ ಅಧಿಕಾರ, ಆ ಪ್ರದೇಶದಲ್ಲಿ ಪಾರಿವಾಳಗಳು ಆಕಾಶದಲ್ಲಿ ಹಾರಾಡಬೇಕಾದರೂ ವೈಸ್ ರಾಯ್ ಅನುಮತಿ ಪಡೆಯುವ ಕಾಲವಾಗಿತ್ತು.

ಅದಾಗಲೇ ಭಾರತದಲ್ಲಿ ಸ್ವಾತಂತ್ರ ಹೋರಾಟದ ಕಹಳೆ 1857 ರಲ್ಲಿ ಮೊಳಗಿಸಲಾಗಿತ್ತು, ಇದಾದ ಕೆಲವು ವರ್ಷಗಳ ನಂತರ ಅಂದಿನ ಕ್ರಾಂತಿಕಾರಿಗಳ ಸಾಲಿನಲ್ಲಿ ಇನ್ನೊಂದು ಹೆಸರು ಕಾಲದ ಹೊಡೆತಕ್ಕೆ ಸಿಕ್ಕಿ ಮರೆಯಾಗಿತ್ತು, ಹೌದು ಶೇರ್ ಅಲಿ ಆಫ್ರಿದಿ ಹೆಸರು ಕೂಡ ಇತಿಹಾಸದ ಪುಟಗಳಲ್ಲಿ ಮೂಲೆಗುಂಪಾಗಿದೆ.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿಯಾಗಿದ್ದ ಶೇರ್ ಅಲಿ ಒಂದು ದಿನ ರಾತ್ರಿ ಎರಡು ಗುಂಪುಗಳ ಮಧ್ಯೆ ಘರ್ಷಣೆಯಾಗಿ ಅವರ ಸಂಬಂಧಿ ಹೈದರ್ ಸಾವನ್ನಪ್ಪುತ್ತಾನೆ, ಈ ಘರ್ಷಣೆಯ ಆರೋಪದ ಮೇಲೆ ಶೇರ್ ಅಲಿ ಆಫ್ರಿದಿ ರವರನ್ನು ಜೈಲಿಗಟ್ಟಲಾಗುತ್ತದೆ ನಂತರ

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪೇಶಾವರದ ಅಂದಿನ ಬ್ರಿಟಿಷ್ ಕಮಿಷನರ್ ಅಲಿ ಆಫ್ರಿದಿ ರವರ ಮೇಲೆ ದೂರು ದಾಖಲಿಸಿಕೊಂಡು ಅಂಡಮಾನಿನ ಸೆಲ್ಯೂಲರ್ ಜೈಲಿನಲ್ಲಿ “ಸಜಾಯೇ ಕಾಲಪಾನಿ” ಶಿಕ್ಷೆಗೆ 1869 ರಲ್ಲಿ ಒಳಪಡಿಸಲಾಗುತ್ತದೆ.

ಜೈಲಿಗೆ ಹೋದ ನಂತರ ಅಲ್ಲಿ ಭಾರತದ ಸ್ವಾತಂತ್ರ್ಯದ ಹೋರಾಟಕ್ಕಾಗಿ ಶ್ರಮಿಸಿದ ಅನೇಕ ಕ್ರಾಂತಿಕಾರಿಗಳ ಪರಿಚಯವಾಗುತ್ತೆ, ಅವರ ಪರಿಚಯ ಮತ್ತು ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿ ಜೈಲಿಗೆ ಬಂದಿದ್ದ ಯೋಧರ ಕಥೆಗಳು ಶೇರ್ ಅಲಿ ರವರಿಗೆ ತುಂಬಾ ಪ್ರಭಾವಿಸುತ್ತವೆ, ತನಗರಿವಿಲ್ಲದೆ ದೇಶಭಕ್ತಿಯ ಕಿಡಿಯೊಂದು ದೇಹದಲ್ಲಿ ಪ್ರವಹಿಸುತ್ತಿತ್ತು, ಅಂದೇ ಅವರು ನಿರ್ಧರಿಸಿದ್ದರು ಅವರ ಮುಖ್ಯ ಉದ್ದೇಶ ಅಂಡಮಾನ್ ಜೈಲಿನ ಸೂಪರಿಂಟೆಂಡೆಂಟ್ ಹಾಗೂ ವೈಸ್ ರಾಯ್ ರನ್ನು ಕೊಲ್ಲುವುದಾಗಿತ್ತು.

ಜೈಲಿಗೆ ಹೋದಾಗ ಧಾರ್ಮಿಕವಾಗಿ ಮುಸ್ಲಿಮನಾಗಿದ್ದ (ಪಠಾನ್) ಶೇರ್ ಅಲಿ ಅಫ್ರಿದಿ ರವರು ಕೆಲ ದಿನಗಳ ನಂತರ ಉದ್ದೇಶಪೂರ್ವಕವಾಗಿಯೇ ಜೈಲಿನಲ್ಲಿ ಕ್ಷೌರಿಕ ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದರ ಹಿಂದೆ ತಂತ್ರಗಾರಿಕೆಯೂ ಇತ್ತು ಅದೇನೆಂದರೆ ಈ ನೆಪದಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಭೇಟಿ ಮಾಡುವ ಅವಕಾಶ ಸಿಗುತ್ತಿತ್ತು ಜೊತೆಗೆ ಅಧಿಕಾರಿಗಳ ದಿನನಿತ್ಯದ ದಿನಚರಿಯನ್ನು ಗಮನಿಸಬಹುದಿತ್ತು.

ತಾನು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿತ್ತು ಸರಿಯಾದ ಸಂದರ್ಭಕ್ಕಾಗಿ ಬಕಪಕ್ಷಿಯಂತೆ ಕಾದು ಕುಳಿತಿದ್ದ ಶೇರ್ ಅಲಿ ಹಿರಿಯ ಬ್ರಿಟಿಷ್ ಅಧಿಕಾರಿಯನ್ನು ಕೊಲ್ಲುವುದು ಪ್ರಮುಖ ಉದ್ದೇಶವಾಗಿತ್ತು, ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ ಏಕೆಂದರೆ ವಾಯ್ಸ್ ರಾಯನ ಸುತ್ತಮುತ್ತ ಸುಮಾರು 12 ಜನ ರಕ್ಷಣಾದಳದ ಸಿಪಾಯಿಗಳು ದಿನದ 24 ತಾಸು ಕಾವಲು ಕಾಯುತ್ತಿದ್ದರು. ಅವರ ಕಣ್ತಪ್ಪಿಸಿ ಕೊಲ್ಲುವುದು ಅಷ್ಟು ಸುಲಭದ ಮಾತಾಗಿರಲಿಲ್ಲ, ಎರಡು ವರ್ಷಗಳು ಕಾದಿದ್ದ ಆ ಸಮಯ ಬಂದೇ ಬಿಟ್ಟತ್ತು.

ಅದು ಕ್ರಿ.ಶ 1872 ಅಂಡಮಾನ್ ಜೈಲು ಭೇಟಿಗೆ ಬಂದಿದ್ದ ಲಾರ್ಡ್ ಮಾಯೋ ದೂರದ ತೀರವನ್ನು ಗಮನಿಸುತ್ತಾ ನಿಂತಿದ್ದ, ಆರಮನೆಗೆ ತೆರಳಲು ಬೋಟ್ ಸಮೀಪ ಹೋಗುತ್ತಿದ್ದಾಗ ಓಡಿ ಬಂದು ತನ್ನ ಕ್ಷೌರಿಕ ಕತ್ತಿಯಿಂದ ಲಾರ್ಡ್ ಮಾಯೋಗೆ ಮನಸಾರೆ ತಿವಿಯುತ್ತಾರೆ, ತಿವಿದ ರಭಸಕ್ಕೆ ಲಾರ್ಡ್ ಮಾಯೋ ಸಮುದ್ರಕ್ಕೆ ಬೀಳುತ್ತಾನೆ ಅಲ್ಲಿನ ಬ್ರಿಟಿಷ್ ಸಿಬ್ಬಂದಿಗಳು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗದೇ ಮಾಯೋ ಕೊನೆಯುಸಿರೆಳೆಯುತ್ತಾನೆ, ಜೈಲಿನಲ್ಲಿರುವ ಕ್ರಾಂತಿಕಾರಿಗಳಿಗೆ ಈ ವಿಷಯ ತಲುಪುತ್ತಿದ್ದಂತೆಯೇ ಇಂಕ್ವಿಲಾಬ್ ಜಿಂದಾಬಾದ್, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಅಂಡಮಾನ್ ನಿಕೋಬಾರ್ ಜೈಲಿನ ಗೋಡೆಗಳಿಗೆ ಅಪ್ಪಳಿಸಿ ಪ್ರತಿಧ್ವನಿಸುತ್ತಿದ್ದವು.

ತಕ್ಷಣ ಬಂಧನಕ್ಕೊಳಪಟ್ಟ ಅಲಿ ಆಫ್ರಿದಿ ಮುಖದಲ್ಲಿ ತನ್ನ ಕಾರ್ಯತಂತ್ರದ ಸಫಲತೆ ಎದ್ದು ಕಾಣುತ್ತಿತ್ತು, ಈ ಕೃತ್ಯದ ಆರೋಪದ ಮೇಲೆ ಶೇರ್ ಅಲಿ ರವರನ್ನು 11ನೇ ಮಾರ್ಚ್ 1872 ರಲ್ಲಿ ನೇಣುಗಂಬಕ್ಕೆ ಏರಿಸಲಾಯಿತು. ಆತನ ಸಾವಿನ ನಂತರ ಆತನ ಕಣ್ಣಲ್ಲಿ ಭಾರತಕ್ಕಾಗಿ ವೀರಮರಣವನ್ನಪ್ಪಿದ ಹೆಮ್ಮೆ ಕಾಣುತ್ತಿತ್ತು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವೈಸ್ ರಾಯ್ ಕೊಲೆ ಇಡೀ ಭಾರತ ಮತ್ತು ಇಂಗ್ಲೆಂಡ್ ದೇಶದ ಬ್ರಿಟಿಶ್ ಸರಕಾರಗಳು ಬೆಚ್ಚಿಬೀಳುವಂತೆ ಮಾಡಿತ್ತು.

ಇಂತಹ ಇತಿಹಾಸದಿಂದ ಒಂದು ಸ್ಪಷ್ಟತೆ ಸಿಗುವುದೇನೆಂದರೆ ಅಂದಿನ ಕ್ರಾಂತಿಕಾರಿಗಳು ತಮ್ಮ ಪ್ರಾಣವನ್ನು ಭಾರತ ಮಾತೆಯ ಮಡಿಲಿಗೆ ಸಂತೋಷದಿಂದ ನಗುನಗುತ್ತಲೇ ಅರ್ಪಿಸಿದರೇ ವಿನಃ ಬ್ರಿಟಿಷರಿಗೆ ತಪ್ಪೋಪ್ಪಿಗೆ ಬರೆದು ಗುಲಾಮರಾಗಲಿಲ್ಲ.

ಎಸ್ಎಸ್ಅಲಿ

Bibliography

F. A. M. Dass (1937): The Andaman Islands.
Prof. Sen : Disciplining Punishment: Colonialism and Convict Society in the Andaman Islands. Oxford University Press.

Bilal media

Please follow and like us:
error