ಕೋಮುವಾದದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ :
ಸಿದ್ದರಾಮಯ್ಯ

ಬೆಂಗಳೂರು, ನ.೧೯: ದೇಶಾದ್ಯಂತ ಕೋಮುವಾದ ವ್ಯಾಪಿಸಿಕೊಳ್ಳುತ್ತಿದೆ, ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿರವರ ೧೦೩ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಮುವಾದದ ಕುರಿತು ಜನತೆಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತೆಯರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿರುವುದರಿಂದ ಇವತ್ತು ದೇಶದಲ್ಲಿ ಕೋಮುವಾದಿಗಳು ಹೆಚ್ಚಾಗುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಂವಿಧಾನದ ಬಗ್ಗೆ ಗೌರವವೇ ಇಲ್ಲ. ಆರೆಸ್ಸೆಸ್ ಒಂದು ಜಾತಿ ಸಂಘಟನೆಯಾಗಿದ್ದು, ಮೇಲ್ಜಾತಿಗಳಿಗೆ ಅಧಿಕಾರವನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿದೆ. ಬಿಜೆಪಿ ಆರೆಸ್ಸೆಸ್‍ನ ಮುಖವಾಡದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್‍ನ ಬಹಳ ಮಂದಿಗೆ ಸಿದ್ಧಾಂತದ ಬಗ್ಗೆ ಖಚಿತತೆ ಇಲ್ಲ. ಕೇವಲ ಖುಷಿಗಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮುಖ್ಯವಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಸಿದ್ಧಾಂತದ ಕುರಿತು ಖಚಿತತೆ ಇರಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಮಹಿಳಾ ಮೀಸಲಾತಿ ವಿರುದ್ದ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದರು. ಮಂಡಲ್ ಕಮಿಟಿಯನ್ನು ವಿರೋಧಿಸಿದ್ದರು. ಇವುಗಳ ಬಗ್ಗೆ ಮಹಿಳಾ ಸಮುದಾಯ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ದೇಶದ ಎಲ್ಲ ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಈಗ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಬಡವರ ಪರ ಕಾರ್ಯಕ್ರಮ ಕೊಟ್ಟವರು. ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ತಂದರು. ಅವರ ೨೦ ಅಂಶದ ಕಾರ್ಯಕ್ರಮಗಳು ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಸ್ಮರಿಸಿದ್ದಾರೆ.

ಇಂದಿರಾಗಾಂಧಿ ದೇಶಕ್ಕಾಗಿ ತ್ಯಾಗ ಮಾಡಿದರು. ರಾಜೀವ್ ಗಾಂಧಿಯು ದೇಶದ ಐಕ್ಯತೆಗಾಗಿ ಶ್ರಮಿಸಿದರು. ಇವತ್ತು ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್‍ಗಳಿವೆ. ಅದಕ್ಕೆ ಮೂಲ ಕಾರಣ ರಾಜೀವ್‍ಗಾಂಧಿಯ ದೂರದೃಷ್ಟಿಯ ಯೋಜನೆಗಳ ಫಲವಾಗಿದೆ. ಆದರೆ, ಆರೆಸ್ಸೆಸ್ ಗಾಂಧಿ ಕುಟುಂಬಕ್ಕೆ ಕಳಂಕ ತರುವ ನಿಟ್ಟಿನಲ್ಲಿ ಅಪಪ್ರಚಾರದಲ್ಲಿ ತೊಡಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ವಿ.ಎಸ್.ಉಗ್ರಪ್ಪ, ಸುದರ್ಶನ್ ಮತ್ತಿತರರಿದ್ದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಯಿಂದ ಪಾಠ ಕಲಿಯಬೇಕಿಲ್ಲ. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಉತ್ತಮ ಕೆಲಸ ಮಾಡಿದೆ. ಆದರೆ, ಜನರಿಗೆ ಅದರಲ್ಲೂ ಯುವ ಜನತೆಗೆ ಇದು ಅರ್ಥವಾಗುತ್ತಿಲ್ಲ. ರಾಜ್ಯದ ಜನ ಬಸವತತ್ವ, ಅಂಬೇಡ್ಕರ್, ನಾರಾಯಣ ಗುರು, ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ ತತ್ವಗಳಿಂದ ದೂರ ಹೋಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕ

Please follow and like us:
error