fbpx

ಕೊರೊನಾದಿಂದ ಮರಣ ಪ್ರಮಾಣ ತಗ್ಗಿಸಲು ದುರ್ಬಲ ವರ್ಗದವರ ಸರ್ವೇ ಮಾಡಿ ಆರೋಗ್ಯ ತಪಾಸಣೆ ಮಾಡಲು ಡಿಸಿ ಸೂಚನೆ

ದಾವಣಗೆರೆ :
ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಕೇವಲ ಕಂಟೈನ್‍ಮೆಂಟ್ ಮತ್ತು ಬಫರ್ ವಲಯಗಳು ಮಾತ್ರವಲ್ಲದೇ ಆರೋಗ್ಯ ಇಲಾಖೆಗೆ ಮಾಹಿತಿ ಇರುವ ದುರ್ಬಲ ವರ್ಗ ಎಂದು ಪರಿಗಣಿಸಲಾಗುವ ಶುಗರ್, ಬಿಪಿ, ಟಿಬಿ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ರೋಗಗಳನ್ನು ಹೊಂದಿರುವವರನ್ನು ಪರೀಕ್ಷೆಗೊಳಪಡಿಸಿ ಸೂಕ್ತ ಚಿಕಿತ್ಸೆ ನೀಡಿ ಸಾವಿನ ಸಂಭವದಿಂದ ಅವರನ್ನು ಪಾರು ಮಾಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಜಿಲ್ಲಾ ಆರೋಗ್ಯ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೊರೊನಾದಿಂದ ಉಂಟಾಗುವ ಮರಣವನ್ನು ತಗ್ಗಿಸಲು ದುರ್ಬಲ ವರ್ಗದವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಜಿಲ್ಲೆಯಾದ್ಯಂತ ಒಂದು ವಾರದೊಳಗೆ ಅವರ ಮನೆ ಮನೆಗೆ ತೆರಳಿ ಸರ್ವೇ ಮಾಡಿ, ಅವರ ಆರೋಗ್ಯ ಕುರಿತು ಮಾಹಿತಿ ಪಡೆದು ಸೂಕ್ತ ಸಲಹೆ ನೀಡುವ ಮೂಲಕ ನಿಗಾದಲ್ಲಿ ಇಡಬೇಕು. ಇಂತಹವರಿಗೆ ಕೊರೊನಾ ಸೋಂಕು ತಗುಲಿದರೆ ಅವರ ಜೀವ ಉಳಿಸುವುದು ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ಈ ವಿಷಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸೂಚನೆ ನೀಡಿದರು.
ನಾನ್ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಡಿಸಿ ಸೂಚನೆ :
ಜಿಲ್ಲೆಯ ಯಾವುದೆ ಖಾಸಗಿ ಆಸ್ಪತ್ರೆ/ನರ್ಸಿಂಗ್ ಹೋಂಗಳು ತಮ್ಮಲ್ಲಿಗೆ ಬರುವ ಎಬಿ-ಎಆರ್‍ಕೆ ಕಾರ್ಡುದಾರರು, ಬಿಪಿಎಲ್ ಕಾರ್ಡುದಾರ ನಾನ್ ಕೋವಿಡ್ ರೋಗಿಗಳನ್ನು ಎಷ್ಟೊತ್ತಿಗೇ ಬಂದರೂ ಅಡ್ಮಿಟ್ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ಕೆಪಿಎಂಇ ಅಡಿ ನೋಂದಣಿಯನ್ನು ರದ್ದುಗೊಳಿಸಲಾಗುವುದು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸಲಹೆ ನೀಡಿ ಸಹಕರಿಸಬೇಕೆಂದು ಎಚ್ಚರಿಕೆ ನೀಡಿದರು.
-ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿಗಳುಆರ್‍ಸಿಹೆಚ್‍ಓ ಡಾ. ಮೀನಾಕ್ಷಿ ಮಾತನಾಡಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್‍ನಿಂದ ಗರ್ಭಿಣಿಯರ ದಾಖಲಾತಿ ಕಡಿಮೆ ಆಗಿದೆ. ಏಪ್ರಿಲ್‍ನಿಂದ ಇಲ್ಲಿಯವರೆಗೆ ಒಟ್ಟು 15 ತಾಯಿಂದಿರ ಮರಣ ಸಂಭವಿಸಿದ್ದು 03 ಜನರು ಬೇರೆ ಜಿಲ್ಲೆಗೆ ಸೇರಿದವರಾಗಿದ್ದಾರೆ. 77 ಶಿಶು ಮರಣ ಸಂಭವಿಸಿದ್ದು, 41 ಹೊರ ಜಿಲ್ಲೆಯದಾಗಿದ್ದರೆ 36 ನಮ್ಮ ಜಿಲ್ಲೆಗೆ ಸೇರಿವೆ. ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 1723 ಅಂಗನವಾಡಿಗಳ ಪೈಕಿ ಜೂನ್ ಮಾಹೆಯಲ್ಲಿ ಒಂದು ವಾರ ವಿಶೇಷ ಆಂದೋಲನ ಮಾಡಿ 778 ಅಂಗನವಾಡಿಗಳ ಸುಮಾರು 46 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳಬೇಕು. ಮಕ್ಕಳು ಕಡಿಮೆ ತೂಕದಿಂದ ಹೆಚ್ಚು ಮೃತಪಡುತ್ತಿದ್ದು, ಗರ್ಭಿಣಿಯರಿಗೆ ಫಾಲ್‍ಅಪ್ ಚಿಕಿತ್ಸೆಯನ್ನು ನಿಯಮಿತವಾಗಿ ನೀಡಬೇಕು ಜೊತೆಗೆ ಸೂಕ್ತ ಸಲಹೆಗಳನ್ನು ನಿಡಬೇಕು ಎಂದರು. ಜೊತೆಗೆ ಮಕ್ಕಳ ಚುಚ್ಚುಮದ್ದು ಕಾರ್ಯಕ್ರಮದಡಿ ಮಕ್ಕಳ ಚುಚ್ಚುಮದ್ದು ಪ್ರಮಾಣ ಲಾಕ್‍ಡೌನ್ ವೇಳೆ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಎನ್‍ವಿಬಿಡಿಸಿಪಿ ಅಧಿಕಾರಿ ಡಾ.ನಟರಾಜ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ಮಾಹೆವರೆಗೆ 02 ಮಲೇರಿಯಾ, 92 ಡೆಂಗ್ಯೂ, 22 ಚಿಕುನುಗುನ್ಯ ಪ್ರಕರಣಗಳು ದೃಢಪಟ್ಟಿವೆ. ಈ ಸೋಂಕುಗಳನ್ನು ನಿಗ್ರಹಿಸಲು ಲಾರ್ವಾ ಸಮೀಕ್ಷೆಯಡಿ ಮನೆ ಮನೆ ಸರ್ವೇ ಮಾಡಲಾಗಿದೆ. ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ‘ಸ್ವಚ್ಚ ಪರಿಸರದಿಂದ ಆರೋಗ್ಯವಂತ ಜೀವನ’ ಎಂಬ ಧ್ಯೇಯದೊಂದಿಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮ, ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ ಗ್ರಾಮ/ನಗರ/ಪಟ್ಟಣಗಳಲ್ಲಿ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 940 ಕ್ಷಯ ರೋಗ ಪ್ರಕರಣ ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಹೆಚ್‍ಐವಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಟಿಬಿ ರೋಗವುಳ್ಳವರನ್ನು ಸರ್ವೇ ಮಾಡಿ ಅವರಲ್ಲಿ ಏನಾದರೂ ಕೋವಿಡ್ ಲಕ್ಷಣಗಳಿವೆಯೇ ಎಂದು ಪರೀಕ್ಷಿಸಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಟಿಬಿ ಮತ್ತು ಹೆಚ್‍ಐವಿ ಪಾಸಿಟಿವ್ ಇರುವ ರೋಗಿಗಳು ಶೀತ ಕೆಮ್ಮು ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೇ ಕೋವಿಡ್ ಪರೀಕ್ಷೆಗೆ ಒಳಗಾಗಬೇಕೆಂದು ಹೇಳಿದ ಅವರು ಡೆಂಗ್ಯೂ ಹಾಗೂ ಇತರೆ ಸಾಂಕ್ರಮಿಕ ರೋಗ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದರು.
ಇದೇ ವೇಳೆ ಜಿಲ್ಲಾಧಿಕಾರಿಗಳು, ಜಿ ಪಂ ಸಿಇಓ ಇವರ ಸಮ್ಮುಖದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್ ಡಾ.ನಾಗರಾಜ್, ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ.ಶ್ರೀಧರ್ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
(ಫೋಟೊ ಇದೆ)


Please follow and like us:
error
error: Content is protected !!