ಶೌಚಾಲಯ ನಿರ್ಮಾಣಕ್ಕೆ ಮನವೊಲಿಕೆ

 ಕೊಪ್ಪಳ-ಜು-29 (ಕ ವಾ): ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮಕ್ಕೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ನೇತೃತ್ವದಲ್ಲಿ ಹಲವು ಅಧಿಕಾರಿಗಳ ತಂಡ ಶುಕ್ರವಾರದಂದು ಬೆಳಗಿನ ಜಾವ ಭೇಟಿ ನೀಡಿ ಗ್ರಾಮದ ಮನೆ-ಮನೆಗೆ ತೆರಳಿ ಶೌಚಾಲಯ, ಸ್ವಚ್ಛತೆಯ ಕುರಿತು ತಿಳುವಳಿಕೆ ನೀಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಳಸುವಂತೆ ಜಾಗೃತಿ ಮೂಡಿಸಿದರು.  ಅವರು ಮನೆ ಮನೆ ಭೇಟಿ ನೀಡುವ ವೇಳೆ ಗ್ರಾಮದ ರಸ್ತೆಯಲ್ಲಿ ನಿಂತ ನೀರು ಇರುವುದನ್ನು ಕಂಡು, ಇದರಿಂದ ಹಲವಾರು ಖಾಯಿಲೆಗಳು ಹರಡುತ್ತವೆ ನೀರು ನಿಲ್ಲದಂತೆ ಎಚ್ಚರ ವಹಿಸಿ, ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಗ್ರಾಮಸ್ಥರಿಗೆ ಹೇಳಿದರು. ಮನೆಯ ಸುತ್ತ-ಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಹಾಗೂ ಶಾಲೆಯ ಸುತ್ತ ಗಿಡ ಮರಗಳನ್ನು ಬೆಳೆಸಿ ಎಂದು ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಗ್ರಾಮಸ್ಥರಿಗೆ ಪರಿಸರ ಜಾಗೃತಿ ಮೂಡಿಸಿದರು.  ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಗಮನಿಸಿ ಸ್ವಚ್ಛ ಮತ್ತು ಶಿಸ್ತಿನಿಂದ ಇರಲು  ಹೇಳಬೇಕು ಎಂದರು. ಸಿದ್ದಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 1842 ಕುಟುಂಬಗಳಿದ್ದು, ಇದರಲ್ಲಿ 1053 ಕುಟುಂಬಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಳಸುತ್ತಿದ್ದಾರೆ. 789 ಕುಟುಂಬಗಳು ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಬಾಕಿ ಇದ್ದು,  ಬಾಕಿ ಉಳಿದ ಎಲ್ಲಾ ಕುಟುಂಬಗಳು ಶೌಚಾಲಯ ನಿರ್ಮಿಸಿ, ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸಲು ನಮ್ಮ ಅಧಿಕಾರಿಗಳ ತಂಡ ಶ್ರಮ ವಹಿಸುತ್ತದೆ ಎಂದು ಜಿ.ಪಂ ಸಿಇಓ ಆರ್.ರಾಮಚಂದ್ರನ್ ಅವರು ಹೇಳಿದರು.schoolಜಿಲ್ಲಾ ಸ್ವಚ್ಛ ಭಾರತ ಮಿಶನ್ ಸಿಬ್ಬಂದಿ, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕ ಮಟ್ಟದ ಅಧಿಕಾರಿಗಳು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾ.ಪಂ ಅಧಿಕಾರಿಗಳು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.

Please follow and like us:
error