ಶಾಲೆಯ ಮಕ್ಕಳೊಂದಿಗೆ ಬಿಸಿಯೂಟ ಸವಿದ -ಸಿಇಓ ರಾಮಚಂದ್ರನ್

ಕೊಪ್ಪಳ- ಆ. 05 (ಕ ವಾ): ಯಲಬುರ್ಗಾ ತಾಲೂಕು ಹಿರೇಅರಳಿಹಳ್ಳಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  ಭೇಟಿ ನೀಡಿದ ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಅದೇ ಶಾಲೆಯ ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ತಟ್ಟೆ ಹಿಡಿದು ನಿಂತು ಬಿಸಿಯೂಟ ಸವಿದರು.ಹಿರೇಅರಳಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಶಾಲೆಗೆ ತೆರಳಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಅವರು, ಶಾಲೆಯಲ್ಲಿನ ಸ್ಥಿತಿ-ಗತಿ, ಬೋಧನೆ, ಸರ್ಕಾರದಿಂದ ಮಕ್ಕಳಿಗೆ ಒದಗಿಸುವ ಸಮವಸ್ತ್ರ, ಪುಸ್ತಕ, ಕ್ಷೀರಭಾಗ್ಯದಡಿ ಹಾಲು ವಿತರಣೆ ಮುಂತಾದ ಯೋಜನೆಗಳ ಅನುಷ್ಠಾನದ ಬಗ್ಗೆ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಶಾಲೆಯ ಶೌಚಾಲಯ ಹಾಗೂ ಸ್ವಚ್ಛತೆ ಮತ್ತು ಶಾಲೆಯಲ್ಲಿ ಕೈತೋಟ ನಿರ್ಮಿಸಿಕೊಳ್ಳುವ ಬಗ್ಗೆ ಶಾಲೆಯ ಶಿಕ್ಷಕರು ಆಸಕ್ತಿ ವಹಿಸಬೇಕೆಂದು ಸಲಹೆ ನೀಡಿದರಲ್ಲದೆ, ಮಕ್ಕಳಿಗೆ ಮಳೆ ನೀರು ಕೊಯ್ಲು ಕುರಿತು ಶಿಕ್ಷಕರು ಮಾರ್ಗದರ್ಶನ ನೀಡಬೇಕೆಂದು ಸೂಚನೆ ನೀಡಿದರು.ceoಶಾಲೆಯ ಎಲ್ಲ ಮಕ್ಕಳು ತಮ್ಮ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ತಮ್ಮ ಪಾಲಕರು ಹಾಗೂ ಪೋಷಕರನ್ನು ಒತ್ತಾಯಿಸಬೇಕು. ಮಹಾತ್ಮಾ ಗಾಂಧೀಜಿಯವರು ಕಂಡ ಕನಸನ್ನು ನನಸಾಗಿಸುವತ್ತ ಸಾಗೋಣ, ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲೆಯನ್ನು ಸ್ವಚ್ಛವಾಗಿಸಲು ಎಲ್ಲರೂ ಶ್ರಮಪಡುವುದು ಅಗತ್ಯವಾಗಿದೆ ಎಂದು ಮಕ್ಕಳಿಗೆ ಕರೆ ನೀಡಿದರು. ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಬಿಸಿಯೂಟ ಸವಿದಿದ್ದು, ಸಂತೋಷ ತಂದಿದೆ. 15 ವರ್ಷಗಳ ಹಿಂದೆ ತಾವೂ ಸಹ ಇದೇ ರೀತಿ ಕಷ್ಟಪಟ್ಟು ಓದಿ, ಉನ್ನತ ಹುದ್ದೆಗೆ ಬಂದಿದ್ದೇನೆ. ಸಾಧಿಸುವ ಛಲವೊಂದಿದ್ದರೆ, ಮಕ್ಕಳು ಏನನ್ನಾದರೂ ಸಾಧಿಸಬಹುದು. ಚೆನ್ನಾಗಿ, ಕಷ್ಟಪಟ್ಟು ಓದಿ, ಶಾಲೆ, ಗ್ರಾಮ ಹಾಗೂ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಮಕ್ಕಳಿಗೆ ಕರೆ ನೀಡಿದರು.

Leave a Reply