ವಿವಿಧ ವಸತಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲು, ಸಿಇಒ ಆರ್. ರಾಮಚಂದ್ರನ್

ಕೊಪ್ಪಳ- ಆ- 01 (ಕ ವಾ): ಕೊಪ್ಪಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ಯೋಜನೆಗಳಿಗೆ ಒಂದು ವಾರದೊಳಗಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಕಾಮಗಾರಿಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಸೋಮವಾರದಂದು ಎಲ್ಲ ಜಿಲ್ಲೆಗಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡು, ನಂತರ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಜಿಲ್ಲೆಯಲ್ಲಿ ವಿವಿಧ ಗ್ರಾಮೀಣ ವಸತಿ ಯೋಜನೆಗಳ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಲಾಯಿತು.  2015-16 ನೇ ಸಾಲಿನ ಬಸವ ವಸತಿ ಯೋಜನೆಯಡಿ ಜಿಲ್ಲೆಗೆ 4850 ಮನೆಗಳ ಗುರಿಯನ್ನು ನಿಗದಿಪಡಿಸಲಾಗಿದೆ.  ಈ ಪೈಕಿ 4221 ಮನೆಗಳು ಅನುಮೋದನೆಗೊಂಡಿವೆ.  ಅದೇ ರೀತಿ 2015-16 ನೇ ಸಾಲಿನ ಅಂಬೇಡ್ಕರ್ ಆವಾಸ್ ಯೋಜನೆಯಡಿ ಜಿಲ್ಲೆಗೆ 3360 ಮನೆಗಳ ಗುರಿಯನ್ನು ನಿಗದಿಪಡಿಸಿದ್ದು, ಇದರಲ್ಲಿ 2415 ಮನೆಗಳು ಅನುಮೋದನೆಗೊಂಡಿವೆ.  2013-14 ನೇ ಸಾಲಿನಲ್ಲಿ ಜಿಲ್ಲೆಗೆ ಬಸವ ವಸತಿ ಯೋಜನೆಯಡಿ ಹೆಚ್ಚುವರಿಯಾಗಿ 1600 ಮನೆಗಳ ಗುರಿಯನ್ನು ನಿಗದಿಪಡಿಸಲಾಗಿತ್ತು.  ಈ ಪೈಕಿ 1307 ಮನೆಗಳು ಅನುಮೋದನೆಗೊಂಡಿವೆ.  ಎಲ್ಲ ಯೋಜನೆಗಳ ಬಾಕಿ ಉಳಿದಿರುವ ಗುರಿಗೆ ಅನುಗುಣವಾಗಿ ಒಂದು ವಾರದ ಒಳಗಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎಲ್ಲ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ವಸತಿ ಯೋಜನೆ ನೋಡಲ್ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply