ಕೊಪ್ಪಳ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಮರೆತ ಬಿಜೆಪಿ ಸರಕಾರ

ಜಿಲ್ಲೆಯಲ್ಲಿ ಮೂವರು ಶಾಸಕರಿದ್ದರೂ ಸಿಗಲಿಲ್ಲ ಸಚಿವ ಸ್ಥಾನ


ಕೊಪ್ಪಳ: ಪ್ರಸ್ತುತ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮತ್ತೊಮ್ಮೆ ಕಲ್ಯಾಣ ಕರ್ನಾಟಕ ದತ್ತ ನಿರ್ಲಕ್ಷ್ಯ ಮುಂದುವರೆಸಿದೆ . ಅತೀ ಹೆಚ್ಚು ಬಿಜೆಪಿ ಶಾಸಕರು ಆಯ್ಕೆಯಾಗಿದ್ದರೂ ಸಚಿವ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕಾಲದಲ್ಲಿ ವಲಸಿಗರಿಗೆ ಮಣೆ ಹಾಕಿದ್ದು ಮೂಲ ಬಿಜೆಪಿಯ ಶಾಸಕರಲ್ಲಿ ಬೇಗುದಿ ಹೆಚ್ಚಿಸಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಐವರು ಶಾಸಕರಲ್ಲಿ ಮೂವರು ಬಿಜೆಪಿಯಿಂದಲೇ ಚುನಾಯಿತರಾದವರು. ಮೊದಲನೇ ಬಾರಿ ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಜಿಲ್ಲಾವಾರು ಪ್ರಾತಿನಿಧ್ಯದಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೆಸರು ಕೇಳಿ ಬಂದಿತ್ತು. ಹಾಲಪ್ಪ ಆಚಾರ್ ಮಂತ್ರಿಯಾಗೇಬಿಟ್ಟರು ಎನ್ನುವಷ್ಟರಮಟ್ಟಿಗೆ ಬಿಂಬಿಸಲಾಯಿತು. ಆ ಸಂದರ್ಭದಲ್ಲಿ ಹಾಲಪ್ಪ ಆಚಾರ್ ದಿಢೀರನೆ ದೆಹಲಿಗೆ ಭೇಟಿ ನೀಡಿದ್ದು ಜಿಲ್ಲೆಗೆ ಸಚಿವ ಸ್ಥಾನ ದಕ್ಕುವ ಆಕಾಂಕ್ಷೆ ಗರಿ ಗೆದರಿತ್ತು. ಸಚಿವ ಸಂಪುಟ ವಿಸ್ತರಣೆಗೊಂಡಾಗ ಜಿಲ್ಲೆಗೆ ಭಾರೀ ನಿರಾಸೆ ಉಂಟಾಯಿತು.

ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸ್ಥಾನ ದಕ್ಕಿದ್ದು ಔರಾದ್ ಕ್ಷೇತ್ರದ ಪ್ರಭು ಚಹ್ವಾಣ್ ಮತ್ತು ವಿಜಯನಗರ ಕ್ಷೇತ್ರದ ಆನಂದ್ ಸಿಂಗ್ ಅವರಿಗೆ ಮಾತ್ರ. ಅದೂ ಚಹ್ವಾಣ್‌ಗೆ ಪಶು ಸಂಗೋಪನೆ ಖಾತೆ ಸಿಂಗ್‌ಗೆ ಅರಣ್ಯ ಖಾತೆ! ಈ ಬಾರಿ ಪ್ರಭು ಚಹ್ವಾಣ್ ಬದಲಾಗಿ ಕಲ್ಯಾಣ ಕರ್ನಾಟಕದ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇತ್ತು. ಸರಕಾರ ಬಯಸಿದರೆ ರಾಜೀನಾಮೆ ನೀಡುವುದಾಗಿ ಆನಂದ್ ಸಿಂಗ್ ಸಹ ಹೇಳಿದ್ದರು. ಈ ನಿಟ್ಟಿನಲ್ಲಿ ಹಾಲಪ್ಪ ಆಚಾರ್ ಹೆಸರು ಬಲವಾಗಿ ಕೇಳಿ ಬಂದಿತ್ತು.

ಸ್ವತಃ ಹಾಲಪ್ಪ ಆಚಾರ್ ಅವರಿಗೆ ಈ ಬೆಳವಣಿಗೆ ಅಚ್ಚರಿ ಉಂಟು ಮಾಡಿತ್ತು. ಸಚಿವ ಸ್ಥಾನದ ಆಕಾಂಕ್ಷಿ ನಾನೊಬ್ಬನೇ ಅಲ್ಲ, ಬಿಜೆಪಿಯಿಂದ ಆಯ್ಕೆಯಾದ ಎಲ್ಲ ಶಾಸಕರು ಆಕಾಂಕ್ಷಿಗಳೇ ನನಗೆ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ಕೆಲಸ ಮಾಡುವುದಾಗಿ ಹಾಲಪ್ಪ ಆಚಾರ್ ಹೇಳಿದ್ದರು. ಕೊನೆತನಕ ಪೋನ್ ಗಾಗಿ ಕಾದರೂ ಸಹ ಕರೆ ಬರಲೇ ಇಲ್ಲ.


ಸಿಎಂಗೆ ಮನವಿ ಸಲ್ಲಿಸಿದ್ದೇವೆ
“ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಕೊಪ್ಪಳ ಜಿಲ್ಲೆಗೆ ಆದ್ಯತೆ‌ ನೀಡುವಂತೆ ಮನವಿ ಮಾಡಿದ್ದೇವೆ. ಇರುವ ಮೂವರು ಬಿಜೆಪಿ ಶಾಸಕರಲ್ಲಿ ಯಾರಿಗಾದರೂ ಸರಿ, ಸಚಿವ ಸ್ಥಾನ ನೀಡುವಂತೆ ಕೇಳಿದ್ದೇವು. ಬೇರೆ ಪಕ್ಷದಿಂದ ಬಂದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ಶ್ರಮಿಸಿದವರನ್ನೂ ಈ ಸಂದರ್ಭದಲ್ಲಿ ಕಡೆಗಣಿಸಲಾಗದು. ಆ ನಿಟ್ಟಿನಲ್ಲಿ ನ್ಯಾಯ ಸಲ್ಲಿಸಲಾಗಿದೆ. ಸಚಿವ ಸ್ಥಾನ ಸಿಗದಿದ್ದರೇನಂತೆ ಶಾಸಕರಾಗಿಯೇ ಅಭಿವೃದ್ಧಿ ಕೆಲಸ ಮಾಡುವ ಶಿಸ್ತಿನ ಸಿಪಾಯಿಗಳು ಬಿಜೆಪಿ ಶಾಸಕರು.”
-ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ.


ಅಸಮಾಧಾನ ಆಗಿರೋದು ನಿಜ, ಪಕ್ಷಕ್ಕಿಂತ ದೊಡ್ಡದಿಲ್ಲ
ಎರಡನೇ ಬಾರಿ ಸಂಪುಟ ವಿಸ್ತರಣೆ ಕಾಲಕ್ಕೆ ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ಸಿಗುವ ವಿಶ್ವಾಸ ಇತ್ತು. ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ನೀಡುವ ಭರವಸೆ ಇತ್ತು. ಆದರೆ ಈ ಬಾರಿಯೂ ಕೊಪ್ಪಳ ಜಿಲ್ಲೆಗೆ ಅನ್ಯಾಯವಾಗಿದೆ. ಅಸಮಾಧಾನ ಆಗಿರೋದು ನಿಜ, ಹಾಗೆಂದ ಮಾತ್ರಕ್ಕೆ ಪಕ್ಷಕ್ಕಿಂತ ದೊಡ್ಡದು ಬೇರೆನಿಲ್ಲ‌. ಇನ್ನೊಮ್ಮೆ ಸಿಎಂ ಅವರನ್ನು ಭೇಟಿ ಮಾಡ್ತಿವಿ.
-ಪರಣ್ಣ ಮುನವಳ್ಳಿ, ಶಾಸಕರು, ಗಂಗಾವತಿ

Please follow and like us:
error