ಕೊಪ್ಪಳದಲ್ಲಿ ಎಸಿಬಿ ರೇಡ್; ಕೋಟ್ಯಂತರ ಮೌಲ್ಯದ ಚರ-ಸ್ಥಿರಾಸ್ತಿ ಪತ್ತೆ

 

ಕೊಪ್ಪಳ: ಅಕ್ರಮ ಸಂಪಾದನೆ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆಗೆ ಮುಂದಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಸರ್ವೇ ಅಧಿಕಾರಿ (ಡಿಡಿಎಲ್ಆರ್) ಗೋಪಾಲ್ ಮಾಲಗಿತ್ತಿ ಅವರ ಕೊಪ್ಪಳ ತಾಲೂಕಿನ ಭಾಗ್ಯನಗರದ ನಿವಾಸದ ಮೇಲೆ ಎಸಿಬಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ರೇಡ್ ಮಾಡಲಾಗಿದೆ.
ಗೋಪಾಲ್ ಮಾಲಗಿತ್ತಿ ಕಾರ್ಯ ನಿರ್ವಹಿಸುವ ಬಾಗಲಕೋಟೆ, ವಿಜಯಪುರದಲ್ಲಿರುವ ಕಚೇರಿಗಳಲ್ಲೂ ಎಸಿಬಿ ದಾಳಿ ನಡೆದಿದ್ದು, ಅವರ ಭಾಗ್ಯನಗರದ ನಿವಾಸದ ವಿಳಾಸ ಪತ್ತೆ ಹಚ್ಚಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸಂಜೆವರೆಗೂ ನಡೆದ ದಾಳಿಯಲ್ಲಿ ಕೊಪ್ಪಳ ನಗರದಲ್ಲಿ ಎರಡು ಕೋಟಿ ರೂಪಾಯಿ ಬೆಲೆ ಬಾಳುವ ಮೂರು ಮನೆಗಳು, ಮತ್ತು 6 ನಿವೇಶನಗಳು, 605 ಗ್ರಾಂ ಚಿನ್ನ, 658 ಗ್ರಾಂ ಬೆಳ್ಳಿ, 1 ಕಾರು, 2 ದ್ವಿಚಕ್ರ ವಾಹನಗಳು, 7.35 ಲಕ್ಷ ರೂಪಾಯಿ ನಗದು ಹಾಗೂ 10 ಲಕ್ಷ ರೂಪಾಯಿಗಳ ಗೃಹಪಯೋಗಿ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
ಒಟ್ಟಾರೆ ಮಂಗಳವಾರ ಕೊಪ್ಪಳ ಮಾತ್ರವಲ್ಲದೇ ಮಾಲಗಿತ್ತಿಯವರ ಬಾಗಲಕೋಟೆಯ ಕಚೇರಿ ಮತ್ತು ಅಲ್ಲಿನ ನಿವಾಸ ಮತ್ತು ವಿಜಯಪುರದ ಕಚೇರಿ ಮೇಲೂ ಎಸಿಬಿ ದಾಳಿ ನಡೆಸಿ, ಅಕ್ರಮವಾಗಿ ಸಂಪಾದಿಸಿದ್ದ ನಗದು ಸೇರಿದಂತೆ ವಿವಿಧ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ. ಈ ಕುರಿತು ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

Please follow and like us:
error