ಕೃಷಿ ಯಂತ್ರಧಾರೆ ಮೂಲಕ 10 ಲಕ್ಷ ರೈತರನ್ನು ತಲುಪುವ ಉದ್ದೇಶವಿದೆ- ಸಚಿವ ಕೃಷ್ಣ ಭೈರೇಗೌಡ.

ಕೊಪ್ಪಳ – ಜು. 28 (ಕ ವಾ): ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರದಾನವಾಗಿರುವ ಕೃಷಿ ಯಂತ್ರಧಾರೆ ಯೋಜನೆಯ ಮೂಲಕ ಕೃಷಿ ಇಲಾಖೆ, ಈ ವರ್ಷ ರಾಜ್ಯದ 10 ಲಕ್ಷ ರೈತರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು. krishnaಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ತಾಲೂಕಿನ ಹಿಟ್ನಾಳ್ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನೆ ಹಾಗೂ ಕೃಷಿ ಹೈಟೆಕ್ ಯಂತ್ರೋಪಕರಣಗಳ ಬೃಹತ್ ವಸ್ತು ಪ್ರದರ್ಶನದ ಉದ್ಘಾಟನೆ ಹಾಗೂ ಹಿಟ್ನಾಳ ಗ್ರಾಮ ಪಂಚಾಯತಿಯಲ್ಲಿ ಬಾಪೂಜಿ ಸೇವಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  ರೈತರು ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಗೊಬ್ಬರ ಬಳಸಬೇಕಾಗುತ್ತದೆ. ಆದರೆ, ರೈತರು, ಕಡಿಮೆ ದರದಲ್ಲಿ ಸಿಗುವ ಗೊಬ್ಬರವನ್ನು ಹೆಚ್ಚು, ಹೆಚ್ಚು ಬಳಸುವುದರಿಂದ ಭೂಮಿಯ ಫಲವತ್ತತೆ ಹಾಳಾಗುವುದಲ್ಲದೆ, ಆರ್ಥಿಕವಾಗಿಯೂ ನಷ್ಟ ಅನುಭವಿಸುತ್ತಾರೆ. ಇದಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಣ್ಣು ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿದ್ದು, ಈಗಾಗಲೆ ರಾಜ್ಯದಲ್ಲಿ 10 ಲಕ್ಷ ಮಣ್ಣಿನ ಮಾದರಿಯನ್ನು ಸಂಗ್ರಹಿಸಲಾಗಿದೆ. ಇನ್ನೆರಡು ವರ್ಷದೊಳಗೆ ರಾಜ್ಯದ ಎಲ್ಲ ರೈತರಿಗೆ ತಮ್ಮ ಜಮೀನಿನ ಮಣ್ಣು ಆರೋಗ್ಯ ಚೀಟಿಯನ್ನು ಉಚಿತವಾಗಿ ನೀಡುವ ಗುರಿಯನ್ನು ಹೊಂದಲಾಗಿದೆ. ಯಾವ ಮಣ್ಣಿಗೆ, ಯಾವ ಮತ್ತು ಎಷ್ಟು ಪ್ರಮಾಣದ ಗೊಬ್ಬರ ಹಾಕಬೇಕು ಎನ್ನುವುದನ್ನು ಈ ಮಣ್ಣು ಆರೋಗ್ಯ ಚೀಟಿ ತೋರಿಸುತ್ತದೆ. ಈ ಕಾರ್ಡಿನ ಆಧಾರದ ಮೇಲೆ ರೈತರು ತಮ್ಮ ಜಮೀನಿಗೆ ಗೊಬ್ಬರ ಹಾಕುವುದನ್ನು ನಿರ್ಧರಿಸಬಹುದಾಗಿದೆ ಎಂದು ಕೃಷಿ ಸಚಿವರು ಹೇಳಿದರು. ಕಾರ್ಯಕ್ರಮದಲ್ಲಿ   ಶಾಸಕ ಕೆ. ರಾಘವೇಂದ್ರ ಹಿಟ್ನಾಳ್,ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ,  ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಗ್ರಾ.ಪಂ. ಅಧ್ಯಕ್ಷ ಧರ್ಮರಾಜರಾವ್, ಜಿ.ಪಂ. ಸದಸ್ಯೆ ಬೀನಾ ಗೌಸ್, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಟ್ರಿಂಗೋ ಕಂ. ಲಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದಕುಮಾರ, ಉಪಸ್ಥಿತರಿದ್ದರು. ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಸ್ವಾಗತಿಸಿದರು, ಕೃಷಿ ಇಲಾಖೆ ಅಧಿಕಾರಿ ವೀರಣ್ಣ ಕಮತರ್ ನಿರೂಪಿಸಿ ವಂದಿಸಿದರು.

Leave a Reply