ಕೂಲಿ ಮಾಡೋ ಪೋಷಕರ ಮೊಗದಲ್ಲಿ ‘ಚಿನ್ನ’ದ ನಗು

ಪಟ್ಟಣದ ಶ್ರೀ ಆದಿಚುಂಚನಗಿರಿ ಕಾಲೇಜಿನಲ್ಲಿ ಪದವಿ ಓದುತ್ತಿರುವ ಪುಷ್ಪ,  ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ನಾಲ್ಕು ಜಿಲ್ಲೆಗಳ ಕಾಲೇಜುಗಳ ಕಲಾವಿಭಾಗದಲ್ಲಿ ಎರಡನೇ ರ‍್ಯಾಂಕ್‌ ಗಳಿಸಿದ್ದಾಳೆ. ಪೋಷಕರಿಗೆ ನೀಡಿದ ಮಾತಿನಂತೆ ಛಲ ಬಿಡದೆ ಓದಿ ಅತ್ಯುತ್ತಮ ಅಂಕ ಗಳಿಸಿದ್ದಾಳೆ.  ವಿವಿ ನಡೆಸಿದ ಆರು ಸೆಮಿಸ್ಟರ್‌‌ಗಳ 4100 ಅಂಕಗಳ ಪೈಕಿ, 3414 ಅಂಕಗಳನ್ನು ಗಳಿಸಿ ಶೇ. 83 ಫಲಿತಾಂಶದೊಂದಿಗೆ ಉತ್ತೀರ್ಣಳಾಗಿರುವ ಈಕೆ, ಇತಿಹಾಸ ವಿಭಾಗದಲ್ಲಿ 1000ಕ್ಕೆ 919 ಅಂಕ ಪಡೆದು ಸಾಧನೆಗೈದಿದ್ದಾಳೆ.
ಕೂಲಿ ಕಾರ್ಮಿಕ ಪೋಷಕರು:
ಹೆಚ್.ಡಿ. ಕೋಟೆ ತಾಲೂಕಿನ ಜಕ್ಕಳ್ಳಿ ಗ್ರಾಮದ ಪುಷ್ಪ ಪೋಷಕರಾದ ಸಿದ್ದಯ್ಯ ಮತ್ತು ರತ್ನಮ್ಮ ಬಡ ದಂಪತಿ. ಪ್ರತಿನಿತ್ಯ ತಂದೆ-ತಾಯಿ ಇಬ್ಬರು ಕೂಲಿ ಮಾಡಿ ಮನೆಗೆ ಬಂದು ತಮ್ಮ ಸಂಕಷ್ಟಗಳ ನಡುವೆ ಮಗಳ ಓದಿಗೆ ಬೆನ್ನೆಲುಬಾಗಿದ್ದಾರೆ.
ಆಡಿಕೊಂಡು ನಕ್ಕವರು ಬೆಪ್ಪಾದರು:
ತಂದೆ-ತಾಯಿ ಕೂಲಿಗೆ ಹೋಗುತ್ತಿದ್ದ ನಿಮ್ಮ ಮಗಳು ಓದಿ ಏನು ಸಾಧನೆ ಮಾಡುತ್ತಾಳೆ. ಯಾವುದಾದರೂ ಕೆಲಸಕ್ಕೆ ಕಳುಹಿಸಿ, ಎಷ್ಟೋ ಜನರು ಓದಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಅವರಂತೆ ಆಗುತ್ತಾಳೆ ಎಂದು ಮೂದಲಿಸುತ್ತಿದ್ದ ಕೆಲವರು ಆಕೆಯ ಫಲಿತಾಂಶವನ್ನು ನೋಡಿ ಬೆಪ್ಪಾಗಿದ್ದಾರೆ. ಆಡಿಕೊಂಡು ನಗುತ್ತಿದ್ದ ಮುಖಗಳಿಗೆ ತನ್ನ ಸಾಧನೆ ಹಾಗೂ ಶ್ರಮದಿಂದಲೇ ಪುಷ್ಪ ಪ್ರತ್ಯುತ್ತರ ನೀಡಿದ್ದಾಳೆ.
ಡಿಸೆಂಬರ್ ತಿಂಗಳಲ್ಲಿ ನಡೆಯುಲಿರುವ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗಣ್ಯಾತಿಗಣ್ಯರಿಂದ ಪದವಿ ಪ್ರಮಾಣ ಪತ್ರ ಹಾಗೂ ಚಿನ್ನದ ಪದಕಗಳನ್ನು ಸ್ವೀಕರಿಸಲು ಉತ್ಸುಕರಾಗಿರುವ ಪುಷ್ಪ, ಮುಂದಿನ ದಿನಗಳಲ್ಲಿ ಪ್ರಾಧ್ಯಾಪಕಿಯಾಗುವ ಕನಸು ಹೊಂದಿದ್ದಾಳೆ.
Please follow and like us:
error