ಕುಕನೂರಿನ ಬಾಬಣ್ಣ (ಜಲಾಲುದ್ದೀನ್)ರಿಗೆ ಎಸ್.ಪಿ.ವರದರಾಜು ಪ್ರಶಸ್ತಿ

ಕನ್ನಡನೆಟ್ ನ್ಯೂಸ್ : ರಂಗಭೂಮಿ ಹಾಗೂ ಚಲನಚಿತ್ರಯ ಸಾಧಕರಿಗೆ ನೀಡಲಾಗುವ ಎಸ್.ಪಿ.ವರದರಾಜ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಕೊಪ್ಪಳ‌ ಜಿಲ್ಲೆಯ ಕುಕನೂರಿನ ಬಾಬಣ್ಣ (ಜಲಾಲುದ್ದೀನ್) ಅವರಿಗೆ ಎಸ್.ಪಿ.ವರದರಾಜು ಪ್ರಶಸ್ತಿ ಲಬಿಸಿದೆ. ವೃತ್ತಿ ರಂಗಭೂಮಿಯ ದಿಗ್ಗಜೆ ಕುಕನೂರಿನ ರಹಮಾನವ್ವ ಅವರ ಚೊಚ್ಚಲ ಮಗ. 30 ವರ್ಷಗಳು ವೃತ್ತಿರಂಗಭೂಮಿಯಲ್ಲಿ ದುಡಿದಿದ್ದಾರೆ.

ಕುಕನೂರು ಬಾಬಣ್ಣ ( ಜಲಾಲುದ್ದೀನ್ ) ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ 1934 ರಲ್ಲಿ ಜನಿಸಿದ ಬಾಬಣ್ಣ ಅವರ ಮೂಲ ಹೆಸರು ಜಲಾಲುದ್ದೀನ್ . ಇವರಿಗೆ ಈಗ 87 ವರ್ಷ . ಮುಪ್ಪನ್ನು ಮೀರಿದ ಯುವ ಉತ್ಸಾಹದ ಬಾಬಣ್ಣನವರು ಈಗಲೂ ನಾಟಕಗಳಲ್ಲಿ ಅಭಿಯಿಸುವುದನ್ನು ಬಿಟ್ಟಿಲ್ಲ . ವೃತ್ತಿರಂಗಭೂಮಿಯ ದಿಗ್ಗಜೆಯಾದ ರಹಮಾನವ್ವ ಅವರ ಮೊದಲ ಮಗನಾದ ಇವರು ಆರಂಭದಲ್ಲಿ ತಮ್ಮ ತಾಯಿ ಸ್ಥಾಪಿಸಿದ ಲಲಿತ ನಾಟ್ಯ ಸಂಘದಲ್ಲಿ ಅಭಿನಯಿಸುತ್ತ ಬಂದರು . 30 ವರ್ಷಗಳ ಕಾಲ ನಡೆದ ತಾಯಿಯ ನಾಟಕ ಕಂಪನಿ ಮುಚ್ಚಿದ ಮೇಲೆ ತಾವೇ ಒಂದು ಕಂಪನಿ ಸ್ಥಾಪಿಸಿ ಹತ್ತು ವರ್ಷ ನಡೆಸಿದರು . ಆನಂತರ ದೊಡ್ಡವಾಡ , ಅರಿಷಿನ ಗೋಡಿ , ಚಿಂದೋಡಿ , ಗುಡಿಗೇರಿ , ಶೇಖಮಾಸ್ತರ , ಪುಟ್ಟರಾಜ ಗವಾಯಿಗಳ ಕಂಪನಿ ಸೇರಿದಂತೆ ಹಲವು ನಾಟಕ ಸಂಸ್ಥೆಗಳಲ್ಲಿ ಅಭಿನಯಿಸಿದರು . ಬಾಬಣ್ಣನವರು ಸ್ತ್ರೀ ಪಾತ್ರಗಳ ಅಭಿನಯದಲ್ಲೂ ಎತ್ತಿದ ಕೈ . ಪುರುಷ ಪಾತ್ರಗಳಲ್ಲಂತೂ ಇವರ ಅಭಿನಯ ಅಪೂರ್ವವಾದುದು . ಕಂಪನಿಗಳ ಭರಾಟೆ ಇಳಿಮುಖವಾದ ಮೇಲೆ ಹತ್ತು ಹದಿನೈದು ವರ್ಷಗಳಿಂದ ಮತ್ತೊಬ್ಬ ಪ್ರಖ್ಯಾತ ನಟ ಎಂ.ಎಸ್ . ಕೊಟ್ರೇಶ ಅವರ ಜೊತೆ ತಂಡ ಮಾಡಿಕೊಂಡು ಆಹ್ವಾನ ಬಂದ ಕಡೆ ಹೋಗಿ ನಾಟಕಗಳನ್ನು ಆಡುತ್ತಿದ್ದಾರೆ . ಈಗ ಇವರು ಶಿಶುನಾಳ ಶರೀಫ , ಸಿದ್ಧಾರೂಢ ಮಹಾತ್ಮ , ನಾಗಲಿಂಗ ಲೀಲೆ ಮುಂತಾದ ಅನುಭಾವಿ ಸಂತ ಕೇಂದ್ರಿತ ನಾಟಕಗಳ ರಂಗಪ್ರದರ್ಶನಕ್ಕೆ ಪ್ರಾಮುಖ್ಯ ನೀಡಿದ್ದಾರೆ . ಜೊತೆಗೆ ಯುವ ಪೀಳಿಗೆಗೆ ರಂಗಭೂಮಿ ಕುರಿತಂತೆ ಮಾರ್ಗದರ್ಶನ ಮಾಡುತ್ತಿದ್ದಾರೆ . 87 ವರ್ಷವಾಗಿದ್ದರೂ ಉಸಿರು ಇರುವವರೆಗೂ ಅಭಿನಯಿಸುತ್ತೇನೆ ಎಂಬ ಸಂಕಲ್ಪ ಸಿದ್ಧರಾಗಿದ್ದಾರೆ . ಇಂತಹ ಸಾಧಕರಾದ ಕುಕನೂರು ಬಾಬಣ್ಣ ಅವರಿಗೆ ಈಗ ರಂಗಭೂಮಿ ಸೇವೆಗಾಗಿ ಶ್ರೀ ವರದರಾಜು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ .

Please follow and like us:
error