
Kannadanet NEWS ಕೊಪ್ಪಳ
ಜಿಲ್ಲೆಯ ಕಾರಟಗಿ ನಗರದಲ್ಲಿ ದಂಪತಿ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಮಹಿಳೆ ಹತ್ಯೆ ಮಾಡಿದ್ದ ಪ್ರಕರಣ ಮರ್ಯಾದಗೇಡು ಹತ್ಯೆ ಎಂಬುದು ಬಹುತೇಕ ದೃಢವಾಗಿದೆ.
ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ 31 ವರ್ಷದ ವಿನೋದ ತನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದ 34 ವರ್ಷದ ತ್ರಿವೇಣಿಯನ್ನು 7 ತಿಂಗಳ ಹಿಂದೆ ಮದುವೆಯಾಗಿದ್ದ. ಅಂತರ್ ಜಾತಿ ಎಂಬ ಕಾರಣಕ್ಕೆ ಮದುವೆಗೆ ವಿರೋಧಿಸಿದ್ದ ಮೃತ ತ್ರಿವೇಣಿ ತಮ್ಮ ಹತ್ಯೆ ಮಾಡಿದ್ದಾನೆ.
ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಕೊಪ್ಪಳ ಎಸ್ಪಿ ಟಿ.ಶ್ರೀಧರ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಮೃತಳ ತಮ್ಮನೇ ಕೃತ್ಯದ ರುವಾರಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಕಾಕನಕಟ್ಟೆ ಗ್ರಾಮದ ಮೃತ ತ್ರಿವೇಣಿ ಸಹೋದರ ಅವಿನಾಶ(27), ಸಹೋದರ ಸಂಬಂಧಿ ಕುಮಾರ (26) ತನ್ನ ಒಬ್ಬ ಸ್ನೇಹಿತನೊಂದಿಗೆ ಸೇರಿ ಕೃತ್ಯ ಎಸಗಿದ್ದಾರೆ. ಕೃತ್ಯದ ರುವಾರಿ ಅವಿನಾಶನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಳೆದ 4 ದಿನದಿಂದ ಕಾರಟಗಿಗೆ ಬಂದಿರುವ ಈ ಮೂವರು ಇವರ ಕೊಲೆಗೆ ಸಂಚು ರೂಪಿಸಿದ್ದಾರೆ. ಒಂದೆರಡು ಬಾರಿ ಹತ್ಯೆಗೆ ಯತ್ನಿಸಿ ವಿಫಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ತ್ರಿವೇಣಿ ತಮ್ಮ ಅವಿನಾಶ ಅಕ್ಟೋಬರ್ 16ಕ್ಕೆ ವಾಪಾಸ್ ತಮ್ಮ ಊರಿಗೆ ಹೋಗಿದ್ದು, ಇವರಿಬ್ಬರೂ ಕಾರಟಗಿಯಲ್ಲೇ ಉಳಿದುಕೊಂಡು ಅಕ್ಟೋಬರ್ 17ರ ರಾತ್ರಿ 7ಕ್ಕೆ ಬಸವೇಶ್ವರ ನಗರದಲ್ಲಿನ ಇವರ ಮನೆ ಸಮೀಪದಲ್ಲೇ ಕೃತ್ಯ ರಾಡ್ ನಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ್ದಾರೆ.
ಒಂದೇ ಕಡೆ ಕೆಲಸ: ತ್ರಿವೇಣಿ ಮತ್ತು ವಿನೋದ ಮುಧೋಳದ ಖಾಸಗಿ ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುವಾಗ ಪ್ರೀತಿಸಿದ್ದಾರೆ. ಮದುವೆಗೆ ತ್ರಿವೇಣಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ ಕಾರಟಗಿ ಐಡಿಎಫ್ ಸಿ ಬ್ಯಾಂಕ್ ನಲ್ಲಿ ಕೆಲಸ ಗಿಟ್ಟಿಸಿಕೊಂಡ ವಿನೋದ, ತ್ರಿವೇಣಿಗೆ ಸಿರುಗುಪ್ಪದ ಸಹಕಾರಿ ಬ್ಯಾಂಕ್ ನಲ್ಲಿ ಕೆಲಸ ಕೊಡಿಸಿ, ದಾಂಪತ್ಯ ಜೀವನ ಆರಂಭಿಸಿದ್ದಾರೆ.
ಗಂಗಾವತಿಯಲ್ಲಿ ಮದುವೆ: ಕಳೆದ ಮಾರ್ಚ್ ನಲ್ಲಿ ಗಂಗಾವತಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ರಿಜಿಸ್ಟ್ರಾರ್ ಮಾಡಿಸಿರೋ ಈ ನವ ಜೋಡಿ ನಂತರ ತಮ್ಮ ಅಕ್ಕ- ಪಕ್ಕದ ಮನೆಯವರ ಸಹಕಾರದೊಂದಿಗೆ ಸಾಂಪ್ರದಾಯಿಕವಾಗಿಯೂ ಮದುವೆ ಆಗಿದ್ದಾರೆ.ಸ್ಥಳೀಯರು ತ್ರಿವೇಣಿಗೆ ಪಾಲಕರ ಸ್ಥಾನದಲ್ಲಿ ನಿಂತು ಪಾತ್ರೆ ಕೊಡಿಸಿ, ಹರಸಿದ್ದರಂತೆ.
ವಿನೋದ ಸಾವು?: ತ್ರಿವೇಣಿ(34) ಸ್ಥಳದಲ್ಲೇ ಮೃತಪಟ್ಟಿದ್ದು, ವಿನೋದ(31) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿನೋದ ಕೂಡ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದ್ದು, ಪೊಲೀಸರು, ಕೋಮಾ ಸ್ಥಿತಿಯಲ್ಲಿದ್ದಾನೆ ಎಂದು ಹೇಳಿದ್ದಾರೆ.