fbpx

ಕಾಂಗ್ರೆಸ್‌ಗೆ ಪರ್ಸೆಂಟೇಜ್ ಸರಕಾರ ಅಂದಿದ್ದು ಮೋದಿಯವರ ವೃತ್ತಿನಾ?- ತಂಗಡಗಿ ಪ್ರಶ್ನೆ

ಬಿಜೆಪಿ ವಿರುದ್ಧ ತಂಗಡಗಿ ಆಕ್ರೋಶ

ಅಮೃತ್ ಸಿಟಿ ಯೋಜನೆಯಲ್ಲಿ ಪಾಲು ಸಿಗದಿದ್ದಕ್ಕೆ ಸಂಸದರ ದೂರು.. ಜಿಲ್ಲಾಧಿಕಾರಿ ವರ್ಗಾವಣೆ ಈ ಸಮಯದಲ್ಲಿ ಅಗತ್ಯವಿದ್ದಿಲ್ಲ

ಕೊಪ್ಪಳ: ಪ್ರಧಾನಿ‌ ಮೋದಿಯವರು ಚುನಾವಣೆ ವೇಳೆ ಗಂಗಾವತಿಗೆ ಬಂದು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಪರ್ಸಂಟೇಜ್ ಸರಕಾರ ಅಂದದ್ದು ಅವರ ವೃತ್ತಿಯ ನೆನಪಾ? ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಪ್ರಶ್ನಿಸಿದರು.

ಕೊಪ್ಪಳದ ಡಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಜಿಲ್ಲೆಗೆ ವಸೂಲಿಗಾಗಿ‌ ಬರ್ತಾರೆ ಎಂಬ ತಮ್ಮ ಹೇಳಿಕೆಗೆ ಸಂಸದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿಯವರು ತಂಗಡಗಿ ತಮ್ಮ ಹಳೇ ವೃತ್ತಿ ನೆನಪು ಮಾಡಿಕೊಂಡಿದ್ದಾರೆ ಎಂದಿದ್ದರು. ಹಾಗಾದರೆ ಮೋದಿಯವರು ಗಂಗಾವತಿಗೆ ಬಂದಾಗ ಕಾಂಗ್ರೆಸ್ ಸರಕಾರಕ್ಕೆ ಪರ್ಸಂಟೇಜ್ ಸರಕಾರ ಅಂದದ್ದು ಅವರ ಹಳೇ ವೃತ್ತಿಯ ನೆನಪು ಅನಿಸುತ್ತೆ ಎಂದು ಲೇವಡಿ‌ ಮಾಡಿದರು.

ಗಂಗಾವತಿಯಲ್ಲಿ ನಡೆಯುತ್ತಿರುವ ಅಮೃತ್ ಸಿಟಿ ಯೋಜನೆಯಲ್ಲಿ ಅವ್ಯವಹಾರವಾಗಿದೆ, ಕಾಮಗಾರಿ ಕಳಪೆಯಾಗಿದೆ ಎಂದು ದೂರು ನೀಡಿದ್ದ ಸಂಸದರು, ನಗರಾಭಿವೃದ್ಧಿ ಸಚಿವರು ಬಂದಾಗ ಈ ವಿಷಯವನ್ನೇಕೆ ಪ್ರಸ್ತಾಪಿಸಲಿಲ್ಲ. ಈ ಕುರಿತ ಮಾಧ್ಯಮಗಳ ಪ್ರಶ್ನೆಗೆ ಮೌನವಾಗಿದ್ದೇಕೆ. ಗಂಗಾವತಿಯ ಶಾಸಕರು ಕಾಮಗಾರಿ ಚನ್ನಾಗಿದೆ ಎಂದರೆ, ಸಂಸದರು ಕಳಪೆ ಎನ್ನುತ್ತಾರೆ. ಬಹುಶಃ ಸಂಸದರಿಗೆ ಕಾಮಗಾರಿಯಲ್ಲಿ ಪಾಲು ಸಿಕ್ಕಿರಲಿಕ್ಕಿಲ್ಲ ಎಂದು ಹರಿಹಾಯ್ದರು.

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 4 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿ, ದೂರು ನೀಡಿದಾಗ, ವೀರ-ಧೀರ-ಶೂರನಂತೆ ಮಾಧ್ಯಮಗಳ ಮುಂದೆ ಬಂದ ಕನಕಗಿರಿ ಶಾಸಕರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿದಾಗ ಗಪ್ ಚುಪ್ ಆಗಿರುವುದೇಕೆ. ಈಗ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದರು.

ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ದಕ್ಷ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅವರ ವರ್ಗಾವಣೆ ಅಗತ್ಯ ಇರಲಿಲ್ಲ. ವರ್ಗಾವಣೆ ಆಗಿರುವುದಕ್ಕೆ ತಕರಾರಿಲ್ಲ. ಅದು ಸರಕಾರದ ನಿಯಮ, ಆಗಲಿ. ಆದರೆ ಈಗ ಅದು ಸೂಕ್ತ ಸಮಯ ಆಗಿರಲಿಲ್ಲ. ಇನ್ನೂ ಆರೆಂಟು ತಿಂಗಳ ನಂತರ ಮಾಡಬಹುದಿತ್ತು. ಈಗ ಜಿಲ್ಲೆಗೆ ನೂತನವಾಗಿ ಬಂದಿರುವ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯನ್ನು, ಜಿಲ್ಲೆಯಲ್ಲಿರುವ ಕೋವಿಡ್-19 ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಒಂದೆರಡು ತಿಂಗಳ ಸಮಯ ಹಿಡಿಯುತ್ತದೆ. ಹಾಗಾಗಿ ಎಲ್ಲ ಕಡೆ ಇದ್ದ ಜಿಲ್ಲಾಧಿಕಾರಿಗಳನ್ನೇ ಮುಂದುವರಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಕೊರೊನಾದಿಂದ ಸಾವು-ನೋವುಗಳು ಹೆಚ್ಚುತ್ತಿವೆ. ಹಾಗಾಗಿ ಮತ್ತೇ ಲಾಕ್‌ಡೌನ್ ಅಗತ್ಯ ಇದೆ. ಕೇಂದ್ರ ಮತ್ತು ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಲಿ ಎಂದು ಆಗ್ರಹಿಸಿದ ಅವರು, ಜಿಲ್ಲೆಯ ಕೆಲ ಗ್ರಾಮೀಣ ಭಾಗಗಳಲ್ಲಿ ಸ್ಮಶಾನಕ್ಕೆ ಜಾಗದ ಕೊರತೆ ಇದೆ. ಈ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗುತ್ತದೆ ಎಂದರು.

ಈ ವೇಳೆ ಜಿಪಂ ಸದಸ್ಯ ರಾಜಶೇಖರ ಹಿಟ್ನಾಳ, ರವಿ ಕುರಗೋಡ, ಅಕ್ಬರ್ ಪಲ್ಟಾನ್, ಗುರು ಹಲಗೇರಿ ಇತರರು ಇದ್ದರು.

Please follow and like us:
error
error: Content is protected !!