ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವೀರಣ್ಣ ನಿಂಗೋಜಿ ಬೆಂಬಲಿಸಲು ಮನವಿ

ನಿಂಗೋಜಿ ಅವಧಿಯಲ್ಲಿ ಮಾಡಿದ ಕೆಲಸ ನೋಡಿ ಬೆಂಬಲಿಸಿ

ಕೊಪ್ಪಳ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಮೀಪಿಸಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವೀರಣ್ಣ ನಿಂಗೋಜಿ ಸ್ಪರ್ಧಿಸಲು ನಿಶ್ಚಯಿಸಿದ್ದು ಇವರನ್ನು ಬೆಂಬಲಿಸುವಂತೆ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು , ಕೆ.ಬಿ.ಬ್ಯಾಳಿ, ಹೆಚ್.ಎಸ್.ಪಾಟೀಲ್ ಕೋರಿದರು.

ಕೊಪ್ಪಳದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವೀರಣ್ಣ ನಿಂಗೋಜಿ ಕಸಾಪದ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹಲವು ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ಕಸಾಪ ಸದಸ್ಯರು ಇನ್ನೊಂದು ಅವಧಿಗೆ ನಿಂಗೋಜಿಯವರನ್ನು ಬೆಂಬಲಿಸಬೇಕು ಎಂದರು.

ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಮಾತನಾಡಿ, ಸಾಹಿತ್ಯ‌ಕ್ಷೇತ್ರದಲ್ಲಿ ಕೃಷಿ ಮಾಡಿದವರು ಕಸಾಪ ಪ್ರತಿನಿಧಿಸಿದರೆ ಸೂಕ್ತ. ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲದಿದ್ದರೆ ಪರಿಷತ್ತಿನ ಕಾರ್ಯ, ಉದ್ದೇಶ ಸಮರ್ಪಕವಾಗಿ ಅನುಷ್ಠಾನ ಕಷ್ಟಸಾಧ್ಯ. ನಿಂಗೋಜಿಯವರು ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿದ್ದಾರೆ. ಕಸಾಪ ಬೆಳವಣಿಗೆ ಕುರಿತಂತೆ ಹಲವು ಕನಸು ಕಂಡಿದ್ದಾರೆ ಎಂದರು.

ಕಸಾಪದ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಡಾ.ಕೆ.ಬಿ.ಬ್ಯಾಳಿ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲು ಒಲವಿದೆ. ನಿಂಗೋಜಿಯವರಿಗಿಂತ ಸಮರ್ಥರು ಯಾರಾದರೂ ಇದ್ದರೆ ಜಿಲ್ಲೆಯ ಎಲ್ಲ ಸದಸ್ಯರು ಸೇರಿಕೊಂಡು ಅವಿರೋಧ ಆಯ್ಕೆ ಮಾಡಲು ನಮಗೇನೊ ಮನಸ್ಸಿದೆ. ಆದರೆ ಚುನಾವಣೆ ಎಂದಾಕ್ಷಣ ಸ್ಪರ್ಧೆ, ಆಕಾಂಕ್ಷೆ ಹಾಗೂ ಆಕಾಂಕ್ಷೆಗಳು ಸಹಜ ಎಂದು ತಿಳಿಸಿದರು. ಈಗ ಕಸಾಪ ಚುನಾವಣೆ ಅಂದಾಕ್ಷಣ ಜಾತಿ,ದುಡ್ಡು ಸೇರಿದಂತೆ ವಿವಿಧ ಸಂಗತಿಗಳು ಮುಖ್ಯವಾಗುತ್ತಿವೆ. ಸಾಹಿತಿಗಳಲ್ಲದವರು ಕಸಾಪದ ಅಧ್ಯಕ್ಷರು, ಪದಾಧಿಕಾರಿಗಳಾಗುತ್ತಿದ್ದಾರೆ. ಈ ಹಿಂದೆ ಸದಸ್ಯತ್ವ ಪಡೆಯಬೇಕೆಂದರೆ ಸಾಹಿತ್ಯಿಕ ಸೇವೆಯ ಕುರಿತು ಕಾಲಂ ಇತ್ತು. ಆದರೆ ಅದನ್ನು ತೆಗೆದು ಹಾಕಿದ್ದರಿಂದ ಬಹಳಷ್ಟು ಸಂಖ್ಯೆಯಲ್ಲಿ ಬೇರೆಯವರೂ ಸದಸ್ಯರಾದರು. ಅವರೂ ಮತದಾರರಾಗಿದ್ದರಿಂದ ತಮಗೆ ಬೇಕಾದವರಿಗೆ ಚುನಾಯಿಸತೊಡಗಿದರು. ಆದರೆ ನಿಜವಾದ ಸಾಹಿತಿಗಳು ಮರೆಯಾಗುವಂತಾಯಿತು ಇದು ವಿಷಾಧನೀಯ ಎಂದರು.

 

ಕಸಾಪದ ಮತ್ತೊಬ್ಬ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಮಾತನಾಡಿ, ಗಂಗಾವತಿಗೆ ಪ್ರಾತಿನಿಧ್ಯ ಸಿಗಬೇಕೆನ್ನುವುದು ಸರಿ. ಪ್ರತಿ ಚುನಾವಣೆಯಲ್ಲೂ ಗಂಗಾವತಿ ಭಾಗದವರು ಸ್ಪರ್ಧಿಸುತ್ತಿದ್ದಾರೆ. ಇದೊಂದು ಬಾರಿ‌ ನಿಂಗೋಜಿವರಿಗೆ ಅವಕಾಶ ಕೊಡೋಣ ಎಂದರು. ಅಕ್ಬರ್ ಕಾಲಿಮಿರ್ಚಿ ಮಾತನಾಡಿ ಅದ್ಯಕ್ಷ ಸ್ಥಾನಕ್ಕೆ ನಿಂಗೋಜಿಯವರು ಆಕಾಂಕ್ಷಿಗಳಾಗಿರಲಿಲ್ಲ ನಾವೆಲ್ಲಾ ಸೇರಿ ಅವರನ್ನು ಅಭ್ಯರ್ಥಿಗಳನ್ನಾಗಿಸಿದ್ದೇವೆ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

ಆಕಾಂಕ್ಷಿ ವೀರಣ್ಣ ನಿಂಗೋಜಿ ಮಾತನಾಡಿ, ಎಲ್ಲರ ಒತ್ತಾಸೆ ಮೇರೆಗೆ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಯ ಕಣಕ್ಕೆ ಧುಮುಕಲು ನಿರ್ಧರಿಸಿದ್ದೇನೆ. ಕಸಾಪಕ್ಕೆ ಸಂಬಂಧಿಸಿದಂತೆ ಇದು ನನ್ನ ಕೊನೆ ಚುನಾವಣೆ ಎಂದು ಘೋಷಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಬಿ ಕುಷ್ಟಗಿ, ಜೈನ್ ಮತ್ತಿತರರು ಇದ್ದರು.

Please follow and like us:
error