ಕಳಪೆ ಬೀಜ,ಗೊಬ್ಬರ ಔಷಧಿ ಮಾರುವವರ ಕತೆ ಮುಗಿಸ್ತೀವಿ- ಬಿ.ಸಿ.ಪಾಟೀಲ್

ಕಳಪೆ ಬೀಜ,ಗೊಬ್ಬರ ಔಷಧಿ ಮಾರಾಟಗಾರರಿಗೆ ಕೌರವನ ಎಚ್ಚರಿಕೆ

-ರೈತರ ಪರ ಹೋರಾಡುತ್ತೇವೆ; ಒತ್ತಡ, ತಂತ್ರ-ಮಂತ್ರಗಳಿಗೆ ಮಣಿಯಲ್ಲ

ಕೊಪ್ಪಳ: ಈಗ ಬಿತ್ತನೆ ಸಮಯ. ಈ ಸಂದರ್ಭದಲ್ಲಿ ಕಳಪೆ ಬಿತ್ತನೆ ಬೀಜ, ಗೊಬ್ಬರ, ಔಷಧಿ ಮಾರಾಟ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವವರ ಆಟ ಇನ್ನು ಮೇಲೆ ನಡೆಯಲ್ಲ. ಕಳಪೆ ಬೀಜ, ಗೊಬ್ಬರ ಮಾರಾಟ ಮಾಡುವವರ ಕತೆ ಮುಗಿಸುತ್ತೇವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ‌ ನೀಡಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಇದು ಬಿತ್ತನೆ ಸಮಯ. ರೈತರಿಗೆ ಒಳ್ಳೇಯದನ್ನ ಬಯಸೋದು ನಮ್ಮ ಕರ್ತವ್ಯ. ಇಷ್ಟು ವರ್ಷ ಕಳಪೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ವಿರುದ್ಧ ಕ್ರಮ ಆಗಿರಲಿಲ್ಲ. ಈಗ ರಾಜ್ಯಾದ್ಯಂತ ಈ ಬಗ್ಗೆ ಸಂಪೂರ್ಣ ನಿಗಾ ವಹಿಸಲಾಗಿದೆ ಎಂದರು.

ಈಗಾಗಲೇ 15 ಕೋಟಿ ರೂಪಾಯಿ ಮೌಲ್ಯದ ಕಳಪೆ ಬೀಜ, ಗೊಬ್ಬರ ವಶಕ್ಕೆ ಪಡೆಯಲಾಗಿದೆ. ರಾಯಚೂರು, ಬೀದರ್, ಹಾವೇರಿಯಲ್ಲಿ ಈ ಬಗ್ಗೆ ಕೇಸ್ ದಾಖಲಿಸಲಾಗಿದೆ. ಬೀಜ, ಗೊಬ್ಬರ ಪೂರೈಕೆದಾರರು ದಾವೆ ಹೂಡಿದ್ದಾರೆ. ನಾವೂ ಸಹ ರೈತರ ಪರ ಹೋರಾಡುತ್ತೇವೆ ಎಂದು ಗುಡುಗಿದರು.

ಸರಕಾರ ಒತ್ತಡ-ಒತ್ತಾಯಗಳಿಗೆ ಮಣಿಯಲ್ಲ, ತಂತ್ರ-ಕುತಂತ್ರಗಳಿಗೆ ಬಗ್ಗಲ್ಲ. ನನಗೂ ಕಳಪೆ ಬೀಜ ಪೂರೈಕೆ ಮಾಡುವವರಿಂದ ಒತ್ತಡ ಬಂದಿತ್ತು. ನಾನು ಮಣಿದಿಲ್ಲ, ಮಣಿಯಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಇಂದು ಮತ್ತೇ 6 ಕೊರೊನಾ ಕೇಸ್ ದೃಢ ಆಗಿವೆ. ಜನರು ಜಾಗೃತರಾಗಬೇಕು. ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು. ಕೊರೊನಾ ದೃಢಪಟ್ಟಿರುವವರ ಸಂಪರ್ಕಿತರು ಸ್ವ ಇಚ್ಛೆಯಿಂದ ಬಂದು ಹೇಳಿದರೆ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸರಕಾರದೊಂದಿಗೆ ಕೈ ಜೋಡಿಸಿ ಎಂದು ಸಚಿವ ಪಾಟೀಲ ಮನವಿ ಮಾಡಿದರು.

Please follow and like us:
error