ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅನುದಾನ ಬಿಡುಗಡೆ ಮಾಡದೇ ಅನ್ಯಾಯ : ಶಾಸಕ ಬಯ್ಯಾಪೂರ

ಕುಂಠಿತಗೊಂಡ ಅಭಿವೃದ್ದಿ ಕಾರ್ಯಗಳು… ಮಾನದಂಡ‌ ಉಲ್ಲಂಘಿಸಿ ಅಧ್ಯಕ್ಷರ ನೇಮಕಾತಿ

Kannadanet , ಕೊಪ್ಪಳ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡುವಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಮಾನದಂಡ ಉಲ್ಲಂಘನೆ ಮಾಡಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪೂರ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಮವಾರ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಿಂದ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಗಾಗಿರುವ ಈ ಭಾಗದ ಅಭಿವೃದ್ಧಿಗೆ ರಚನೆಯಾದ ಮಂಡಳಿ‌ ನಿಷ್ಕ್ರಿಯವಾಗಿದೆ. ವಾಸ್ತವದಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಯ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಮಂಡಳಿಗೆ ಸದಸ್ಯರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಮಂತ್ರಿ ಆಗಿದ್ದವರೇ ಒಬ್ಬರಿಗೆ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗುತಿತ್ತು. ಆದರೆ, ರಾಜ್ಯ ಸರ್ಕಾರ ‌ಯಾವುದೋ ರಾಜಕೀಯ ಕಾರಣಕ್ಕೆ ಒಬ್ಬ ಶಾಸಕರನ್ನು ಮಂಡಳಿಗೆ ಅಧ್ಯಕ್ಷರಾಗಿ ನೇಮಿಸಿದೆ.‌ ಈ ನೇಮಕದಲ್ಲಿ ಮಾನದಂಡದ ಉಲ್ಲಂಘನೆಯಾಗಿದೆ ಎಂದರು.
ಮಂಡಳಿ ಅಧ್ಯಕ್ಷರಾಗಿರುವ ಶಾಸಕರು ಕರೆಯುವ ಸಭೆಗೆ ಕ್ಯಾಬಿನೆಟ್ ಮಂತ್ರಿಗಳು ಆಗಮಿಸಿ ಮುಂದೆ ಕುಳಿತು ಸಭೆ ನಡೆಸಬೇಕಾಗುತ್ತದೆ. ಇದು ಮಂತ್ರಿಗಳಿಗೆ ಮುಜುಗರ ಆಗಲೂಬಹುದು. ಜೊತೆಗೆ ಮಂಡಳಿ ಅಧ್ಯಕ್ಷರು ಕ್ಯಾಬೆನೆಟ್ ಮಂತ್ರಿ ಆಗಿದ್ದರೆ ಮಾತ್ರ ಕ್ಯಾಬಿನೆಟ್ ಸಭೆಯಲ್ಲಿ ಈ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗುತ್ತದೆ. ಶಾಸಕರಿಗೆ ಕ್ಯಾಬಿನೆಟ್ ಸಭೆಗೆ ಪ್ರವೇಶವೇ ಇರದಿರೋದರಿಂದ ಮಂಡಳಿಗೆ ಅನುದಾನದ ನಿರೀಕ್ಷೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಸಿಎಂ ಯಡಿಯೂರಪ್ಪ ಅವರುಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.
ಇನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಅನುದಾನ ಬಳಕೆ ಬಗ್ಗೆ ಶಾಸಕರಿಗೂ ಸಮರ್ಪಕ ಉತ್ತರ ಕೊಡಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 2.5 ಸಾವಿರ ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೆವು. ಆ ಅನುದಾನ ಬಿಡುಗಡೆ ಮಾಡಿಲ್ಲ.‌ ಯಡಿಯೂರಪ್ಪ ಸಿಎಂ ಆದ ನಂತರ ಮಂಡಳಿಗೆ 1500 ಕೋಟಿ ರೂಪಾಯಿ ಅನುದಾನ ಕೊಡ್ತಿವಿ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈ ಅನುದಾನವೂ ಇನ್ನೂ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಂಡಳಿ ಮುಚ್ಚುವ ಹುನ್ನಾರ: ಒಂದೆಡೆ ಸರ್ಕಾರ ಮಂಡಳಿಗೆ ಅನುದಾನ ನೀಡಿಲ್ಲ. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿರುವ ತಜ್ಞರನ್ನೂ ಮಂಡಳಿಯ ಸದಸ್ಯರಾಗಿ ನೇಮಕ ಮಾಡುವ ಕೆಲಸವನ್ನೂ ಸರ್ಕಾರ ಮಾಡಿಲ್ಲ. ಬದಲಾಗಿ ಬಸವರಾಜ ಪಾಟೀಲ್ ಸೇಡಂ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂಘಕ್ಕೆ ಸರ್ಕಾರ ಅನುದಾನ ನೀಡುತ್ತಿದೆ. ಇದನ್ನೆಲ್ಲ ನೋಡಿದರೆ ಸರ್ಕಾರ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಮಾಡುತ್ತಿದೆ.‌ ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಶಾಸಕರು ಎಚ್ಚೆತ್ತುಕೊಳ್ಳಬೇಕು.‌ ಜಿಲ್ಲಾ ಕೇಂದ್ರದಲ್ಲಿ ಮಂಡಳಿಯ ಕಚೇರಿ ಮತ್ತು ಸಿಬ್ಬಂದಿ ನೇಮಕ ಮಾಡಬೇಕು ಎಂದರು.

Please follow and like us:
error