ಕಲಬುರ್ಗಿ : ಜಿಲ್ಲಾ ಪಂಚಾಯತಿಯ 1547.85 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ

ಕಲಬುರಗಿ. - ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯತಿಯ 18ನೇ ಸಾಮಾನ್ಯ ಸಭೆಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತಿಗೆ ಸರ್ಕಾರ 2020-21ನೇ ಸಾಲಿನಲ್ಲಿ ಒದಗಿಸಿರುವ 1547.85 ಕೋಟಿ ರೂ. ಮೊತ್ತದ ಅನುದಾನಕ್ಕೆ ವಿವಿಧ ಇಲಾಖಾವಾರು ಹಂಚಿಕೆಯ ಕ್ರಿಯಾ ಯೋಜನೆಗೆ (ಲಿಂಕ್ ಡಾಕ್ಯೂಮೆಂಟ್) ಸಾಮಾನ್ಯ ಸಭೆಯು ಅನುಮೋದನೆ ನೀಡಿತು.

ಇದರಲ್ಲಿ ಜಿಲ್ಲಾ ಪಂಚಾಯತ್ ಯೋಜನೆಗಳಿಗೆ 45373.86 ಲಕ್ಷ ರೂ., ತಾಲೂಕು ಪಂಚಾಯತ್ ಯೋಜನೆಗಳಿಗೆ 109323.58 ಲಕ್ಷ ರೂ. ಹಾಗೂ ಗ್ರಾಮ ಪಂಚಾಯತ್ ಯೋಜನೆಗಳಿಗೆ 88 ಲಕ್ಷ ರೂ. ಬಳಸಲು ಸಭೆಯು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.

ಜಿಲ್ಲಾ ಪಂಚಾಯತಿಗೆ ಪ್ರಾಯೋಜನೆ ಮಾಡಿಕೊಂಡ 45373.86 ಲಕ್ಷ ರೂ. ಮೊತ್ತದಲ್ಲಿ ಸಿಬ್ಬಂದಿ ವೇತನಕ್ಕೆ 23545.48 ಲಕ್ಷ ರೂ., ನಿರ್ವಹಣೆಗೆ 6736.80 ಲಕ್ಷ ರೂ., ಖರೀದಿಗೆ 383.95 ಲಕ್ಷ ರೂ., ಕಾಮಗಾರಿಗಳಿಗೆ 525.00 ಲಕ್ಷ ರೂ., ಕಾರ್ಯಕ್ರಮ ಅನುಷ್ಠಾನಕ್ಕೆ 14113.27 ಲಕ್ಷ ರೂ. ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಗೆ 69.36 ಲಕ್ಷ ರೂ. ಹಂಚಿಕೆ ಮಾಡಲಾಗಿದೆ.

ಸಭೆ ಆರಂಭವಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಶ ಗುತ್ತೇದಾರ ಮಾತನಾಡಿ ಕೊರೋನಾ ಮಹಾಮಾರಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಡಳಿತ, ವೈದ್ಯಕೀಯ ಸಿಬ್ಬಂದಿ ಮತ್ತು ಎಲ್ಲಾ ಅಧಿಕಾರಿ-ಸಿಬ್ಬಂದಿಗಳ ವರ್ಗಕ್ಕೆ ಜಿಲ್ಲಾ ಪಂಚಾಯತಿಯ ಸರ್ವ ಸದಸ್ಯರು ಧನ್ಯವಾದ ಅರ್ಪಿಸಬೇಕೆಂಬ ಮನವಿಗೆ ಸರ್ವ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಜೀವನ ಹಂಗಿಲ್ಲದೆ ದುಡಿಯುತ್ತಿರುವವರಿಗೆ ಧನ್ಯವಾದ ಅರ್ಪಿಸಿದರು.

ಸಭೆಯ ಚರ್ಚೆಯ ಆರಂಭದಲ್ಲಿ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಮುಂದೆ ಸೋಂಕು ಉಲ್ಭಣಿಸಿದಲ್ಲಿ ಯಾವ ರೀತಿಯಲ್ಲಿ ಜಿಲ್ಲಾಡಳಿತ ಸನ್ನಧವಾಗಿದೆ ಎಂದು ಹಲವು ಜಿಲ್ಲಾ ಪಂಚಾಯತ್ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ ಮಾತನಾಡಿ ಪ್ರಸ್ತುತ ಜಿಲ್ಲೆಯಲ್ಲಿ 944 ಕೊರೋನಾ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 459 ಗುಣಮುಖರಾಗಿ 475 ರೋಗಿಗಳು ಮಾತ್ರ ಸಕ್ರಿಯರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಉಲ್ಭಣಗೊಂಡಿದಲ್ಲಿ ಎಲ್ಲಾ ರೀತಿಯಲ್ಲಿ ಎದುರಿಸಲು ಸಿದ್ಧರಾಗಿರುವಂತೆ ಮತ್ತು ಜಿಲ್ಲೆಯಲ್ಲಿ ಸುಮಾರು 7000 ಹಾಸಿಗೆ ಸಾಮಥ್ರ್ಯ ಇಟ್ಟುಕೊಳ್ಳುವಂತೆ ರಾಜ್ಯ ಸರ್ಕಾರವು ನಿರ್ದೇಶನ ನೀಡಿರುತ್ತದೆ. ಅದರಂತೆ ಪ್ರತಿ ತಾಲೂಕಿನಲಿ 500 ಹಾಸಿಗೆ ಸಾಮಥ್ರ್ಯ ಮತ್ತು ಉಳಿದಂತೆ ಜಿಲ್ಲಾ ಕೇಂದ್ರದಲ್ಲಿ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯ ಸರ್ಕಾರಿ ಸಂಸ್ಥೆಯಲ್ಲಿ 35 ವೆಂಟಿಲೇಟರ್ ಇವೆ. ಇದಲ್ಲದೆ 25 ಆಕ್ಸಿಜನ್ ಯಂತ್ರಗಳನ್ನು ಎಸ್.ಡಿ.ಆರ್.ಎಫ್. ಅನುದಾನದಿಂದ ಖರೀದಿಸಿಲಾಗಿದೆ. ಜಿಲ್ಲೆಯಲ್ಲಿ ಇದೂವರೆಗೆ ಯಾವುದೇ ಕೊರೋನಾ ಪೀಡಿತ ವ್ಯಕ್ತಿ ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆದಿಲ್ಲ. ಜಿಮ್ಸ್‍ನಲ್ಲಿ 56 ಮತ್ತು ಇ.ಎಸ್.ಐ.ಸಿ.ನಲ್ಲಿ 35 ಸೇರಿದಂತೆ 91 ಐ.ಸಿ.ಯೂ. ಬೆಡ್ ಇವೆ. 389 ಮತ್ತು 320 ಕ್ರಮವಾಗಿ ಜಿಮ್ಸ್ ಮತ್ತು ಇ.ಎಸ್.ಐ.ಸಿ.ನಲ್ಲಿ ಪ್ರಸ್ತುತ ಹಾಸಿಗೆ ಸಾಮಥ್ರ್ಯವಿದೆ. ಹೆಚ್ಚುವರಿಯಾಗಿ ಟ್ರಾಮಾ ಸೆಂಟರ್ ಸಹ ಸಿದ್ಧಗೊಳಿಸಲಾಗಿದೆ ಎಂದರು.

ಕೊರೋನಾ ಪರೀಕ್ಷೆಯ ವೈದ್ಯಕೀಯ ವರದಿ ಬರುವ ಮುನ್ನ ಸರ್ಕಾರಿ ಕ್ವಾರಂಟೈನ್ ಸೆಂಟರ್‍ನಿಂದ ಯಾರನ್ನು ಬಿಡಬಾರದು ಎಂದು ಸದಸ್ಯ ರೇವಣಸಿದ್ದಪ್ಪ ಸಂಕಾಲಿ ಮನವಿ ಮಾಡಿದರು. ಸಿ.ಇ.ಓ. ಡಾ.ಪಿ.ರಾಜಾ ಪ್ರತಿಕ್ರಿಯೆಸಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 40 ಸಾವಿರ ವಲಸಿಗರು ಒಮ್ಮೇಲೆ ಜಿಲ್ಲೆಗೆ ಪ್ರವೇಶಿಸಿದಾಗ 15000 ಗಂಟಲು ದ್ರವ ಪಡೆಯಲಾಗಿತ್ತು. 15 ದಿನಗಳ ಪೂರೈಕೆಯಾದ ನಂತರವೇ ಇವರನ್ನು ಸರ್ಕಾರದ ಎಸ್.ಓ.ಪಿ.ಯನ್ವಯ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಸೋಂಕು ಉಲ್ಭಣಗೊಂಡು 5 ರಿಂದ 6 ಸಾವಿರ ಸೊಂಕಿತರು ಪತ್ತೆಯಾದರು ಸಹ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಶಕ್ತವಾಗಿದೆ ಎಂದರು.

ಕೆಲವು ಖಾಸಗಿ ಶಾಲೆಗಳು ಆನ್‍ಲೈನ್ ಶಿಕ್ಷಣದ ಹೆಸರಿನಲ್ಲಿ ಹೆಚ್ಚಿನ ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಹಾಕುತ್ತಿದ್ದು, ಸಭೆ ಗಮನಹರಿಸಬೇಕು ಎಂದು ಸದಸ್ಯ ಹರ್ಷಾನಂದ ಗುತ್ತೇದಾರ ಸಭೆಯ ಗಮನ ಸೆಳೆದರು. ಶುಲ್ಕ ವಿಚಾರದಲ್ಲಿ ಸರ್ಕಾರ ಯಾವುದೇ ಸ್ಪಷ್ಠ ನಿರ್ಧಾರ ಕೈಗೊಂಡಿಲ್ಲ. ಆದರೆ ಎಲ್.ಕೆ.ಜಿ.ನಿಂದ 5ನೇ ತರಗತಿ ವರೆಗೆ ಆನ್‍ಲೈನ್ ಶಿಕ್ಷಣ ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಶುಲ್ಕ ವಿಚಾರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಡಾ.ಪಿ.ರಾಜಾ ತಿಳಿಸಿದರು.
ಶಾಲೆಗಳ ಸ್ಯಾನಿಟೈಸೇಷನ್ ಪಿ.ಡಿ.ಓ, ಮುಖ್ಯ ಗುರುಗಳ ಜವಾಬ್ದಾರಿ: ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರಿ ಕ್ವಾರಂಟೈನ್‍ಗಳಾಗಿ ಪರಿವರ್ತನೆಯಾದ ಶಾಲೆಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಸುವುದು ಆಯಾ ಶಾಲೆಯ ಮುಖ್ಯ ಗುರುಗಳು ಮತ್ತು ಗ್ರಾಮ ಪಂಚಾಯತ್ ಪಿ.ಡಿ.ಓ.ಗಳ ಜವಾಬ್ದಾರಿ ಎಂದು ಸಿ.ಇ.ಓ. ಡಾ.ಪಿ.ರಾಜಾ ತಿಳಿಸಿದರು.

Please follow and like us:
error