ಕರ್ನಾಟಕ: 45 ದಿನ 5069 ಜೀವನಷ್ಟ!

ರಾಜಾರಾಂ ತಲ್ಲೂರು


ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ 50 ಲಕ್ಷಕ್ಕೆ ತಲುಪಿದೆ. ಅಂದಾಜು 6 ಕೋಟಿ ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಸೋಂಕಿತರಲ್ಲಿ ಅಂದಾಜು 81,000 ಮಂದಿ, ಅಧಿಕೃತ ದಾಖಲೆಗಳಲ್ಲಿ ಸಾವಿಗೀಡಾಗಿದ್ದಾರೆ. ಇದಲ್ಲದೆ ದೊಡ್ಡ ಸಂಖ್ಯೆಯಲ್ಲಿ ಅನಧಿಕೃತ ಸಾವುಗಳು, ಕೊರೊನೇತರ ಸಾವುಗಳೂ ಸಂಭವಿಸಿವೆ.

ಸರ್ಕಾರದ ಕಡೆಯಿಂದ, ಮಾಧ್ಯಮಗಳ ಕಡೆಯಿಂದ ಬರುತ್ತಿದ್ದ ಲೆಕ್ಕಗಳೆಲ್ಲ ಸೋಂಕಿನ ಸಂಖ್ಯೆ ಏರುತ್ತಾ ಹೋದಂತೆ ಬದಲಾದದ್ದನ್ನು ಗಮನಿಸಿದ್ದೀರಾ? ಈಗ ಏನಿದ್ದರೂ “ಗುಣಮುಖರಾದವರು”, “ಗುಣಮುಖರಾಗುತ್ತಿರುವವರ ದರ”ಗಳದ್ದೇ ಭರಾಟೆ.

ಈ ಯಾವುದೇ ಚರ್ವಿತ ಚರ್ವಣಕ್ಕೆ ಚಿಕ್ಕಾಸು ಬೆಲೆ ಇಲ್ಲ.
ಕರ್ನಾಟಕವೊಂದರಲ್ಲೇ, ಆಗಸ್ಟ್ 1ಕ್ಕೆ ಇದ್ದ ಅಧಿಕೃತ ಸಾವಿನ ಪ್ರಮಾಣ: 2412. ಸೆಪ್ಟಂಬರ್ 15ಕ್ಕೆ ಈ ಪ್ರಮಾಣ 7481. ಅಂದರೆ, ಬರೇ45 ದಿನಗಳಲ್ಲಿ ಕರ್ನಾಟಕ 5069 ಜೀವಗಳನ್ನು ಕಳೆದುಕೊಂಡಿದೆ.

ಹಾಗಾಗಿ, ಅಂತಿಮವಾಗಿ ಉಳಿಯಲಿರುವ ಏಕೈಕ ವಾಸ್ತವ ಎಂದರೆ, ಕೊರೊನಾ-ಕೊರೊನೇತರ ಕಾರಣಗಳಿಂದಾಗಿ ಸತ್ತಿರುವ ಮಂದಿಯಲ್ಲಿ ವ್ಯವಸ್ಥೆ ಮನಸ್ಸು ಮಾಡಿದ್ದರೆ, ಶೃದ್ಧೆಯಿಂದ ಕೆಲಸ ಮಾಡಿದ್ದರೆ, ಬದುಕಿ ಉಳಿಯಬಹುದಾಗಿದ್ದ ಜೀವಗಳು ಎಷ್ಟು? ಮತ್ತು ವ್ಯವಸ್ಥೆಯ ವೈಫಲ್ಯದಿಂದಾಗಿ ಈ ದೇಶ ವಿನಾಕಾರಣ ಕಳೆದುಕೊಂಡ ಜೀವಗಳೆಷ್ಟು? ಎಂಬುದು ಮಾತ್ರ.

ಸತ್ತವರಲ್ಲಿ 72.5% ಮಂದಿಗೆ ಮಧುಮೇಹ (65%), ರಕ್ತದೊತ್ತಡ(49%), ಕಿಡ್ನಿ ವೈಫಲ್ಯ(12%), ಹೃದ್ರೋಗ (7%), ಬೊಜ್ಜು (4%), ಹೈಪೊಥೈರಾಯ್ಡಿಸಂ (3%), ಆಸ್ತಮಾ (2%) ಇತ್ತು ಎನ್ನುತ್ತಿವೆ ಅಂಕಿಸಂಖ್ಯೆಗಳು. ತೀರಿಕೊಂಡವರಲ್ಲಿ ಪುರುಷರೇ ಹೆಚ್ಚು (68.3%). (ಇವು ಜುಲೈ-ಸೆಪ್ಟಂಬರ್ ನಡುವಿನ ಕರ್ನಾಟಕದ ಅಂಕಿಅಂಶಗಳನ್ನು ಆಧರಿಸಿ ತಜ್ಞರೊಬ್ಬರು ಕಂಡುಕೊಂಡ ಮಾಹಿತಿ.)

LivingwithCorona #whocares #COVID19

Please follow and like us:
error