ಕರ್ನಾಟಕ ಕಾರ್ಯನಿರತ
ಪತ್ರಕರ್ತ ಸಂಘದಿಂದ
ಕೋಟಿಗೆ ಕೋಟಿ ನಮನ

ಬೆಂಗಳೂರು: ಮಾಧ್ಯಮಗಳಲ್ಲಿ ನೇರ, ದಿಟ್ಟ ಹಾಗೂ ಪ್ರಾಮಾಣಿಕತೆ ದೂರವಾಗುತ್ತಿರುವ ಹೊತ್ತಿನಲ್ಲಿ ಓದುಗರಿಂದ ಆಂದೋಲನ ಪತ್ರಿಕೆ ಕಟ್ಟಿ ದಿಟ್ಟತನದಿಂದ ಪ್ರಾಮಾಣಿಕವಾಗಿ ಮುನ್ನಡೆಸಿದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರ ಆದರ್ಶಗಳನ್ನು ಮಾಧ್ಯಮ ಕ್ಷೇತ್ರದ ಗಣ್ಯರು, ಹಿರಿಯರು ಶ್ಲಾಘಿಸಿದ್ದಾರೆ.

ರಾಜಶೇಖರ ಕೋಟಿ ಅವರ 3ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಮ್ಮಿಕೊಂಡಿದ್ದ ‘ಕೋಟಿ ನಮನ’ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಕೋಟಿ ಅವರಿಗೆ ಕೋಟಿಯೇ ಸರಿಸಾಟಿ ಎಂದರು.

ಜನತಾ ಮಾಧ್ಯಮ ಪತ್ರಿಕೆಯ ಎಸ್.ಎನ್.ಮಂಜುನಾಥ ದತ್ತ ಮಾತನಾಡಿ,
ರಾಜ್ಯಮಟ್ಟದ ಪತ್ರಿಕೆಗಳು ಸೇರಿದಂತೆ ಕೆಲ ಮಾಧ್ಯಮಗಳು ಒಂದು ಸಿದ್ಧಾಂತ, ರಾಜಕೀಯ ಪಕ್ಷಗಳ ನಿಲುವಿಗೆ ಒಳಗಾಗಿವೆ ಎಂದು ವಿಷಾದಿಸಿದರು.ಸಣ್ಣ ಮತ್ತು ಮಧ್ಯಮ ವರ್ಗದ ಪತ್ರಿಕೆಗಳು ಇಂದಿಗೂ ಜನಸೇವೆಯನ್ನೇ ನಂಬಿ ಮುನ್ನಡೆಯುತ್ತಿವೆ. ಇದನ್ನು ಕೋಟಿ ಅವರು ತೋರಿಸಿಕೊಟ್ಟಿದ್ದಾರೆ. ಇಂದಿಗೂ ಆಂದೋಲನ ಜನಸೇವೆಯ ಹಾದಿಯಲ್ಲಿ ಮುಂದುವರಿಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ನನ್ನ ಮತ್ತು ಕೋಟಿ ಅವರದ್ದು ಸುಮಾರು 45ವರ್ಷದ ಸ್ನೇಹ. ಅವರನ್ನು ಯಾವಾಗ ನೆನೆಸಿಕೊಂಡರೂ ಶಿಸ್ತು, ಪ್ರಾಮಾಣಿಕತೆ, ಕಾಯಕದ ಬಗೆಗಿನ ಅಚಲವಾದ ಗೌರವ ನನಗೆ ಇಷ್ಟವಾಗುತ್ತದೆ. ಅವರ ಸರಳತೆಯಿಂದ ನನಗೆ ಒಬ್ಬ ಸಂತನಂತೆ ಕಾಣುತ್ತಾರೆ. ಆಂದೋಲನ ದಿನಪತ್ರಿಕೆ ಸಹ ದೊಡ್ಡ ಕಾಲದಲ್ಲೇ ಕೆಲಸ ಮಾಡಿದೆ. ಏಕೆಂದರೆ ಕೋಟಿ ಅವರೊಂದಿಗೆ ಪ್ರೊ.ರಾಮದಾಸ್, ದೇವನೂರ ಮಹಾದೇವ, ತೇಜಸ್ವಿ, ನಂಜುಂಡಸ್ವಾಮಿ, ಪ.ಮಲ್ಲೇಶ್, ಶಿಮರಾಮ ಕಾಡನಕುಪ್ಪೆ ಅಂತಹ ಸಮಾಜವಾದಿಗಳ ದಂಡೇ ಇತ್ತು. ಅವರು ಕಟ್ಟಿದ ಸ್ನೇಹ ಸೇತುವಿನಲ್ಲಿ ಇಂದಿಗೂ ಬಿರುಕು ಮೂಡಿಲ್ಲ. ಧಾರವಾಡದಿಂದ ಮೈಸೂರಿಗೆ ಬಂದು ಟ್ಯಾಬ್ಲಾಯ್ಡ್ ಮಾದರಿಯಲ್ಲಿ ಆಂದೋಲನ ಪತ್ರಿಕೆ ಹೊರತರುತ್ತಿದ್ದರು. ಅಂದು ಸಣ್ಣದಾಗಿ ಆರಂಭಗೊಂಡ ಪತ್ರಿಕಾ ಕಾರ್ಯ ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳಲ್ಲೂ ಲಕ್ಷ ಪ್ರತಿಗಳ ಮಾರಾಟವಾಗುವ ಮಟ್ಟಕ್ಕೆ ಕಟ್ಟಿ ಬೆಳೆಸಿದರು. ಅಂದು ಬೀದಿ-ಬೀದಿಯಲ್ಲೂ ಜನರು ಆಂದೋಲನ ಹಿಡಿದಿರುತ್ತಿದ್ದರು, ಕರ್ನಾಟಕದಲ್ಲಿ ಇದೊಂದು ಪತ್ರಿಕೆಯ ಇತಿಹಾಸವನ್ನು ಮರೆಯುವಂತಿಲ್ಲ ಎಂದು ನೆನಪುಗಳನ್ನು ಮೆಲುಕುಹಾಕಿದರು.

ಕೋಟಿ ಒಡನಾಡಿ ಹಿರಿಯ ಪತ್ರಕರ್ತ ರಾದ ಜಿ.ಎನ್.ಮೋಹನ್ ಮಾತನಾಡಿ,
ಕೋಟಿ ಅವರು ಮಾತಿಗೆ ತಮ್ಮ ಮಾತಿಗೆ ಬದ್ಧರಾಗಿ, ಸೈದ್ಧಾಂತಿಕವಾಗಿಯೂ ಬೆಂಬಲ ನೀಡುತ್ತಿದ್ದ ಅವರು ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.ಜನಪರ ಘಟನೆ ನೆನೆಸಿಕೊಳ್ಳದ ಅಪರಾಧ ಕಾಲಕ್ಕೆ ಬಂದಿದ್ದೇವೆ. ಸಮಾವಾದಪರ, ಜನಪರ ವಾಗಿರುವ ಮಾಧ್ಯಮ ಒಳಗೆ ಸೈದ್ಧಾಂತಿಕ ಯೋಚಿಸುವವರು ಇಲ್ಲ ಎನ್ನುವ ದುರಿತ ಕಾಲ, ಈ ಕಾಲ ಕೇವಲ ಒಂದು ಕ್ಷೇತ್ರಕ್ಕೆ ಅಲ್ಲ ಮಾಧ್ಯಮಕ್ಕೂ ದುರಿತ ಕಾಲ. ಪ್ರಶ್ನೆ ಕೇಳುವುದಕ್ಕೆ ಹೆದರುವ ಸ್ಥಿತಿ ಇದೆ. ಮಾಧ್ಯಮದವರು ಪ್ರಶ್ನೆ ಕೇಳುವುದೇ ಅಪರಾಧ ಎನ್ನುವ ಮಟ್ಟಕ್ಕೆ ಅಪನಂಬಿಕೆ ಇದೆ.ಇಂತಹ ಕಾಲದಲ್ಲಿ ರಾಜಶೇಖರ ಕೋಟಿ ನೆನಪಿನ ಕಾರ್ಯಕ್ರಮ ಮುಖ್ಯ ಅನಿಸುತ್ತದೆ ಎಂದರು.

ಈ ನಿಟ್ಟಿನಲ್ಲಿ ಸೈದ್ಧಾಂತಿಕವಾಗಿ ಕೆಲಸ ಮಾಡುತ್ತಿರುವ, ಪ್ರಶ್ನೆ ಕೇಳುತ್ತಿರುವ ಸಮಾಜ ತಿದ್ದುತ್ತಿರುವವರು ನಮ್ಮೊಡನಿದ್ದಾರೆ. ಈ ರೀತಿ ಯೋಚಿಸುವವರು ಇದ್ದಾರೆ. ರಾಜಶೇಖರ ಕೋಟಿ ನಂಬಿಕೊಂಡ ದೊಂದಿಯನ್ನು ಬೆಳಕಿನ ದೀಪವನ್ನು ಮುಂದೆ ತೆಗೆದುಕೊಂಡು ಹೋಗುವ ಕಾಲ ನಮ್ಮೆದುರಿಗಿದೆ ಎಂದರು.

ಊಹಾ ಪೋಹಾ ಕಾಲದಲ್ಲಿ ಆದಾಯ ತರುವುದಕ್ಕೆ ಒಗ್ಗಿಸುವ ಕಾಲದಲ್ಲಿ ಇದ್ದೇವೆ ಎಂದು ವಿಷಾದಿಸಿದರು. ಇವತ್ತಿನ ಮಾಧ್ಯಮ ಯಾರ ಪರ ಇದೆ ಹೇಳಿ? ಉಸಿರಾಡಲು ಕಷ್ಟ ಇರುವ ಭಾರತದ ಕಡೆ ಇದೆಯೇ? ಎಂದು ಕೇಳಿದರು. ಮಾಧ್ಯಮದಲ್ಲಿ ಎಲ್ಲವೂ ಅನ್ನ ಅನ್ನುವ ನಕರಾತ್ಮಕ ಚಿಂತನೆ ನನ್ನಲ್ಲಿಲ್ಲ. ಇಡೀ ಕೋಣೆಯಲ್ಲಿ ಕತ್ತಲಾಗಿದ್ರೂ ಅದನ್ನು ಓಡಿಸಲು ಸಣ್ಣ ಹಣತೆ ಸಾಕು. ಅಲ್ಲಲ್ಲಿ ಹಣತೆ ಇದೆ. ಆಂದೋಲನ ಆ ಹಣತೆ. ರಾಜಶೇಖರ ಕೋಟಿ ದೊಡ್ಡ ಹಣತೆ ಆಗಿದ್ದರು ಎಂದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕೋಟಿ ಅವರು ನಂಬಿದ ಆದರ್ಶ ತತ್ವ ಸಿದ್ದಾಂತಗಳಲ್ಲಿ ಕೊನೆಯ ತನಕ ರಾಜಿ ಮಾಡಿಕೊಳ್ಳದೆ, ನುಡಿದಂತೆ ನಡೆದ ಪ್ರಾಮಾಣಿಕ ಪತ್ರಕರ್ತ. ಆ ಕಾರಣಕ್ಕಾಗಿ ಸಂಘ ಅವರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ಸ್ಥಾಪಿಸಿದೆ ಎಂದರು. ಕೆಯುಡಬ್ಲ್ಯೂಜೆ ಜೊತೆಗೆ ಅವರ ಅವಿನಾಭಾವ ಸಂಬಂಧ ಮೆಲುಕು ಹಾಕಿದರು.

ಜೂಮ್ ಮೀಟಿಂಗ್‌ನಲ್ಲಿ ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಎಸ್.ಟಿ.ರವಿಕುಮಾರ್, ಬಿ.ಎಂ.ಹನೀಫ್, ಜಿ.ಟಿ.ಲೋಕೇಶ್, ಚಂದ್ರಕಾಂತ್ ವಡ್ಡು, ಹಾಗೂ ದಿಲೀಪ್ ನರಸಯ್ಯ ಮುಂತಾದವರು ಭಾಗವಹಿಸಿದ್ದರು.

ರಾಜಶೇಖರ ಕೋಟಿ ಅವರು ಯಾವುದೇ ರಾಜಕೀಯ ವ್ಯಕ್ತಿಯಾಗಲಿ, ಅಧಿಕಾರಿಗಳಾಗಿ ಎಂದು ಮುಲಾಜಿಲ್ಲದೆ, ಸಮಾಜಕ್ಕೆ ಬೇಕಾದ ಆರೋಗ್ಯಕರ ವಿಚಾರಗಳನ್ನು ನೇರವಾಗಿ, ನಿಷ್ಟೂರವಾಗಿ ಹೇಳುತ್ತಿದ್ದರು. ಅಲ್ಲದೆ, ಒಳ್ಳೆಯ ಬ್ಯಾಡ್ಮಿಂಟನ್ ಆಟಗಾರರೂ ಆಗಿದ್ದರು. ಕ್ರೀಡಾ ಸಮಯದಲ್ಲೂ ಕೆಲವು ಸೂಕ್ಷ್ಮತೆಗಳನ್ನು ಹೇಳಿಕೊಡುತ್ತಿದ್ದರು. ಇದರಿಂದ ಅವರೊಂದಿಗೆ ಇರುವ ಕ್ಷಣ ಬಹಳ ಇಷ್ಟವಾಗುತ್ತಿತ್ತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಂಶಿ ಪ್ರಸನ್ನಕುಮಾರ್, ವಡ್ಡಗೆರೆ ಚಿನ್ನಸ್ವಾಮಿ, ಲೈಕ್ ಅಲಿಖಾನ್, ಸ್ನೇಹಿತರ ಜತೆ ಸೇರಿಕೊಂಡಿದ್ದೆ. ಬಹಳ ಸ್ಪಷ್ಟವಾದ ರೀತಿಯಲ್ಲಿ, ಸಂಘಟನೆ ಕಟ್ಟುವ ವಿಚಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸ್ಪಷ್ಟವಾಗಿ ಮಾರ್ಗದರ್ಶ ನೀಡುತ್ತಿದ್ದರು. ಇದಲ್ಲದೆ, ಕೋಟಿಯವರ ಸರಳತೆ, ಮನೆಗೆ ಹೋದಾಗ ಅವರು ಉಪಚರಿಸುತ್ತಿದ್ದ ರೀತಿ, ಸೈದ್ಧಾಂತಿಕ ವಿಚಾರದ ಚರ್ಚೆಯಲ್ಲಿ ಇರುತ್ತಿದ್ದ ಸ್ಪಷ್ಟತೆ, ಪತ್ರಿಕೆ ಯಾವುದಕ್ಕೆ ಬದ್ಧವಾಗಿದೆ?, ಸಮಾಜದ ಸಮಸ್ಯೆಗೆ ಪತ್ರಿಕೆ ಹೇಗೆ ಸ್ಪಂದಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು.
-ಬಿ.ಎಂ.ಹನೀಫ್

ಪ್ರಜಾವಾಣಿ

ರಾಜಶೇಖರ ಕೋಟಿ ಅವರನ್ನು ಹತ್ತಿರದಿಂದ ನೋಡಿದವರು ಎಂದಿಗೂ ಮರೆಯುವಂತಿಲ್ಲ. ರಾಜಕಾರಣಿಗಳಾಗಲಿ, ಪತ್ರಕರ್ತರನ್ನಾಗಿ ಎಲ್ಲರನ್ನು ಸ್ನೇಹಿತರಂತೆ ಒಂದೇ ಮನೋಭಾವದಿಂದ ಕಾಣುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಪತ್ರಿಕೆಯ ಆಶಯಗಳನ್ನಾಗಲಿ ಅಥವಾ ಅಧಿಕಾರವನ್ನಾಗಲಿ ಸ್ವ-ಹಿತಾಸಕ್ತಿಗೆ ಬಳಸಿಕೊಂಡವರಲ್ಲ. ಯಾರನ್ನೂ ದ್ವೇಷಿಸುತ್ತಿರಲಿಲ್ಲ. ಪತ್ರಿಕೋದ್ಯಮ ಮತ್ತು ಸಂಘದ ನಡುವೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಅವರ ಅವಧಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಪ್ರಸ್ತುತ ವರ್ಷದಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
-ಬಿ.ವಿ.ಮಲ್ಲಿಕಾರ್ಜುನಯ್ಯ

ಅಧ್ಯಕ್ಷರು, IFWJ

ಪತ್ರಕರ್ತರ ಸಮುದಾಯದಲ್ಲಿ ರಾಜಶೇಖರಕೋಟಿ ಅಚ್ಚಳಿಯದ ಹೆಸರು. ಶೋಷಿತ ಸಮುದಾಯಕ್ಕೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ರೀತಿ ಆದರ್ಶಣೀಯವಾದುದು. ಹಿರಿ- ಕಿರಿಯ ಪತ್ರಕರ್ತರಿಗೆ ಕೋಟಿ ಆದರ್ಶಪ್ರಾಯರು.
-ಎಸ್.ಟಿ.ರವಿಕುಮಾರ್

ಮೈಸೂರು.

ಕೋಟಿ ಅವರು ತಮ್ಮ ಪತ್ರಿಕೆ ವಿಸ್ತರಿಸುತ್ತಾ ಹೋದಂತೆ ಕಾರ್ಮಿಕ ಚಳವಳಿ ಹಾಗೂ ಜನಪರ ಚಳವಳಿಗೆ ನೀಡುತ್ತಿದ್ದ ಪ್ರೋತ್ಸಾಹ, ಮರೆಯುವಂತಿಲ್ಲ. ಅಂದು ಸಣ್ಣ ಪತ್ರಿಕೆಯನ್ನು ಸ್ಕೂಟರ್‌ನಲ್ಲಿ ಇಟ್ಟುಕೊಂಡು ಹಂಚಲು ಬರುತ್ತಿದ್ದರು. ಅಲ್ಲದೆ, ನಮ್ಮ ವಿವಾಹಕ್ಕೂ ಅವರದ ಸಾರಥ್ಯ.
-ಲೀಲಾಸಂಪಿಗೆ,
ಕೋಟಿ‌ ಅವರ ಒಡನಾಡಿ


ಶೋಷಿತ ಸಮುದಾಯಗಳು ತಮ್ಮಹಕ್ಕು ಮತ್ತು ಕರ್ತವ್ಯಗಳನ್ನು ನೆನಪಿಸಿ, ಬೀದಿಗಿಳಿದು ಹೋರಾಡುವ ಹಕ್ಕಿದೆ ಎಂದು ಹೇಳಿದ ಮಾನವೀಯ ಮೌಲ್ಯಯುಳ್ಳ ವ್ಯಕ್ತಿ ಕೋಟಿ. ತಾಯಿ ಹೃದಯಾಘಾತದಿಂದ ಸಹಾಯ ಹಸ್ತ ಚಾಚಿ ನೆರವಾಗುತ್ತಿದ್ದ ದೊಡ್ಡತನ ಅವರಲ್ಲಿತ್ತು.
-ರವಿಕುಮಾರ್ ಟೆಲೆಕ್ಸ್

ಶಿವಮೊಗ್ಗ.

ಹೆಚ್ಚಾಗಿ ಕೆಂಪು ಟಿ-ಷರ್ಟ್ ಧರಿಸಲು ಏನು ಕಾರಣ? ಎಂದು ಕೇಳಿದಾಗ, ನಾನು ಮಾಲೀಕನಲ್ಲ, ಕಾರ್ಮಿಕ. ಕಾರ್ಮಿಕರ ಪರ ಎಂದಿದ್ದರು.
ಅಂತಹ ವ್ಯಕ್ತಿಗೆ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನುಡಿ ನಮನ ಸಲ್ಲಿಸುತ್ತಿರುವುದು ಅರ್ಥಪೂರ್ಣ.
-ಜಿ.ಸಿ.ಲೋಕೇಶ
ಪ್ರಧಾನ ಕಾರ್ಯದರ್ಶಿ
ಕೆಯುಡಬ್ಲ್ಯೂಜೆ

Please follow and like us:
error