ಕರೋನಾ ಸಮುದಾಯಕ್ಕೆ ಹಬ್ಬಿದರೆ ಏನ್ಮಾಡಬೇಕು : ದೇಶಕ್ಕೆ  ಮಾದರಿಯಾದ ದೆಹಲಿ

ದೇಶದ ರಾಜಧಾನಿ ದೆಹಲಿ ಒಳ್ಳೆಯ ಕಾರಣಗಳಿಗಾಗಿ ಸುದ್ದಿಯಲ್ಲಿದೆ.‌ ಮೊದಲನೆಯದಾಗಿ ಆಕ್ಟಿವ್ ಕರೋನಾ ಕೇಸ್ ಗಳ ನಿಯಂತ್ರಣದ ವಿಷಯದಲ್ಲಿ ದೆಹಲಿ ಗಣನೀಯವಾದ ಪ್ರಗತಿ ಸಾಧಿಸಿದೆ. ಆಕ್ಟಿವ್ ಕೇಸ್ ಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ದೆಹಲಿ ಈಗ ಎಂಟನೇ ಸ್ಥಾನಕ್ಕೆ ತನ್ನನ್ನು ತಾನು ತಳ್ಳಿಕೊಂಡಿದೆ.‌ ಮಹಾರಾಷ್ಟ್ರ ಎಂದಿನಂತೆ ಮೊದಲ‌ ಸ್ಥಾನದಲ್ಲಿದೆ, ಕರ್ನಾಟಕ ಎರಡನೇ ಸ್ಥಾನಕ್ಕೆ ಬಂದು ಏದುಸಿರು‌ ಬಿಡುತ್ತಿದೆ. ದೆಹಲಿಯ ಮತ್ತೊಂದು ಮಹತ್ವದ ಸಾಧನೆಯೆಂದರೆ ಅಲ್ಲಿ ಕೋವಿಡ್ ಸಾವಿನ
ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.‌ ಜೂನ್ ಮೊದಲ ವಾರಕ್ಕೆ ಹೋಲಿಸಿದರೆ ಶೇ. 44ರಷ್ಟು ಸಾವಿನ ಪ್ರಮಾಣ‌ ಕುಸಿದಿದೆ. ದೆಹಲಿಯಲ್ಲಿ ರಿಕವರಿ ರೇಟ್ ಕೂಡ ಹೆಚ್ಚುತ್ತಲೇ ಇದೆ. ಅದು ಈಗ ಶೇ.87ನ್ನು ತಲುಪಿದೆ. ಇನ್ನು ದೆಹಲಿಯಲ್ಲಿ ನಡೆದ ಸೀರಾಲಾಜಿಕಲ್ ಸರ್ವೆಯ ಪ್ರಕಾರ ಶೇ. 23ರಷ್ಟು ಮಂದಿ ಕೋವಿಡ್ ಗೆ ಎಕ್ಪೋಸ್ ಆಗಿರುವ ಸಾಧ್ಯತೆ ಇದೆ. ಅಂದರೆ ದೆಹಲಿಯ ಒಟ್ಟಾರೆ ಜನಸಂಖ್ಯೆಯ ಶೇ.23ರಷ್ಟು ಮಂದಿಗೆ ಕರೋನಾ ಬಂದು ಹೋಗಿರುವ ಸಾಧ್ಯತೆ ಇದೆ. ಯಾವುದೇ ಒಂದು ಪ್ರದೇಶ Herd Immunity ಗಳಿಸಿದೆ ಎಂದು ಹೇಳಿಕೊಳ್ಳಲು ಈ ಪ್ರಮಾಣ ಶೇ.60ರಿಂದ 70 ಜನಸಂಖ್ಯೆಯಾದರೂ ಆಂಟೀಬಾಡೀಸ್ ಹೊಂದಿರಬೇಕು. ಆದರೆ ಶೇ.23 ಕಡಿಮೆ ಸಂಖ್ಯೆಯೇನಲ್ಲ.‌ ಇದೂ ಕೂಡ ಅತ್ಯಂತ ಗಮನಾರ್ಹವಾದ ಸಂಗತಿ.

ದೆಹಲಿ ಹೇಗೆ ಇಷ್ಟೊಂದು ಪ್ರಗತಿ ಸಾಧಿಸಲು ಕಾರಣವಾಯಿತು? ಜೂನ್ ತಿಂಗಳಿನಲ್ಲಿ ದೆಹಲಿಯಲ್ಲಿ ವೈರಸ್ ಹರಡುವಿಕೆಯ ತೀವ್ರತೆಯನ್ನು‌ ಕಂಡಿದ್ದ ದೆಹಲಿ ಕಕ್ಕಾಬಿಕ್ಕಿಯಾಗಿತ್ತು, ಜನರು ಪ್ಯಾನಿಕ್ ಆಗಿದ್ದರು. ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಕಂಗಾಲಾಗಿದ್ದರು. ಜುಲೈ ಅಂತ್ಯದೊಳಗೆ ಐದು ಲಕ್ಷ ಕೋವಿಡ್ ಕೇಸನ್ನು ನಾವು ಎದುರಿಸಬೇಕಾದೀತು ಎಂದು ಸ್ವತಃ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆತಂಕ ವ್ಯಕ್ತಪಡಿಸಿದ್ದರು. ಆದರೆ ಹಾಗಾಗಲಿಲ್ಲ. 1,30,000 ಆಸುಪಾಸಿನಲ್ಲೇ ಸೋಂಕಿತರ ಸಂಖ್ಯೆ ಇದೆ. ಇದರಲ್ಲಿ ಬಹುಪಾಲು ಜನರು ಈಗಾಗಲೇ ಸೋಂಕಿನಿಂದ ಮುಕ್ತರಾಗಿದ್ದಾರೆ. ಇದೆಲ್ಲ ಅಷ್ಟು ಸುಲಭವಾಗಿ ನಡೆಯಲಿಲ್ಲ. ದೆಹಲಿ ತನ್ನದೇ ಆದ ಮಾದರಿಗಳನ್ನು ಹುಡುಕಿಕೊಂಡಿತು. ಬಹುಶಃ ಅದು ಇತರ ರಾಜ್ಯಗಳಿಗೆ ಮಾದರಿಯೂ ಆಗಬಹುದು. ದೆಹಲಿ ಏನೇನಲ್ಲ ಮಾಡಿತು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ.

  1. ಹೋಮ್ ಐಸೋಲೇಷನ್: ಹೋಮ್ ಐಸೋಲೇಷನ್ ಮಾದರಿಯನ್ನು ನೀವು ಕೇಳಿರುತ್ತೀರಿ. ಇದನ್ನು ನಮ್ಮ ಡಾ.ಶ್ರೀನಿವಾಸ ಕಕ್ಕಿಲಾಯರು ಮಾರ್ಚ್-ಏಪ್ರಿಲ್ ತಿಂಗಳಿನಿಂದ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಸರ್ಕಾರಕ್ಕೆ ಕಾರ್ಯಯೋಜನೆಯನ್ನೂ ನೀಡಿದ್ದರು. ನಮ್ಮ‌ಸರ್ಕಾರ ಕಿವಿಗೆ ಹಾಕಿಕೊಳ್ಳಲಿಲ್ಲ. ಕೇಜ್ರೀವಾಲ್ ಸರ್ಕಾರ ಹೋಮ್ ಐಸೋಲೇಷನ್ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೆ ತಂದಿತು. ಕೋವಿಡ್ ಸೋಂಕಿನ ಲಕ್ಷಣಗಳು ಇಲ್ಲದ ಅಥವಾ ಸಣ್ಣಪ್ರಮಾಣದ ಲಕ್ಷಣಗಳು ಕಂಡುಬಂದವರಿಗೆ ಮನೆಗಳಲ್ಲೇ ಉಳಿಯಲು ಸರ್ಕಾರ ಹೇಳಿತು. ಇಂಥವರನ್ನು ಆರೋಗ್ಯ ಇಲಾಖೆ ವ್ಯವಸ್ಥಿತವಾಗಿ ಮಾನಿಟರ್ ಮಾಡಿತು.‌ಶೇ.80ಕ್ಕೂ ಹೆಚ್ಚು ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವೇ ಇಲ್ಲವೆಂಬುದನ್ನು ದೆಹಲಿ ಸರ್ಕಾರ ಬೇಗ ಅರ್ಥ ಮಾಡಿಕೊಂಡಿತ್ತು. ಸೋಂಕಿತರು ಊರೆಲ್ಲ ಅಲೆದು ಇನ್ನಷ್ಟು ಜನರಿಗೆ ಸೋಂಕು ಹರಡಿಸುವ ಸಾಧ್ಯತೆಗಳೂ ಇದ್ದವು. ದೆಹಲಿ ಸರ್ಕಾರ ಹೋಮ್ ಐಸೋಲೇಷನ್ ವ್ಯವಸ್ಥೆ ಜಾರಿಗೆ ತಂದು ಇದನ್ನೆಲ್ಲ ತಡೆಗಟ್ಟಿತು.

ಮನೆಯಲ್ಲೇನಾದರೂ ಹೆಚ್ಚು ಕಡಿಮೆಯಾದರೆ ಏನು ಮಾಡೋದು ಎಂಬುದೇ ನಮ್ಮನ್ನೆಲ್ಲ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ. ದೆಹಲಿ ಸರ್ಕಾರ ಯಾರು ಹೋಮ್ ಐಸೋಲೇಷನ್ ನಲ್ಲಿ ಇದ್ದಾರೋ ಅವರಿಗೆಲ್ಲ ಆಕ್ಸಿಮೀಟರ್ ಗಳನ್ನು‌ ವಿತರಿಸಿತು. ಕೋವಿಡ್ ನ ಆತಂಕವಿರುವುದೇ ವೈರಸ್ ಶ್ವಾಸಕೋಶದ ಮೇಲೆ ಮಾಡಬಹುದಾದ ಸಂಭವನೀಯ ದಾಳಿ, ಮತ್ತು‌ ಅದರಿಂದಾಗುವ ಉಸಿರಾಟದ ತೊಂದರೆ. ಮಿಕ್ಕಂತೆ ಜ್ವರ, ಕೆಮ್ಮು, ಬೇದಿ,‌ ವಾಸನೆ-ರುಚಿ ಹೋಗುವುದೆಲ್ಲ ಸೋಂಕಿನ ಲಕ್ಷಣಗಳು. ಉಸಿರಾಟದ ಸಮಸ್ಯೆ ಅಷ್ಟು ಸುಲಭಕ್ಕೆ ಗೊತ್ತಾಗುವುದಿಲ್ಲ. ರಕ್ತದಲ್ಲಿ ಆಕ್ಸಿಜನ್ ಮಟ್ಟ ಕುಸಿಯುವ Hypoxia ರೋಗಿಗಳಿಗೆ ಗೊತ್ತಾಗುವುದಕ್ಕೆ ಮುನ್ನವೇ ಪ್ರಾಣ ಕಿತ್ತು ಕೊಳ್ಳಬಹುದು. ಕೋವಿಡ್ ವಿಷಯದಲ್ಲಿ ಇಂಥ ‘Happy Hypoxia” ಗಳ ಸಂಖ್ಯೆ ಹೆಚ್ಚು. ಹೀಗಾಗಿ ಇದನ್ನು ಮಾನಿಟರ್ ಮಾಡದೇ ಹೋದರೆ ಅಪಾಯ ತಪ್ಪಿದ್ದಲ್ಲ. ಇದಕ್ಕಾಗಿಯೇ ದೆಹಲಿ ಸರ್ಕಾರ ಹೋಮ್ ಐಸೋಲೇಷನ್ ನಲ್ಲಿರುವ ರೋಗಿಗಳಿಗೆ ಆಕ್ಸಿಮೀಟರ್ ಗಳನ್ನು ವಿತರಿಸಿತು.‌ ಇದಕ್ಕಾಗಿಯೇ ಅದು 59,600 ಆಕ್ಸಿಮೀಟರ್ ಗಳನ್ನು ಕೊಂಡುಕೊಂಡಿತು. ಐಸೋಲೇಷನ್ ನಲ್ಲಿರುವ ರೋಗಿಗಳ ಆಕ್ಸಿಜನ್ ಪ್ರಮಾಣ ಕುಸಿದಾಗ ತಕ್ಷಣ ಅವರನ್ನು ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಿತು.

ಇದೆಲ್ಲದರ ಪರಿಣಾಮವಾಗಿ ಆಸ್ಪತ್ರೆಗಳಿಗೆ ಸೋಂಕಿತರ ನೂಕುನುಗ್ಗಲು ತಪ್ಪಿತು. ಚಿಕಿತ್ಸೆ ಬೇಡವಾದವರು ಬಂದು ಆಸ್ಪತ್ರೆಗಳ ಬೆಡ್ ಗಳನ್ನು ಆಕ್ರಮಿಸಿಕೊಂಡರೆ ಚಿಕಿತ್ಸೆ ಬೇಕಾದವರು ಬೀದಿಯಲ್ಲಿ ಉಳಿಯುವ ಅಪಾಯವಿತ್ತಲ್ಲವೇ? ಅದನ್ನು ಹೋಮ್ ಐಸೋಲೇಷನ್ ತಪ್ಪಿಸಿತು‌. ಮನೆಯ ವಾತಾವರಣದಲ್ಲಿ, ಕುಟುಂಬ ಸದಸ್ಯರ ಮಾನಸಿಕ ಬೆಂಬಲ, ಭಾವನಾತ್ಮಕ ಬೆಸುಗೆ ಸೋಂಕಿತರು ಬೇಗ‌ ವಾಸಿಯಾಗಲು, ಏಕಾಂಗಿತನದ ಭೀತಿಯಿಂದ ಪಾರಾಗಲು ನೆರವಾಯಿತು.

  1. ಹೆಚ್ಚು ಹೆಚ್ಚಿನ ಟೆಸ್ಟ್ ಗಳು: ಕರೋನಾ ವನ್ನು ಎದುರಿಸಲು ನಾವು ಅತಿಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕು ಎಂದು ರಾಹುಲ್ ಗಾಂಧಿ ಹೇಳಿದಾಗ, ಬಿಜೆಪಿಗರು ಆಡಿಕೊಂಡು‌ ನಕ್ಕಿದ್ದರು. ಆದರೆ ದೆಹಲಿ ಅತ್ಯಂತ aggressive ಆಗಿ ಪರೀಕ್ಷೆಗಳನ್ನು ನಡೆಸುತ್ತ ಬಂದಿತು.‌ ಪರೀಕ್ಷೆಗಳ‌ ವಿಷಯದಲ್ಲಿ ಅದು ಇತರ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿತು.
    ಜೂನ್ ಮೊದಲ ವಾರದಲ್ಲಿ ದೆಹಲಿ ಪ್ರತಿನಿತ್ಯ ಅಂದಾಜು 5500 ಪರೀಕ್ಷೆಗಳನ್ನು ನಡೆಸುತ್ತಿತ್ತು. ಇದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಆಗ ದೊಡ್ಡ ಸಂಖ್ಯೆಯೇ ಆಗಿತ್ತು. ನಂತರ ಕೇಂದ್ರ ಸರ್ಕಾರ ಜೂನ್ ಮಧ್ಯಭಾಗದಲ್ಲಿ ಆಂಟಿಜನ್ ಕಿಟ್ ಗಳನ್ನು ಒದಗಿಸಿದ ನಂತರ ಪರೀಕ್ಷೆಗಳು ಮತ್ತಷ್ಟು ಹೆಚ್ಚಾದವು. ಪರೀಕ್ಷೆಗಳ ಸಂಖ್ಯೆ ದುಪ್ಪಟ್ಟಾಗಿ, ದಿನಕ್ಕೆ 11,000 ಪರೀಕ್ಷೆಗಳ ನಡೆದವು. ನಂತರ ಜುಲೈ ಮೊದಲವಾರದ ಹೊತ್ತಿಗೆ ದಿನಕ್ಕೆ 21,000 ಪರೀಕ್ಷೆಗಳು ನಡೆದವು. ಈ ಸಂಖ್ಯೆ ಇನ್ನಷ್ಟು ಹೆಚ್ಚುತ್ತಲೇ ಇದೆ.‌

ಈ ರೀತಿಯ ಆಕ್ರಮಣಕಾರಿ ಪರೀಕ್ಷೆಗಳಿಂದ ದೆಹಲಿಯಲ್ಲಿ ಸೋಂಕಿತರನ್ನು ಗುರುತಿಸುವುದು, ಹೋಮ್ ಐಸೋಲೇಷನ್ ಗೆ ಒಳಪಡಿಸುವುದು ಸಾಧ್ಯವಾಯಿತು. ಅದೇ ರೀತಿ ಸೋಂಕಿತರ ಕುಟುಂಬದವರನ್ನೂ ಹೋಮ್ ಕ್ವಾರಂಟೈನ್ ನಲ್ಲಿ ಇಟ್ಟು ಮಾನಿಟರ್ ಮಾಡುವುದು ಸಾಧ್ಯವಾಯಿತು. ಇದರ ಫಲಿತಾಂಶ ಈಗ ಅಂಕಿಅಂಶಗಳನ್ನು ನೋಡಿದರೆ ನಿಚ್ಚಳವಾಗಿ ಕಾಣಿಸುತ್ತದೆ.

  1. ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಳ: ಕರೋನಾ ವಿಷಯದಲ್ಲಿ ಜೂನ್ ಮೊದಲನೇ ವಾರದ ನಂತರ ದೆಹಲಿ ಸರ್ಕಾರದ ಕಾರ್ಯಾಚರಣೆ ವಿಧಾನ ಆಕ್ರಮಣಕಾರಿಯಾಗಿತ್ತು. ಅದು ತೀರಾ ಕೆಟ್ಟದ್ದನ್ನು ಊಹಿಸಿ ಅದಕ್ಕೆ ತಯಾರಿಯಾಯಿತು. ಆಸ್ಪತ್ರೆಗಳ ಬೆಡ್ ಸಂಖ್ಯೆ ಹೆಚ್ಚಿಸಲು ಅದು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಂಡಿತು.

ಜೂನ್ ಮೊದಲವಾರದಲ್ಲಿ ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಎರಡೂವರೆ ಸಾವಿರ ಬೆಡ್ ಗಳು ಲಭ್ಯವಿದ್ದವು. ಕೇವಲ ಎಂಟು ಖಾಸಗಿ ಆಸ್ಪತ್ರೆಗಳು ಮಾತ್ರ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದವು. ಅವುಗಳು ಒದಗಿಸಿದ್ದ ಬೆಡ್ ಗಳ ಸಂಖ್ಯೆ 700 ಮಾತ್ರ. ಯಾವಾಗ ಕೋವಿಡ್ ಸಂಖ್ಯೆಗಳು ಹೆಚ್ಚಾದವೋ ಆಗ ಕೇಜ್ರೀವಾಲ್ ಸರ್ಕಾರ 50ಕ್ಕೂ ಹೆಚ್ಚು ಬೆಡ್ ಗಳನ್ನು ಹೊಂದಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.40ರಷ್ಟು ಬೆಡ್ ಗಳನ್ನು ಕಡ್ಡಾಯವಾಗಿ ಕೋವಿಡ್ ರೋಗಿಗಳಿಗೆ ನೀಡಬೇಕೆಂಬ ಆದೇಶವನ್ನು ಮಾಡಿತು. ಈ ಒಂದು ಆದೇಶದಿಂದಾಗಿ 700 ಬೆಡ್ ಗಳ ಸಂಖ್ಯೆ 5000ವನ್ನು ತಲುಪಿತು. ಇದರ ಜತೆಗೆ ಹೋಟೆಲ್ ಗಳನ್ನು ಆಸ್ಪತ್ರೆಗಳ ಜತೆ ಲಿಂಕ್ ಮಾಡಿದ ಪರಿಣಾಮವಾಗಿ ಇನ್ನೂ 2000 ಬೆಡ್ ಗಳು ಲಭ್ಯವಾದವು. ಈಗ ದೆಹಲಿ ಒಟ್ಟು 15,000ಕ್ಕೂ ಹೆಚ್ಚು ಬೆಡ್ ಗಳನ್ನು ಹೊಂದಿವೆ! ಇದೂ ಕೂಡ ಒಂದು ದಾಖಲೆ.

ಜನರಿಗೆ ಬೆಡ್ ಸಿಗುತ್ತೋ‌ ಇಲ್ವೋ? ಎಲ್ಲಿ ಅಡ್ಮಿಟ್ ಆಗೋದು? ಎಂಬ ಪ್ರಶ್ನೆಗಳು ಇರುತ್ತವೆಯಲ್ಲವೇ? ದೆಹಲಿ ಸರ್ಕಾರ ಡೆಲ್ಲಿ ಕರೋನಾ ಆಪ್ ಆರಂಭಿಸಿತು. ಆಸ್ಪತ್ರೆಗಳಲ್ಲಿ ಇರುವ ಹಾಸಿಗೆಗಳ ಲಭ್ಯತೆಯನ್ನು ಈ ಆಪ್ ನಲ್ಲಿ ಸುಲಭವಾಗಿ ನೋಡಬಹುದು. ಸೋಂಕಿತರಿಗೆ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಲೂ ಸಹ ಇದು ಅವಕಾಶ ನೀಡಿತು. ನಮ್ಮಲ್ಲಿ ಬೆಡ್ ಇಲ್ಲ ಎಂದು ಖಾಸಗಿ ಆಸ್ಪತ್ರೆಗಳು ಸುಳ್ಳು ಹೇಳುವುದೂ ತಪ್ಪಿತು.

  1. ಮುಂಚೂಣಿಯಲ್ಲಿ ನಿಂತ ನಾಯಕ: ಕೊನೆಯದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಗೆ ಪ್ರತಿಯೊಂದು ಸಣ್ಣಪುಟ್ಟ ವಿಷಯಗಳನ್ನೂ ಮೀಡಿಯಾ ಮುಂದೆ ಹೇಳುವ ಅಭ್ಯಾಸ. ವಿಪರೀತ ವಾಚಾಳಿ. ಕರೋನಾ ವಿಷಯದಲ್ಲಿ ಈ ವಾಚಾಳಿತನ ಸಹಾಯಕ್ಕೆ ಬಂದಿತು. ಪ್ರತಿನಿತ್ಯ ಅವರು ಟೀವಿ ಗಳಲ್ಲಿ ಕಾಣಿಸಿಕೊಂಡು ಜನರ ಜತೆ ನೇರ ಸಂವಾದ ಆರಂಭಿಸಿದರು. ವೈದ್ಯರು ಹೇಳಬಹುದಾಗಿದ್ದನ್ನು ತಾವೇ ಹೇಳಿದರು.

ಆಕ್ಸಿಮೀಟರ್ ಎಂದರೆ ಏನು ಗೊತ್ತಾ? ಅದನ್ನು ಹೇಗೆ ಬಳಸುವುದು? ಪ್ಲಾಸ್ಮಾ ಡೊನೇಷನ್ ಮಹತ್ವವೇನು? ಹೋಮ್ ಐಸೋಲೇಷನ್ ಎಂದರೆ ಏನು? ಹೋಮ್ ಐಸೋಲೇಷನ್ ನಲ್ಲಿ ಏನನ್ನು ಮಾಡಬೇಕು, ಏನನ್ನು ಮಾಡಬಾರದು…. ಹೀಗೆ ಎಲ್ಲ‌ ವಿಷಯಗಳನ್ನು ಸ್ವತಃ ಅರವಿಂದ ಕೇಜ್ರೀವಾಲ್ ತಾವೇ ಬಂದು ಹೇಳತೊಡಗಿದರು. ಜನರು ನಂಬುವುದು ತಾವು ಆಯ್ಕೆ ಮಾಡಿ‌ ಕಳಿಸಿದ ಜನನಾಯಕನನ್ನೇ ಅಲ್ಲವೇ? ಕೇಜ್ರೀವಾಲ್ ಜನರ ವಿಶ್ವಾಸವಾದರು. ಆ ಧ್ವನಿಯನ್ನು ಜನರು‌ ನಂಬಿ ಅನುಸರಿಸಿದರು.

ಕೇಜ್ರೀವಾಲ್ ಸರ್ಕಾರಕ್ಕೆ ಇದೆಲ್ಲ ಸಾಧ್ಯವಾಗಿದ್ದು ಅದರ ಪ್ರೊಫೆಷನಲ್ ಅಪ್ರೋಚ್ ಮತ್ತು ಹೊರಗೆ ಏನೆಲ್ಲ ನಡೆಯುತ್ತಿದೆ ಎಂಬುದರ ತಿಳಿವಳಿಕೆಗಳಿಂದ. ಹೊರಜಗತ್ತಿನಲ್ಲಿ ಯಾವುದು ಸಕ್ಸಸ್ ಆಗಿದೆಯೋ ಅದನ್ನು ದೆಹಲಿಗೆ ಅಳವಡಿಸಲಾಯಿತು. ಯಾವ ವಿಷಯವನ್ನೂ ಅದು ಕಡೆಗಣಿಸಲಿಲ್ಲ. ಕರೋನಾ ಆರಂಭದಲ್ಲಿ ದೆಹಲಿಯಲ್ಲಿ ಇದ್ದ ಆಂಬ್ಯಲೆನ್ಸ್ ಗಳ ಸಂಖ್ಯೆ 134. ಈಗ ಅದು 600 ದಾಟಿದೆ. ದೇಶದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದ್ದು ದೆಹಲಿ. ಸ್ವತಃ ಕೇಜ್ರೀವಾಲ್ ಪ್ಲಾಸ್ಮಾ ಡೊನೇಷನ್ ಗೆ ಮೇಲಿಂದ ಮೇಲೆ‌ ಮನವಿ‌ ಮಾಡಿದ್ದರಿಂದಾಗಿ ಸೋಂಕಿನಿಂದ ಬಿಡುಗಡೆಯಾದವರು ಸ್ವ ಇಚ್ಛೆಯಿಂದ ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ.

ಅಂದಹಾಗೆ ದೆಹಲಿ ಕರೋನಾ ವಿರುದ್ಧ ಯುದ್ಧ ವನ್ನು ಜಯಿಸಿಯೇ ಬಿಟ್ಟಿದೆ ಎಂದೇನು ಭಾವಿಸಬೇಕಿಲ್ಲ. ದೆಹಲಿ ಅತ್ಯಂತ ಪರಿಣಾಮಕಾರಿಯಾಗಿ ಕರೋನಾವನ್ನು ಎದುರಿಸುತ್ತಿದೆ ಮತ್ತು ಸರಿಯಾದ ದಾರಿಯಲ್ಲಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಕರೋನ ನಮಗೆ ಹೊಸ ಅನುಭವ. ಟ್ರಯಲ್ ಅಂಡ್ ಎರರ್ ಗಳ ನಂತರವೇ ನಾವು ಎದ್ದುನಿಲ್ಲಬೇಕಿರುವುದು. ದೆಹಲಿ ಹಾಗೆ ಎದ್ದುನಿಂತಿದೆ.

ಬರುವ ದಿನಗಳಲ್ಲಿ ದೇಶದ ಇತರೆಲ್ಲ ರಾಜ್ಯಗಳೂ ದೆಹಲಿಯನ್ನು ಅನುಸರಿಸುವ ಸಾಧ್ಯತೆಗಳು ಇವೆ. ಕರೋನಾ ಆರಂಭದ ದಿನಗಳಲ್ಲಿ ಕಾಂಟ್ರಾಕ್ಟ್ ಟ್ರೇಸಿಂಗ್, ಇಂಡೆಕ್ಸಿಂಗ್, ಐಸೋಲೇಷನ್ ವಿಷಯದಲ್ಲಿ ಕೇರಳ, ಕರ್ನಾಟಕ ಮಾದರಿಯಾಗಿದ್ದವು. ಕರೋನಾ ಸಮುದಾಯಕ್ಕೆ ಭಾಗಶಃ ಹಬ್ಬಿದಾಗ ಏನು ಮಾಡಬೇಕೆಂಬುದನ್ನು ದೆಹಲಿ ತೋರಿಸಿಕೊಟ್ಟಿದೆ.

  • ದಿನೇಶ್ ಕುಮಾರ್ ಎಸ್.ಸಿ.
Please follow and like us:
error