ಕರೋನಾ ವೈರಸ್ ಮತ್ತು ರೆಮ್ಡಿಸಿವಿರ್ ಎಂಬ ಟ್ರಬಲ್ ಶೂಟರ್…

ಕರೋನಾ ಜತೆ ಜಗತ್ತು ಹೆಣಗಾಡುತ್ತಿದೆ. ನಿಧಾನವಾಗಿ ನಾವು ಕೋವಿಡ್-19ರ ಜತೆ ಬದುಕುವುದನ್ನು ಕಲಿತಿದ್ದೇವೆ. ನಮಗೆ ಉಳಿದಿರುವ ಆಯ್ಕೆಯಾದರೂ ಏನಿತ್ತು? ಒಂದೇ ಕರೋನಾದಿಂದ ಸಾಯಬೇಕು‌ ಅಥವಾ ಕರೋನಾದೊಂದಿಗೆ ಬದುಕಬೇಕು. ಇದು ನಮ್ಮ ಪಾಡಾದರೆ, ಜಗತ್ತಿನ ವೈದ್ಯಸಂಕುಲದ ವ್ಯಾಕುಲ ಇನ್ನೂ ದೊಡ್ಡದು. ಧುತ್ತನೆರಗಿ ಬಂದ ವಿನಾಶಕಾರಿ ವೈರಸ್ ಎದುರಿಸಲು ಅದು ಯಾವ ರೀತಿಯಲ್ಲೂ ತಯಾರಾಗಿರಲಿಲ್ಲ. ಆದರೆ ಬಂದ ಸವಾಲು ಎದುರಿಸಲೇಬೇಕಿತ್ತು, ಓಡಿ ಹೋಗಿ ಬಚ್ಚಿಟ್ಟುಕೊಳ್ಳಲು ಸಾಧ್ಯವೇ? ಸಾವಿಗೆ ಎದೆಗೊಟ್ಟು ನಿಂತು ರೋಗಿಗಳ ಚಿಕಿತ್ಸೆಗೆ ಇಳಿದ ಎಷ್ಟೋ ವೈದ್ಯರು, ದಾದಿಯರು, ಸಹಾಯಕ ಸಿಬ್ಬಂದಿ ಬಲಿಯಾಗಿಹೋದರು. ಆದರೂ ಯುದ್ಧರಂಗದಿಂದ ಕದಲುವಂತಿಲ್ಲ. ಕರೋನಾಗೆ ಉತ್ತರ ಕಂಡುಕೊಳ್ಳಲು ಸಾವಿರಾರು ಬಗೆಯ ಸಂಶೋಧನೆಗಳು ನಡೆದವು. ಔಷಧಿ ಕಂಡುಕೊಳ್ಳುವುದರಿಂದ ಹಿಡಿದು ವ್ಯಾಕ್ಸಿನ್ ತಯಾರಿಕೆಯವರೆಗೆ! ಯಾವುದೂ ಇನ್ನೂ ಪರಿಪೂರ್ಣವಾದ ಪರಿಹಾರವನ್ನು ನೀಡಿಲ್ಲ.

ಕರೋನಾಗಾಗಿಯೇ ಇದುವರೆಗೆ ಯಾವುದೇ ಹೊಸ ಔಷಧಿ ಕಂಡುಹಿಡಿಯಲಾಗಿಲ್ಲ.‌ ನೂರಕ್ಕೆ ನೂರು ಸಕಾರಾತ್ಮಕ ಫಲಿತಾಂಶ ನೀಡಬಹುದಾದ ಯಾವ ಔಷಧಿಯೂ ನಮ್ಮಲಿಲ್ಲ. ವ್ಯಾಕ್ಸಿನ್ ತಯಾರಿಸುವುದೇನೋ ಸುಲಭ, ಆದರೆ ಅದರ ಕ್ಲಿನಿಕಲ್ ಟ್ರಯಲ್ ಗಳು ಮುಗಿದು ಜನಸಾಮಾನ್ಯರನ್ನು ತಲುಪಲು ವರ್ಷಗಳು ಬೇಕು. ಅಲ್ಲಿಯವರೆಗೆ ರೋಗಿಗಳನ್ನು ಉಪಚರಿಸುವುದಾದರೂ ಹೇಗೆ?

ನೀವು ರೆಮ್ಡಿಸಿವಿರ್ ಹೆಸರು ಕೇಳಿರಬಹುದು ಅಥವಾ ಕೇಳದೆಯೂ ಇರಬಹುದು. ಜಗತ್ತಿನಾದ್ಯಂತ ಇಂದು ಕ್ರಿಟಿಕಲ್ ಕಂಡಿಷನ್ ನಲ್ಲಿರುವ ಕರೋನಾ ರೋಗಿಗಳಿಗೆ ಬಳಸಲಾಗುತ್ತಿರುವ ಮದ್ದು ರೆಮ್ಡಿಸಿವಿರ್. ಈ Antiviral ಮೆಡಿಸಿನ್ ಕರೋನಾಗೆ ರಾಮಬಾಣವೇನಲ್ಲ, ಆದರೆ ಚಿಂತಾಜನಕ ಸ್ಥಿತಿ ತಲುಪಿದ ಕರೋನಾ ರೋಗಿಗಳ ಸಾವಿನ ಪ್ರಮಾಣವನ್ನು ಅದು ತಗ್ಗಿಸಿದೆ, ಹೀಗಾಗಿ ಜಗತ್ತಿನ ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ರೆಮ್ಡಿಸಿವರ್ ಈಗ ಬಳಸಲಾಗುತ್ತಿದೆ. ವೆಕ್ಲೂರಿ ಎಂಬ ಬ್ರಾಂಡ್ ಹೆಸರಿನೊಂದಿಗೆ ಮಾರುಕಟ್ಟೆಯಲ್ಲಿರುವ ರೆಮ್ಡಿಸಿವಿರ್ ಈಗ ಕರೋನಾ ರೋಗಿಗಳನ್ನು ಉಪಚರಿಸುತ್ತಿರುವ ವೈದ್ಯರ ನೆಚ್ಚಿನ ಔಷಧಿ. ತಮಾಶೆ ಎಂದರೆ ಇದನ್ನು ತಯಾರಿಸಿದ್ದು ಹೆಪಟೈಟಿಸ್-ಬಿ ರೋಗ ನಿವಾರಣೆಗೆ. ಆದರೆ ಅದು ಹೆಪಟೈಟಿಸ್ ತಡೆಯಲು ಯಶಸ್ವಿಯಾಗಲಿಲ್ಲ. ನಂತರ ಎಬೋಲಾ ಬಂದಾಗ ಮತ್ತೆ ಬಳಸಲಾಯಿತು, ಟ್ರಯಲ್ ಹಂತದಲ್ಲೇ ಅದು ವಿಫಲವಾಯಿತು. ಇನ್ನಷ್ಟು ವೈರಲ್ ಖಾಯಿಲೆಗಳಿಗೂ ರೆಮ್ಡಿಸಿವಿರ್ ಪ್ರಯೋಜನಕ್ಕೆ ಬರಲಿಲ್ಲ. ಆದರೆ ಆಶ್ಚರ್ಯವೆಂದರೆ ಅದು ಪವಾಡದಂತೆ ಹೊಸ ಕರೋನಾ (ಸಾರ್ಸ್ ಕೋವಿಡ್ 19) ರೋಗಿಗಳನ್ನು ಪರಿಣಾಮಕಾರಿಯಾಗಿ ಉಪಚರಿಸುತ್ತಿದೆ!

ಕರೋನಾ ಶುರುವಾದ ಕಾಲದಲ್ಲಿ ನೀವು ನಾವೆಲ್ಲ ಹೆಚ್ಚುಹೆಚ್ಚು ಕೇಳಿದ ಔಷಧಿಯ ಹೆಸರು ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮಲೇರಿಯಾ ಔಷಧಿ. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಔಷಧಿಯ ಬೆನ್ನು ಬಿದ್ದರು‌. ಹೈಡ್ರಾಕ್ಸಿಕ್ಲೋರೋಕ್ವಿನ್ ತಯಾರಿಸುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಬೇಗ ಔಷಧಿಯನ್ನು ಅಮೆರಿಕಕ್ಕೆ ಕಳುಹಿಸಬೇಕೆಂದು ತಾಕೀತುಮಾಡಿದರು. ಒಂದು ವೇಳೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕಳುಹಿಸದೇ ಇದ್ದರೆ ಭಾರತದ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಧಮಕಿ ಹಾಕಿದರು. ಆದರೆ ಮೂರ್ಖ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಜವಾಗಿಯೂ ಕರೋನಾ ರೋಗಿಗಳನ್ನು ಗುಣಪಡಿಸುತ್ತದೆಯೇ ಎಂಬುದನ್ನು ಸರಿಯಾಗಿ ತಿಳಿದುಕೊಂಡಿರಲಿಲ್ಲ. ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯಿಂದ ರೋಗಿ ಗುಣವಾಗುವುದಕ್ಕಿಂತ ಹೆಚ್ಚಾಗಿ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳು ಹೇಳಿದವು. ಅಷ್ಟರೊಳಗೆ ಭಾರತದ ಮಾರಿಕೊಂಡ ಮಾಧ್ಯಮಗಳು, ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬುದು ಹನುಮಂತ (ಮೋದಿ) ಹೊತ್ತು ತಂದ ಸಂಜೀವಿನಿ ಪರ್ವತದಂತೆ ಎಂದೂ, ನರೇಂದ್ರ ಮೋದಿ ಬಳಿ ಅಮೆರಿಕ ಅಧ್ಯಕ್ಷ ಭಿಕ್ಷೆ ಬೇಡುತ್ತಿದ್ದಾರೆ ಎಂದೂ ಭಜನೆ ಶುರುಹಚ್ಚಿಕೊಂಡಿದ್ದವು. ಆದರೆ ಹೈಡ್ರಾಕ್ಸಿಕ್ಲೋರೋಕ್ವಿನ್ ಆಟ ಕರೋನಾದ ಎದುರು ನಡೆಯುವುದಿಲ್ಲವೆಂದು ಗೊತ್ತಾದಮೇಲೆ ಟ್ರಂಪ್ ನಿಂದ ಹಿಡಿದು ಇಂಡಿಯಾದ ಗೋದಿ ಮೀಡಿಯಾ ಪ್ರಭೃತಿಗಳವರೆಗೆ ಎಲ್ಲರೂ ಬಾಯಿ ಮುಚ್ಚಿಕೊಂಡರು.

ಈ ಹುಚ್ಚಾಟಗಳು ಏನೇ ಇರಲಿ, ವೈದ್ಯಕೀಯ ಜಗತ್ತು ಒಂದಾದ ಮೇಲೊಂದರಂತೆ ಆಂಟಿ ವೈರಲ್ ಔಷಧಿಗಳನ್ನು ಬಳಸುತ್ತ, ಪ್ರಯೋಗಗಳಿಗೆ ಒಳಪಡಿಸುತ್ತ ಬಂದಿತು. ಈ ಪೈಕಿ ಉಸಿರಾಟದ ತೊಂದರೆಗೆ ಒಳಗಾಗಿ ಹೆಚ್ಚುವರಿ ಆಮ್ಲಜನಕದ ಸಹಾಯ ಪಡೆಯುವ ರೋಗಿಗಳಿಗೆ ಅನುಕೂಲಕರವಾಗಿ ಒದಗಿಬಂದಿದ್ದು ರೆಮ್ಡಿಸಿವಿರ್ ಮತ್ತು ಡೆಕ್ಸಾಮೆಥಸೋನ್. ಡೆಕ್ಸಾಮೆಥಸೋನ್ ಆಂಟಿ‌ವೈರಲ್ ಔಷಧಿಯಲ್ಲ, ಅದು ಒಂದು ಬಗೆಯ ಸ್ಟಿರಾಯ್ಡ್, Anti Inflammatory ಔಷಧಿ. ಕರೋನಾ ಎದುರಿಸಲು ಹುಚ್ಚುಹುಚ್ಚಾಗಿ ವರ್ತಿಸಿ ಆರೋಗ್ಯವಂತ ಕಣಗಳನ್ನು ಕೊಂದುಹಾಕುವ ಇಮ್ಯೂನ್ ವ್ಯವಸ್ಥೆಯನ್ನು ಸರಿಪಡಿಸುವ ಔಷಧಿ. ದೇಹದಲ್ಲಿ ಇಮ್ಯೂನ್ ವ್ಯವಸ್ಥೆಯಿರುವುದು ಒಳಗೆ ಪ್ರವೇಶಿಸುವ ಅಪಾಯಕಾರಿ ಬ್ಯಾಕ್ಟೀರಿಯ, ವೈರಸ್ ಗಳನ್ನು ಕೊಲ್ಲುವ ಸಲುವಾಗಿ. ಆದರೆ ಈ ಇಮ್ಯೂನ್ ವ್ಯವಸ್ಥೆ ಅತಿಯಾಗಿ ಪ್ರತಿಕ್ರಿಯಿಸಿದಾಗ ಅದು ದೇಹದ ಆರೋಗ್ಯವಂತ ಕಣಗಳನ್ನೇ ನಾಶಪಡಿಸುತ್ತದೆ. ಸತ್ತ ಕಣಗಳು ಪ್ರವಾಹದಂತಾಗಿ ರಕ್ತನಾಳಗಳನ್ನು ಹಾಳುಗೆಡಹುತ್ತವೆ. ಇದನ್ನೇ ಸೈಟೋಕೈನ್ ಸ್ಟಾರ್ಮ್ ಎನ್ನುತ್ತಾರೆ. ಹಲವು ಬಗೆಯ ಪರೀಕ್ಷೆಗಳ ಮೂಲಕ ಈ ಸೈಟೋಕೈನ್ ಚಂಡಮಾರುತವನ್ನು ಈಗ ಗುರುತಿಸಲಾಗುತ್ತಿದೆ. ಡೆಕ್ಸಾಮೆಥಸೋನ್ ಇಂಥ ಸೈಟೋಕೈನ್ ಸ್ಟಾರ್ಮ್ ತಡೆಗಟ್ಟುತ್ತದೆ. ನಮ್ಮ ದೇಹದ ಒಳಗಿನ ರೋಗ ನಿರೋಧಕ ವ್ಯವಸ್ಥೆ ಹುಚ್ಚುಹುಚ್ಚಾಗಿ ವರ್ತಿಸದಂತೆ ನಿಯಂತ್ರಿಸುತ್ತದೆ. ಬ್ರಿಟನ್ ನಲ್ಲಿ ನಡೆದ ಅಧ್ಯಯನವೊಂದು ಡೆಕ್ಸಾಮೆಥಸೋನ್ ವೆಂಟಿಲೇಟರ್ ಬಳಸುತ್ತಿರುವ ಕೋವಿಡ್ ರೋಗಿಗಳ ಸಾವಿನ ಪ್ರಮಾಣವನ್ನು ಶೇ. 35ರಷ್ಟು, ಹೆಚ್ಚುವರಿ ಆಮ್ಲಜನಕ ಬಳಸುತ್ತಿರುವ ರೋಗಿಗಳ ಸಾವಿನ ಪ್ರಮಾಣವನ್ನು ಶೇ. 20ರಷ್ಟು ಇಳಿಕೆ ಮಾಡಿರುವುದಾಗಿ ಹೇಳಿತು.

ಡೆಕ್ಸಾಮೆಥಸೋನ್ ನೇರವಾಗಿ ವೈರಸ್ಸನ್ನು ಕೊಲ್ಲುವುದಿಲ್ಲ. ಅದು ದೇಹದ ಅತಿಯಾದ ಪ್ರತಿಕ್ರಿಯೆಯನ್ನಷ್ಟೇ ತಡೆಯುತ್ತದೆ. ಆದರೆ ವೈರಸ್ ಮೇಲೆ ನೇರವಾಗಿ ದಾಳಿ ಮಾಡುವ ಔಷಧಿ ಬೇಕಿತ್ತಲ್ಲ, ಈ ಕೆಲಸವನ್ನು ಮಾಡುತ್ತಿರುವುದು ರೆಮ್ಡಿಸಿವಿರ್. ಗಿಲ್ಯಾಡ್ (Gilead) ಎಂಬ ಔಷಧಿ ತಯಾರಿಕಾ ಸಂಸ್ಥೆ ರೆಮ್ಡಿಸಿವಿರ್ ತಯಾರಿಸುತ್ತದೆ. ಮೇ.1ರಂದು ಅಮೆರಿಕ ರೆಮ್ಡಿಸಿವಿರ್ ಬಳಕೆಗೆ ಅನುಮತಿ ನೀಡಿತು. ಭಾರತ, ಸಿಂಗಪುರ, ಪಾಕಿಸ್ತಾನ, ಜಪಾನ್, ಬ್ರಿಟನ್ ಗಳು ಅಮೆರಿಕವನ್ನು ಅನುಸರಿಸಿ ರೆಮ್ಡಿಸಿವಿರ್ ಗೆ ಒಪ್ಪಿಗೆ ನೀಡಿದವು. ಈಗ ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ರೆಮ್ಡಿಸಿವಿರ್ ಬಳಕೆಯಾಗುತ್ತಿದೆ. ಮೊನ್ನೆ ಮೊನ್ನೆ ತಾನೇ ಕರೋನಾ ಪಾಜಿಟಿವ್ ಆಗಿದ್ದ ಡೊನಾಲ್ಡ್ ಟ್ರಂಪ್ ಗೆ ಬಳಕೆಯಾಗಿದ್ದು ಅವರೇ ಪ್ರಮೋಟ್ ಮಾಡಿದ ಹೈಡ್ರಾಕ್ಸಿಕ್ಲೋರೋಕ್ವಿನ್ ಅಲ್ಲ, ಬದಲಾಗಿ ಇದೇ ರೆಮ್ಡಿಸಿವಿರ್.

ರೆಮ್ಡಿಸಿವಿರ್ ವಿಶೇಷವೆಂದರೆ ಅದು ರೋಗಲಕ್ಷಣವೇ ಇಲ್ಲದ ಅಥವಾ ಸಣ್ಣ ಕೆಮ್ಮು, ಜ್ವರದಂಥ ಸಣ್ಣಪುಟ್ಟ ರೋಗಲಕ್ಷಣಗಳು ಇರುವ ರೋಗಿಗಳಿಗೆ ಉಪಯೋಗವಾಗುವುದಿಲ್ಲ. ವಾಸ್ತವವಾಗಿ ಕೋವಿಡ್ ಪಾಜಿಟಿವ್ ಆದ ಶೇ. 95ರಷ್ಟು ಮಂದಿಗೆ ರೆಮ್ಡಿಸಿವಿರ್ ಸೇರಿದಂತೆ ಯಾವ ಆಂಟಿ ವೈರಲ್ ಔಷಧಿಯೂ ಬೇಕಾಗಿರುವುದಿಲ್ಲ. ಆದರೂ ಈಗೀಗ ರೋಗಿಗಳು ಮತ್ತು ವೈದ್ಯರ ಸಮಾಧಾನಕ್ಕಾಗಿ ಫ್ಯಾಬಿಫ್ಲೂ, ಟ್ಯಾಮಿಫ್ಲೂ ಥರದ ಆಂಟಿವೈರಲ್ ಮಾತ್ರೆಗಳನ್ನೂ, ಅಜಿತ್ರೋನೈಸಿನ್ ಥರದ ಆಂಟಿ ಬಯಾಟಿಕ್ ಗಳನ್ನು ನೀಡಲಾಗುತ್ತಿದೆ. ಇನ್ನು ಉಸಿರಾಟದ ತೊಂದರೆ ಇದ್ದು, ಆಕ್ಸಿಮೀಟರ್ ನಲ್ಲಿ ಆಕ್ಸಿಜನ್ ಪ್ರಮಾಣ ಶೇ. 95ಕ್ಕಿಂತ ಕಡಿಮೆ ತೋರಿದರೆ ಅವರಿಗೆ ಹೆಚ್ಚುವರಿ ಆಕ್ಸಿಜನ್ ಒದಗಿಸಬೇಕಾಗುತ್ತದೆ. ಇಂಥ ರೋಗಿಗಳು ಮತ್ತು ಕೃತಕ ಉಸಿರಾಟದ ವ್ಯವಸ್ಥೆ ಬೇಕಾಗುವ ರೋಗಿಗಳಿಗೆ ರೆಮ್ಡಿಸಿವಿರ್ ಕೊಡಲಾಗುತ್ತಿದೆ.

ರೆಮ್ಡಿಸಿವಿರ್ ಮನೆಯಲ್ಲಿ ಇರುವ ರೋಗಿಗಳಿಗೆ ನೀಡಲಾಗುವುದಿಲ್ಲ‌. ನರದ ಮೂಲಕ ಕೊಡಲಾಗುವ ಇಂಜಕ್ಷನ್ ಅದು. ಹತ್ತು ದಿನಗಳ ಕೋರ್ಸ್. ಈ ಸಂದರ್ಭದಲ್ಲಿ ರೋಗಿಯ ದೇಹದ ಸಕ್ಕರೆಯ ಪ್ರಮಾಣವನ್ನು ಮಾನಿಟರ್ ಮಾಡಬೇಕಾಗುತ್ತದೆ, ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ರಕ್ತದ ಒತ್ತಡವು ಏರಿಳಿತವಾಗದಂತೆ ನಿಗಾ ವಹಿಸಲಾಗುತ್ತದೆ. ಸೈಟೋಕೈನ್ ಚಂಡಮಾರುತ ಎದ್ದೇಳದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಷ್ಟೆಲ್ಲವನ್ನೂ ಮನೆಯಲ್ಲಿ ಮಾಡಲಾಗದು. ಹೀಗಾಗಿ ಆಸ್ಪತ್ರೆಯಲ್ಲಷ್ಟೇ ಈ ಚಿಕಿತ್ಸೆ ಸಾಧ್ಯ.

ಡೆಕ್ಸಾಮೆಥಸೋನ್ ಗೆ ಹೋಲಿಸಿದರೆ ರೆಮ್ಡಿಸಿವಿರ್ ದುಬಾರಿ. ಅಮೆರಿಕದಲ್ಲಿ ನೂರು ಮಿಲಿಗ್ರಾಂ ರೆಮ್ಡಿಸಿವಿರ್ ಬೆಲೆ 3120 ಡಾಲರ್! ಭಾರತದಲ್ಲಿ ರೆಮ್ಡಿಸಿವಿರ್ ನ ಜೆನರಿಕ್ ವರ್ಷನ್ ಬಳಕೆಯಾಗುತ್ತಿರುವುದರಿಂದ ಅದರ ಬೆಲೆ 50 ಡಾಲರ್ ನ ಆಸುಪಾಸಿನಲ್ಲಿದೆ. ಭಾರತದಲ್ಲಿ ಹೆಟೆರೋ ಹೆಲ್ತ್ ಕೇರ್ ಮಾರುಕಟ್ಟೆಗೆ ಬಿಟ್ಟಿರುವ ರೆಮ್ಡಿಸಿವಿರ್ ನ ಜೆನರಿಕ್ ವರ್ಷನ್ ಕೋವಿಫಾರ್ ಬೆಲೆ ನೂರು ಮಿಲಿಗ್ರಾಂಗೆ 5400 ರುಪಾಯಿ. ಸಿಪ್ಲಾ ಕಂಪೆನಿ 4000 ರುಪಾಯಿಗೆ ತನ್ನ ಔಷಧಿ ಮಾರಿದರೆ ಜುಬಿಲಿಯೆಂಟ್ 4700 ರುಪಾಯಿ ಬೆಲೆ ನಿಗದಿಮಾಡಿದೆ. ಜೈಡಸ್ ಅತಿ ಕಡಿಮೆ ಬೆಲೆಗೆ, ಅಂದರೆ 2800 ರುಪಾಯಿಗೆ ಮಾರಾಟ ಮಾಡುತ್ತಿದೆ. ಈ ಎಲ್ಲ ಕಂಪೆನಿಗಳ ನಡುವೆ ಒಂದು ಬಗೆಯ ಬೆಲೆ ಸಮರ ನಡೆಯುತ್ತಿದೆ.‌ ಒಂದುವೇಳೆ ಇಂಡಿಯಾದಲ್ಲಿ ಜೆನರಿಕ್ ವರ್ಷನ್ ಇಲ್ಲದೆ, ನೇರವಾಗಿ ಗಿಲ್ಯಾಡ್ ನಿಂದಲೇ ಖರೀದಿಸುವಂತಿದ್ದರೆ, ಅದರ ಬೆಲೆ ಹೆಚ್ಚುಕಡಿಮೆ 2,50,000 ರುಪಾಯಿಗಳಾಗಿರುತ್ತಿತ್ತು!

ಇಷ್ಟಾಗಿಯೂ ರೆಮ್ಡಿಸಿವಿರ್ ಕರೋನಾ ಮಣಿಸಲು ಬಂದ ಸಂಜೀವಿನಿ ಎಂದು ಹೇಳಲು ಸಾಧ್ಯವಿಲ್ಲ. ರೆಮ್ಡಿಸಿವಿರ್ ಕೊಡಲಾದ ಎಲ್ಲ ರೋಗಿಗಳೂ ಬದುಕುತ್ತಾರೆ ಎಂದು ಹೇಳಲಾಗದು, ಇದು ಸಾವಿನ ಪ್ರಮಾಣ ತಗ್ಗಿಸಿದೆ ಎಂಬುದಷ್ಟೇ ಸತ್ಯ. ಇತರ ಎಲ್ಲ ಔಷಧಿಗಳ ಹಾಗೆಯೇ ರೆಮ್ಡಿಸಿವಿರ್ ಕೂಡ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು, ವಿಶೇಷವಾಗಿ liver inflammation. ರೆಮ್ಡಿಸಿವಿರ್ ವೆಂಟಿಲೇಟರ್ ಮೇಲಿರುವ ರೋಗಿಗಳಿಗಿಂತ ಆಕ್ಸಿಜನ್ ಪಡೆಯುತ್ತಿರುವ ರೋಗಿಗಳ ಮೇಲೇ ಹೆಚ್ಚು ಪರಿಣಾಮಕಾರಿಯಾಗಿದೆ. ಅದರ ಅರ್ಥ ತೀರಾ ಚಿಂತಾಜನಕ ರೋಗಿಗಳಿಗಿಂದ ಕಡಿಮೆ ಅಪಾಯದಲ್ಲಿರುವ ರೋಗಿಗಳಿಗೆ ಇದು ಫಲಕಾರಿಯಾಗಿದೆ. ಹೀಗಾಗಿ ಇದನ್ನು ಹನುಮಂತ ಹೊತ್ತುತಂದ ಸಂಜೀವಿನಿ ಎಂದೋ, ಮ್ಯಾಜಿಕ್ ಬುಲೆಟ್ ಎಂದೋ ಬಣ್ಣಿಸುವ ಅಗತ್ಯವಿಲ್ಲ.

ಎಂಥ ವಿಚಿತ್ರ ನೋಡಿ, ಎಂದೋ ಇನ್ಯಾವುದೋ ಖಾಯಿಲೆಗೆ ತಯಾರಿಸಲಾದ ಔಷಧಿಗಳು ಇಂದು ನಂಬುಗೆಯ ಅಸ್ತ್ರಗಳಾಗಿವೆ. ಅರವತ್ತರ ದಶಕದಲ್ಲೇ ತಯಾರಾದ ಡೆಕ್ಸಾಮೆಥಸೋನ್ ಈಗ ದಿಢೀರನೆ ಚಾಲ್ತಿಗೆ ಬಂದಿದೆ. ಆರಂಭದಲ್ಲಿ ಅದು ಅತಿಯಾದ ಅಲರ್ಜಿ, ಆಸ್ತಮಾದಂಥ ರೋಗಗಳಿಗೆ ಬಳಕೆಯಾಗುತ್ತಿತ್ತು. ಹಾಗೆಯೇ ರೆಮ್ಡಿಸಿವಿರ್ ಬೇರೆ ಬೇರೆ ವೈರಲ್ ಖಾಯಿಲೆಗಳಿಗೆ ಬಳಕೆಯಾಗಿ ದಯನೀಯವಾಗಿ ವಿಫಲಗೊಂಡಿದ್ದ ಆಂಟಿ ವೈರಲ್ ಔಷಧಿ. ಆದರೆ ಕರೋನಾ‌ ವಿರುದ್ಧದ ಸಮರದಲ್ಲಿ ಮುಂಚೂಣಿ ಯೋಧರಾಗಿ ಈ ಔಷಧಿಗಳೇ ಕೆಲಸ ಮಾಡುತ್ತಿವೆ. ಡೆಕ್ಸಾಮೆಥಸೋನ್ ಮತ್ತು ರೆಮ್ಡಿಸಿವಿರ್ ಎರಡನ್ನೂ ಸಂಯೋಜನೆಯ ಮೂಲಕ ರೋಗಿಗಳಿಗೆ ನೀಡುವ ಪ್ರಯತ್ನಗಳೂ ಯಶಸ್ವಿಯಾಗಿವೆ ಎಂದು ಅಧ್ಯಯನಗಳು ಹೇಳುತ್ತಿವೆ. ಅದೂ ಕೂಡ ಒಳ್ಳೆಯ ಸುದ್ದಿಯೇ.

ರೆಮ್ಡಿಸಿವರ್ ಮತ್ತು ಡೆಕ್ಸಾಮೆಥಸೋನ್ ರಾಮಬಾಣಗಳಲ್ಲ ನಿಜ, ಆದರೆ ಏನೂ ಇಲ್ಲದೇ ಇರುವುದಕ್ಕಿಂತ ಏನಾದರೂ ಒಂದು ಇರುವುದು ಒಳ್ಳೆಯದಲ್ಲವೇ? ಕರೋನಾಗೆ ನೂರಕ್ಕೆ ನೂರು ಫಲಿತಾಂಶ ನೀಡುವ ಔಷಧಿ ಇಲ್ಲದೇ ಇದ್ದರೂ ಸಾವಿನ ಪ್ರಮಾಣವನ್ನು ನಿಯಂತ್ರಿಸಿರುವ ಈ ಔಷಧಿಗಳು ಇರುವುದು ಸಮಾಧಾನದ ವಿಷಯವಲ್ಲವೇ?

ತಮಾಶೆ ಎಂದರೆ ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ಇದುವರೆಗೆ ರೆಮ್ಡಿಸಿವಿರ್ ಮತ್ತು ಡೆಕ್ಸಾಮೆಥಸೋನ್ ಬಗ್ಗೆ ಇದುವರೆಗೆ ಸುದ್ದಿ ಮಾಡಿದ ಹಾಗಿಲ್ಲ. ಅವರಿಗೆ ಹನುಮಂತ ಸಂಜೀವಿನಿ ಪರ್ವತ ಹೊತ್ತು ತರುವ ಕಥೆಯೇ ಬೇಕು, ಒಂದು ಭಾಗದಲ್ಲಿ ಮೋದಿಯ ಫೊಟೋ ಹಾಕಿ ವಿಜೃಂಭಿಸುವಂತಿರಬೇಕು. ಆದರೆ ಈ ಔಷಧಿಗಳ ವಿಷಯದಲ್ಲಿ ಅದು ಸಾಧ್ಯವಿಲ್ಲ. ಹಾಗಾಗಿ ಈ ಔಷಧಿಗಳ ಕುರಿತು ಅವು ಮಾತೇ ಆಡುತ್ತಿಲ್ಲ.

  • ದಿನೇಶ್ ಕುಮಾರ್ ಎಸ್.ಸಿ.
Please follow and like us:
error