ಕರೋನಾದಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಪರದಾಟ!

ಕೊಪ್ಪಳ: ನಗರದ ಗೌರಿಅಂಗಳ ಪ್ರದೇಶದ ನಿವಾಸಿಯೊಬ್ಬರು ಕೋವಿಡ್-19‌ನಿಂದಾಗಿ ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಪರದಾಡಿದ ಘಟನೆ ಶುಕ್ರವಾರ ಕೊಪ್ಪಳದ ಗವಿಮಠ ಹಿಂಭಾಗದ ರುದ್ರ ಭೂಮಿಯಲ್ಲಿ‌ ಜರುಗಿದೆ.

ಆರೋಗ್ಯ‌ ಇಲಾಖೆ ಸಿಬ್ಬಂದಿ ಸರಕಾರದ ನಿಯಮ, ಮಾರ್ಗಸೂಚಿಗಳನ್ವಯ ಶವವನ್ನು ರುದ್ರಭೂಮಿಗೆ ತಂದಿದ್ದಾರೆ. ಕಳೆದೆರಡು ದಿನಗಳಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಶುಕ್ರವಾರವೂ ವರ್ಷಧಾರೆ ಜೋರಾಗಿಯೇ ಇತ್ತು. ರಸ್ತೆಯಿಂದ ರುದ್ರಭೂಮಿ ಸಮತಟ್ಟಾಗಿದ್ದರೆ ಅಥವಾ ಮಳೆ ನೀರಿನ ಹರಿವಿಗೆ ಸಮರ್ಪಕ ಮಾರ್ಗವಿದ್ದರೆ ಬಹುಶಃ ಶವಸಂಸ್ಕಾರಕ್ಕೆ ತೊಂದರೆ ಆಗುತ್ತಿರಲಿಲ್ಲವೇನೋ? ಆದರೆ ರುದ್ರಭೂಮಿಯು ರಸ್ತೆಯ ಕೆಳಭಾಗದಲ್ಲಿರುವುದರಿಂದ ಮಳೆ ನೀರೆಲ್ಲ ರುದ್ರಭೂಮಿಯೊಳಗೆ ಪ್ರವೇಶಿಸಿ ಶವ ಸುಡುವುದಕ್ಕಾಗಿ ಕಟ್ಟಿಗೆ ಹಾಕಲು ಸ್ಥಳ ಇಲ್ಲದಂತಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡಬೇಕಾಯಿತು.

ಈ ಘಟನೆಯನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸರಕಾರ ಗಮನಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ವೀರಣ್ಣ ಸೊಂಡೂರು ಅವರು, ಇತ್ತಿಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು ಸ್ಮಶಾನಗಳಿಗೆ ಜಾಗ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದು‌ ಒಂದು ಕಡೆಗಿರಲಿ, ಇದ್ದ ಸ್ಮಶಾನವನ್ನೇ ಉಳಿಸಿಕೊಳ್ಳುವತ್ತ ಜಿಲ್ಲಾಡಳಿತ ಗಮನ ಹರಿಸಲಿ ಎಂದರು.

Please follow and like us:
error