ಕರವೇ ಭಿತ್ತಿಪತ್ರ ಚಳವಳಿಗೆ ಸಾರಸ್ವತ ಲೋಕದ ಬೆಂಬಲ

ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಉಳಿಸುವ ಆಂದೋಲನದ ಅಂಗವಾಗಿ ಇಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ ‘ಭಿತ್ತಿಪತ್ರ ಚಳವಳಿ’ ಗೆ ಮೊದಲ ದಿನವೇ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಶೋಧನಾ ಕ್ಷೇತ್ರದ ಗಣ್ಯರು ವ್ಯಾಪಕವಾಗಿ ಬೆಂಬಲಿಸಿದ್ದು, ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ #ಕನ್ನಡವಿವಿಉಳಿಸಿ ಎಂಬ ಟ್ವಿಟರ್ ಅಭಿಯಾನ ನಡೆಸಿದ್ದಷ್ಟೇ ಅಲ್ಲದೆ, ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದ ನಿಯೋಗ ಉಪಮುಖ್ಯಮಂತ್ರಿ ಹಾಗು ಉನ್ನತಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಅವರನ್ನು ಭೇಟಿಯಾಗಿ ಹಂಪಿ ಕನ್ನಡ ವಿವಿಗೆ ಅಗತ್ಯ ಅನುದಾನ ಒದಗಿಸುವುದರ ಜತೆಗೆ, ವಿಶ್ವವಿದ್ಯಾಲಯ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಬೇಕೆಂದು ಒತ್ತಾಯಿಸಿದ್ದರು. ಸಚಿವರು ಕೂಡಲೇ ಅನುದಾನ ನೀಡುವ ಭರವಸೆ ನೀಡಿದರೂ ಸಹ, ನಾಲ್ಕು ದಿನಗಳಾದರೂ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದಿನಿಂದ ‘ಭಿತ್ತಿಪತ್ರ’ ಚಳವಳಿ ಹಮ್ಮಿಕೊಂಡಿದೆ. ಸಾವಿರಾರು ಕರವೇ ಕಾರ್‍ಯಕರ್ತರು ಗಣ್ಯರ ಹೇಳಿಕೆಗಳ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡರು.

ಭಿತ್ತಿ ಪತ್ರ ಚಳವಳಿಯಲ್ಲಿ ಕಂಡ, ನಾಡಿನ ಹಲವು ಗಣ್ಯರ ಅಭಿಪ್ರಾಯಗಳು:
ವಿಶ್ವಜ್ಞಾನವನ್ನು ಕನ್ನಡದಲ್ಲಿ ತಂದು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಂಬಂಧದ ವಿವೇಕವನ್ನು ವಿಸ್ತರಿಸಬೇಕಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನವನ್ನು ನೀಡದ ಇರುವ ನಡೆಯು ಕನ್ನಡ ಪರಂಪರೆಯ ಪ್ರಜ್ಞೆಗೆ ಮಾಡುವ ಅವಮಾನ, ಅಷ್ಟೇ ಅಲ್ಲ. ಆಳುವ ವರ್ಗವು ತನಗೆ ತಾನೇ ಮಾಡಿಕೊಳ್ಳುವ ಅವಮಾನ. ಕೂಡಲೇ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅವಮಾನದಿಂದ ಬಿಡುಗಡೆ ಹೊಂದಬೇಕೆಂದು ಒತ್ತಾಯಿಸುತ್ತೇನೆ. ಅನುದಾನ ಬಿಡುಗಡೆಯು ಆದ್ಯತೆಯ ಕೆಲಸವಾಗಬೇಕು. ಅನುಷ್ಠಾನವಾಗಬೇಕು. ಸಂವೇದನಾಶಿಲ ಸ್ವಾಭಿಮಾನವೂ ಅಧ್ಯಯನ ಪರ ಅಭಿಮಾನವೂ ಆಗಬೇಕು.

  • ಪ್ರೊ. ಬರಗೂರು ರಾಮಚಂದ್ರಪ್ಪ

ಭಾರತ ಸರಕಾರ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನವನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ ಬದಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಕನ್ನಡ ವಿಶ್ವವಿದ್ಯಾಲಯದ ಸ್ವರೂಪವನ್ನು ಬದಲಿಸುವ ಯತ್ನಕ್ಕೆ ಮುಂದಾಗಿರುವಂತೆ ತೋರುತ್ತದೆ. ಇದು ನನ್ನ ಅನಿಸಿಕೆ. ಕನ್ನಡ ವಿಶ್ವವಿದ್ಯಾಲಯದ ಏಕಘಟಿಕೀಯ(ಯೂನಿಟರಿ) ಸ್ವರೂಪವನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಸಂಲಗ್ನ(ಅಫಿಲಿಯೇಟಿಂಗ್) ವಿಶ್ವವಿದ್ಯಾಲಯವನ್ನಾಗಿ ಬದಲಿಸುವುದು ಸರಿಯಲ್ಲ.

-ಡಾ.ಕೆ.ವಿ.ನಾರಾಯಣ
ಭಾಷಾಶಾಸ್ತ್ರಜ್ಞರು, ಕನ್ನಡ ಸಂಸ್ಕೃತಿ ಚಿಂತಕರು

ಕನ್ನಡದ ಜಾನಪದ, ಇತಿಹಾಸ, ಪರಂಪರೆಗಳೊಂದಿಗೆ ಈ ನೆಲಮೂಲದ ಆದಿವಾಸಿ, ಅಲೆಮಾರಿಗಳಂತಹ ತಬ್ಬಲಿ ತಳಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ, ಸಂಶೋಧನೆ ಕುರಿತಂತೆ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುವ ಮಹತ್ವದ ಕೆಲಸ ಮಾಡುತ್ತಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ನೀಡದೆ ನಿರ್ಲಕ್ಷಿಸುತ್ತಿರುವುದು ಅಕ್ಷಮ್ಯ. ಇದು ಕನ್ನಡಕ್ಕೆ ಮಾಡುತ್ತಿರುವ ದ್ರೋಹ ಮಾತ್ರವಲ್ಲ, ಕನ್ನಡ ನಾಡು, ನುಡಿ, ಜನತೆಗೆ ಮಾಡುತ್ತಿರುವ ದ್ರೋಹ. ಸರ್ಕಾರಕ್ಕೆ ಕನ್ನಡ ನಾಡಿನ ಬಗ್ಗೆ ಕನಿಷ್ಟ ಕಾಳಜಿ, ಗೌರವವಿದ್ದರೆ ಒಂದು ಕ್ಷಣವೂ ತಡಮಾಡದೆ ಕನ್ನಡ. ವಿ.ವಿ.ಗೆ ಅನುದಾನ ಬಿಡುಗಡೆ ಮಾಡಬೇಕು.
-ಡಾ.ಸಿ.ಎಸ್.ದ್ವಾರಕಾನಾಥ್
ಮಾಜಿ ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ

ಕನ್ನಡ ವಿವಿ ಕನ್ನಡ ಅಸ್ಮಿತೆಯನ್ನು ಕಟ್ಟುವ ಕೆಲಸದ ಒಂದು ಭಾಗ. ಕನ್ನಡ ಸಂಸ್ಕೃತಿಯ ಪರಂಪರೆಯ ಸಂಶೋಧನೆ ಹಾಗೂ ವರ್ತಮಾನದ ಚಿಂತನೆ ನಡೆಸುವುದಕ್ಕಾಗಿ, ದೇಸೀ ಜ್ಞಾನ ಕೋಶವನ್ನು ನಿರ್ಮಿಸುವುದಕ್ಕಾಗಿ ಇರುವ ಕನ್ನಡ ವಿವಿಗೆ ಅನುದಾನದ ಕೊರತೆಯುಂಟಾಗಿರುವುದು ಖಂಡನೀಯ. ಕನ್ನಡ ವಿವಿ ಪೋಷಣೆಗೆ ಸರ್ಕಾರ ತಕ್ಷಣ ಅನುದಾನ ಒದಗಿಸಬೇಕು. ಸಂಸ್ಕೃತ ವಿವಿಗೆ ಇಲ್ಲದ ಅನುದಾನದ ಕೊರತೆ ಕನ್ನಡ ವಿವಿಗೆ ಇದೆಯೆಂದರೆ ಏನರ್ಥ?
-ಡಾ. ಬಂಜಗೆರೆ ಜಯಪ್ರಕಾಶ್
ಸಂಸ್ಕೃತಿ ಚಿಂತಕರು

ಕನ್ನಡ, ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂತಾದವುಗಳ ಸಂಶೋಧನೆಗಾಗಿಯೇ ಉದಿಸಿದ, ಆ ಕ್ಷೇತ್ರಗಳಲ್ಲು ಜ್ಞಾನಸೃಷ್ಟಿ ಮಾಡುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೂ ತಮಗೆ ಸಂಲಗ್ನಗೊಂಡ ನೂರಾರು ಕಾಲೇಜುಗಳು, ಸ್ನಾತಕೋತ್ತರ ವಿಭಾಗಗಳು ಹಾಗೂ ಇತರ ಮೂಲಗಳಿಂದ ಒಂದು ಸೀಮಿತ ಪ್ರಮಾಣದಲ್ಲಿ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಲು ಅವಕಾಶವಿರುವ ರಾಜ್ಯದ ಇತರೇ ವಿಶ್ವವಿದ್ಯಾಲಯಗಳಿಗೂ ವ್ಯತ್ಯಾಸವಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ರಾಜ್ಯ ಸರಕಾರ ಒದಗಿಸುವ ಅನುದಾನ ಮತ್ತು ಕೆಲ ಸಂಘ ಸಂಸ್ಥೆಗಳು ಒದಗಿಸುವ ಸಹಕಾರದಿಂದ ಮಾತ್ರ ಮುನ್ನಡೆಯುತ್ತಿರುವ ಸಂಸ್ಥೆ. ಅದು ಈಗ ತೀವ್ರ ಆರ್ಥಿಕ ಕೊರತೆಯನ್ನು ಅನುಭವಿಸುತ್ತಿರುವದು ಖೇದದ ವಿಷಯ. ಹೊಸ ತಲೆಮಾರಿನ ವಿದ್ವಾಂಸರು ವಿಭಿನ್ನ ನಿಟ್ಟಿನಿಂದ ನಾಡು-ನುಡಿಗಳ ಕುರಿತು ಅಧ್ಯಯನಗೈಯ್ಯ ಬಯಸುವ ಪ್ರಸ್ತುತ ಸಂದರ್ಭದಲ್ಲಿ ಅವರ ಸಂಶೋಧನ ಯೋಜನೆಗಳಿಗೆ, ಸಿಬ್ಬಂದಿಯ ಸಂಬಳಕ್ಕೆ ಕೊರತೆಯುಂಟಾಗುವದು ಬರೀ ಆ ವಿಶ್ವವಿದ್ಯಾಲಯಕ್ಕೆ ಮಾತ್ರವಲ್ಲ, ಕನ್ನಡ ಅಸ್ಮಿತೆಗೆ ಸಂಬಂಧಿಸಿದಂತೆ ಕೂಡ ಕಳವಳಕಾರಿಯಾದುದು.
-ಡಾ. ಅಶೋಕ್ ಶೆಟ್ಟರ್
ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

Please follow and like us:
error