ಕನ್ನಡ ಧ್ವಜ ಹಾರಿಸುತ್ತೇವೆ : ಕೇಳಲು ಎಂಇಎಸ್‌, ಶಿವಸೇನೆಯವರು ಯಾವ ಊರ ದೊಣ್ಣೆ ನಾಯಕರು?- ಹೆಚ್ಡಿಕೆ ಆಕ್ರೋಶ

ಕನ್ನಡ ಧ್ವಜ ವಿರೋಧಿಸಿ ಎಂಇಎಸ್‌, ಶಿವಸೇನೆ ನಡೆಸುವ ಪ್ರತಿಭಟನೆಯನ್ನು ಸಮಾಜವಿದ್ರೋಹಿ, ದೇಶದ್ರೋಹಿ, ಘಾತಕ ಕೃತ್ಯ..

ಬೆಂಗಳೂರು : ನಮ್ಮ ನೆಲ, ನಮ್ಮ ಭಾಷೆ, ನಮ್ಮ ಧ್ವಜ. ಕನ್ನಡ ಮಾತಾಡುತ್ತೇವೆ, ಕನ್ನಡದ ಧ್ವಜ ಹಾರಿಸುತ್ತೇವೆ. ಅದನ್ನು ಕೇಳಲು ಎಂಇಎಸ್‌, ಶಿವಸೇನೆಯವರು ಯಾವ ಊರ ದೊಣ್ಣೆ ನಾಯಕರು? ಇವರ ಬಾಧೆಯಾದರೂ ಏನು? ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗೆ ಇವರು ಇಂದು ನಡೆಸುತ್ತಿರುವ ಪ್ರತಿಭಟನೆ

ಸಮಾಜವಿರೋಧಿ. ಇವರ ಮನಸ್ಸಲ್ಲಿರುವ ವಿಷ ದೇಶದ್ರೋಹಕ್ಕೆ ಸಮ ಎಂದು ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವುದಾಗಿ ಉದ್ಧ(ಟ)ವ ಠಾಕ್ರೆ ಹೇಳಿದ್ದರು. ಬೆಳಗಾವಿಯಲ್ಲಿ ಕಿಡಿಗೇಡಿಗಳು, ಸಮಾಜಘಾತುಕರು ನಡೆಸುತ್ತಿರುವ ಧ್ವಜವಿರೋಧಿ ಹೋರಾಟ ಬೆಂಬಲಿಸುವ ಮೂಲಕ ಶಿವಸೇನೆ ಠಾಕ್ರೆ ಇಚ್ಛೆಯನ್ನು ಜಾರಿಗೆ ತರಲು ಹೊರಟಿದೆ. ನ್ಯಾಯದ ಉದ್ದೇಶವಿಲ್ಲದ ಈ ಹೋರಾಟವನ್ನು ಸರ್ಕಾರ ಮುಲಾಜಿಲ್ಲದೇ ಹತ್ತಿಕ್ಕಬೇಕು.

ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ಜಜ ತೆರವಿಗಾಗಿ ಎಂಇಎಸ್‌, ಶಿವಸೇನೆ ಇಷ್ಟು ಕುತಂತ್ರ ಮಾಡುತ್ತಿದ್ದರೂ, ಬಿಜೆಪಿ ಸರ್ಕಾರದ ಯಾವೊಬ್ಬ ಪ್ರತಿನಿಧಿಯಾಗಲಿ, ಕಾಂಗ್ರೆಸ್‌ನ ಯಾವ ನಾಯಕರಾಗಲಿ ಪ್ರತಿಕ್ರಿಯಿಸಿದ್ದನ್ನು ನಾನು ನೋಡಲಿಲ್ಲ. ಇದೇ ಸಲುಗೆಯಲ್ಲೇ ಉದ್ಧವ ಠಾಕ್ರೆ ಬೆಳಗಾವಿಯಂಥ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಮಾತಾಡಿದ್ದು.

ಈ ಧ್ವಜ ವಿರೋಧಿ ಹೋರಾಟವನ್ನು ರಾಜ್ಯದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ವಿರೋಧಿಸಬೇಕಾಗಿದೆ. ಕನ್ನಡದ ವಿಚಾರಕ್ಕೆ ಮಾತಾಡಲು, ಕನ್ನಡಕ್ಕೆ ಕೈ ಎತ್ತಲು ರಾಜ್ಯದ ನಾಯಕರು ರಾಜಕೀಯ ಮರೆಯಬೇಕು. ಪಕ್ಷ ನೋಡಬಾರದು, ಮಿತ್ರಪಕ್ಷವೆಂದು ಎಣಿಸಬಾರದು, ದೆಹಲಿ ಕಡೆಗೆ ನೋಡಬಾರದು. ಆಗ ಮಾತ್ರ ಇಂಥ ಆಕ್ರಮಣಕಾರಿ ಪ್ರವೃತ್ತಿಗಳನ್ನು ನಾವು ಹತ್ತಿಕ್ಕಲು ಸಾಧ್ಯ.

ಬೆಳಗಾವಿಯಲ್ಲಿ ಇಂದು ಕನ್ನಡ ಧ್ವಜ ವಿರೋಧಿಸಿ ಎಂಇಎಸ್‌, ಶಿವಸೇನೆ ನಡೆಸುವ ಪ್ರತಿಭಟನೆಯನ್ನು ಸಮಾಜವಿದ್ರೋಹಿ, ದೇಶದ್ರೋಹಿ, ಘಾತಕ ಕೃತ್ಯವೆಂದು ಹೇಳಲು ಅಡ್ಡಿಯಿಲ್ಲ. ದೇಶದ ಸಾಮರಸ್ಯಕ್ಕೆ, ಭಾಷಾ ಸೌಹಾರ್ದತೆಗೆ ಈ ಹೋರಾಟ ವಿಷ ಹಿಂಡಲಿದೆ ಎಂಬುದರಲ್ಲಿ ಎರಡು ಮಾತೂ ಇಲ್ಲ. ಇದರ ಹಿಂದೆ ಮಹಾರಾಷ್ಟ್ರ ಇದೆ ಎಂಬುದಕ್ಕೆ ಸಾಕ್ಷಿಯೂ ಬೇಕಿಲ್ಲ ಎಂದು ಹೇಳಿದ್ದಾರೆ.

Please follow and like us:
error