ಕನ್ನಡತನವನ್ನು ದಿಲ್ಲಿ ಹಿಂದೀವಾಲಾಗಳಿಗೆ ಅಡವಿಟ್ಟಿದ್ದಾರೆಯೇ?- ನಾರಾಯಣಗೌಡ್ರ ಆಕ್ರೋಶ

ಶಿವಮೊಗ್ಗದಲ್ಲಿ ನಡೆದ ಸಿಆರ್ ಪಿಎಫ್ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿ ಬ್ಯಾನರುಗಳನ್ನು ಬಳಸಿ, ಹಿಂದಿಯಲ್ಲೇ ನಿರೂಪಣೆ ಮಾಡಿರುವುದನ್ನು ಗಮನಿಸಿದೆ. ಇದು ಬೇರೇನೂ ಅಲ್ಲ, ಕನ್ನಡಿಗರ ಮೇಲೆ ಹಿಂದಿ ಸಾಮ್ರಾಜ್ಯಶಾಹಿಗಳು ಹೂಡಿರುವ ಪರೋಕ್ಷ ಯುದ್ಧ. ಕನ್ನಡತನವನ್ನು ನಾಶಗೊಳಿಸುವ ವ್ಯವಸ್ಥಿತ ದಾಳಿ. ಇದನ್ನು ಕನ್ನಡಿಗರೆಲ್ಲರೂ ಒಟ್ಟಾಗಿ ಖಂಡಿಸಬೇಕಿದೆ ಎಂದು ಕರವೇ ರಾಜ್ಯಾದ್ಯಕ್ಷ ಟಿ.ಎ.ನಾರಾಯಣಗೌಡ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡನಾಡಲ್ಲಿ ಕನ್ನಡವನ್ನೇ ಬಳಸಬೇಕೆಂಬುದು ಯಾವುದೇ ಸರ್ಕಾರಕ್ಕೆ ಇರಬೇಕಾದ ಸಾಮಾನ್ಯ ಪ್ರಜ್ಞೆ. ಇದು ಅವರಿಗೆ ಗೊತ್ತಿಲ್ಲವೆಂದೇನಿಲ್ಲ. ಉದ್ದೇಶಪೂರ್ವಕವಾಗಿಯೇ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುತ್ತಿರುವ ಈ ದುರಹಂಕಾರವನ್ನು ಕನ್ನಡಿಗರು ಸಹಿಸಬೇಕಿಲ್ಲ. ನಾವು ಸಹಸ್ರಾರು ವರ್ಷಗಳಿಂದ ಕನ್ನಡಿಗರು, ಇಂಥ ಹುನ್ನಾರಗಳಿಗೆ ತಲೆಬಾಗುವುದಿಲ್ಲ.

ಕಾರ್ಯಕ್ರಮದಲ್ಲಿ‌ ಮುಖ್ಯಮಂತ್ರಿಗಳಾದಿಯಾಗಿ ಹಲವಾರು ಸಚಿವ ಸಂಪುಟದ ಸದಸ್ಯರು ಭಾಗವಹಿಸಿದ್ದರು. ಯಾರೊಬ್ಬರಿಗೂ ಸಹ ಈ ಕನ್ನಡವಿಲ್ಲದ ಹಿಂದೀಮಯ‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮುಜುಗರ, ನಾಚಿಕೆ ಆಗಲಿಲ್ಲವೇ? ಇವರೆಲ್ಲರೂ ತಮ್ಮ ಕನ್ನಡತನವನ್ನು ದಿಲ್ಲಿ ಹಿಂದೀವಾಲಾಗಳಿಗೆ ಅಡವಿಟ್ಟಿದ್ದಾರೆಯೇ?

ಹಿಂದಿ ಗುಲಾಮಗಿರಿ ಬೇಡ ಟ್ವಿಟರ್ ಅಭಿಯಾನ

ಹಿಂದೀ ಸಾಮ್ರಾಜ್ಯಶಾಹಿ ಹಿಂದೆಂದಿಗಿಂತಲೂ‌ ಇಂದು ಆಕ್ರಮಣಕಾರಿಯಾಗಿದೆ. ಕನ್ನಡಿಗರೇ, ಏನು ಮಾಡ್ತೀರೋ‌ ಮಾಡಿ ನೋಡೋಣ ಎಂದು ಸವಾಲು ಹಾಕುತ್ತಿದೆ. ಈ‌ ಸವಾಲನ್ನು ನಾವು ಎದುರಿಸುತ್ತೇವೆ. ಕನ್ನಡ ನೆಲವನ್ನು, ಕನ್ನಡಿಗರ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತೇವೆ. ಈ ಮರಾಮೋಸದ ಸಮರದಲ್ಲಿ ಗೆದ್ದೇಗೆಲ್ಲುತ್ತೇವೆ.

ಕನ್ನಡಿಗರು ಜಾತಿ, ಮತ, ಧರ್ಮ, ಪಂಥ, ಪಕ್ಷಗಳನ್ನು ಬದಿಗಿಟ್ಟು ಒಂದಾಗಬೇಕಾದ ಕಾಲವಿದು. ಈಗ ನಾವು ಮೈಮರೆತು ಕುಳಿತರೆ ನಮಗೆ ಉಳಿಗಾಲವಿಲ್ಲ. ಕನ್ನಡಿಗರೆಲ್ಲರೂ ಈ ದುಷ್ಟ ಹುನ್ನಾರಗಳ ವಿರುದ್ಧ ಹೋರಾಡೋಣ. ನಾವು ಹಿಂದಿ ಗುಲಾಮರಲ್ಲ‌ ಎಂದು ಸಾರೋಣ. ಹಿಂದಿ ಸಾಮ್ರಾಜ್ಯಶಾಹಿಯ ರಣಕೇಕೆಯನ್ನು ಹಿಮ್ಮೆಟ್ಟಿಸೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ


  • ,
Please follow and like us:
error