ಕನಸಿನ ಮನೆಗೆ ಮರಳಿ ಬಂದ ಒಡತಿ : ಪತ್ನಿಯ ಪ್ರತಿರೂಪ ಸೃಷ್ಟಿಸಿದ ಪತಿ

ಪತಿ ತನ್ನ ಪ್ರೀತಿಯ ಪತ್ನಿಯ ನೆನಪಲ್ಲಿ ಏನು ಮಾಡಬಹುದು ? ತಾಜಮಹಲ್ ಕಟ್ಟದಿದ್ದರೂ ಪತ್ನಿಯ ಕನಸಿನ ಮನೆಯನ್ನು ಕಟ್ಟಿಸಿದ ಪತಿ ಮಾಡಿದ್ದೇನು ಗೊತ್ತಾ?

Kannadanet News,‌ಕೊಪ್ಪಳ
ಈ ಫೋಟೊದಲ್ಲಿರೋದು ಜೀವಂತ ಮಹಿಳೆಯಲ್ಲ, ನೈಜ ರೂಪದ ಪ್ರತಿಮೆ!
ಹೌದು, ಹಾಗಂತಾ ನೀವು ಒಂದೇ ಬಾರಿಗೆ ನಂಬೋದಿಲ್ಲ. ಬದಲಾಗಿ ಈ ಫೋಟೊವನ್ನು ಮತ್ತೊಮ್ಮೆ ದಿಟ್ಟಿಸಿ ನೋಡ್ತಿರಿ. ಆದರೆ, ಕಳೆದ 2017ರ ಜುಲೈನಲ್ಲಿ ಬಾರದ ಲೋಕಕ್ಕೆ ಹೋಗಿದ್ದ ಈ ತಾಯಿ, ಇವರ ಪತಿ ನಿರ್ಮಿಸಿ‌ದ ಹೊಸ ಮನೆಯ ಗೃಹ ಪ್ರವೇಶದ ದಿನ ವಾಪಾಸ್ ಬಂದಿದ್ದಾರೆ.‌ ಹೊಸ ಮನೆಯ ಹಾಲ್ ನಲ್ಲಿ ಕಳಿತು ಅತಿಥಿಗಳನ್ನು ಸ್ವಾಗತಿಸಿದ್ದಾರೆ. ಮಂದಹಾಸದೊಂದಿಗೆ ಸ್ವಾಗತಿಸಿದ ಇವರನ್ನು ‌ಕಂಡ‌ ಮೊದಲ ಕ್ಷಣದಲ್ಲಿ ಎಲ್ಲರೂ ಒಮ್ಮೆ ಶಾಕ್ ಆಗಿದ್ದಾರೆ. ಕೊಪ್ಪಳ ತಾಲೂಕು ಭಾಗ್ಯನಗರದ ಕೂದಲು ಉದ್ಯಮಿ‌ ಶ್ರೀನಿವಾಸ ಗುಪ್ತಾ ತಮ್ಮ ಪ್ರೀತಿಯ ಪತ್ನಿ ಕೆವಿಎನ್ ಮಾಧವಿಯವರ ನೈಜ ರೂಪದ‌ ಗೊಂಬೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಗುಪ್ತಾರ ಪತ್ನಿ ಧರೆಗಿಳಿದು ಬಂದಿರುವಂತಹ ಸಂಧರ್ಬ ಸೃಷ್ಟಿಸಿದ್ದಾರೆ.
ಮನೆ ನಿರ್ಮಿಸಬೇಕು ಎಂಬ ಆಸೆ ಹೊತ್ತಿದ್ದ ಶ್ರೀನಿವಾಸ ಗುಪ್ತಾರ ಪತ್ನಿ ಕಳೆದ 2017ರ ಜುಲೈನಲ್ಲಿ ಮೃತಪಟ್ಟಿದ್ದರು. ರಸ್ತೆ ಅಪಘಾತದಲ್ಲಿ ‌ಮೃತಪಟ್ಟ ಪತ್ನಿಯ ಇಚ್ಚೆಯಂತೆ ಗುಪ್ತಾ ಮನೆ ನಿರ್ಮಿಸಿದ್ದಾರೆ. ಆದರೆ, ಗೃಹ ಪ್ರವೇಶಕ್ಕೆ ಮನೆಯ ಒಡತಿಯೇ ಇಲ್ಲವಲ್ಲ ಎಂಬ ಕೊರಗು ಉದ್ಯಮಿ ಶ್ರೀನಿವಾಸ ಗುಪ್ತಾರಿಗೆ ಕಾಡಿದೆ. ಪತ್ನಿಯ ಅನುಪಸ್ಥಿತಿ ಕಾಡಬಾರದು ಎಂದು ಯೋಚಿಸಿ, ನೈಜ ರೂಪದ ಗೊಂಬೆ ನಿರ್ಮಿಸಲು ಯೋಚಿಸಿ, ಇದನ್ನು ಸಿದ್ದತೆ ಮಾಡಿಸಿದ್ದಾರಂತೆ.
ಗೂಗಲ್ ನಲ್ಲಿ‌ ಹತ್ತಾರು ಬಾರಿ ಹುಡುಕಾಡಿ‌ ಕೊನೆಗೆ ಬೆಂಗಳೂರಿನ ಬೊಂಬೆ ಮನೆ ಕಲಾವಿದರನ್ನು ಸಂಪರ್ಕಿಸಿದ್ದಾರೆ. ತಮ್ಮ ಮನಸ್ಸಿನ ಇಂಗಿತ ಹೇಳುಕೊಂಡು, ಈ ನೈಜ ‌ಪ್ರತಿಮೆ ನಿರ್ಮಿಸುವ ಜವಾಬ್ದಾರಿ ನೀಡಿದ್ದಾರೆ. ಬೆಂಗಳೂರಿನ ಕಲಾವಿದರು ರಬ್ಬರ್ ಮತ್ತು ಸಿಲಿಕಾನ್ ಮೆಟಿರಿಯಲ್ ಬಳಸಿಕೊಂಡು ಈ ನೈಜ ರೂಪದ ಪ್ರತಿಮೆ ರೂಪಿಸಿದ್ದಾರೆ. ಇನ್ನೂ ಈ ಪ್ರತಿಮೆ ರೂಪಿಸಲು ಬಳಕೆ ಮಾಡಿರುವ ಕೂದಲು ಸ್ವತಃ ಮೃತ ಗುಪ್ತಾರ ಪತ್ನಿ ಅವರ ಕೂದಲು ಎಂಬುದು ವಿಶೇಷ. ಮುಂದೆ ನಿಂತವರು ಹೇಗೆ ನೋಡಿದರೂ ಇದು ಗೊಂಬೆ ಅನ್ನಿಸುವುದಿಲ್ಲ. ಅಷ್ಟೊಂದು ನೈಜವಾಗಿ ಈ ಪ್ರತಿಮೆ ರೂಪುಗೊಂಡಿದೆ.
ಗೃಹ ಪ್ರವೇಶಕ್ಕೆ ಬಂದಿದ್ದ ಅತಿಥಿಗಳು ಮೊದಲು ದಿಗ್ಭ್ರಮೆಗೊಂಡು ನಂತರ ಬೊಂಬೆ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಗುಪ್ತಾರ ಮಕ್ಕಳು ಕೂಡ ಅಮ್ಮ ಜೊತೆಗೆ ಇದ್ದಾಳೆ ಎನ್ನುವ ಹಾಗೆ ಪ್ರತಿಮೆ ಜೊತೆ ಬೆರೆತು ಗೃಹ ಪ್ರವೇಶದಲ್ಲಿ ಪಾಲ್ಗೊಂಡಿದ್ದರು.

ನನ್ನ ಪ್ರೀತಿಯ ಪತ್ನಿ ನನ್ನ ಉಸಿರಾಗಿದ್ದಳು. ನನ್ನ ಎಲ್ಲ ಸಾಧನೆಗೂ ಅವರೇ ಪ್ರೇರಣೆ. ಅವರ ಕನಸಿನ ಮನೆ ನಿರ್ಮಿಸಿದ ನನಗೆ ಗೃಹ ಪ್ರವೇಶದ ವೇಳೆ ಅವರ ಗೈರು ಎದ್ದು ಕಾಣಬಾರದು ಎಂದು ಈ ನೈಜಬೊಂಬೆ ರೂಪಿಸುವ ಯೋಚನೆ ಮಾಡಿದೆ. ಬೆಲೆ ಕಟ್ಟಲಾಗದ ಆ ಜೀವಕ್ಕೆ ಇದು ಏನೂ ಅಲ್ಲ. ಅದಕ್ಕಾಗಿ ಈ ಪ್ರತಿಮೆಗೆ ಎಷ್ಟು ಖರ್ಚಾಗಿದೆ ಅಂತಾ ಮಾತ್ರ ಕೇಳಬೇಡಿ ಎನ್ನುತ್ತಾರೆ ಪತಿ
| ಶ್ರೀನಿವಾಸ ಗುಪ್ತಾ,

Please follow and like us:
error