ಕಂದಾಯ ಇಲಾಖೆ  ಬಾಕಿ ಕೆಲಸಗಳನ್ನು ಎರಡು ವಾರಗಳಲ್ಲಿ ಪೂರ್ಣಗೊಳಿಸಲು  ಸಚಿವ ಆರ್.ಅಶೋಕ ಆದೇಶ


ಕೊಪ್ಪಳ, ಬೆಳೆ ಪರಿಹಾರ, ಪಿಂಚಣಿ ಸೌಲಭ್ಯ, ಸ್ಮಶಾನ ಭೂಮಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬAಧಿಸಿದ ಎಲ್ಲಾ ಬಾಕಿ ಉಳಿದ ಕೆಲಸಗಳು ಇನ್ನು ಎರಡು ವಾರಗಳೊಳಗೆ ಪೂರ್ಣಗೊಳ್ಳಬೇಕು ಮತ್ತು ಆ ಕುರಿತು ಜಿಲ್ಲಾ ಮಂತ್ರಿಗಳಿಗೆ ವರದಿ ಸಲ್ಲಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಅವರು ಸಂಬAಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಲ್ಲಾ ಪಂಚಾಯತನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಇಂದು ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಜಿಲ್ಲೆಯಲ್ಲಿ ಕಳೆದ ಬಾರಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಉಂಟಾದ ಬೆಳೆಹಾನಿಗೆ ರೈತರಿಗೆ ಆರ್.ಟಿ.ಜಿ.ಎಸ್. ಮೂಲಕ ರೂ. 31.50 ಕೋಟಿ ಬೆಳೆ ಪರಿಹಾರ ಮೊತ್ತವನ್ನು ಜಮೆ ಮಾಡಲಾಗಿದೆ. ಅದರಲ್ಲಿ ಬಾಕಿ ಉಳಿದ ರೈತರಿಗೆ ಆದಷ್ಟು ಬೇಗ ಬೆಳೆ ಪರಿಹಾರ ತಲುಪಿಸಿ. ಜಿಲ್ಲೆಯ ಪ್ರತಿ ಹಳ್ಳಿಯಲ್ಲಿಯೂ ಸ್ಮಶಾನ ಜಾಗ ಇರಲೇಬೇಕು. ಪ್ರಸ್ತುತ ಸ್ಮಶಾನ ಜಾಗ ಇಲ್ಲದ ಗ್ರಾಮಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಆ ಕುರಿತು ನೋಟಿಫಿಕೇಶನ್ ಹೊರಡಿಸಿ. ಸರ್ಕಾರಿ ಜಾಗವು ಗ್ರಾಮಕ್ಕೆ ಹತ್ತಿರವಾಗಿದ್ದು, ಜನ ಬಳಕೆಗೆ ಯೋಗ್ಯವಾಗಿರಬೇಕು. ಅಂತಹ ಜಾಗವನ್ನು ಗುರುತಿಸಿ. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ, ಗ್ರಾಮದ ಹತ್ತಿರದ ಖಾಸಗಿ ಜಮೀನು ಖರೀದಿಸಲು ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.
 ಸಾಮಾಜಿಕ ಭದ್ರತೆ ಯೋಜನೆಯಡಿ ವೃದ್ದಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲರ ಪಿಂಚಣಿ ಮುಂತಾದವುಗಳನ್ನು ಪ್ರಸ್ತುತ ಬ್ಯಾಂಕ್ ಮತ್ತು ಪೋಸ್ಟ್ ಆಫೀಸುಗಳಿಂದ ಪಾವತಿ ಮಾಡಲಾಗುತ್ತಿದೆ. ಆದರೆ ಪೋಸ್ಟ್ ಆಫೀಸುಗಳಿಂದ ಪಾವತಿಯಾಗುತ್ತಿರುವ ಪಿಂಚಣಿಯು ಸರಿಯಾದ ಸಮಯಕ್ಕೆ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದರಲ್ಲಿ ಅನರ್ಹರೂ ಪಿಂಚಣಿ ಪಡೆಯುತ್ತಿದ್ದಾರೆ. ಪಿಂಚಣಿ ತಲುಪಿಸುವ ಪೋಸ್ಟ್ಮೆನ್ ಕುರಿತು ಅನೇಕ ದೂರುಗಳು ಬಂದಿವೆ. ಇವುಗಳನ್ನು ಪರಿಗಣಿಸಿ ಇನ್ನುಮುಂದೆ ಯಾವುದೇ ಪೋಸ್ಟ್ ಆಫೀಸುಗಳಿಂದ ಪಿಂಚಣಿ ಪಾವತಿಗೆ ಅವಕಾಶ ನೀಡದೆ, ಪಿಂಚಣಿ ಪಡೆಯುವ ಪ್ರತಿಯೊಬ್ಬ ಫಲಾನುಭವಿಯೂ ಹತ್ತಿರದ ಬ್ಯಾಂಕ್‌ನಲ್ಲಿ ಖಾತೆ ತೆಗೆಯಬೇಕು. ಪಿಂಚಣಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಫಲಾನುಭವಿಗಳು ಬ್ಯಾಂಕ್‌ನಿAದ ಹಣ ಸೆಳೆದುಕೊಳ್ಳಬಹುದು ಎಂದರು.
 ಪಿಂಚಣಿ ಸೌಲಭ್ಯ ಒದಗಿಸುವ ಕುರಿತು ಸರ್ಕಾರದಿಂದ ಹೊಸ ಯೋಜನೆ ರೂಪಿಸುತ್ತಿದ್ದು, ಬಳ್ಳಾರಿ ಹಾಗೂ ಉಡುಪಿಯಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ವೃದ್ಧರು ಪಿಂಚಣಿಗಾಗಿ ಅರ್ಜಿಯನ್ನು ಸಲ್ಲಿಸುವಂತಿಲ್ಲ. ವೃದ್ದಾಪ್ಯ ಪಿಂಚಣಿ ಪಡೆಯುವ ಫಲಾನುಭವಿಯ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನಲ್ಲಿ ನಮೂದಿಸಿರುವ ವಯಸ್ಸಿನ ಆಧಾರದಲ್ಲಿ ಫಲಾನುಭವಿಯನ್ನು ತಹಶೀಲ್ದಾರ ಕಚೇರಿಯಿಂದ ನೇರವಾಗಿ ಸಂಪರ್ಕಿಸಿ ಅವರಿಗೆ ಪಿಂಚಣಿಯನ್ನು ತಲುಪಿಸಬೇಕು. ಹಾಗೂ ಪಿಂಚಣಿಯು ಬ್ಯಾಂಕ್ ಖಾತೆ ಮೂಲಕ ಪಾವತಿಯಾಗಬೇಕು. ಒಂದು ವೇಳೆ ಸತತ ಆರು ತಿಂಗಳು ಆ ಖಾತೆಯಿಂದ ಯಾವುದೇ ಹಣದ ಸೆಳೆಯುವಿಕೆ ಪ್ರಕ್ರಿಯೆ ನಡೆಯದಿದ್ದರೆ ಖಾತೆಯು ತನ್ನಿಂದ ತಾನೇ ನಿಷ್ಕಿçಯಗೊಳ್ಳುತ್ತದೆ. ಆ ಕುರಿತ ಸಂದೇಶ ಕಂದಾಯ ಇಲಾಖೆಗೆ ತಲುಪುತ್ತದೆ. ತಾಂತ್ರಿಕ ಕಾರಣಗಳಿದ್ದಲ್ಲಿ ಮತ್ತೆ ಖಾತೆಯನ್ನು ಚಾಲ್ತಿಗೊಳಿಸಲಾಗುತ್ತದೆ. ಒಂದು ವೇಳೆ ಪಿಂಚಣಿ ಫಲಾನುಭವಿಯು ಮರಣ ಹೊಂದಿದ್ದಲ್ಲಿ ಪಿಂಚಣಿ ಪಾವತಿ ಸ್ಥಗಿತಗೊಳ್ಳುತ್ತದೆ. ಈ ಯೋಜನೆಯಿಂದ ಮರಣಾ ನಂತರವೂ ಫಲಾನುಭವಿಯ ಹೆಸರಿನಲ್ಲಿ ಪಿಂಚಣಿ ಪಾವತಿಯಾಗುವುದನ್ನು ತಪ್ಪಿಸಿ ಅದನ್ನು ಇನ್ನೊಬ್ಬ ಅರ್ಹ ಫಲಾನುಭವಿಗೆ ತಲುಪಿಸಬಹುದು ಎಂದು ಅವರು ಹೊಸ ಯೋಜನೆಯನ್ನು ಜಾರಿಗೊಳಿಸುವ ಕುರಿತು ಮಾಹಿತಿ ನೀಡಿದರು.
 ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಕಲಿ ಪ್ರಮಾಣ ಪತ್ರ ನೀಡಿ ವಿವಿಧ ರೀತಿಯ ಪಿಂಚಣಿ ಪಡೆಯುತ್ತಿರುವವರನ್ನು ಪತ್ತೆ ಹಚ್ಚಲು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವ ಪ್ರಕ್ರಿಯೆಯಲ್ಲಿ ಕೆಲವು ತಾಲ್ಲೂಕುಗಳು ಪ್ರಗತಿ ಸಾಧಿಸಿಲ್ಲ. ಕಾರಣಗಳು ಏನೇ ಇದ್ದರೂ ಇನ್ನು 15 ದಿನಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಂಡು ನಕಲಿ ಪಿಂಚಣಿದಾರರನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
 ಕೋವಿಡ್-19 ಗೆ ಸಂಬAಧಿಸಿದAತೆ ಅಗತ್ಯ ಚಿಕಿತ್ಸೆ, ಉಪಕರಣಗಳ ಖರೀದಿಗೆ ಸರ್ಕಾರದಿಂದ ಇದುವರೆಗೆ ಸುಮಾರು ರೂ.9 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ವೆಂಟಿಲೇಟರ್ ಮುಂತಾದವುಗಳನ್ನು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೂ ಬೇರೆ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೆ ಕೊಪ್ಪಳದಲ್ಲಿ ಮಾತ್ರ ಸೋಂಕು ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದ ಸಚಿವರು, ಖರೀದಿಸಿದ ವೆಂಟಿಲೇಟರ್‌ಗಳನ್ನು ಶೀಘ್ರ ಇನ್‌ಸ್ಟಾಲ್ ಮಾಡಿಸಿ, ಅದರ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಿ ಎಂದರು. ಅನಸ್ತೇಶಿಯಾ ತಜ್ಞರ ಕೊರತೆ ಕುರಿತು ಆರೋಗ್ಯಾಧಿಕಾರಿ ಮಾಹಿತಿ ನೀಡಿದಾಗ ಕೂಡಲೇ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ವೈದ್ಯರ ಕೊರತೆ ನೀಗಿಸಿ. ಕೋವಿಡ್ ನಿಯಂತ್ರಣಕ್ಕೆ ಬೇಕಾದಲ್ಲಿ ಇನ್ನೂ ಅಗತ್ಯ ಅನುದಾನ ನೀಡಲು ಸರ್ಕಾರ ಸಿದ್ದವಿದೆ. ಕೋವಿಡ್ ಸಮಸ್ಯೆ ಎದುರಾಗಿ ಆರು ತಿಂಗಳಾದರೂ ಆ ಕುರಿತು ಜಿಲ್ಲೆಯ ಅಧಿಕಾರಿಗಳು, ವೈದ್ಯರು ಗಂಭೀರವಾಗಿ ಕ್ರಮ ಕೈಗೊಂಡಿಲ್ಲ. ನಗರದಲ್ಲಿ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ನಿಯಮವನ್ನು ಸಾರ್ವಜನಿಕರು ಅನುಸರಿಸುತ್ತಿಲ್ಲ. ಆದ್ದರಿಂದ ಸಂತೆ, ಜನಸಂದಣಿ ಇರುವ ಪ್ರದೇಶಗಳಲ್ಲಿ ಅಧಿಕಾರಿಗಳನ್ನು ನೇಮಿಸಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದವರಿಗೆ ದಂಡ ವಿಧಿಸಿ. ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿ. ಲಸಿಕೆ ಬರುವವರೆಗೂ ಎಲ್ಲ ರೀತಿಯ ಎಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
 ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಮಾತನಾಡಿ, ಅಧಿಕಾರಿಗಳು ಪ್ರತಿ ಸಭೆಯಲ್ಲೂ ಕೆಲಸ ಪೂರ್ಣಗೊಳಿಸಲು ಒಂದು ವಾರ, ಹದಿನೈದು ದಿನಗಳ ಕಾಲವಕಾಶ ಕೇಳುತ್ತೀರಿ. ಆದರೆ ನೀವು ಕೇಳಿದ ಸಮಯದಲ್ಲಿ ಪೂರ್ಣವಾಗುವ ಕೆಲಸ ಅದಕ್ಕೂ ಮೊದಲು ಏಕೆ ಪೂರ್ಣಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದರು. ಮುಂದುವರೆದು ಅಧಿಕಾರಿಗಳು ಮೊದಲು ಸಮಯಕ್ಕೆ ಬೆಲೆ ಕೊಡುವುದನ್ನು ಕಲಿತುಕೊಳ್ಳಿ. ಯಾವುದೇ ಕೆಲಸವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದಲ್ಲಿ ನಿಮ್ಮ ಒತ್ತಡ, ಜನಪ್ರತಿನಿಧಿಗಳ ಒತ್ತಡ ಎಲ್ಲವೂ ಕಡಿಮೆಯಾಗುತ್ತದೆ. ಸರ್ಕಾರದ ಕೆಲಸಗಳಲ್ಲಿ ಜನರಿಗೆ ನಂಬಿಕೆಯೂ ಮೂಡುತ್ತದೆ ಎಂದು ಹೇಳಿದರು.
 ರಸಗೊಬ್ಬರಗಳ ಅಸಮರ್ಪಕ ಪೂರೈಕೆ ಕುರಿತು ಮಾತನಾಡಿದ ಶಾಸಕರಾದ ಪರಣ್ಣ ಮುನವಳ್ಳಿ ಮತ್ತು ಬಸವರಾಜ ದಢೇಸೂಗೂರು ಅವರಿಗೆ ಪ್ರತಿಕ್ರಿಯಿಸಿದ ಸಚಿವರು ಗಂಗಾವತಿ, ಕಾರಟಗಿಯಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯುವುದರಿಂದ ಅಲ್ಲಿ ಯೂರಿಯಾ ರಸಗೊಬ್ಬರದ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಭತ್ತ ಬೆಳೆಯುವ ಪ್ರದೇಶ ಹಾಗೂ ಇತರೆ ಪ್ರದೇಶಗಳಲ್ಲಿ ಅಗತ್ಯದ ಆಧಾರದಲ್ಲಿ ರಸಗೊಬ್ಬರಗಳ ಹಂಚಿಕೆ ಮಾಡಿ. ಜಿಲ್ಲೆಯ ಯಾವುದೇ ಭಾಗದ ರೈತರಿಗೂ ರಸಗೊಬ್ಬರದ ಕೊರತೆ ಉಂಟಾಗದAತೆ ಕ್ರಮ ಕೈಗೊಳ್ಳಿ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.
 ಶಾಸಕರಾದ ಹಾಲಪ್ಪ ಆಚಾರ್ ಮಾತನಾಡಿ ಜಿಲ್ಲೆಯಲ್ಲಿ ಮುಖ್ಯವಾಗಿ ಯಲಬುರ್ಗಾ ತಾಲ್ಲೂಕಿನಲ್ಲಿ ವೆಂಟಿಲೇಟರ್ ಕೊರತೆಯಿಂದ ರೋಗಿಗಳು ಸಾಯುತ್ತಿದ್ದು, ರೋಗಿಗಳ ಸಾವಿನ ಪ್ರಮಾಣ ತಗ್ಗಿಸಲು ಪೂರೈಕೆಯಾದ ವೆಂಟಿಲೇಟರ್‌ಗಳನ್ನು ಕಾರ್ಯಚಟುವಟಿಕೆಗೆ, ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಚಿವರು ಈ ಕುರಿತು ಒಂದು ವಾರದೊಳಗೆ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
 ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತಿ ಸಿ.ಇ.ಒ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error