ಒಂದು ಘಟನೆ ನಿಮ್ಮೊಂದಿಗೆ
ಹಂಚಿಕೊಳ್ಳಬೇಕಿನಿಸುತ್ತಿದೆ- ಶಿವಾನಂದ ತಗಡೂರ

ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಸುಲಿಗೆಗೆ ಪತ್ರಕರ್ತನ ಕುಟುಂಬ ಕಂಗಾಲು

ಆಗಷ್ಟೇ ವಿಧಾನಸೌಧದಲ್ಲಿ ಸುದ್ದಿ ರೌಂಡ್ಸ್ ಮುಗಿಸಿ ಆಫೀಸ್ ಗೆ ಹೊರಟಿದ್ದೆ. ಮಹಿಳೆಯೊಬ್ಬರು, ನಿಮ್ಮನ್ನು ಭೇಟಿ ಮಾಡಲು ಊರಿಂದ ಬಂದಿದ್ದೇನೆ ಅಂದರು. ಅಲ್ಲಿಯೇ ಪ್ರೆಸ್ ಕ್ಲಬ್ ಬಳಿ ಬನ್ನಿ ಅಂದೆ.

ಆ ಕುಟುಂಬ ಅಳುತ್ತಲೇ ಮಾತು ಶುರು ಮಾಡಿತು.
ನನಗೆ ದಿಕ್ಕು ತೋಚುತ್ತಿಲ್ಲ, ಏನು ಮಾಡುವುದು ಗೊತ್ತಾಗ್ತಿಲ್ಲ. ಅಷ್ಟಿಷ್ಟು, ಮನೇಯಲಿದ್ದ ದುಡ್ಡನ್ನ ಆಸ್ಪತ್ರೆಗೆ ಕಟ್ಟಿದ್ದೀನಿ. ಗಂಡನ ಜೀವ ಉಳಿಸಿಕೊಳ್ಳಲು ಕೈಬಳೆ, ಆಭರಣ ಎಲ್ಲವನ್ನೂ ಮಾರಿದೆ. ತಾಳಿ ಬಿಟ್ಟರೆ ಇನ್ನೇನು ಉಳಿದಿಲ್ಲ. ಆದರೂ ಆಸ್ಪತ್ರೆಯಲ್ಲಿ ಇನ್ನೂ ಬಾಕಿ 7 ಲಕ್ಷ ಕಟ್ಟಬೇಕು ಎಂದು ದಿನಾ ಪೋನ್ ಮಾಡ್ತಾರೆ. ಈ ಮಗಾ ಇನ್ನೂ ಚಿಕ್ಕವನು. ಏನಾದರೂ ಸಹಾಯ ಮಾಡಿಸಿ ಸಾ… ಏನಾದರು ಮಾರಿ ಹಣ ಕಟ್ಟೋಣ ಅಂದ್ರೆ, ನಮಗೆ ಹೊಲ, ಮನೆ ಏನೂ ಇಲ್ಲ. ನೀವೆ ಏನಾದರೂ ಮಾಡಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಕೊಡಿಸಿಕೊಡಿ ಎಂದು ಆ ಹೆಣ್ಮಗಳು ಕಣ್ಣೀರು ಹಾಕುತ್ತಾ ಮನವಿ ಮಾಡಿದಾಗ ನನ್ನ ಕಣ್ಣಾಲಿಗಳು ಒದ್ದೆಯಾದವು.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕನ್ನಡ ಪ್ರಭ ವರದಿಗಾರ ಸುರೇಶ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಅವರ ಪತ್ನಿ ಉಮಾ, ಈ ದುಗುಡ ಹೊತ್ತು ಪ್ರೆಸ್ ಕ್ಲಬ್ ಬಳಿ ನನ್ನೆದುರು ನಿಂತಿದ್ದರು.

ಆಗಿದ್ದು ಇಷ್ಟು. ಕೋವಿಡ್ ಸೋಂಕು ತಗುಲಿದ ಸುರೇಶ್ ಗೆ ಆರೋಗ್ಯ ಬಿಗಡಾಯಿಸಿದಾಗ, ಬೆಂಗಳೂರು ಖಾಸಗಿ ಆಸ್ಪತ್ರೆಗೆ (ಹೆಸರು ಬೇಡ) ದಾಖಲಿಸಿದರು. ಹತ್ತು ದಿನಕ್ಕೆ13.50 ಲಕ್ಷ ಬಿಲ್ ಮಾಡಲಾಗಿತ್ತು.

ಗಂಡ ಬದುಕಿ ಬಂದಾನು ಅನ್ನೋ ಆಸೆಯಿಂದ ಸಾಲಸುಲ ಮಾಡಿ, ಒಡವೆ ಮಾರಿದ ಪತ್ನಿ ಉಮಾ, 6.50 ಲಕ್ಷ ಬಿಲ್ ತುಂಬಿದ್ದರು. ಇನ್ನೂ ಹಣ ಕೊಡಿ ಎಂದಾಗ ಅಸಹಾಯಕರಾಗಿ ಕೈ ಚೆಲ್ಲಿದರು. ಮಾರನೆ ದಿನ ಅವರ ಗಂಡ ಇನ್ನಿಲ್ಲವಾದರು.

ಪತಿ ಬದುಕಿರಬಹುದು ಎಂದು ಬೆಟ್ಟದಷ್ಟು ಭರವಸೆ ಇಟ್ಟುಕೊಂಡಿದ್ದ ಆಕೆಗೆ ಜಗವೇ ಕಗ್ಗತ್ತಾಲಾಗಿತ್ತು.
ಪ್ರೆಸ್ ಕ್ಲಬ್ ನಲ್ಲಿ ಊಟ ಮಾಡಿಸಿ, ಅವರಿಂದ ಅರ್ಜಿ ಬರೆಸಿಕೊಂಡು ಸಿಎಂ ಸಚಿವಾಲಯ ಸಂಪರ್ಕಿಸಿ ಪ್ರಕರಣ ಪರಿಶೀಲನೆ ಮಾಡುವಂತೆ ಕೋರಿದೆ. ಆಗ
ನನ್ನ ನೆರವಿಗೆ ಬಂದವರು ಐಎಎಸ್‌ ದಕ್ಷ ಅಧಿಕಾರಿ ಹರ್ಷ ಗುಪ್ತ.

ಚಿಕಿತ್ಸೆ ಡಿಟೈಲ್ ಬಿಲ್ ಪರಿಶೀಲನೆ ಸಂದರ್ಭದಲ್ಲಿ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಆ ಆಸ್ಪತ್ರೆ ಹೆಚ್ಚು ಪಡೆದಿರುವುದು ಪತ್ತೆಯಾಯಿತು.

ಆಸ್ಪತ್ರೆ ಪೋನ್ ಬಂದರೆ, ಬಾಕಿ ವಸೂಲಿಗೆ ಮಾಡಿದ್ದಾರೆ ಎಂದು ಬೆಚ್ಚಿ ಬೀಳುತ್ತಿದ್ದ ಆ ಕುಟುಂಬ ಅವತ್ತು ಬೆಂಗಳೂರಿಗೆ ಬನ್ನಿ ಅಂತ ಕರೆಯುತ್ತಿದ್ದಾರೆ ಎಂದು ನನಗೆ ಪೋನಾಯಿಸಿದ್ದರು. ಮಾರನೇ ದಿನ ಆ ಕುಟುಂಬ ಬೆಂಗಳೂರಿಗೆ ಬಂತು.

7 ಲಕ್ಷ ಬಾಕಿಗಾಗಿ ಬೆನ್ನತ್ತಿದ್ದ ಆಸ್ಪತ್ರೆ, ತನ್ನ ತಪ್ಪಿನ ಅರಿವಾಗಿ ಮತ್ತು ಅನಿವಾರ್ಯವಾಗಿ ಹೆಚ್ಚುವರಿಯಾಗಿ ಪಡೆದಿದ್ದ 3.5ಲಕ್ಷ ರೂಗಳನ್ನ ಚೆಕ್ ಮೂಲಕ ವಾಪಸ್ ನೀಡಿದಾಗ ನೊಂದ ಪತ್ರಕರ್ತನ ನ್ಯಾಯ ಕೊಡಿಸಿದ ಸಾರ್ಥಕತೆ ನನ್ನ ಪಾಲಿಗೆ ಬಂದಿದ್ದು ದೇವರ ಕೃಪೆ.

ಇದು ಬೆಳಕಿಗೆ ಬಂದದ್ದು… ಇನ್ನೂ ಬೆಳಕಿಗೆ ಬಾರದ ಘಟನೆಗಳು ಎಷ್ಟಿವೆಯೂ? ಈ ಬಗ್ಗೆ ಸರ್ಕಾರ ಗಮನಹರಿಸಲಿ.
ಕೆಲ ಖಾಸಗಿ ಆಸ್ಪತ್ರೆಗಳ (ಉತ್ತಮ ಸೇವೆ ನೀಡುವ ಹಲವು ಆಸ್ಪತ್ರೆಗಳಿವೆ) ಹಣ ದಾಹಕ್ಕೆ ಕಡಿವಾಣ ಹಾಕಲಿ.

ಶಿವಾನಂದ ತಗಡೂರ ರಾಜ್ಯ ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ

ಬೆಂಗಳೂರು

Please follow and like us:
error