fbpx

ಒಂಚೂರು ಈ ಹೆಣ್ಣುಮಗಳ ಕಥೆ ಕೇಳಿಸಿಕೊಳ್ಳಿ..

ವೈದ್ಯೆ ತನ್ನ ವೈದ್ಯ ಪತಿಯ ಸಾವಿನ ಕುರಿತು ಬರೆದದ್ದು

ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಓದಿದ್ದು,

ನಾನು, ಡಾ.ನೀತಾ ಪಾಂಡು, ಡಾ.ಪರ್ವಿಂದರ್ ಕಾಂಬೋಜ್ ಅವರ ಪತ್ನಿ.‌ ನನ್ನ ಗಂಡನಿಗೆ ಜು.16ರಂದು ಸಣ್ಣ ಜ್ವರ. 18ಕ್ಕೆ ಗಂಟಲು ನೋವು ಕಾಣಿಸಿಕೊಂಡಿತು. ಕೆಮ್ಮು ಇರಲಿಲ್ಲ, ರುಚಿ-ವಾಸನೆಯ ಸಮಸ್ಯೆಯೂ ಇರಲಿಲ್ಲ.

ಅಬೋಹರ್ ನ ಸಿವಿಲ್ ಆಸ್ಪತ್ರೆಯಲ್ಲಿ ಕೋವಿಡ್ -19 ಪರೀಕ್ಷೆ ಮಾಡಿಸುವುದೆಂದು ತೀರ್ಮಾನಿಸಿ, ಜುಲೈ 20ರಂದು ಸ್ಯಾಂಪಲ್ ಕೊಟ್ಟೆವು. ಬಹುಶಃ ನನ್ನ ಜೀವನದ ಅತಿದೊಡ್ಡ ಪ್ರಮಾದ ಅದಾಗಿತ್ತು.

ಒಂದೇ ದಿನದಲ್ಲಿ ಪರೀಕ್ಷೆಯ ವರದಿ ಕೊಡುವುದಾಗಿ ಅವರು ಹೇಳಿದ್ದರು. ಮಾರನೇ ದಿನ ವಿಚಾರಿಸಿದಾಗ ಒಂದು ದಿನ ತಡವಾಗಿ ಅಂದರೆ 21ರಂದು‌ ಸ್ಯಾಂಪಲ್ ಗಳನ್ನು ಲ್ಯಾಬ್ ಗೆ ಕಳುಹಿಸಿದ್ದರು. ಹೀಗಾಗಿ 22 ರಂದು ವರದಿ ಕೊಡುವುದಾಗಿ ಹೇಳಿದರು. ಅಷ್ಟು ಹೊತ್ತಿಗಾಗಲೇ ನನ್ನ ಗಂಡನಿಗೆ ಸುಸ್ತು, ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ.

ನಾನು ದ್ರವ ಮತ್ತು ಅರೆದ್ರವ ಆಹಾರವನ್ನು ಅವರಿಗೆ ಕೊಡುತ್ತಿದ್ದೆ. 22ರಂದು ಅವರ ಪರಿಸ್ಥಿತಿ ಕೆಟ್ಟದಾಯಿತು‌. ಅವರು ಮಾತನಾಡಲೂ ತ್ರಾಸ ಪಡುತ್ತಿದ್ದರು. ನಾನು ಕೋವಿಡ್ ವರದಿಗಾಗಿ ವಿಚಾರಿಸಿದೆ, ಅವರು ಇನ್ನೂ ಬಂದಿಲ್ಲ ಎಂದರು. ನಾನು ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದೆ. ಎಮರ್ಜೆನ್ಸಿ ವಾರ್ಡ್ ಎದುರೇ ನಮ್ಮನ್ನು ನಿಲ್ಲಿಸಿಕೊಳ್ಳಲಾಯಿತು.

ನನ್ನ ಗಂಡನ ಟೆಂಪರೇಚರ್ ಚೆಕ್ ಮಾಡಿದರು. ಅದು ನಾರ್ಮಲ್ ಆಗಿತ್ತು. ಆಕ್ಸಿಜನ್ ಸ್ಯಾಚುರೇಚನ್ ಮಟ್ಟ 83% ಆಗಿತ್ತು.‌ ರಕ್ತದ ಒತ್ತಡವನ್ನು ಪರೀಕ್ಷಿಸಲಿಲ್ಲ. ಇಷ್ಟು ಆದ ಮೇಲೆ ಫರೀದ್ ಕೋಟ್ ನ ಸರ್ಕಾರಿ ಮೆಡಿಕಲ್ ಕಾಲೇಜ್ ಗೆ ರೆಫರ್ ಮಾಡುವುದಾಗಿ ಹೇಳಿದರು. ಆದರೆ ಕರೋನಾ ಪರೀಕ್ಷೆ ವರದಿ ನನ್ನ ಬಳಿ ಇರಲಿಲ್ಲ. ಹೀಗಾಗಿ ಅವರು ಚಿಕಿತ್ಸೆ ನೀಡಲಿಲ್ಲ.

ನಾನು ಕನಿಷ್ಠ ಪ್ರಾಥಮಿಕ ಚಿಕಿತ್ಸೆಯನ್ನಾದರೂ ನೀಡಿ ಎಂದು ಬೇಡಿಕೊಂಡೆ. ಆಗ ನನ್ನ ಗಂಡನಿಗೆ ಐವಿ ಫ್ಲೂಯಿಡ್ ಹಾಕಿದರು, ಆಕ್ಸಿಜನ್ ಸಪೋರ್ಟ್ ನೀಡಿದರು. ಆಗಲೂ ಅವರ ರಕ್ತದೊತ್ತಡ ಪರೀಕ್ಷಿಸಲಿಲ್ಲ.

ನಂತರ ಅಲ್ಲಿಂದ ನಮ್ಮನ್ನು ಫರೀದ್ ಕೋಟ್ ಮೆಡಿಕಲ್ ಕಾಲೇಜ್ ಗೆ ಕಳುಹಿಸಲಾಯಿತು. ನಿಮ್ಮ ಬಳಿ ಕರೋನಾ ವರದಿ ಇಲ್ಲ, ಹೀಗಾಗಿ ಯಾವ ಖಾಸಗಿ ಆಸ್ಪತ್ರೆಯೂ ಚಿಕಿತ್ಸೆ ನೀಡುವುದಿಲ್ಲ. ಡಾ. ಅಂಕಿತ್ ಎಂಬ ವೈದ್ಯರ ಜತೆ ಮಾತಾಡಿರುವುದಾಗಿಯೂ ಅಲ್ಲಿ ಹೋದ ನಂತರ ಅವರು ಅಟೆಂಡ್ ಮಾಡಲಿದ್ದಾರೆ ಎಂದೂ ಹೇಳಲಾಯಿತು. ನಾನು ನನ್ನ ಪತಿಯನ್ನು ಆಂಬುಲೆನ್ಸ್ ನಲ್ಲಿ ಫರೀದ್ ಕೋಟ್ ಆಸ್ಪತ್ರೆಗೆ ಕರೆದೊಯ್ದೆ.

ಡಾ. ಅಂಕಿತ್ ಅವರಿಗೆ ನನ್ನ ಗಂಡನ ಪರಿಸ್ಥಿತಿಯ ಬಗ್ಗೆ ವಿವರಿಸಿದೆ, ಜ್ವರ ಬಂದು ಹೋಗಿದ್ದು ಬಿಟ್ಟರೆ ಅವರಿಗೆ ಕರೋನಾ ಲಕ್ಷಣಗಳು ಇಲ್ಲವೆಂದೂ ಹೇಳಿದೆ. ಆದರೆ ಡಾ. ಅಂಕಿತ್, ನಿಮ್ಮ ಗಂಡನ ರೆಫರಲ್ ಸ್ಲಿಪ್ (ಸಿವಿಲ್ ಆಸ್ಪತ್ರೆಯವರು ಕೊಟ್ಟಿದ್ದು) ನಲ್ಲಿ ಕರೋನಾ ಶಂಕಿತ ಎಂದು ಬರೆಯಲಾಗಿದೆ. ನಾನು‌ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಡಾ. ಅಂಕಿತ್, ಕರೋನಾ ಪರೀಕ್ಷಾ ವರದಿ ಕೇಳಿದರು. ವರದಿ ಇನ್ನೂ ಬಂದಿಲ್ಲವೆಂದು ಹೇಳಿದೆ. ಕರೋನಾ ಇಲ್ಲವೆಂಬ ವರದಿ ಇದ್ದರೆ ಮಾತ್ರ ಚಿಕಿತ್ಸೆ ಕೊಡಬಹುದು, ಇಲ್ಲವಾದಲ್ಲಿ ಇಲ್ಲ ಎಂದು ಅವರು ಕಡ್ಡಿ ಮುರಿದಂತೆ ಹೇಳಿದರು.

ಕನಿಷ್ಠ ತುರ್ತು ಚಿಕಿತ್ಸೆಯನ್ನಾದರೂ ಕೊಡಿ ಎಂದು ಪರಿಪರಿಯಾಗಿ ಬೇಡಿದ ನಂತರ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಯಿತು. ಆಂಬುಲೆನ್ಸ್ ಡ್ರೈವರ್ ಸ್ಟ್ರೆಚರ್ ಮೇಲೆ ನನ್ನ ಗಂಡನನ್ನು ಮಲಗಿಸಿ ಹೊರಟುಹೋದ. ನಾನು ಸ್ಟ್ರೆಚರ್ ತಳ್ಳಿಕೊಂಡು ಹೊರಟೆ, ಆಗ ನನಗೆ ಅಟೆಂಡರ್ ಮೂಲಕ ಗೊತ್ತಾದ ವಿಷಯವೆಂದರೆ ನಮ್ಮನ್ನು ಕರೋನಾ ಐಸೋಲೇಷನ್ ವಾರ್ಡ್ ಗೆ ಕರೆದೊಯ್ಯಲಾಗುತ್ತಿತ್ತು.

ನಾನು ನನ್ನ ಪತಿಯನ್ನು ನೀವು ಎಮರ್ಜೆ‌ನ್ಸಿ ವಾರ್ಡ್ ಗೆ ಯಾಕೆ ಕರೆದೊಯ್ಯುತ್ತಿಲ್ಲ ಎಂದು ಪ್ರಶ್ನಿಸಿದೆ. ನರ್ಸ್ ಒಬ್ಬಾಕೆ ಹೇಳಿದರು, ಕರೋನಾ ರಿಪೋರ್ಟ್ ಬಾರದ ರೋಗಿಗಳನ್ನು ಮಾಮೂಲಿ ಐಸೋಲೇಷನ್ ವಾರ್ಡ್ ನಲ್ಲೇ ಇಡಲಾಗುತ್ತದೆ ಎಂದು.

ನಾನು ತಕ್ಷಣ ಪ್ರಾಥಮಿಕ ಚಿಕಿತ್ಸೆ ಆರಂಭಿಸಲು ನರ್ಸ್ ಬಳಿ ವಿನಂತಿಸಿಕೊಂಡೆ. ಆಕೆ ಫೈಲ್ ಕೊಡಿ ಎಂದಳು. ನಾವು ಆಸ್ಪತ್ರೆ ತಲುಪಿದಾಗ 5-30. ಸಂಜೆ ಏಳು ಗಂಟೆಗೆ ಫೈಲ್ ಸಿದ್ಧವಾಗಿದೆ ಎಂದು ನಮಗೆ ಹೇಳಿದರು.

ಫೈಲ್ ಸಿದ್ಧವಾಯ್ತಲ್ಲಾ, ಈಗಲಾದರೂ ಚಿಕಿತ್ಸೆ ಕೊಡಿ ಬೇಗ ಎಂದು ಮಹಿಳಾ ವೈದ್ಯರೊಬ್ಬರನ್ನು ವಿನಂತಿಸಿದೆ.‌ ಯಾವಾಗಲೂ ಹೀಗೇ ಕಣ್ರೀ, ರೋಗಿಯ ಸಂಬಂಧಿಗಳು ಅರ್ಜೆಂಟ್ ಮಾಡ್ತಾರೆ ಎಂದು ಗೊಣಗಿದರು ಆಕೆ. ತಡೀರಿ, ಪಿಪಿಇ ಕಿಟ್ ಹಾಕಿಕೊಂಡು ಹದಿನೈದು ನಿಮಿಷದಲ್ಲಿ ಬರ‌್ತೀನಿ ಎಂದು ಹೇಳಿ ಹೋದರು. ಅವರು ವಾಪಾಸು ಬಂದಾಗ 30-40 ನಿಮಿಷಗಳು ಆಗಿದ್ದವು. ಆಕೆಯ ಬಳಿ ನನ್ನ ಗಂಡನ ಫೈಲ್ ಇರಲಿಲ್ಲ. ನರ್ಸ್ ಗೆ ಕೆಲವು ಸೂಚನೆಗಳನ್ನು ನೀಡಿ ಅವರು ಅಲ್ಲಿಂದ ಹೋದರು. ನಾನು ಚಿಕಿತ್ಸೆಗಾಗಿ ಬೇಡಿಕೊಳ್ಳುತ್ತಲೇ ಇದ್ದೆ, ನೀರು, ಗ್ಲೂಕೋಸ್ ಮತ್ತು ಥರ್ಮಾಮೀಟರ್ ತರಲು ನನಗೆ ಹೇಳಿದರು, ತಂದುಕೊಟ್ಟೆ.

ಅದಾದ ನಂತರ ನನ್ನ ಗಂಡನಿಗೆ ಐವಿ ಫ್ಲೂಯಿಡ್ಸ್ ಹಾಕಿರುವುದಾಗಿಯೂ, ವೈದ್ಯರುಗಳ ಒಂದು ತಂಡ ಬಂದು ನನ್ನ ಗಂಡನನ್ನು ಪರೀಕ್ಷಿಸಿ ಮುಂದಿನ ಚಿಕಿತ್ಸೆ ನೀಡುವುದಾಗಿಯೂ ಹೇಳಲಾಯಿತು.‌ ನನ್ನ ಗಂಡನ ಸೋದರ ವಾರ್ಡ್ ಒಳಗೆ ಹೋಗಿ ನೋಡಿದಾಗ ಅವರು ಒಬ್ಬರೇ ಇದ್ದರು ಮತ್ತು ಉಸಿರಾಡಲು ಕಷ್ಟಪಡುತ್ತಿದ್ದರು. ನಮಗೆ ಗಾಬರಿಯಾಯಿತು. ವೈದ್ಯರ ಜತೆ ಸಾಕಷ್ಟು ವಾಗ್ವಾದಗಳ ನಂತರ ನನ್ನ ಗಂಡನನ್ನು ವೆಂಟಿಲೇಟರ್ ನಲ್ಲಿ ಇಡಲಾಯಿತು. ನಮ್ಮನ್ನೆಲ್ಲ ಮನೆಗೆ ಕಳುಹಿಸಲಾಯಿತು.

ಆಮೇಲೆ ಗೊತ್ತಾದ ವಿಷಯವೇನೆಂದರೆ, ನನ್ನ ಗಂಡ ತೀರಿಹೋಗಿದ್ದರು, He was died alone, unattended in the isolation ward. ನನ್ನ ಗಂಡ ಸರಿಯಾಗಿ ಎಷ್ಟು ಹೊತ್ತಿಗೆ ತೀರಿಕೊಂಡರು ಎಂಬುದೂ ವೈದ್ಯರಿಗೆ ಗೊತ್ತಿರಲಿಲ್ಲ.‌

ಬದುಕಿನುದ್ದಕ್ಕೂ ವಿದ್ಯಾರ್ಥಿಗಳಿಗೆ ವೈದ್ಯರಾಗಲು ಸಹಾಯ ಮತ್ತು ಪ್ರೋತ್ಸಾಹ ನೀಡುತ್ತಿದ್ದವಳು ನಾನು. ಕರೋನಾ ವಾರಿಯರ್ಸ್ ಕುರಿತು ಹೆಮ್ಮೆಯಿಂದ ಮಾತನಾಡಿದವಳು ನಾನು. ಆದರೆ ಫರೀದ್ ಕೋಟ್ ನಲ್ಲಿ ಕರೋನಾ ವಾರಿಯರ್ ಗಳ ಹೊಸ ಮುಖವೊಂದನ್ನು ನೋಡಿದೆ. ನಾನು ಎಲ್ಲವನ್ನೂ ಕಳೆದುಕೊಂಡೆ; ನನ್ನ ನಂಬಿಕೆ, ನನ್ನ ಭರವಸೆ, ನನ್ನ ಚೇತನ… ಎಲ್ಲವನ್ನೂ. ಬಹುಶಃ ನನ್ನ ಬದುಕನ್ನೂ ಕೂಡ.

ಜುಲೈ 24ರ ಸಂಜೆ ಅಂದರೆ ಸ್ಯಾಂಪಲ್ ಸಂಗ್ರಹಿಸಿದ ಐದು ದಿನಗಳ ನಂತರ ನನ್ನ ಗಂಡನ ಕರೋನಾ ಪರೀಕ್ಷಾ ವರದಿ ಬಂತು. ಅದು ನೆಗಟಿವ್ ಎಂದು ಹೇಳಿತು! ಏನು ಮಾಡಲಿ ಈ ವರದಿಯನ್ನು? ಕಟ್ಟು ಹಾಕಿಸಿ ಇಟ್ಟುಕೊಳ್ಳಲೇ?

  • ಡಾ. ನೀತಾ ಪಾಂಡು.

ಇದೆಲ್ಲ ಕೇಳಿಸಿಕೊಳ್ಳೋದಕ್ಕೇ ಭೀಕರ ಎನಿಸೋದಿಲ್ವಾ? ಇಬ್ಬರೂ ವೈದ್ಯರು. ಆದರೆ Covid Situation ಒಂದು ಜೀವವನ್ನು ತಿಂದು ಹಾಕಿತು. ಒಂದೆರಡು ಆಂಟಿ ಬಯಾಟಿಕ್ಸ್ ನಲ್ಲಿ ಗುಣವಾಗಬಹುದಿದ್ದ ಜೀವ, ಚಿಕಿತ್ಸೆಯೇ ಇಲ್ಲದೆ ನೀಗಿಕೊಂಡಿತು. ಯಾರನ್ನು ದೂರುವುದು, ಕೋವಿಡ್ ವರದಿ ಇಲ್ಲದೆ ಚಿಕಿತ್ಸೆ ಕೊಡೋದಿಲ್ಲ ಎಂದ ವೈದ್ಯರು-ಆಸ್ಪತ್ರೆಗಳನ್ನೇ? ಇಂಥ ರೂಲ್ ಮಾಡಿರಬಹುದಾದ ಸರ್ಕಾರ-ಆರೋಗ್ಯ ಇಲಾಖೆಯನ್ನೇ? ಐದು ದಿನ ತಡವಾಗಿ ವರದಿ ಕೊಟ್ಟ ದರಿದ್ರ ಸರ್ಕಾರಿ ವ್ಯವಸ್ಥೆಯನ್ನೇ?

Please follow and like us:
error
error: Content is protected !!