ಆದ್ಯತೆಗಳನ್ನು ಮರೆತ ಮಾಧ್ಯಮ : ಅಕಾಲಿಕ ಮರಣಕ್ಕೆ ಕಣ್ಣೀರು ಹಾಕಲು ಯಾರೂ ಉಳಿಯುವುದಿಲ್ಲ

Rajaram Tallur writes

ಆದ್ಯತೆಗಳನ್ನು ಮರೆತ #ಡಿಯರ್_ಮೀಡಿಯಾ


ಅಲ್ಲಾ… ಈಗ ಸೋಂಕು ಸಮುದಾಯಕ್ಕೆ ಹರಡಿದೆಯೋ ಇಲ್ಲವೋ ಎಂಬ “ಘನಗಂಭೀರ” ಚರ್ಚೆಯ ಉದ್ದೇಶ ಏನು? ಎಂಬುದನ್ನು ನನಗೆ ಯಾರಾದರೂ ಅರ್ಥ ಮಾಡಿಸಿ…
ಈಗ ನಿಜಕ್ಕೂ ಚರ್ಚೆ ಆಗಬೇಕಾದದ್ದು, ಪರಿಸ್ಥಿತಿ ಕೈ ಮೀರಿದರೆ ನಿಭಾಯಿಸುವುದು ಹೇಗೆ ಎಂಬ ಬಗ್ಗೆ…

ಇರುವ ವ್ಯವಸ್ಥೆ (ಆಸ್ಪತ್ರೆ, ಬೆಡ್, ವೈದ್ಯರು, ಆಮ್ಲಜನಕ, ವೆಂಟಿಲೇಷನ್, ಔಷಧಿ ಸರಬರಾಜು, ರಕ್ಷಣಾ ಪರಿಕರ ಸರಬರಾಜು…) ಎಷ್ಟು ಲಭ್ಯ? ಎಷ್ಟು ಕಡಿಮೆ ಬೀಳುತ್ತದೆ? ಅದನ್ನು ತುಂಬಿಕೊಳ್ಳುವುದು ಹೇಗೆ? – ಇದು ಚರ್ಚೆ ಆಗಲಿ, ಸಾರ್ವಜನಿಕರ ಗಮನಕ್ಕೆ ವ್ಯವಸ್ಥೆಯ ಚಿತ್ರಣ ಸಿಗಲಿ.

ಈ ಮೀಡಿಯಾ ಮಂದಿ ಕೊರೊನಾ ಆರಂಭದಿಂದಲೂ ಮೊದಲಿನಿಂದಲೂ ಮಾಡಿಕೊಂಡು ಬಂದದ್ದು ಇದನ್ನೇ. ಸ್ವಲ್ಪ ಗಮನಿಸಿ:

  1. ಲಾಕ್ ಡೌನ್ ಆರಂಭ ಆದಕೂಡಲೇ ಅದನ್ನೇ ಕೊರೊನಾ ವಿರುದ್ಧ “ಸರ್ಜಿಕಲ್ ಸ್ಟ್ರೈಕ್” ಎಂದರು, ಕಾರ್ಯಕ್ರಮ ಆರಂಭ ಆಗುವ ಮೊದಲೇ ಚಪ್ಪಾಳೆ, ತಾಳ-ಜಾಗಟೆಗಳೊಂದಿಗೆ ವಂದನಾರ್ಪಣೆ ನೆರವೇರಿಸಿದರು.
  2. ಸೋಂಕು ಹರಡಿದರೆ ಏನು ಮಾಡಬೇಕೆಂದು ಚರ್ಚಿಸುವ ಬದಲು ಯಾರು ಹರಡಿದರು? ಎಲ್ಲಿ ಹುಟ್ಟಿತು? ಎಂದು ಚರ್ಚಿಸಿದರು.
  3. ಲಾಕ್ ಡೌನ್ ಮುಗಿಯುವ ಹಂತಕ್ಕೆ ಬಂದಾಗ ಎಲ್ಲವೂ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ದೊಂದಿ ಹಚ್ಚಿ ಕುಣಿದಾಡಲು ಪ್ರೇರೇಪಿಸಿದರು.
  4. ವೈದ್ಯರು ತಮ್ಮ ಕೆಲಸ ಆರಂಭಿಸುವ ಮೊದಲೇ ಅವರಿಗೆ ಹೂ ಎರಚಿ ಥ್ಯಾಂಕ್ಯೂ ಎನ್ನುವುದಕ್ಕೆ ಆದ್ಯತೆ ಕೊಟ್ಟು ಎಲ್ಲವೂ ಸುಸೂತ್ರವಾಗಿದೆ ಎಂದು ಸರ್ಟಿಫಿಕೇಟು ಕೊಟ್ಟರು.
  5. ಲಾಕ್ ಡೌನ್ ರಿಲೀಸ್ ಅಂದಾಗ ರಿಲೀಸ್ ಮಾಡಲು ಏನೆಲ್ಲ ತಯಾರಿ ನಡೆದಿದೆ ಎಂದು ಪ್ರಶ್ನಿಸುವ ಬದಲು ಮತ್ತೆ ಲಾಕ್ ಡೌನ್ ಮಾಡಿ ಎಂದರು ಅದಕ್ಕೆ ತಾವೇ ಕಾರಣ ಎಂದು ಬೆನ್ನು ತಟ್ಟಿಕೊಂಡರು.
  6. ಜನರಿಗೆ ಧೈರ್ಯ ತುಂಬುವ ಬದಲು “ಕಿಲ್ಲರ್ ಕೊರೊನಾ” “ಮರಣ ಮೃದಂಗ” ಎಂದೆಲ್ಲ ಭಯ ಹುಟ್ಟಿಸಿದರು. ಜನ ವಲಸೆ ಹೋಗುವಾಗ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ದಿಕ್ಕುತಪ್ಪಿಸಲು ಶತಪ್ರಯತ್ನ ಮಾಡಿದರು.
  7. ಸಿದ್ಧತೆ ಕೊರತೆಗಳನ್ನು ಪ್ರಶ್ನಿಸುವ ಬದಲು ತಿಂಗಳಿಗೊಮ್ಮೆ ತಮ್ಮ ಅನ್ನದಾತರಿಗೆ ಎಲ್ಲವೂ ಸರಿಯಾಗಿದೆ, ನಿಮ್ಮ “ಪ್ರಸಿದ್ಧಿ”ಗೆ ಏನೂ ಮುಕ್ಕು ಬಂದಿಲ್ಲ ಎಂದು ಒಪಿನಿಯನ್ ಪೋಲ್ ನಡೆಸಿ ಸಂಭ್ರಮಿಸಿದರು. ಕೊರೊನಾ ನಿಯಂತ್ರಣದಲ್ಲಿ ನಾವೇ ಮುಂದು ಎಂದು ಫಲಿತಾಂಶ ಘೋಷಿಸಿದರು.
  8. ಹೈಡ್ರಾಕ್ಸಿ ಕ್ಲೋರೋಕ್ವಿನ್ ಮದ್ದು ಎಂದರು, ರೆಮಿಡಿಸಿವಿರ್ ಮದ್ದು ಎಂದರು, ಪ್ಲಾಸ್ಮಾ ಮದ್ದು ಎಂದರು, ಆಯುರ್ವೇದ ಕ್ಯೂರ್ ಎಂದರು, ಆಗಸ್ಟ್ ಹದಿನೈದಕ್ಕೇ ಭಾರತದ ಲಸಿಕೆ ಬರಲಿದೆ ಎಂದರು!

ಕಳೆದ ನಾಲ್ಕು ತಿಂಗಳಲ್ಲಿ ದೇಶದ ಸಾರ್ವಜನಿಕ ಬದುಕನ್ನು ಈ ಗಾತ್ರದಲ್ಲಿ ದಿಕ್ಕುತಪ್ಪಿಸಿದ ಮಾಧ್ಯಮಗಳು ಇನ್ನೂ ಪಾಠ ಕಲಿಯದಿದ್ದರೆ, ದೇಶದಲ್ಲಿ ಮಾಧ್ಯಮಗಳ ಅಕಾಲಿಕ “ಮರಣ”ಕ್ಕೆ ಕಣ್ಣೀರು ಹಾಕಲು ಯಾರೂ ಇರುವುದಿಲ್ಲ ನೆನಪಿಡಿ.

https://www.facebook.com/1153436365/posts/10222805792590735/

LivingWithCorona #COVID19 #WhoCares

Please follow and like us:
error