fbpx

ಆಡಿ ಬೆಳೆಯಬೇಕಾದ ಬಾಲಕ ಶವವಾಗಿ ಪತ್ತೆ : ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ


ಕೊಪ್ಪಳ : ೪ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮಂಜುನಾಥ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮಗನನ್ನು ಕಳೆದುಕೊಂಡ ತಂದೆ ತಾಯಿಯರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ದುರಂತ ಘಟನೆ ನಡೆದಿದ್ದು ಕೊಪ್ಪಳದ ತಾಲೂಕಿನ ಹಲಗೇರಿ ಹಳ್ಳದಲ್ಲಿ.
ಆಡಿ ಬೆಳೆಯುವ ವಯಸ್ಸಿನ ೪ನೇ ತರಗತಿಯಲ್ಲಿ ಓದುತ್ತಿದ್ದ ಆ ಬಾಲಕ ಮಂಜುನಾಥ ಬುರ್ಲಿ ಬದುಕಿನ ಬಗ್ಗೆ, ಹೆತ್ತವರ ಸಾಕುವ ಬಗ್ಗೆ ಅಗಾಧ ಕನಸು ಕಂಡಿದ್ದ. ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಈ ಬಾಲಕ ಬುಧವಾರ ಶವವಾಗಿ ಪತ್ತೆಯಾಗಿದ್ದಾನೆ. ಮಗನ ಶವವನ್ನು ಕಂಡು ಮುಗಿಲು ಮುಟ್ಟುವ ಹೆತ್ತವರ ಆಕ್ರಂದನ. ಚಿಕ್ಕವಯಸ್ಸಿನ ಮಗನನ್ನು ಕಳೆದುಕೊಂಡ ತಾಯಿಯ ಸಂಕಟ ಎಂಥವರ ಕರುಳು ಕಿತ್ತು ಬರುವಂಥಹ ದೃಶ್ಯಗಳಿಗೆ ಕೊಪ್ಪಳ ತಾಲೂಕಿನ ಹಲಗೇರಿ ಹಳ್ಳ ಸಾಕ್ಷಿಯಾಯಿತು.

ಅಷ್ಟಕ್ಕೂ ಆಗಿದ್ದಾದರೂ ಏನು ?
ಕೆಲ ದಿನಗಳ ಹಿಂದಷ್ಟೇ ಆಟ ಆಡ್ತಾ ಓಡಾಡಿಕೊಂಡಿದ್ದ ತಳಕಲ್ ಗ್ರಾಮದ ಮಂಜುನಾಥ ಬುರ್ಲಿ, ಇದ್ದಕ್ಕಿದ್ದಂತೆ ಕಾಣೆಯಾದ. ಮಗ ಕಾಣೆಯಾದಾಗಿನಿಂದ ಕೊಲೆಯಾಗಿರುವ ಅನುಮಾನವಿದ್ದ ಹೆತ್ತವರು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊನೆಗೂ ಹೆತ್ತವರ ಅನುಮಾನ ನಿಜವಾಯ್ತು. ಮಗ ಮಂಜುನಾಥ ಶವವಾಗಿ ಪತ್ತೆಯಾಗಿದ್ದ. ತಳಕಲ್ ಗ್ರಾಮದವನೇ ಆಗಿರುವ ಅಣ್ಣಪ್ಪ ನಡುವಲಮನಿ ಎಂಬಾತ ಕಣ್ಣು, ಕಿಡ್ನಿ ಮಾಫಿಯಾಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಿ ಮಗನನ್ನು ಕಳೆದುಕೊಂಡ ದುಃಖ ತೋಡಿಕೊಂಡರು. ಬಾಲಕ ತಳಕಲ್ ಗ್ರಾಮದವನಾಗಿದ್ದರೂ ಕೊಲೆ ಆರೋಪಿ ಅಣ್ಣಪ್ಪ ಶವವನ್ನು ಗ್ರಾಮದಿಂದ ಸುಮಾರು 8 ಕಿ.ಮೀ. ದೂರ ಇರುವ ಹಲಗೇರಿ ಹಳ್ಳದಲ್ಲಿ ಹೂತು ಹಾಕಿದ್ದ. ಜುಲೈ 19ರಂದು ಕಾಣೆಯಾಗಿದ್ದ ತಳಕಲ್ನ ಬಾಲಕ ಮಂಜುನಾಥ್, ಜುಲೈ 22ರಂದು ಶವವಾಗಿ ಪತ್ತೆಯಾಗಿದ್ದಾನೆ. ಕಾಣೆಯಾದ ಪ್ರಕರಣದ ಜಾಡು ಹಿಡಿದು ಅಣ್ಣಪ್ಪನ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ, ಕೊಲೆ ಮಾಡಿರುವ ಸತ್ಯ ಬಾಯಿ ಬಿಟ್ಟು ಶವ ಹೂತಿಟ್ಟಿರುವ ಜಾಗವನ್ನು ಪೊಲೀಸರಿಗೆ ತೋರಿಸಿದ್ದಾನೆ.ವಿಷಯ ತಿಳಿದು ಹಲಗೇರಿ ಹಳ್ಳದ ಬ್ರಿಡ್ಜ್ ಬಳಿ ಜನಸಾಗರ ಬಂದು ಸೇರಿತ್ತು. ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಜಿ.ಸಂಗೀತಾ, ಪರಿಶೀಲನೆ ನಡೆಸಿದರು. ಬಾಲಕನ ಕೊಲೆಗೆ ನಿಖರವಾದ ಕಾರಣ ಏನು ಎಂಬುದನ್ನು ಈಗಲೇ ಹೇಳಲಾಗಲ್ಲ. ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಕೊಲೆಯ ಕಾರಣ ಗೊತ್ತಾಗಲಿದೆ ಎಂದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ.

Please follow and like us:
error
error: Content is protected !!