ಅವ್ವ ಮತ್ತು ಆಲದಮರ

– ಡಿ.ಎಸ್. ಚೌಗಲೆ ಕವಿತೆ

ಎರಡಿಪ್ಪತ್ತರ ಮಳೆಯುಂಡ
ಆಗಿನ ಆ ಆಲದಮರ ಮನದಾಗ
ಇನ್ನೂ ಹಂಗs ಅದs…
ಬತ್ತೀಸರಾಗವು ಹೊಮ್ಮಿದಂಗ…

ಅವ್ವನ ತೋಟದೆಡೆಯ ಹೆಜ್ಜೆಗುರುತು
ಆ ಮಧ್ಯದ ದಣಿವಿಗೆ ನೆರಳು-ತಣ್ಣನೆಯ ಸುಳಿಗಾಳಿ
ಕೊಟ್ಟ ಅದನ್ನ ನಾ ಕಣ್ಣಗಲಿಸಿ ಕುಡಿದ
ಆ ಚಿತ್ರ ಹಂಗs ಅದs…
ಅಗಲ ಹಸಿರೆಲೆ, ನಾಕೂ ದಿಶೆಗೂ
ಚಾಚಿದ ತುಂಡು ತುಂಡಾದ ಟೊಂಗೆ
ನಾಕೂ ಬದಿಗಿ ಬೊಡ್ಡೆಗೆ ಆಧಾರಗೊಂಡ
ಬಿಳಲುಗಳ ಉಡದ ಹಿಡಿತ… ಹಂಗs ಅದs…

ಆಲದ ಕೆಳಗೊಮ್ಮೆ ಆಸರಿಗಿ ನಿಂತು
ಬ್ಯಾಸರ ಕಳಕೊಳ್ಳುವಾಗ ಅವ್ವ ಕಿವೀಲಿ ಪಿಸುಗುಟ್ಟಿದ್ದಳು-
‘ಅಪ್ಪ್ಯಾ ಆ ಬೊಡ್ಡಿ ಈ ಬೊಡ್ಡಿ
ನಾಕು ಕಡೆ ನಾಕ ಬೊಡ್ಡೆಂದರ ಯಾನ ಹೇಳು?’

ನನ್ನ ಪುಟ್ಟ ಕಂಗಳು
ಹಂಗs ಅರಳಿ ನಿಂತವು…!
‘ಹುಚ್ಚ ಮಗನs ನಿನಗ ತಿಳಿಲಿಲ್ಲೇಳ’…
ಅರಿವಿಗೆ ಸಾಣೆ ಹಚ್ಚಿದೆ.
ಉಹುಂ… ಕೊರಡು ಕೊನರಲಿಲ್ಲ.
ಅವ್ವ ನಿಧಾನಕ್ಕ ಉಸುರಿದಳು…
‘ತ್ವಾಟದ ಎಮ್ಮಿಗಿ ಒಂದs ಕೆಚ್ಚಲು,
ಆದರ ನಾಕು ತೊಟ್ಟುಗಳು.
ಕೆಚ್ಚಲು ತಾಯಾದರ ಮೊಲಿದೊಟ್ಟು ಮಕ್ಕಳ ಮರಿಗಳು
ಗರೆದವರಿಗಿ ಹಾಲುಣಿಸೋದs ಅದರ ಸ್ವಭಾವ…
ನೀವೂ ಹಂಗs ಅಲ್ಲ…!’
ಕರುಳ ನುಡಿಯ ಚಿತ್ತ ಚಿತ್ತಾರ ಬಿಳಿ ಮೈವಳಿಕೆ ಮ್ಯಾಲ ಹಂಗs ಹರಡೇದ.

ಮೂರಿಪ್ಪತ್ತರ ಬ್ಯಾಸಗಿ ಉಂಡಮ್ಯಾಲ
ಆ ಆಲದ ಮರದತ್ತ ಒಗ್ಗಾಲಿಲೆ ಓಡಿದೆ…
ಅದ ಹಂಗs ಇರಲಿಲ್ಲ…ಬೇಸೂರ ರಾಗದ
ಕಾಗೆ-ಗೂಬೆಗಳ ರೋದನ ಕಿವಿಗಪ್ಪಳಿಸಿದಂಗಾತು.
ಹಸಿರೆಲೆ, ತುಂಡಾದ ಟೊಂಗೆ
ಬೊಡ್ಡೆಗೆ ಆಧಾರಗೊಂಡ ಬಿಳಲುಗಳು ಮಟಾಮಾಯ…
ಬರಿ ನಿರಾಧಾರ ಅನಾಥ ಬೊಡ್ಡೆ!
ಬುವಿ- ಬಾನಂಗಳ ಒಡಲ ಒಳಗಿಂದೆಲ್ಲಿಂದಲೋ
ಅವ್ವ ಕಿರುಚಿ ಕೂಗಿದಳು-
‘ ಕೊಲ್ಲಾಂವ ಬಂದಾಗ ಕಾಯಾಂವ ಬರಲಿಲ್ಲೋ…
ಇದು ಕಲಿಗಾಲ…
ಮೊಲಿ ತೊಟ್ಟಗಳಾದವರು ಹಾಲ್ತೊರೆಯ ಕೆಚ್ಚಲನ್ನ
ಕತ್ತರಿಸಿ ಚೆಲ್ಲಿದರಲ್ಲೋ
ಇದು ಮಮಗಾಲ…
ಹಾಲ್ಗರೆವವರು ವಿಷಗರೆದರೆ ಬದುಕುವುದೆಂಗೋ
ಈ ಮನುಜ ಕುಲ…

ದನಿ ಇನ್ನೂ ದಿಮಿಗುಡುತಲಿದೆ
ಬತ್ತೀಸ ರಾಗವು ಹೊಮ್ಮಿದಂಗ…

ಡಿಎಸ್ಚೌಗಲೆ

Please follow and like us:
error